ಕತ್ತಲೆಯಿಂದ ಬೆಳಕಿನೆಡೆಗೆ
Team Udayavani, Oct 24, 2022, 9:30 AM IST
ದೀಪಾವಳಿ ಹಬ್ಬವನ್ನು ಭಾರತದಲ್ಲಿ ಅತ್ಯಂತ ಸಂತೋಷ ಮತ್ತು ಹುರುಪಿನಿಂದ ಆಚರಿಸುತ್ತಾರೆ. ಇದು ಆರ್ಯರ ಪವಿತ್ರ ಹಬ್ಬವಾಗಿದೆ . ಆರ್ಯರು ತಮ್ಮ ಆರ್ಥಿಕ ವರ್ಷದ ಆರಂಭವನ್ನು ಇದೇ ದಿನದಿಂದ ಮಾಡುತ್ತಾರೆ. ಶ್ರೀ ರಾಮಚಂದ್ರನು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಇದೇ ತಿಥಿಗೆ ಅಯೋಧ್ಯೆಗೆ ಆಗಮಿಸಿದ್ದನೆಂದು ಹೇಳಲಾಗುತ್ತದೆ. ಅಯೋಧ್ಯೆಯ ನಿವಾಸಿಗಳು ಅಂದು ಆತನ ಸ್ವಾಗತಕ್ಕೆ ಆನಂದೋತ್ಸವವನ್ನು ಆಚರಿಸಿದ್ದರ ಆವೃತ್ತಿಯೇ ಇದೆಂದು ನಂಬಲಾಗಿದೆ .
ದೀಪಾವಳಿಯ ಈ ಶುಭದಿನದಂದು ಎಲ್ಲಿ ನೋಡಿದಲ್ಲಿ ದೀಪಗಳು ಬೆಳಗುತ್ತವೆ. ಕತ್ತಲೆಯನ್ನು ಓಡಿಸುತ್ತವೆ. ಈ ಹಬ್ಬಕ್ಕೆ ಮೊದಲೇ ಜನರು ತಮ್ಮ ಮನೆ ಮತ್ತು ಅಂಗಡಿಗಳನ್ನು ಹಸನಾಗಿಸುತ್ತಾರೆ. ಸುಣ್ಣ-ಬಣ್ಣ ಬಳೆದು ಸಿಂಗರಿಸುತ್ತಾರೆ. ದೀಪಾವಳಿಯ ಪ್ರತೀ ಇರುವ ಆರ್ಯ ಜಾತಿಯ ನಿಜವಾದ ಪ್ರೇಮ ಇಲ್ಲಿ ವ್ಯಕ್ತವಾಗುತ್ತದೆ. ಗ್ರಾಮಗಳಲ್ಲೂ ರೈತರು ತಮ್ಮ ಚಿಕ್ಕ ಪುಟ್ಟ ಮನೆಗಳನ್ನು ಚೊಕ್ಕಟವಾಗಿ ಕಾಣುವಂತೆ ಸಿಂಗರಿಸುತ್ತಾರೆ. ಪೇಟೆಗಳು ಕೂಡ ಆ ದಿನಗಳಲ್ಲಿ ಅಲಂಕೃತವಾಗಿ ಕಾಣುತ್ತವೆ. ದೀಪಾವಳಿಯನ್ನು ಅಮಾವಾಸ್ಯೆಯ ದಿನ ಆಚರಿಸಲಾಗುತ್ತದೆ. ಬೆಳಗ್ಗೆ ಈಶ್ವರನ ಪೂಜೆಯೂ ಆರಂಭಗೊಳ್ಳುತ್ತದೆ. ಅದರ ಜತೆಗೆ ಶ್ರೀ ಮಹಾಲಕ್ಷ್ಮೀ ಮಹಾ ಸರಸ್ವತಿಯ ಪೂಜೆಯೂ ನಡೆಯುತ್ತದೆ. ರಾತ್ರಿ ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳು ಪ್ರತಿಯೊಬ್ಬರ ಮನೆ ಬಾಗಿಲಲ್ಲಿ ಉರಿಯುತ್ತಿರುವುದನ್ನು ಗಮನಿಸಬಹುದಾಗಿದೆ.
ವಿದ್ಯುತ್ತಿನ ಬೆಳಕೂ ಸೂರ್ಯನ ಬೆಳಕನ್ನು ಮೀರಿಸುವಂತಿರುತ್ತದೆ. ಮನೆಗಳಲ್ಲಿ ಸಿಹಿ ಪದಾರ್ಥಗಳು ಊಟಕ್ಕೆ ಕರೆಯುತ್ತಿರುತ್ತವೆ. ಮಕ್ಕಳು ಸಿಹಿ ಪದಾರ್ಥಗಳನ್ನು ತಮ್ಮ ಜೇಬಿನಲ್ಲಿ ತುಂಬಿಕೊಂಡು ತಿರುಗಾಡುತ್ತಿರುವ ನೋಟವೂ ಮನ ಮೋಹಕವಾಗಿರುತ್ತದೆ. ದೀಪಾವಳಿಯಂದು ರೇಡಿಯೋ ಮತ್ತು ಟಿ.ವಿ. ಗಳಲ್ಲಿ ವಿವಿಧ ಮನೋರಂಜನೆಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತವೆ. ಮಹಾನ್ ಕಲಾಕಾರರ ಸುಶ್ರಾವ್ಯ ಧ್ವನಿ ಮತ್ತು ಅವರ ದರ್ಶನದಿಂದ ನಾವು ಪುನೀತರಾಗುತ್ತೇವೆ. ಕೆಲವು ಕಡೆ ನಾಟಕ ಪ್ರೇಮಿಗಳು ನಾಟಕವನ್ನಾಡುವುದೂ ಉಂಟು. ಒಟ್ಟಾರೆ ಅಂದು ಎಲ್ಲಿ ನೋಡಿದರೂ ಸಂತೋಷದ ವಾತಾವರಣ ಕಂಡು ಬರುತ್ತದೆ.
ದೀಪಾವಳಿಯ ಹಬ್ಬವನ್ನು ಸಡಗರದಿಂದ ಆಚರಿಸುವ ಆ ದಿನದಂದು ಕೆಲವು ಜನರಲ್ಲಿ ಇಸ್ಪಿಟ್ ಆಡುವ ಕೆಟ್ಟ ಚಟವೂ ಒಂದು ಅಂಟಿಕೊಂಡಿರುತ್ತದೆ. ಈ ಆಟವೂ ಜನರನ್ನು ಸರ್ವನಾಶಗೊಳಿಸುವುದು ಖಂಡಿತ . ಈ ಆಟಕ್ಕೆ ಅಂಟಿಕೊಂಡವರಲ್ಲಿ ಅನೇಕರು ಭಿಕ್ಷುಕರಾಗಿ ತಿರುಗುವುದನ್ನೂ ನಾವು ಕಾಣಬಹುದು . ಈ ರಾಕ್ಷಸಿ ಆಟವು ಅನೇಕ ಜನ ಹೆಂಗಳೆಯರಿಗೆ ಮತ್ತು ಮಕ್ಕಳಿಗೆ ಉಪವಾಸ ಮಲಗಿಸುತ್ತದೆ. ನೆಲಕ್ಕೆ ಮಲಗಿದ ಅವರನ್ನು ಮೇಲಕ್ಕೆ ಏಳದಂತೆ ಮಾಡಿದೆ. ಸ್ವತಂತ್ರ ಭಾರತದಲ್ಲೂ ಜನರು ಇಂದು ಇಂಥ ಆಟಕ್ಕೆ ಮನಸೋತಿದ್ದಾರೆಂದರೆ ವಿಷಾದವೇ ಅನಿಸುತ್ತದೆ. ದೀಪಾವಳಿಯ ಮರುದಿನವೇ ಗೋವರ್ಧನನ ಪೂಜೆಯಾಗುತ್ತದೆ.
ಈ ಪವಿತ್ರ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಬೆಳಗಿನಲ್ಲೇ ಸ್ನಾನ ಮಾಡಿಸಿ ಆರತಿ ಬೆಳಗುತ್ತಾರೆ. ಸಹೋದರರು ತಮ್ಮ ಸಹೋದರಿಯರಿಗಾಗಿ ಕಾಣಿಕೆ ಸಲ್ಲಿಸುತ್ತಾರೆ. ಮನೆ , ಮಠ, ಮಂದಿರಗಳು ವರ್ಷದವರೆಗೂ ಧೂಳು, ಕಸ, ಕಡ್ಡಿಗಳಿಂದ ಆವೃತಗೊಂಡು ಕಳಾಹೀನವಾಗಿರುತ್ತದೆ. ಅಲ್ಲಲ್ಲಿ ಕ್ರಿಮಿ- ಕೀಟಗಳು ಮನೆಮಾಡಿಕೊಂಡಿರುತ್ತದೆ. ದೀಪಾವಳಿಯ ಹೆಸರಿನಿಂದ ಕೊಳೆಯೆಲ್ಲ ತಿಪ್ಪೆಗೆ ಸೇರಿ ಮನೆ, ಮಠ , ಮಂದಿರಗಳು ಹಸನಾಗುತ್ತವೆ. ಕ್ರಿಮಿ ಕೀಟಗಳು ಇಲ್ಲವಾಗಿ ಶುದ್ಧವಾದ ವಾಯು ಸಂಚಾರವಾಗಲು ತೊಡಗುತ್ತದೆ . ಈ ರೀತಿ ಹಬ್ಬಗಳಲ್ಲಿ ಕೆಲವು ಕೆಟ್ಟ ಚಟಗಳನ್ನು ಅಂಟಿಸಿಕೊಂಡಿರುವ ಜನರು ಯಾವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಆದ್ದರಿಂದ ನಮ್ಮ ಘನ ಸರಕಾರದವರು ಇತ್ತ ಕಣ್ತೆರೆದು ನಡೆಯುವ ಅನೀತಿಗಳನ್ನು ತಪ್ಪಿಸುವುದರ ಕಡೆಗೆ ಲಕ್ಷಿಸಿದ್ದಾದರೆ ನಾವು ಸ್ವತಂತ್ರ ಭಾರತೀಯರು ಎಂದು ಹೇಳಿಕೊಂಡದಕ್ಕೂ ಸಾರ್ಥಕವಾಗುತ್ತದೆ. ಆಗ ನಿಜವಾದ ದೀಪಾವಳಿ ಆಚರಿಸಿದಂತಾಗುತ್ತದೆ.
– ದೀಪ್ತಿ ಕೆ.ಟಿ. ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.