ಚಳಿಗಾಲದಲ್ಲಿ ಕಾಡುವ ರೋಗಗಳು ಮತ್ತು ಪರಿಹಾರ
Team Udayavani, Feb 9, 2022, 9:50 AM IST
ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆಗಳು ನಮ್ಮನ್ನು ಬಾಧಿಸುವುದು ಸಾಮಾನ್ಯ. ಇನ್ನು ಕೆಲವೊಂದು ರೋಗಗಳು ಶೀತ ವಾತಾವರಣದಲ್ಲಿ ಉಲ್ಬಣಿಸುತ್ತವೆ. ಈ ಎಲ್ಲ ಸಮಸ್ಯೆಗಳಿಂದ ದೂರವುಳಿಯಲು ನಾವು ನಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅಷ್ಟು ಮಾತ್ರವಲ್ಲದೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿದ್ದೇ ಆದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹೇಮಂತ ಮತ್ತು ಶಿಶಿರ ಶೀತಕಾಲದ ಋತುಗಳಾಗಿದ್ದು ಸಹಜವಾಗಿ ಕಫವನ್ನು ವೃದ್ಧಿಸುತ್ತದೆ. ಈ ಸಮಯದಲ್ಲಿ ಶೀತ ಆಹಾರ ಮತ್ತು ಕೊಬ್ಬಿನ ಆಹಾರಗಳು ಕಫ ವೃದ್ಧಿಗೆ ಪ್ರಮುಖ ಕಾರಣವಾಗಿವೆ. ಈ ಅವಧಿಯಲ್ಲಿ ಹಗಲು ಕಡಿಮೆ ಇದ್ದು ರಾತ್ರಿಯ ಸಮಯ ಅಧಿಕವಾಗಿರುತ್ತದೆ. ಜೀರ್ಣ ಶಕ್ತಿ ಅಧಿಕವಾಗಿರುತ್ತದೆ. ಬೆಳಗ್ಗೆ ಎದ್ದೇಳುವಾಗಲೇ ಹಸಿವಾಗುತ್ತಿರುತ್ತದೆ. ಗೋಧಿ, ಉದ್ದಿನ ಆಹಾರಗಳನ್ನು ಸೇವಿಸುವುದರಿಂದ ಹಸಿವನ್ನು ನೀಗಿಸಿಕೊಳ್ಳಬಹುದು. ಮಾಂಸಾಹಾರ ಸೇವನೆ ದೇಹವನ್ನು ಹುರಿಗೊಳಿಸುತ್ತದೆ. ದೇಹವನ್ನು ಹತ್ತಿ, ಉಣ್ಣೆ ಬಟ್ಟೆಗಳಿಂದ ಮುಚ್ಚುವುದರಿಂದ ಚಳಿಯಿಂದ ರಕ್ಷಣೆ ಪಡೆಯಬಹುದು. ಸೂರ್ಯನ ಬೆಳಕಿಗೆ ಸಾಧ್ಯ ವಾದಷ್ಟು ಮೈ ಒಡ್ಡಬೇಕು. ಶೀತ ವಾತಾವರಣದಿಂದ ಪಾದ, ತುಟಿ, ಮೈಚರ್ಮ ಒಣಗಿ ಒಡೆಯುತ್ತದೆ. ಹೊರ ಹೋಗುವ ಸಂದರ್ಭದಲ್ಲಿ ತಪ್ಪದೆ ಪಾದರಕ್ಷೆ ಧರಿಸಬೇಕು. ದೇಹವನ್ನು ತೈಲದಿಂದ ಅಭ್ಯಂಗ, ಉದ್ವರ್ತನ ಮಾಡಿಕೊಳ್ಳಬೇಕು, ತುಟಿಗಳಿಗೆ ಬೆಣ್ಣೆ ಲೇಪನ ಮಾಡಬೇಕು. ಹಗಲು ನಿದ್ದೆ ತ್ಯಜಿಸಬೇಕು. ಆಟ, ವ್ಯಾಯಾಮಗಳಲ್ಲಿ ತೊಡಗಿಕೊಳ್ಳಬೇಕು. ಕಫಾವೃತದಿಂದ ಆಮಾಶಯದಲ್ಲಿ ತೀಕ್ಷಾಗ್ನಿ ಇರುವುದರಿಂದ ಶುಂಠಿ, ಹಿಪ್ಪಲಿಗಳನ್ನು ಉಪಯೋಗಿಸುತ್ತಿರಬೇಕು. ಕಫ ನಿರ್ಹರಣ ಮಾಡಲು ವಮನ ನಸ್ಯ ಕರ್ಮಗಳು ಉತ್ತಮ ಪಂಚಕರ್ಮ ಚಿಕಿತ್ಸಾ ವಿಧಾನಗಳು.
ಸಾಮಾನ್ಯವಾಗಿ ಶೀತಕಾಲದಲ್ಲಿ ನೆಗಡಿ, ಗಂಟಲು ನೋವು, ಟೋನ್ಸಿಲೈಟಿಸ್, ಕಿವಿನೋವು, ಗಂಟುನೋವು, ಫ್ಲ್ಯೂ ಕೆಮ್ಮು, ದಮ್ಮು, ಅಸ್ತಮಾ, ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾ ಮತ್ತು ಹೀಮೋಫಿಲಸ್ ಇನ್ ಫ್ಲ್ಯೂ ಯೆಂಝಾ ವೈರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯದವರೆಗೆ ಸಕ್ರಿಯವಾಗಿ ಬದುಕಿರುವುದರಿಂದ ರೋಗಪೀಡಿತ ಮನುಷ್ಯನ ಸೀನು, ಸಿಂಬಳ, ಮಲದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಅಥವಾ ಜೀರ್ಣಾಂಗವ್ಯೂಹದ ಮುಖಾಂತರ ಪ್ರವೇಶಿಸಿ ರೋಗೋತ್ಪತ್ತಿ ಮಾಡುತ್ತದೆ. ಚೆನ್ನಾಗಿ ಸಾಬೂನಿನಿಂದ ಬಿಸಿನೀರಿನಲ್ಲಿ ಕೈ ತೊಳೆದುಕೊಳ್ಳುವುದು, ಶುಚಿಯಾದ ಆಹಾರ ಸೇವನೆ ಕ್ರಮ, ಬೇಯಿಸಿದ ಆಹಾರವನ್ನು ಬಿಸಿಯಾಗಿರುವಾಗಲೇ ಸೇವನೆ, ರೋಗಿಯು ಸೀನು, ಸಿಂಬಳ ಅಥವಾ ಕೆಮ್ಮುವಾಗ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ರೋಗಿ ಸೀನಿದ ಸಂದರ್ಭದಲ್ಲಿ ಸಿಡಿದ ರೋಗಾಣು ನಮ್ಮ ದೇಹ ಪ್ರವೇಶಿಸದಂತೆ ಮಾಸ್ಕ್ ಧರಿಸುವುದರಿಂದ ರೋಗ ಬಾರದಂತೆ ತಡೆಯಬಹುದು. ರೋಗಪೀಡಿತ ವ್ಯಕ್ತಿಯ ದೈಹಿಕ ಸಂಪರ್ಕ ಮತ್ತು ಅವನು ಉಪಯೋಗಿಸುವ ವಸ್ತುಗಳು, ವಸ್ತ್ರಗಳು ನೇರ ಸಂಪರ್ಕಕ್ಕೆ ಬಾರದಂತೆ ಜಾಗ್ರತೆ ವಹಿಸಬೇಕು.
ಶೀತ ಕಾಲದಲ್ಲಿ ಕಫ ವೃದ್ಧಿ ಇರುವಾಗ ವಾತ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾತ ನಾಡಿಗಳಲ್ಲಿ ತಡೆಯುಂಟಾದಾಗ ಪಕ್ಷಾಘಾತ, ಎಕಾಂಗವಾತ, ಸರ್ವಾಂಗವಾತ, ಅರ್ಧಿತ (Facial Palsy), ಅಪಸ್ಮಾರ (Convulsion/Fits), ಉನ್ಮಾದ (Schizophrenia), ಕಂಪವಾತ (Parkinson disease), ಅವಬಾಹುಕ (Brachial Neuritis), ವಿಶ್ವಾಚಿ, ಗೃದ್ರಸಿ (Sciatica), ಅರ್ದಾವಭೇದಕ (Migrain), ಹೃದಯಾಘಾತ, ಸಂದಿವಾತ, ಆಮವಾತ ಮೊದಲಾದ ರೋಗಗಳು ದೇಹವನ್ನು ಬಾಧಿಸುತ್ತವೆ. ದೇಹವು ಸದೃಢವಾಗಿದ್ದು ಯಥೋಚಿತ ಶಕ್ತ್ಯಾನುಸಾರ ವ್ಯಾಯಾಮ, ಶ್ರಮಜನಿತ ಕೆಲಸ ಕಾರ್ಯಗಳನ್ನು ಮಾಡುತ್ತಿರುವವರು, ಆಹಾರ ಪಥ್ಯ ಪಾಲನೆ ಮಾಡುವವರು, ಕಾಲಕಾಲಕ್ಕೆ ದೇಹ ಶೋಧನ ಮಾಡುವವರು, ಶಾರೀರಿಕ ಮಾನಸಿಕ ಬಲವುಳ್ಳವರು, ಚಿಂತೆ, ಕ್ರೋಧ, ಶೋಕ, ಭಯವಿಲ್ಲದೆ ಸ್ವಾಸ್ಥ್ಯ ಪಾಲನೆ ಮಾಡುವವರು ಇಂತಹ ರೋಗ ರುಜಿನಗಳಿಂದ ಪಾರಾಗಬಹುದು. ವಯಸ್ಸಾದವರು, ದೇಹ ಬಲ ಕ್ಷೀಣವಿರುವವರು, ರೋಗನಿರೋಧಕ ಶಕ್ತಿಯ ನ್ಯೂನತೆ ಹೊಂದಿರುವವರು, ಅಪಘಾತ, ಉರಗ- ದಂಷ್ಟ್ರಕಗಳಿಂದ ಕಡಿತಕ್ಕೊಳಗಾಗಿರುವವರು, ಮದ್ಯ, ಮಾದಕದ್ರವ್ಯ ವ್ಯಸನಿ ಗಳು, ನಿತ್ಯರೋಗಿಗಳು, ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಯಕೃತ್ ಕಾಯಿಲೆಗಳಿಂದ ಬಳಲುತ್ತಿರುವವರು ಕಫನಿರೋಧಕ ರಕ್ಷಣ ಪಾಲನೆ ಮಾಡದಿದ್ದರೆ ನಿಶ್ಚಿತವಾಗಿ ರೋಗಪೀಡಿತರಾಗುವರು. ಕಾಲಕಾಲಕ್ಕೆ ದೇಹ ಶೋಧನ ಬಸ್ತಿಕರ್ಮಾದಿಗಳನ್ನು ಅನುಸರಿಸುವುದರಿಂದ ರೋಗಬಾಧೆ ಯಿಂದ ಮುಕ್ತಿ ಪಡೆಯಬಹುದು.
ಚಳಿಯಿಂದ ರಕ್ಷಣೆ ಪಡೆಯುವುದಕ್ಕೆ ಹಾಗೂ ದೇಹದಲ್ಲಿ ರೋಗನಿರೋಧಕ ಗುಣಗಳನ್ನು ವೃದ್ಧಿಮಾಡಲು ಕಾಳು ಮೆಣಸು ಮತ್ತು ಅಮ್ಲಯುಕ್ತ ಹಣ್ಣುಗಳ ಸೇವನೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಕಿತ್ತಳೆ, ನೆಲ್ಲಿಕಾಯಿ, ಆ್ಯಪಲ್, ದ್ರಾಕ್ಷಿಗಳಲ್ಲಿ ವಿಟಮಿನ್ ಸಿ ಜೀವಸತ್ವ ಅಧಿಕವಾಗಿ ಇರುವುದರಿಂದ ಇವುಗಳ ಸೇವನೆ ದೇಹವನ್ನು ರೋಗಬಾಧೆಯಿಂದ ರಕ್ಷಿಸುತ್ತದೆ ಮಾತ್ರವಲ್ಲದೆ ಚಳಿಯಿಂದ ಚರ್ಮವು ರೂಕ್ಷವಾಗಿ ಒಡೆಯದಂತೆ ಮಾರ್ದವತೆಯನ್ನು ಕಾಪಾಡುತ್ತದೆ. ಗ್ರೀನ್ ಟೀ, ಅಣಬೆ, ಸೊಪ್ಪು ತರಕಾರಿಗಳ ಸೇವನೆಯಿಂದ ವಿಟಮಿನ್ ಎ, ಸಿ ಮತ್ತು ಈ ಜೀವಸತ್ವಗಳೊಂದಿಗೆ ಆ್ಯಂಟಿಆಕ್ಸಿಡೆಂಟ್‌ಗಳನ್ನು ಉತ್ಪಾದಿಸಿ ದೇಹದ ಅಂಗಾಂಶಗಳು ರೋಗಾಣುಗಳಿಂದ ನಶಿಸಿಹೋಗದಂತೆ ತಡೆಯುತ್ತವೆ. ಬಾದಾಮ್, ಆಕ್ರೋಟ್, ಖರ್ಜೂರಗಳಲ್ಲಿ ಹೇರಳವಾಗಿರುವ ಪ್ರೊಟೀನ್, ವಿಟಮಿನ್ ಈ, ಸಿ ಮತ್ತು ನಿಯಾಸಿನ್ ಹಾಗೂ ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ ಸತ್ವ, ಮ್ಯಾಂಗನೀಸ್, ಝಿಂಕ್, ಸೆಲೆನಿಯಂ, ತಾಮ್ರದ ಅಂಶಗಳನ್ನು ದೇಹವು ಪಡೆಯುವುದರಿಂದ ರೋಗ ಮತ್ತು ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯು ಶರೀರಕ್ಕೆ ಲಭಿಸುತ್ತದೆ. ಮೊಟ್ಟೆಯು ಒಂದು ಸಮೃದ್ಧ ಆಹಾರವಾಗಿದೆ. ಸುಲಭವಾಗಿ ಜೀರ್ಣ ಹೊಂದುತ್ತದೆ. ಹೇರಳವಾಗಿ ವಿಟಮಿನ್ ಡಿ ಮತ್ತು ಪೋಷಕಾಂಶಗಳು ಶರೀರಕ್ಕೆ ಲಭಿಸುತ್ತದೆ. ಗೆಣಸು ಬೀಟಾ ಕೆರೋಟಿನ್ ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಚಳಿಗಾಲದ ಮಲಬದ್ಧತೆಯನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯು ಚಳಿ ನಿವಾರಿಸುವ ಔಷಧ. ಇದು ಸಂಧಿ ಕೀಲುಗಳ ಉರಿಯೂತವನ್ನು, ನೋವನ್ನು ನಿವಾರಿಸುತ್ತದೆ. ತುಪ್ಪ ಯೋಗವಾಹಿ ಗುಣವುಳ್ಳದ್ದು, ಜೀರ್ಣ ಆಹಾರದಿಂದ ಅಗತ್ಯ ಪೋಷಕಾಂಶಗಳನ್ನು ಅಂಗಾಂಶಗಳಿಗೆ ತಲುಪಿಸುತ್ತದೆ. ಶಾಖಾಹಾರಿಗಳಲ್ಲಿ ಪ್ರಾಣಿಜನ್ಯ ಕೊಬ್ಬನ್ನು ಶರೀರಕ್ಕೆ ಒದಗಿಸಿ ಹೀಮೋಗ್ಲೋಬಿನ್ ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಕರಿಸುತ್ತದೆ.
ಆಹಾರ ಶೈಲಿಯನ್ನು ಚಳಿಗಾಲದಲ್ಲಿ ಯೋಜನಾಬದ್ಧ ವಾಗಿ ಅನುಸರಿಸುವುದರಿಂದ, ಸಮೃದ್ಧ ಪೋಷಣೆಯೊಂದಿಗೆ ರೋಗನಿರೋಧಕ ಗುಣಗಳನ್ನು ಪಡೆದುಕೊಳ್ಳುವುದರಿಂದ ದೇಹವು ಸದೃಢವಾಗಿ ಶಕ್ತಿ ಸಂಚಯವಾಗುತ್ತದೆ.
– ಡಾ| ಹರಿಪ್ರಸಾದ್ ಸುವರ್ಣ,ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.