ಸುಂಯ್…ಟಪಕ್! “ಹಬ್ಬ ಹಿಂಗೆ ಚಪ್ಪೆ ಆದ್ರೆ ಹೆಂಗೆ ಮಾರ್ರೆ”…
Team Udayavani, Oct 25, 2019, 1:36 PM IST
“ಓ.. ಈ ಸಾರ್ತಿ ತಾರೀಕು 14 ಶುಕ್ರವಾರ ತ್ರಯೋದಶಿ ಸಾಯಂಕಾಲ ಗಂಟೆ ೦5. 34 ಕ್ಕೆ ಜಲಪೂರಣಂ…ರಾತ್ರಿ ಚಂದ್ರೋದಯ ಗಂ ೦4. 5೦ಕ್ಕೆ ತೈ….” ತಕಥೈ…!
ನಮ್ಮಲ್ಲಿ ಯಾವತ್ತೂ ಅಪ್ಪನ ಪಂಚಾಂಗ ಹೊರಗೆ ಬರದೆ ದೀಪಾವಳಿ ಆಗುತ್ತಲೇ ಇರಲಿಲ್ಲ.
ಆಣಿಯಲ್ಲಿ ನೇತಾಡುತ್ತಿರುವ ಪಂಚಾಂಗ ತೆಗೆದು ಜಗಲಿಯ ತುದಿಯಲ್ಲಿ ಅಂಗಡಿ ಮುಚ್ಚಿಕೊಂಡು ಕೊಕ್ಕರೆ ಕೂತು ”ರಾತ್ರಿ ಚಂದ್ರೋದಯಂ.. ತೈಲ್ಯಾಭ್ಯಂಗಂ.. ಆಕಾಶದೀಪಂ..”ಅಂತ ಪಂಚಾಂಗ ಬಿಡಿಸುತ್ತಿದ್ದರು. ಅವಲಕ್ಕಿ ಪಂಚಕಜ್ಜಾಯ, ದೋಸೆ ಚಟ್ನಿ, ಪೂಜೆ ಪಾಯಸ ಎಲ್ಲ ಕಾರ್ಯಕ್ರಮ..ಎಲ್ಲವೂ ಇದರ ನಂತರವೇ. ಅದಾಗಲೇ ದೀಪಾವಳಿ ಬರುತ್ತಿದೆ ಅಂತ ಅಲ್ಲೊಂದು ಇಲ್ಲೊಂದು ಪಟಾಕಿ ಸದ್ದಿನಿಂದಲೇ ಗೊತ್ತಾಗುತ್ತಿತ್ತು ನಮಗೆ.
ನಮ್ಮ ಕಣ್ಣಲ್ಲಿ ಸುರ್ ಸುರ್ ಕಡ್ಡಿಯ ನಕ್ಷತ್ರ ಮಿನುಗತೊಡಗುತ್ತದೆ. ಅಂಥ ಹೊತ್ತಲ್ಲಿ ಕಳೆದ ವರ್ಷ ಸರಿಯಾಗಿ ತೊಳೆಯದೇ ಇಟ್ಟ ಹಣತೆ, ಹಿಂದಿನ ಸಲದ ಗೂಡುದೀಪದ ಅಸ್ಥಿಪಂಜರ ಮೆಲ್ಲ ಮೆಲ್ಲನೇ ಕೆಳಗೆ ಇಳಿದು ಬರುತ್ತಿದ್ದವು. ಜಾಗಟೆ ಎರಡು ಸಾಕಾ, ಮೂರು ಬೇಕಾ, ಮಣೆ ದೊಡ್ಡದಾ ಚಿಕ್ಕದಾ, “ಆಚೆ ಮನೆಲೆ ಏಗ್ಳ್ ನೀರ್ ತುಂಬ್ಸುಕೆ..?”, ಬತ್ತಿ ತಂತಾ, ಎಣ್ಣೆ ಬಂತಾ.. ಗದ್ದಲಗಳು ಆಗಿನ ಮಕ್ಕಳಾಗಿದ್ದ ನಮಗೆ ಸಂಭ್ರಮ ಹುಟ್ಟಿಸುತ್ತಿದ್ದವು.
ಸಾಯಂಕಾಲ ಜಲಪೂರಣಂ ದಿನ ನೀರಿನ ಹಂಡೆಯನ್ನು ಉಪ್ಪು ಹುಳಿ ಹಾಕಿ ತಿಕ್ಕಿ ತೊಳೆದು ಹೊಳೆಯಿಸಿ, ಅದರಲ್ಲಿದ್ದ ಸ್ವಲ್ಪ ಬಿಸಿ ನೀರನ್ನು ಬೆಳ್ಳಿ ದನಕ್ಕೆ ಅಂತ ತೆಗೆದಿಟ್ಟು, ಸೇಡಿಯ ರಂಗೋಲಿ ಬಳಿದು, ಕುಂಬಳಕಾಯಿಯ ಬಳ್ಳಿಯನ್ನು ಆ ಹಂಡೆಯ ಕುತ್ತಿಗೆಗೆ ಸುತ್ತಿ(ಯಾಕೇಂತ ದೇವರಿಗೇ ಗೊತ್ತು!), ಸ್ವಚ್ಛಗೊಂಡ ಬಚ್ಚಲುಮನೆಯ ಗೋಡೆಯಲ್ಲಿ ಸುಣ್ಣದ ಕಡ್ಡಿಯಲ್ಲಿ ದೀಪಾವಳಿ ಶುಭಾಶಯಗಳು, ಪಟಾಕಿ ದುರ್ಸು ರಾಕೆಟ್ಟಿನ ಚಿತ್ರ ಬರೆದು, ಸುಣ್ಣದಲ್ಲಿ ಮುಳುಗಿಸಿದ ಅಂಗೈ ಅನ್ನು ಗೋಡೆಗೊತ್ತಿ ಮುದ್ರಿಸಿ ತಯಾರು ಮಾಡುತ್ತಿದ್ದೆವು ನಾವೆಲ್ಲ ಸೇರಿ.
ಆಮೇಲೆ ಅಪ್ಪ ಹೇಳಿದ ದಿವಾ ಗಂಟೆಗೆ ಸರಿಯಾಗಿ ಹಣತೆ ಹಚ್ಚಿ, ಸಾಧ್ಯವಾದಷ್ಟು ರಭಸದಲ್ಲಿ ಜಾಗಟೆ ಬಾರಿಸಿ, ಶಂಖನಾದಗೈದು, ಕೊಡಪಾನದಲ್ಲಿ ಬಾವಿಯಿಂದ ಸಾಕಾ ಬೇಕಾ ಅಂತ ನೀರು ಸೇದಿ ಹಂಡೆಗೆ ತುಂಬಿಸುತ್ತಿದ್ದೆವು. ಮಧ್ಯೆ ಅಣ್ಣ ತಂದ ಪಟಾಕಿಯಲ್ಲಿ ಒಂದೆರಡನ್ನು ಕದ್ದು ತೆಗೆದು ಸ್ಫೋಟಿಸುತ್ತಿದ್ದೆವು. ಢಂ ಟಕಾರ್..!
ತುಂಬಿತೂ ತುಂಬಿತು..ಸಾಕೂ ಸಾಕೂ ಅಂದರೂ ನಮ್ಮ ನೀರೆಳೆಯುವ ಆಟ ಮುಗಿಯುತ್ತಿರಲಿಲ್ಲ. ಮತ್ತೊಂದೆರಡು ಬಾಲ್ದಿಯನ್ನೂ ಚರಿಗೆಯನ್ನೂ ತುಂಬಿ ತುಳುಕಿಸುತ್ತಿದ್ದೆವು. ಅದಾದ ಮೇಲೆ ಅಮ್ಮ ಅರ್ಧ ಗಂಟೆಯಲ್ಲಿ ಮಾಡಿದ ಅವಲಕ್ಕಿಯನ್ನು ಕ್ಷಣಮಾತ್ರದಲ್ಲಿ ಇಲ್ಲವಾಗಿಸುತ್ತಿದ್ದೆವು. ಅಪ್ಪ ಹೇಳುವ ಭ್ರಮ್ಮರಕ್ಕಸ ದಾರಿತಪ್ಪಿಸಿದ ಕತೆಯನ್ನೋ, ಚೆಂಡಾಡಿಯ ಭಟ್ರನ್ನು ಮೋಹಿನಿ ಅಡ್ಡಗಟ್ಟಿದಾಗ ಆ ಮನುಷ್ಯ ಭಾಗವತ ಓದುತ್ತಾ ತಾಳೆ ಮರ ತುದಿಯಲ್ಲಿ ಸೇಫಾಗಿ ಕೂತ ಕತೆಯನ್ನೋ, ಮರುದಿನ ಮೂರ್ತೆಯವನು ಹಗ್ಗಕಟ್ಟಿ ಇಳಿಸಿದ ರೋಚಕ ಕತೆಯನ್ನೋ ಕೇಳುತ್ತ ಗೂಡುದೀಪಕ್ಕೆ ಗೋಂದು ಹಚ್ಚುತ್ತಿದ್ದೆವು. ಅಮೇಲೆ ಅಣ್ಣ ಸ್ವಲ್ಪ ಚಿಲ್ಲರೆಯನ್ನು ಬಚ್ಚಲ ಹಂಡೆಯೊಳಗೆ ಚೆಲ್ಲಿಬಿಡುತ್ತಿದ್ದ. “ಕಡೇಗೆ ಮಿಂದವರಿಗೆ ದುಡ್ಡು” ಅನ್ನುತ್ತಿದ್ದ. ಮರುದಿನ ಕುದಿವ ನೀರಿಗೆ ಕೈಹಾಕಿ ಅದನ್ನು ತೆಗೆಯಲಾಗದು ಎಂಬುದು ನಮ್ಮ ಮುಗ್ಧ ಮಂಡೆಗೆ ಹೋಗುತ್ತಿರಲಿಲ್ಲ; ಕಣ್ಣರಳಿಸುತ್ತಿದ್ದೆವು. “ಇನ್ನ್ ಬೆಳಗ್ಗೆವರೆಗೆ ಯಾರೂ ಬೆಸ್ರೊಟ್ಟೆ (ಬಚ್ಚಲುಮನೆ) ನೀರ್ ಮುಟ್ಟುಗಿಲ್ಲೆ” ಅಂತ ಅಮ್ಮ ತಾಕೀತು ಮಾಡುತ್ತಿದ್ದರು. ನಾವ್ಯಾರೂ ಮಾತೆಯ ಮಾತಿಗೆ ತಪ್ಪಿ ‘ವಚನಭ್ರಷ್ಟ’ರಾಗುತ್ತಿರಲಿಲ್ಲ.
ಮರುದಿನದ ಸಂಭ್ರಮಗಳನ್ನು ಮನಸ್ಸಲ್ಲೇ ಕಲ್ಪಿಸಿಕೊಳ್ಳುತ್ತಾ, ಪಟಾಕಿ ಯಾವುದು ಸಿಗಬಹುದು, ಹಿಂಗಾದ್ರೆ ಹಂಗೆ ಆಯಿದ್ದ್ ಹೆಂಗೆ.. ಅಂತ ಲೆಕ್ಕ ಹಾಕುತ್ತಾ ಮಲಗುತ್ತಿದ್ದೆವು, ಹೊರಳಾಡುತ್ತಿದ್ದೆವು. ಆ ರಾತ್ರಿ ನಿದ್ದೆ ನಿಧಾನಗತಿಯಲ್ಲಿ ಪರಮ ಉದಾಸೀನದಿಂದ ನಮ್ಮ ಮೇಲೆ ಮುಸುಕೆಳೆಯುತ್ತದೆ. ಹಾಗೇ ನಾವು ಬಣ್ಣದ ಲೋಕಕ್ಕೆ ಹೋಗಿಬಿಡುತ್ತಿದ್ದೆವು. ಮರುದಿನ ಢಾಂ ಢೀಂ ಢಿಷ್ ಪಟಾರ್..
ಸುಂಯ್..ಟಪಕ್… ಎಂಥ ಅದ್ಭುತ ಜಗತ್ತು!
ಪಟಾಕಿ ಪ್ರಕೃತಿಗೆ ಮಾರಕ, ಪರಿಸರ ಮಾಲಿನ್ಯ ತಪ್ಪಿಸಿ…ಖುಷಿಯ ಮತ್ತು ಸುರಕ್ಷಿತ ದೀಪಾವಳಿ ನಮ್ಮದಾಗಲಿ, ಪಟಾಕಿ ಇಲ್ಲದ ಹಬ್ಬದ ಶುಭಾಶಯಗಳು ನಿಮಗೆ…. “ಹಬ್ಬ ಹಿಂಗೆ ಚಪ್ಪೆ ಆದ್ರೆ ಹೆಂಗೆ ಮಾರ್ರೆ..!”
*ಜಯರಾಮ ನಾವಡ
ನಿಟಿಲಾಪುರ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.