ಹೋಳಿ ಹುಣ್ಣಿಮೆ ವಿಶೇಷ : ಬಾಗಲಕೋಟೆಯ ಗೆಣಸಿನ ಹೋಳಿಗೆ
Team Udayavani, Mar 27, 2021, 10:25 AM IST
ಕಾಮಣ್ಣನ ದಹನ, ಬಣ್ಣಗಳ ಎರಚಾಟ, ಇದರ ಜತೆಗೆ ರುಚಿ ರುಚಿಯಾದ ಖಾದ್ಯ. ಇದು ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಉತ್ತರ ಕರ್ನಾಟಕದಲ್ಲಿ ಕಂಡು ಬರುವ ವಿಶೇಷ.
ಉತ್ತರ ಕರ್ನಾಟಕದಲ್ಲಿ ಹೋಳಿ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎರಡು ಅಥವಾ ಮೂರು ದಿನಗಳ ವರೆಗೆ ಈ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಮನೆಗಳ ಮುಂದೆ ಸಣ್ಣ ಹಾಗೂ ಊರಿನ ಅಗಸಿ ( ಪ್ರಮುಖ ಸ್ಥಳ) ಯಲ್ಲಿ ದೊಡ್ಡ ಕಾಮಣ್ಣನ ದಹನ ಮಾಡಿ, ಬಣ್ಣಗಳನ್ನು ಎರಚಿ ಹೋಳಿ ಹಬ್ಬದ ಮೆರಗು ಹೆಚ್ಚಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಹೋಳಿ ಹುಣ್ಣಿಮೆಯಂದು ಕಾಮಣ್ಣನಿಗೆ ನೆವೇದ್ಯ ಮಾಡಲು ಹಲವು ಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಬಾಗಲಕೋಟೆಯಲ್ಲಿ ಗೆಣಸು ಹೋಳಿಗೆ ಭಾರೀ ಪ್ರಸಿದ್ದಿ. ಹಾಗಾದರೆ ಇಂದು ನಾವು ಗೆಣಸು ಹೋಳಿಗೆ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು :
- ಎರಡು ಕೆಂಪು ಗೆಣಸು ( ನಿಮಗೆ ಬೇಕಾದರೆ ಹೆಚ್ಚು ಗೆಣಸು ಬಳಸಬಹುದು )
- ಗೋದಿ ಹಿಟ್ಟು ( ಚಪಾತಿ ಮಾಡುವ ರೀತಿಯಲ್ಲಿ ಹದವಾಗಿ ಕಲಸಿಕೊಳ್ಳಬೇಕು)
- ತುರಿದ ಬೆಲ್ಲ ( ಅರ್ಧ ಬಟ್ಟಲು )
- ಏಲಕ್ಕಿ ಪುಡಿ
- ಗಸಗಸಿ ಪುಡಿ
- ಹೋಳಿಗೆಗೆ ಹಚ್ಚಲು ಎಣ್ಣೆ
ಮಾಡುವ ವಿಧಾನ :
- ಅರ್ಧದಷ್ಟು ನೀರು ಹಾಕಿ ಕುಕ್ಕರಿನಲ್ಲಿ ಗೆಣಸು ಬೇಯಿಸಿಕೊಳ್ಳಬೇಕು ( ಎರಡು ವಿಶಲ್ ಕೂಗಿಸಿ )
- ಕುದಿಸಿದ ಗೆಣಸಿನ ಸಿಪ್ಪೆ ತೆರೆದು ಸಣ್ಣಗೆ ತುರಿಬೇಕು.
- ಒಂದು ಬಟ್ಟಲಿನಲ್ಲಿ ಗೆಣಸು ಅಳತೆ ಮಾಡಿ, ಅರ್ಧ ಬಟ್ಟಲ ಬೆಲ್ಲ ಹಾಕಬೇಕು.
- ಬಿಸಿಯಾದ ಕಡಾಯಿಯಲ್ಲಿ ಬೆಲ್ಲ ಮತ್ತು ಗೆಣಸು ಕುದಿಸಬೇಕು (ಬೆಲ್ಲ ಕರಗಿ ಗೆಣಸಿನ ಜತೆ ಮಿಕ್ಸ್ ಆಗುತ್ತದೆ )
- ಮೂರು ನಿಮಿಷದ ವರೆಗೆ ಕಡಾಯಿಯಲ್ಲಿ ಬಿಸಿ ಮಾಡಿದ ನಂತರ ತಣ್ಣಗಾಗುವವರೆಗೆ ಇಡಬೇಕು.
- ಅರ್ಧ ಗಂಟೆಯ ನಂತರ ಏಲಕ್ಕಿ ಪುಡಿ ಹಾಕಿ ಹೂರಣದ ಉಂಡಿ ಮಾಡಿ ಇಟ್ಕೋಬೇಕು
- ಗೋದಿ ಹಿಟ್ಟು ತೆಗೆದುಕೊಂಡು ಸ್ವಲ್ಪ ಲಟ್ಟಿಸಿಕೊಂಡು ಹೂರಣ ತುಂಬಬೇಕು.
- ಹುರಿದ ಗಸಗಸಿಯೊಳಗೆ ಎದ್ದಿ ಆಮೇಲೆ ಚನ್ನಾಗಿ ಲಟ್ಟಿಸಬೇಕು. ಸ್ವಲ್ಪ ಒಣ ಹಿಟ್ಟು ಹಚ್ಚಿಕೊಂಡು ಲಟ್ಟಿಸಬೇಕು.
- ನಂತರ ಕಾಯ್ದ ಹೆಂಚಿನ ಮೇಲೆ ಇಟ್ಟು, ಎಲ್ಲಾ ಕಡೆ ಅಡುಗೆ ಎಣ್ಣೆ ಹಚ್ಚಿ ಬೇಯಿಸಬೇಕು. ಸುಮಾರು ಎರಡು ನಿಮಿಷಗಳ ವರೆಗೆ ಎರಡು ಕಡೆ ಬೇಯಿಸಿಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.