ಮಳೆಗಾಲದ ಗರಿಗರಿ ತಿಂಡಿಗಳು
Team Udayavani, Jul 11, 2019, 12:01 PM IST
ಮಳೆಗಾಲ ಆರಂಭವಾಗಿದೆ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬೇಕೆಂದು ಮನಸ್ಸು ಬಯಸುತ್ತಿದೆ. ಹೊರಗೆ ಹೋಗಿ ತಿನ್ನುವುದರ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಉಳಿತಾಯವೂ ಕೂಡ.
ಕಾಯಿ ಪಪ್ಪಾಯಿಯ ಗರಿ ಗರಿ ಪಕೋಡ
ಬೇಕಾಗುವ ಸಾಮಗ್ರಿ: 1 ಕಪ್ ಕಾಯಿ ಪಪ್ಪಾಯಿ ತುಂಡು, 1 ಕಪ್ ಕಡಲೆಹಿಟ್ಟು, 1/2 ಕಪ್ ಈರುಳ್ಳಿ ಚೂರು, 2-3 ಹಸಿಮೆಣಸು ಚೂರು, 1/2 ಚಮಚ ಜೀರಿಗೆ, 2 ಚಮಚ ಕೊತ್ತಂಬರಿಸೊಪ್ಪು , 1 ಚಮಚ ಕೆಂಪುಮೆಣಸು ಪುಡಿ, ಚಿಟಿಕೆ ಅರಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು , 2 ಚಮಚ ಕರಿಬೇವಿನೆಲೆ ಚೂರು, ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಒಲೆಯ ಮೇಲೆ ಪಾತ್ರೆಯಿಟ್ಟು ನೀರು ಹಾಕಿ. ಸಿಪ್ಪೆ, ಬೀಜ ತೆಗೆದ ಬೆಳೆದ ಪಪ್ಪಾಯಿ ತುಂಡು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಒಂದು ಬೌಲ್‌ಗೆ ಕಡಲೆಹಿಟ್ಟು , ಈರುಳ್ಳಿ ಚೂರು, ಹಸಿಮೆಣಸು, ಕೊತ್ತಂಬರಿ ಸೊಪ್ಪಿನ ಚೂರು, ಕರಿಬೇವಿನೆಲೆ ಚೂರು, ಜೀರಿಗೆ, ಕೆಂಪುಮೆಣಸು ಪುಡಿ, ಅರಸಿನ ಪುಡಿ, ಉಪ್ಪು ಸೇರಿಸಿ ಗಟ್ಟಿ ಕಲಸಿ. ನೀರು ಬೇಕಾದರೆ ಸ್ವಲ್ಪ ಹಾಕಿ. ನಂತರ ತಣಿದ ಪಪ್ಪಾಯಿ ತುಂಡು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಕರಿದು ತೆಗೆಯಿರಿ. ಈಗ ರುಚಿಯಾದ ಪಪ್ಪಾಯಿಯ ಗರಿಗರಿ ಪಕೋಡ ತಿನ್ನಲು ಸಿದ್ಧ.
ಬಸಳೆ ಸೊಪ್ಪಿನ ವಡೆ
ಬೇಕಾಗುವ ಸಾಮಗ್ರಿ: 1/4 ಕಪ್ ಎಳೆ ಬಸಳೆ ಸೊಪ್ಪು , 2 ಹಸಿಮೆಣಸು, 3/4 ಕಪ್ ಕಡ್ಲೆಬೇಳೆ, 1/2 ಕಪ್ ಅಕ್ಕಿಹಿಟ್ಟು , 1/4 ಕಪ್ ಉದ್ದಿನಹಿಟ್ಟು , 1/4 ಕಪ್ ಈರುಳ್ಳಿ ಚೂರು, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಡಿ. ಕಡಲೆಬೇಳೆಯನ್ನು 3-4 ಗಂಟೆ ನೆನೆಸಿ ತೊಳೆದು ಸ್ವಲ್ಪ ತರಿಯಾಗಿ ರುಬ್ಬಿ. ಅದಕ್ಕೆ ಅಕ್ಕಿಹಿಟ್ಟು, ಉದ್ದಿನಹಿಟ್ಟು , ಬಸಳೆ ಚೂರು, ಉಪ್ಪು , ಹಸಿಮೆಣಸು ಚೂರು, ಈರುಳ್ಳಿ ಚೂರು ಸೇರಿಸಿ ಚೆನ್ನಾಗಿ ಬೆರೆಸಿ ನಂತರ ಕೈಗೆ ಎಣ್ಣೆ ಪಸೆ ಹಚ್ಚಿ ವಡೆಯಂತೆ ತಟ್ಟಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿ ವಡೆ ಸವಿಯಲು ಸಿದ್ಧ.
ಉಂಡಲ ಕಾಳು
ಬೇಕಾಗುವ ಸಾಮಗ್ರಿ: ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ಸೊಳೆ, ಸ್ವಲ್ಪ ಜೀರಿಗೆ, 1 ಕೊಬ್ಬರಿ, 1/4 ಕಪ್ ಬೆಳ್ತಿಗೆ ಅಕ್ಕಿ, 1/2 ಕಪ್ ತೆಂಗಿನಕಾಯಿ ತುರಿ, ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಸೊಳೆಯನ್ನು ತೆಗೆದು, ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿಟ್ಟು ಆಗಾಗ ನೀರು ಬದಲಾಯಿಸಿ. ಉಪ್ಪು ಹದಕ್ಕೆ ಬಂದ ನಂತರ ನೀರಿನಿಂದ ತೆಗೆದು, ಚೆನ್ನಾಗಿ ಹಿಂಡಿಕೊಳ್ಳಿ. ಅಕ್ಕಿಯನ್ನು ನೆನೆಸಿ ಚೆನ್ನಾಗಿ ತೊಳೆದು ಹಲಸಿನ ಸೊಳೆಗೆ ಹಾಕಿ. ತೆಂಗಿನ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿ. ಜೀರಿಗೆ ಹಾಕಿ 2 ಸುತ್ತು ತಿರುವಿ ತೆಗೆದು, ಕೊಬ್ಬರಿಯನ್ನು ಸಣ್ಣ ಸಣ್ಣ ಹೋಳುಗಳನ್ನು ಮಾಡಿ. ನಂತರ ಸಣ್ಣ ನೆಲ್ಲಿಕಾಯಿಯಷ್ಟು ಹಿಟ್ಟು ತೆಗೆದು, 1 ಕೊಬ್ಬರಿ ಹೋಳುಗಳನ್ನು ಇಟ್ಟು ಉಂಡೆ ಮಾಡಿ. ಮಾಡಿದ ಉಂಡೆಗಳನ್ನು ಒಂದೊಂದಾಗಿ ಎಣ್ಣೆಗೆ ಹಾಕಿ. ಹಾಕಿದ ಕೂಡಲೇ ಮಗುಚಬಾರದು. ಸ್ವಲ್ಪ ಗರಿ ಗರಿ ಆದ ಮೇಲೆ ಮಗುಚಿ. ಸ್ವಲ್ಪ ಕೆಂಪಗೆ ಆಗುವಾಗ ತೆಗೆಯಿರಿ. ಗಾಳಿ ಸೋಕದಂತೆ ಡಬ್ಬದಲ್ಲಿ ಹಾಕಿಡಿ. 4 ವಾರಗಳವರೆಗೆ ಕೆಡದು.
ಸೋರೆಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿ: ಒಂದು ಕಪ್ ಬೀಜ-ಸಿಪ್ಪೆ ತೆಗೆದು 1/2 ಇಂಚು ಉದ್ದಕ್ಕೆ ತುಂಡು ಮಾಡಿದ ಸೋರೆ ತುಂಡು, 1 ಕಪ್ ಕಡ್ಲೆಹಿಟ್ಟು , 2 ಚಮಚ ಅಕ್ಕಿಹಿಟ್ಟು, ಚಿಟಿಕೆ ಇಂಗು, 1 ಚಮಚ ಕೆಂಪುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಕಡ್ಲೆಹಿಟ್ಟು, ಅಕ್ಕಿಹಿಟ್ಟು , ಕೆಂಪು ಮೆಣಸಿನ ಪುಡಿ, ಇಂಗು, ಉಪ್ಪು ನೀರು ಸೇರಿಸಿ ಕಲಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸೋರೆ ತುಂಡನ್ನು ಹಿಟ್ಟಿನಲ್ಲಿ ಅದ್ದಿ ತೆಗೆದು ಎಣ್ಣೆಗೆ ಹಾಕಿ, ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಸೋರೆಕಾಯಿ ಬಜ್ಜಿ ಸವಿಯಲು ಬಲು ರುಚಿ.
ಪಾಲಕ್ ಸೊಪ್ಪಿನ ವಡೆ
ಬೇಕಾಗುವ ಸಾಮಗ್ರಿ: ಸಣ್ಣಗೆ ತುಂಡು ಮಾಡಿದ 1 ಕಪ್ ಪಾಲಕ್ ಸೊಪ್ಪು , 1 ಕಪ್ ಕಡಲೆಬೇಳೆ, 3-4 ಹಸಿಮೆಣಸು, 1/4 ಚಮಚ ಅಮೂcರ್ ಪುಡಿ ಅಥವಾ 1/2 ಚಮಚ ನಿಂಬೆರಸ, ಸಣ್ಣಗೆ ತುಂಡು ಮಾಡಿದ 1 ಈರುಳ್ಳಿ , ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ..
ತಯಾರಿಸುವ ವಿಧಾನ: ಕಡ್ಲೆಬೇಳೆಯನ್ನು 1-2 ಗಂಟೆ ನೆನೆಸಿ. ನಂತರ ತೊಳೆದು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಗಟ್ಟಿ ರುಬ್ಬಿ ಪಾತ್ರೆಗೆ ಹಾಕಿ. ನಂತರ ಪಾಲಕ್ ಸೊಪ್ಪಿನ ಚೂರು, ಸಣ್ಣಗೆ ತುಂಡು ಮಾಡಿದ ಹಸಿಮೆಣಸು, ಸಣ್ಣಗೆ ತುಂಡು ಮಾಡಿದ ಈರುಳ್ಳಿ ಚೂರು, ನಿಂಬೆರಸ ಅಥವಾ ಅಮೂcರ್ ಪುಡಿ, ಉಪ್ಪು ಸೇರಿಸಿ ಸಣ್ಣ ಉಂಡೆಗಳನ್ನಾಗಿ ಮಾಡಿ. ನಂತರ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಪಾಲಕ್ ಸೊಪ್ಪಿನ ವಡೆಯನ್ನು ಸವಿಯಿರಿ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.