ವೈವಿಧ್ಯಮಯ ದೋಸೆಗಳು
Team Udayavani, Oct 6, 2017, 1:26 PM IST
ದೋಸೆಯಲ್ಲಿ ನಾನಾ ವಿಧಗಳಿವೆ. ಪ್ರತಿಯೊಬ್ಬರಿಗೂ ಬೇರೆಬೇರೆ ರೀತಿಯ ದೋಸೆಗಳೆಂದರೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಉದ್ದು ಬಳಸಿ ತಯಾರಿಸುವ ವಿವಿಧ ರೀತಿಯ ದೋಸೆಗಳನ್ನು ಹೆಚ್ಚಾಗಿ ಎಲ್ಲರೂ ತಿಂದಿರುತ್ತಾರೆ ಹಾಗೂ ಅವುಗಳನ್ನು ತಯಾರಿಸುವ ಬಗೆಯೂ ಅರಿತಿರುವರು. ಆದರೆ ಕೆಲವೊಂದು ಅಪರೂಪದ ದೋಸೆಗಳ ಬಗ್ಗೆ ತಿಳಿಯುವ ಕುತೂಹಲ ನಿಮ್ಮಲ್ಲಿದೆಯೇ? ಹಾಗಾದರೆ ಇಲ್ಲಿದೆ ಮಾಹಿತಿ.
ಪಪ್ಪಾಯಿ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 2 ಕಪ್, ಪಪ್ಪಾಯಿ (ಕಾಯಿ) ತುರಿ- 1 ಕಪ್, ತೆಂಗಿನ ಎಣ್ಣೆ- 4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಿಪ್ಪೆ ಮತ್ತು ತಿರುಳು ತೆಗೆದು ತುರಿದಿಟ್ಟ ಪಪ್ಪಾಯಿ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ ಹಿಟ್ಟು. ಕಾದ ತವಾದ ಮೇಲೆ ಎಣ್ಣೆ ಸವರಿ ದೋಸೆ ಹುಯ್ಯಿರಿ.
ಪಚ್ಚೆ ಹೆಸುರು (ಇಡಿಹೆಸುರು) ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ – 2 ಕಪ್, ಪಚ್ಚೆ ಹೆಸುರು- ಮುಕ್ಕಾಲು ಕಪ್, ತೆಂಗಿನ ಎಣ್ಣೆ -4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಪಚ್ಚೆ ಹೆಸುರನ್ನು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಬಳಿಕ ನೀರು ಸೋಸಿಟ್ಟು ಮೊಳಕೆ ಬರಿಸಿ. ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅನಂತರ ಅವುಗಳಿಗೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ದೋಸೆ ಹುಯ್ಯಿರಿ.
ಪಾಲಕ್ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 2 ಕಪ್, ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು- ಒಂದು ಕಪ್, ಕೊತ್ತಂಬರಿ- 4 ಚಮಚ, ಜೀರಿಗೆ- 1 ಚಮಚ, ಸಣ್ಣ ನೆಲ್ಲಿಕಾಯಿ ಗಾತ್ರದಷ್ಟು ಹುಣಸೆ ಹುಳಿ, ಒಣಮೆಣಸು 1-2, ತೆಂಗಿನಕಾಯಿ ತುರಿ- ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಅಕ್ಕಿ, ಪಾಲಕ್ ಸೊಪ್ಪು, ಕೊತ್ತಂಬರಿ, ಜೀರಿಗೆ, ಹುಣಸೆಹುಳಿ, ಮೆಣಸು, ತೆಂಗಿನ ಕಾಯಿತುರಿ, ಉಪ್ಪು ಸೇರಿಸಿ ಅರೆಯಿರಿ. ಹಿಟ್ಟು ಉದ್ದಿನ ಹಿಟ್ಟಿನ ಹದಕ್ಕೆ ಇರಲಿ. ಕಾದ ತವಾಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಹುಯ್ಯಿರಿ, ಎರಡರಿಂದ ಮೂರು ನಿಮಿಷ ಮುಚ್ಚಿ ಇಟ್ಟು ಬಳಿಕ ದೋಸೆಯನ್ನು ಮಗುಚಿ ಹಾಕಿ ಒಂದು ನಿಮಿಷ ಬಿಟ್ಟು ತೆಗೆಯಿರಿ. ಇದನ್ನು ಯಾವುದೇ ಚಟ್ನಿಯೊಂದಿಗೆ ಸವಿಯಬಹುದು.
ಹೀರೆಕಾಯಿ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ -2 ಕಪ್, ಸಾಧಾರಣ ಗಾತ್ರದ 2 ಹೀರೆಕಾಯಿ, ಕೊತ್ತಂಬರಿ-4 ಚಮಚ, ಜೀರಿಗೆ-1 ಚಮಚ, ನೆಲ್ಲಿಕಾಯಿ ಗಾತ್ರದ ಹುಣಸೆ ಹುಳಿ, ಒಣಮೆಣಸು -3, ತೆಂಗಿನ ಕಾಯಿತುರಿ- 4 ಚಮಚ, ಬೆಲ್ಲದ ತುರಿ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದಕ್ಕೆ ಹುಳಿ, ಕೊತ್ತಂಬರಿ, ಜೀರಿಗೆ, ಬೆಲ್ಲ, ಒಣಮೆಣಸು, ಕಾಯಿತುರಿ, ಉಪ್ಪು ಸೇರಿಸಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ಅನಂತರ ಹೀರೆಕಾಯಿಯ ನಾರನ್ನು ತೆಗೆದು ಉರುಟಾಗಿ (ಚಕ್ರದ ಆಕಾರದಲ್ಲಿ) ತೆಳ್ಳಗೆ ಕತ್ತರಿಸಿಕೊಳ್ಳಿ. ಕಾದ ಕಾವಲಿಗೆಗೆ ಎಣ್ಣೆ ಸವರಿ ಕತ್ತರಿಸಿದ ಹೀರೆಕಾಯಿಯನ್ನು ಒಂದೊಂದಾಗಿ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಗೆ ಮೇಲೆ ಒತ್ತೂತ್ತಾಗಿ (ದೋಸೆಯ ಆಕಾರದಲ್ಲಿ) ಇಡಿ. ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿ, ಬಳಿಕ ಮಗುಚಿ ಹಾಕಿ ಒಂದು ನಿಮಿಷ ಬೇಯಿಸಿ ಹೀರೆಕಾಯಿ ದೋಸೆ ರೆಡಿ.
ಬಾಳೆದಿಂಡಿನ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ – 2 ಕಪ್, ಬಾಳೆದಿಂಡಿನ ಹೋಳು- 1 ಕಪ್, ತೆಂಗಿನ ಎಣ್ಣೆ -4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಾಳೆದಿಂಡಿನ ಹೊರಗಿನ ಸಿಪ್ಪೆ ತೆಗೆದು ಮಧ್ಯ ಭಾಗವನ್ನು ಸಣ್ಣ ಹೋಳುಗಳನ್ನಾಗಿ ಮಾಡಿ ಇಟ್ಟುಕೊಳ್ಳಬೇಕು. ಅಕ್ಕಿಯ ಜತೆ ಉಪ್ಪು, ಬಾಳೆದಿಂಡಿನ ಹೋಳು ಸೇರಿಸಿ ನುಣ್ಣಗೆ ರುಬ್ಬಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ಹಿಟ್ಟನ್ನು ಹುಯ್ಯಿರಿ. ಬಾಳೆದಿಂಡಿನ ದೋಸೆ ತಯಾರು.
ಬೀಟ್ರೂಟ್ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ – 2 ಕಪ್, ಬೀಟ್ರೂಟ್ ತುರಿ-1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ಎಣ್ಣೆ – 4 ಚಮಚ.
ತಯಾರಿಸುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಉಪ್ಪು ಸೇರಿಸಿ ರುಬ್ಬಿ. ಹಿಟ್ಟು ನೀರು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಇರಲಿ. ಬೀಟ್ರೂಟ್ ತುರಿ ಸೇರಿಸಿ ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ಹುಯ್ಯಿರಿ. ಬೀಟ್ರೂಟ್ ದೋಸೆಯ ಬಣ್ಣ ಎಂತಹವರನ್ನೂ ತನ್ನ ಹತ್ತಿರ ಆಕರ್ಷಿಸುತ್ತದೆ.
ಇನ್ನೊಂದು ವಿಧಾನ : ಅಕ್ಕಿಯನ್ನು ಅರೆಯುವ ವೇಳೆ ಎರಡು ಒಣಮೆಣಸು, 2 ಚಮಚ ಕೊತ್ತಂಬರಿ, ಒಂದು ಹದಾ ಗಾತ್ರದ ಈರುಳ್ಳಿ ಸೇರಿಸಬಹುದು. ಆದರೆ ರುಚಿ ಚೆನ್ನಾಗಿರುತ್ತದೆ. ಬಿಟ್ರೂಟ್‌ನ ಫ್ಲೆವರ್ ಬರುವುದಿಲ್ಲ.
ಗಣೇಶ ಕುಳವರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.