ಕೋಸಂಬರಿ ಕಮಾಲ್
Team Udayavani, Apr 18, 2018, 5:06 PM IST
ದೇಹಕ್ಕೆ ತಂಪು ಮತ್ತು ಪೌಷ್ಟಿಕಾಂಶ ಒದಗಿಸುವ ತಿನಿಸುಗಳಲ್ಲಿ ಕೋಸಂಬರಿಯೂ ಒಂದು. ಇದನ್ನು ತಯಾರಿಸುವುದೂ ಕೂಡ ಬಹಳ ಸುಲಭ. ಬೇಸಿಗೆಯ ಈ ದಿನಗಳಲ್ಲಿ ತಂಪು ತಂಪಾಗಿ ಏನಾದರೂ ತಿನ್ನಬೇಕು ಅನಿಸಿದಾಗ ಹಣ್ಣು, ತರಕಾರಿ ಬಳಸಿ ಕೋಸಂಬರಿ ಮಾಡಬಹುದು. ಊಟದ ಜೊತೆಗೆ ಸಬ್ ಐಟಂ ರೀತಿ ಕೂಡ ಇದನ್ನು ಸವಿಯಬಹುದು. ಹೊಸ ಬಗೆಯ ಕೋಸಂಬರಿ ರೆಸಿಪಿಗಳು ಇಲ್ಲಿವೆ.
1.ಆಲೂಗಡ್ಡೆ-ಸೌತೆಕಾಯಿ ಕೋಸಂಬರಿ
ಬೇಕಾಗುವ ಸಾಮಗ್ರಿ: ಆಲೂಗಡ್ಡೆ ತುರಿ-2 ಕಪ್, ಸಣ್ಣಗೆ ಕತ್ತರಿಸಿದ ಸೌತೆಕಾಯಿ-1 ಕಪ್, ತೆಂಗಿನತುರಿ-1/2 ಕಪ್, ಹಸಿಮೆಣಸು-4-5, ಶುಂಠಿ ತುರಿ-1/2 ಚಮಚ, ಜೀರಿಗೆ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕೊತ್ತಂಬರಿ ಸೊಪ್ಪು-4 ಚಮಚ
ಮಾಡುವ ವಿಧಾನ: ತೆಂಗಿನ ತುರಿ, ಹಸಿಮೆಣಸು, ಶುಂಠಿ, ಜೀರಿಗೆ ಸೇರಿಸಿ ರುಬ್ಬಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಆಲೂಗಡ್ಡೆ ತುರಿ, ಸೌತೆಕಾಯಿ, ಉಪ್ಪು ಸೇರಿಸಿ, ಬಾಡಿಸಿ, ಅರೆದ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಆಲೂಗಡ್ಡೆ-ಸೌತೆಕಾಯಿ ಕೋಸಂಬರಿ ರೆಡಿ.
2. ಸೀಬೆ ಹಣ್ಣಿನ ಕೋಸಂಬರಿ
ಬೇಕಾಗುವ ಸಾಮಗ್ರಿ: ಸೀಬೆ (ಪೇರಳೆ) ಹಣ್ಣಿನ ಹೋಳು-2 ಕಪ್, ಹಸಿಮೆಣಸು-3, ಸಾಸಿವೆ-1/2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1/4 ಚಮಚ, ತೆಂಗಿನ ತುರಿ-1/4 ಕಪ್, ಕೊತ್ತಂಬರಿ ಸೊಪ್ಪು-4 ಚಮಚ.
ಮಾಡುವ ವಿಧಾನ: ತೆಂಗಿನ ತುರಿ, ಸಾಸಿವೆ, ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿ. ಸೀಬೆ ಹಣ್ಣಿನ ಹೋಳುಗಳಿಗೆ, ಅರೆದ ಮಿಶ್ರಣ, ಸಕ್ಕರೆ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಕಿದರೆ ಕೋಸಂಬರಿ ಸಿದ್ಧ.
3. ಹೆಸರುಕಾಳಿನ ಕೋಸಂಬರಿ
ಬೇಕಾಗುವ ಸಾಮಗ್ರಿ: ಮೊಳಕೆ ತರಿಸಿದ ಹೆಸರುಕಾಳು-2 ಕಪ್, ದಾಳಿಂಬೆ ಕಾಳು-1 ಕಪ್, ಕ್ಯಾರೆಟ್ ತುರಿ-1/2 ಕಪ್, ತೆಂಗಿನತುರಿ-4 ಚಮಚ, ಕೊತ್ತಂಬರಿ ಸೊಪ್ಪು-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,ಕಾಳುಮೆಣಸಿನ ಪುಡಿ-1 ಚಮಚ, ಜೀರಿಗೆ ಪುಡಿ-2 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಅರಶಿನ ಪುಡಿ-1/2 ಚಮಚ
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಅರಶಿನ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಹೆಸರುಕಾಳು, ಕ್ಯಾರೆಟ್ ತುರಿ ಹಾಗೂ ದಾಳಿಂಬೆ ಸೇರಿಸಿ ಕಲಕಿ, ಒಲೆಯಿಂದ ಕೆಳಗಿರಿಸಿ. ಈ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ, ಜೀರಿಗೆ, ಉಪ್ಪು ಸೇರಿಸಿ ಕಲಕಿ. ಕೊನೆಯಲ್ಲಿ ರುಚಿಗೆ ತೆಂಗಿನತುರಿ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
4. ಕಲ್ಲಂಗಡಿ ಕೋಸಂಬರಿ
ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹೋಳು-3 ಕಪ್, ಲಿಂಬೆರಸ-1 ಚಮಚ, ತೆಂಗಿನ ತುರಿ-1/4 ಕಪ್, ಹಸಿಮೆಣಸಿನಕಾಯಿ-2, ಕೊತ್ತಂಬರಿ ಸೊಪ್ಪು-3 ಚಮಚ, ಪುದೀನಾ ಸೊಪ್ಪು-3 ಚಮಚ, ಕಾಳುಮೆಣಸಿನ ಪುಡಿ-1/4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಉದ್ದಿನಬೇಳೆ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ತೆಂಗಿನತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸೇರಿಸಿ ರುಬ್ಬಿ. ಸಾಸಿವೆ, ಇಂಗು, ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ. ಕಲ್ಲಂಗಡಿ ಹೋಳುಗಳಿಗೆ, ಒಗ್ಗರಣೆ, ಅರೆದ ಮಿಶ್ರಣ, ಲಿಂಬೆರಸ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಕೈಯಾಡಿಸಿ.
5. ಹಣ್ಣು-ತರಕಾರಿಗಳ ಕೋಸಂಬರಿ
ಬೇಕಾಗುವ ಸಾಮಗ್ರಿ: ಕ್ಯಾರೆಟ್-1, ದೊಣ್ಣೆ ಮೆಣಸಿನಕಾಯಿ-1, ಸೇಬು-1, ಬಾಳೆ ಹಣ್ಣು-2, ಕಪ್ಪು ದ್ರಾಕ್ಷಿ-1/2 ಕಪ್, ಪಪ್ಪಾಯ-1/2 ಕಪ್, ಗೋಡಂಬಿ-7-8, ಏಲಕ್ಕಿ ಪುಡಿ-1/2 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಸಕ್ಕರೆ ಪುಡಿ-1 ಚಮಚ, ಜೀರಿಗೆ ಪುಡಿ-1 ಚಮಚ, ತೆಂಗಿನ ತುರಿ-1/4 ಕಪ್, ತುಪ್ಪ-3 ಚಮಚ.
ಮಾಡುವ ವಿಧಾನ: ಬಾಳೆಹಣ್ಣುಗಳನ್ನು ಕತ್ತರಿಸಿ. ತರಕಾರಿ ಹಾಗೂ ಮಿಕ್ಕ ಹಣ್ಣುಗಳನ್ನು ಉದ್ದುದ್ದುಕ್ಕೆ ಕತ್ತರಿಸಿ, ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿಯಿರಿ. ಗಾಜಿನ ತಟ್ಟೆಯಲ್ಲಿ, ಕತ್ತರಿಸಿದ ಹಣ್ಣು-ತರಕಾರಿಗಳನ್ನು ನಿಮಗೆ ಬೇಕಾದಂತೆ ಜೋಡಿಸಿ. ಏಲಕ್ಕಿ ಪುಡಿ, ಸಕ್ಕರೆ ಪುಡಿ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿಗಳನ್ನು ಸೇರಿಸಿ ಕಲಕಿ, ಸಮನಾಗಿ ಹಣ್ಣು-ತರಕಾರಿಗಳ ಮೇಲೆ ಉದುರಿಸಿ ಮತ್ತೆ ಕಲಕಿ. ತೆಂಗಿನತುರಿ ಹಾಗೂ ಗೋಡಂಬಿಗಳಿಂದ ಅಲಂಕರಿಸಿದರೆ, ಪೌಷ್ಟಿಕವಾದ ಕೋಸಂಬರಿ ಸವಿಯಲು ಸಿದ್ಧ.
* ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal: ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಅವಘಡ: ವಿದೇಶಿ ಪ್ಯಾರಾಗ್ಲೈಡರ್ ಮೃ*ತ್ಯು
Actor Darshan: ‘ದಾಸʼನ ಜಾಮೀನಿಗೆ ಶ್ಯೂರಿಟಿ ನೀಡಲು ಮುಂದೆ ಬಂದ ಆ ನಟ ಯಾರು?
Instagram; ಕೊಹ್ಲಿ ನನ್ನನ್ನು ನಿರ್ಬಂಧಿಸಿದ್ದರು ಎಂದ ಮ್ಯಾಕ್ಸ್‌ವೆಲ್:ಕಾರಣ?
Canada: ಕೆನಡಾದಲ್ಲಿನ ಹ*ತ್ಯೆ ಪ್ರಕರಣದ ಹಿಂದೆ ಗೃಹ ಸಚಿವ ಅಮಿತ್ ಶಾ ಕೈವಾಡ! ಆರೋಪ
Karkala: ವಿಶೇಷ ಚೇತನ ಮಕ್ಕಳಿಂದ 24 ಸಾವಿರ ಹಣತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.