ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ
ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ 'ಬಲಿಪಾಡ್ಯ' ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ .
Team Udayavani, Nov 14, 2020, 4:04 PM IST
ಹಬ್ಬಗಳ ರಾಜ ದೀಪಾವಳಿ . ನಮ್ಮ ತುಳುನಾಡಿನ ನೆಚ್ಚಿನ ಮಾರ್ನೆಮಿ ( ನವರಾತ್ರಿ ) ಯ ನಂತರ ಜಗಮಗಿಸುತ ಬರುವ ಹಬ್ಬವೇ ದೀಪಗಳ ಸಾಲು ಸಾಲು ಹಬ್ಬ ದೀಪಾವಳಿ . ಈ ಹಬ್ಬದ ಹೆಸರು ಕೇಳಿದಾಕ್ಷಣ ಎಲ್ಲಾ ಮಕ್ಕಳ ಬಾಯಿಯಲ್ಲಿ ನೀರೂರುವುದಂತು ಸಹಜ . ಏಕೆಂದರೆ ಈ ಹಬ್ಬದ ಸಮಯದ ಉದ್ದಿನ ದೋಸೆ ಹಾಗೂ ಮೆಣಸಿನ ಗಟ್ಟಿ ಮರೆಯಲಸದಳ . ಇದು ದೀಪಾವಳಿಯ ವಿಶೇಷವೂ ಹೌದು .
‘ಹಬ್ಬವಿಲ್ಲದ ಮನೆಯಿಲ್ಲ , ಹುಬ್ಬಿಲ್ಲದ ಹಣೆಯಿಲ್ಲ’ ಎಂಬ ನುಡಿ ಹಬ್ಬ ಹರಿದಿನದ ಪ್ರಾಶಸ್ತ್ಯ ಎತ್ತಿ ಹಿಡಿಯುತ್ತದೆ. ನಮ್ಮದು ಹಳ್ಳಿ ಪ್ರದೇಶ . ಕೆಲವೊಮ್ಮೆ ಅಗತ್ಯತೆಯ ವಸ್ತು ತರಲು ಪೇಟೆಯ ಕಡೆಗೆ ತೆರಳಬೇಕಾದುದು ಅನಿವಾರ್ಯ . ಆ ದಿನ ತಂದೆಯೊಂದಿಗೆ ನಾನೂ ಹೋಗಿದ್ದೆ . ಕೆಲವೊಂದು ಹಣತೆ ಇಲಿಗಳ ಉಪಟಳದಿಂದ ಹಾಳಾಗಿದೆ ! ಹೊಸದು ತನ್ನಿ ಎಂದು ತಾಯಿ ಕರೆಮಾಡಿ ಹೇಳಿದರು . ಅಂತೆಯೇ ಒಂದಷ್ಟು ಹೊಸ ಹಣತೆ ತೆಗೆದುಕೊಂಡು ಬಂದೆವು .
ಅಪ್ಪಾ…ನೀವು ಸಣ್ಣವರಿರುವಾಗ ಇಂತಹ ಹಣತೆ ದೊರಕುತ್ತಿತ್ತಾ ? ಎಂದು ಆ ಸಣ್ಣ , ಸುಂದರ ಬಳ್ಳಿ ಬಿಡಿಸಿದ ಚಿತ್ತಾರದ , ನಯವಾದ ಹಣತೆಯನ್ನು ಸವರುತ್ತಾ ಕೇಳಿದೆ .
ನಮ್ಮ ಬಾಲ್ಯದ ದಿನಗಳಲ್ಲಿ ಅಡಕೆ ಸಿಪ್ಪೆ ಸುಳಿದ ನಂತರ ಭಾಗವಾಗಿ ಉಳಿದ ಆ ಸಿಪ್ಪೆಗೆ ಎಣ್ಣೆ ಹೊಯ್ದು ಹಣತೆ ಮಾಡುತ್ತಿದ್ದೇವು ಎಂದರು . ನಿಸರ್ಗದ ಸೊಬಗಿನ್ನು ಅನುಭವಿಸಿದ ಪೂರ್ವಜರು , ಅವರ ಕಟ್ಟುಪಾಡು ಸೋಜಿಗವೆನಿಸಿತು. ನರಕ ಚತುರ್ದಶಿ – ಅಮವಾಸ್ಯೆ – ಬಲಿಪಾಡ್ಯ ಸಾಮಾನ್ಯವಾಗಿ ಹೀಗೆ ಮೂರುದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ .
ಇದನ್ನೂ ಓದಿ:ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
ನರಕ ಚತುರ್ದಶಿಯಿಂದ ದೀಪಾವಳಿ ಆರಂಭ . ದೇವಾಲಯ – ಜಿನಾಲಯ , ಮನೆ – ಮಠಗಳಲೆಲ್ಲಾ ದೀಪಗಳು ರಾರಾಜಿಸುತ್ತದೆ. ನರಕ ಚತುರ್ದಶಿ ಎಂದಾಗ ನೆನಪಾಗುವುದು ನರಕಾಸುರನ ವಧೆ . ದೇವಾನು ದೇವತೆಗಳಿಗೆ ಕಂಟಕರೂಪಿಯಾಗಿದ್ದವನು ಈ ನರಕಾಸುರ . ದೇವತೆಗಳನ್ನು ಕದ್ದೊಯ್ದಿದ್ದ , ಬ್ರಹ್ಮನ ಮಗಳಾದ ಚತುರ್ದಶಿಯನ್ನು ಅಪಹರಿಸಿದ್ದ . ಇವಕ್ಕೆಲ್ಲದಕ್ಕೂ ಅಂತ್ಯ ಹಾಡಲು ಧರೆಗೆ ಅವತರಿಸಿದವನೇ ಶ್ರೀ ಕೃಷ್ಣ ಪರಮಾತ್ಮ . ಅಶ್ವೀಜ ಮಾಸದ ಚತುರ್ದಶಿಯಂದು ನರಕಾಸುರನನ್ನು , ಶ್ರೀ ಕೃಷ್ಣ ಸಂಹರಿಸಿದ್ದರಿಂದ , ಆತನನ್ನು ನೆನಪಿಡುವ ಅಥವಾ ಸ್ಮರಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತಿದೆ ಎಂಬ ವಾಡಿಕೆ ರೂಢಿಯಲ್ಲಿದೆ .
ಅಭ್ಯಂಗ ಸ್ನಾನ ( ಎಣ್ಣೆ ಸ್ನಾನ ) ಈ ದಿನದ ವಿಶೇಷ ಹಾಗೂ ಜಿನ ಚೈತ್ಯಾಲಯಗಳಲ್ಲಿ ಜಿನ ಭಗವಂತನಿಗೆ ಎಣ್ಣೆ ಮಜ್ಜನ ಮಾಡಲಾಗುತ್ತದೆ .
ಅಮವಾಸ್ಯೆಯ ದಿನ. ಇದು ದೀಪಾವಳಿ ಹಬ್ಬದ ಎರಡನೇ ದಿನ . ಜೈನ ಧರ್ಮದ ಪ್ರಕಾರ ವರ್ಧಮಾನ ಕಾಲದ ಇಪ್ಪತ್ತನಾಲ್ಕನೇ ತೀರ್ಥಂಕರನಾದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಪಡೆದಿದ್ದು ಈ ದೀವಳಿಗೆಯ ಬೆಳಕಿನಲ್ಲಿ ಎಂಬ ಪ್ರತೀತಿ ಇದೆ . ಹಾಗಾಗಿ ಜೈನ ಧರ್ಮೀಯರು ಈ ದಿನ ಶುಚಿಭೂರ್ತ ರಾಗಿ ಜಿನಾಲಯ ( ಬಸದಿ ) ಗೆ ತೆರಳಿ ‘ ಅರ್ಘ್ಯ ಎತ್ತುವ’ ಪದ್ದತಿ ರೂಢಿಯಲ್ಲಿದೆ . ಅಂದರೆ ಹರಿವಾಣದಲ್ಲಿ ಅಕ್ಕಿ , ಮೂವತ್ತು ಅಡಿಕೆ , ಮೂವತ್ತು ವೀಳ್ಯದೆಲೆ , ಮೂವತ್ತು ಗೊಂಡೆ ಹೂವು , ಮಧ್ಯದಲ್ಲಿ ಸೀಯಾಳ ಹಾಗೂ ಅದರ ಮೇಲೊಂದು ದೀಪ ಇಟ್ಟು ಆರತಿ ಬೆಳಗುವುದು . ಈ ವಿಧಿ – ವಿಧಾನ ಬ್ರಾಹ್ಮಿ ಮೂರ್ತದಲ್ಲಿ ಜಿನಭಗವಂತನಿಗೆ ನೆರವೇರುತ್ತದೆ . ಮರುದಿನದ ಪೂಜೆಗಾಗಿ ಮನೆಗಳಲ್ಲಿ ಬಲೀಂದ್ರನಿಗೆ ಮರ ಹಾಕುವ ಕ್ರಮವೂ ತುಳುನಾಡಿನಲ್ಲಿ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿದೆ .
ಬಲಿಪಾಡ್ಯ , ಇದು ದೀವಳಿಗೆ ಹಬ್ಬದ ಕೊನೆಯ ದಿನ . ಆಟಿ ಅಮವಾಸ್ಯೆಯ ಸಮಯದಲ್ಲಿ ಬಲಿ ಚಕ್ರವರ್ತಿಯ ತಾಯಿ ಮೇದಿನಿಗೆ ಬರುತ್ತಾಳೆ . ಅದೇ ರೀತಿ ಬಲಿಪಾಡ್ಯದಂದು ತನ್ನ ರಾಜ್ಯ ವನ್ನು ಒಮ್ಮೆ ಬಂದು ನೋಡಿ ಹೋಗಲು ಅವನು ( ಬಲಿ ಚಕ್ರವರ್ತಿ ) ಬರುತ್ತಾನೆ ಎಂಬ ನಂಬಿಕೆಯಲ್ಲಿ ಹಾಳೆ ಮರದ ಗೂಟ ಹಾಕಿ , ಹೂಮಾಲೆಯಿಂದ ಅಲಂಕಾರ ಮಾಡಿ , ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ,ಸಂಕಲ್ಪ ಮಾಡುತ್ತಾರೆ . ಬಲಿಯ ಕುರಿತಾಗಿ ಬೃಹತ್ ಕಥನವೇ ಇದೆ . ಬಲಿ ಚಕ್ರವರ್ತಿ ಏರ್ಪಡಿಸಿದ್ದ ಕೊನೆಯ ಯಾಗದ ವೇಳೆ ವಟುವಿನಂತೆ ಬಂದ ವಾಮನ ಮೂರ್ತಿ , ಮೂರು ಪಾದಗಳಷ್ಟು ಸ್ಟಳವನ್ನು ದಾನವನ್ನಾಗಿ ಕೇಳಿ , ಕೊನೆಯ ಹೆಜ್ಜೆಯನ್ನಿಡಲು ಎಲ್ಲೂ ಸ್ಥಳವಿಲ್ಲದೆ , ತನ್ನ ಮೇಲೆ ಹೆಜ್ಜೆಯನ್ನಿಡುವಂತೆ ಬಲಿ ಶಿರಬಾಗಿಸಿ ನಿಂತದ್ದು …ಇದರ ಕಥೆಯೆ ಅಮೋಘ .
ಇದನ್ನೂ ಓದಿ:ಗಂಡು ಮಗುವಿಗಾಗಿ ಮಗಳನ್ನೇ ಬಲಿಕೊಟ್ಟ ತಂದೆ! ಮಾಂತ್ರಿಕನ ಬಂಧನಕ್ಕೆ ಶೋಧ
ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ ‘ಬಲಿಪಾಡ್ಯ’ ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ . ಹಾಗೂ ಈ ದಿನ ಮನೆ – ಮಂದಿರಗಳಲ್ಲಿ ಧನ – ಧಾನ್ಯ ಲಕ್ಷ್ಮಿಯನ್ನು ಶ್ರದ್ಧೆಯಿಂದ ಆರಾಧಿಸುತ್ತಾರೆ . ಗೋವಿನ ಕೊರಳಿಗೆ ಹೂಮಾಲೆ ತೊಡಿಸಿ , ಸಹಸ್ರ ದೇವಾನು ದೇವತೆಗಳ ನೆಲೆಯಾಗಿರುವ ಗೋಮಾತೆಯನ್ನು ಸಹ ಪೂಜಿಸುತ್ತಾ ಸಂಭ್ರಮ ಪಡುತ್ತಾರೆ . ಅದರೊಂದಿಗೆ ಸ್ನಾನಗೃಹದ ಹಂಡೆ ಗಳನ್ನು ಶುಚಿಗೊಳಿಸಿ ಅರಶಿನ – ಕುಂಕುಮ ಹಚ್ಚಿ ಹೂಮಾಲೆಯಿಂದ ಸಿಂಗರಿಸುತ್ತಾರೆ . ಒಂದು ರೀತಿಯಲ್ಲಿ ರೈತಾಪಿ ಜನರ ಅಥವಾ ಕೃಷಿ ಬಂಧುಗಳ ಹಬ್ಬವೆಂದೂ ಹೇಳಬಹುದೇನೋ ; ಏಕೆಂದರೆ ಕೃಷಿಯ ಸಂದರ್ಭದಲ್ಲಿ ಬಳಸುವ ಪರಿಕರಗಳಾದ ಹಾರೆ , ನೊಗ – ನೇಗಿಲು , ಪಿಕಾಸು ಮುಂತಾದವುಗಳನ್ನು ಪ್ರೀತಿಯಿಂದ ಪೂಜಿಸುವ ಪದ್ದತಿಯೂ ರೂಢಿಯಲ್ಲಿದ್ದು , ವ್ಯಾಪಾರ – ವಹಿವಾಟು ನಡೆಸುವವರು ಅಂಗಡಿ – ಮುಂಗಟ್ಟುಗಳಲ್ಲಿ ಪೂಜೆ ನೆರವೇರಿಸುತ್ತಾರೆ. .ಕೆಲವರು ವಾಹನ ಪೂಜೆ ಈ ಸಮಯದಲ್ಲಿ ನೆರವೇರಿಸುತ್ತಾರೆ.
ಒಟ್ಟಿನಲ್ಲಿ ಈ ದೀಪಗಳ ಹಬ್ಬ ದೀಪಾವಳಿ . ಸಾಲು ದೀಪಗಳ ಈ ಹಬ್ಬ ನಮ್ಮ ನಾಡಿಗಷ್ಟೇ ಸೀಮಿತವಾಗಿಲ್ಲ. ದೇಶ – ವಿದೇಶಗಳಲ್ಲೂ ಇದರ ಪ್ರಭೆ ಕಂಗೊಳಿಸುತ್ತಿದ್ದು, ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ .
ಬರಹ – ಸಮ್ಯಕ್ತ್ ಜೈನ್ ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.