Interview Time: ಇಂಟರ್‌ವ್ಯೂ
Team Udayavani, Nov 12, 2023, 2:19 PM IST
ಅವನು ಉಬರ್ ಕ್ಯಾಬ್ ಹತ್ತಲಿದ್ದಾಗ ಆಕಾಶದಲ್ಲಿ ಸುತ್ತುತ್ತಿದ್ದ ಗಿಡುಗಗಳ ಗುಂಪು ಅವನ ಕಣ್ಣಿಗೆ ಬಿತ್ತು. ಕೂಡಲೇ ಅವನಿಗೆ ತಾನು ಸಾಯುತ್ತೇನೆ ಎಂದನ್ನಿಸಿತು. ಇವತ್ತು ಅವನಿಗಿದ್ದ ಇಂಟರ್‌ವ್ಯೂನ ಭಾರದಿಂದಾಗಿ ಎಲ್ಲವೂ ಒಮ್ಮೆ ಕೊನೆಯಾದರೇ ನೆಮ್ಮದಿಯೆಂದು ಅನ್ನಿಸುತ್ತಿತ್ತು. ಕ್ಯಾಬ್ ಹತ್ತಿ ಕೂತವನೇ ವಾಸ್ತವದ ದಾಳಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಕಣ್ಣು ಮುಚ್ಚಿಕೊಂಡ. ಆದರೆ ದಾಳಿಯೇನೂ ನಿಲ್ಲಲಿಲ್ಲ. ಕೆಲಸವಿಲ್ಲದೆ ನಾಲ್ಕು ತಿಂಗಳಾಗಿತ್ತು. ಮನೆಯವರಿಗೆ ಹೇಳಿಯೇ ಇಲ್ಲ. ರೂಮ್ ಮೇಟ್ಸ್ ಎಲ್ಲರ ಬಳಿಯೂ ಕೈಸಾಲವಾಗಿತ್ತು. ಇವನ ಕರಾಳ ಭವಿಷ್ಯದ ಸುಳಿವು ಸಿಕ್ಕಿ ಹೆದರಿದವರಂತೆ ಅವರೂ ಕೂಡ ಇವನಿಂದ ತಪ್ಪಿಸಿಕೊಂಡು ಓಡಾಡತೊಡಗಿದ್ದರು.
ಇಂಟರ್‌ವ್ಯೂಗೆ ಕೂತಲ್ಲಿ ರಪರಪನೆ ಪ್ರಶ್ನೆಗಳ ಸುರಿಮಳೆಯಾಗುತ್ತಿರುವಾಗ, ಒಮ್ಮೆ ಉಸಿರೆಳೆದುಕೊಂಡು, ಮುಗುಳ್ನಕ್ಕು, ಶಾಂತವಾಗಿ ಉತ್ತರಿಸಿದರೆ ಸುಲಭವಾಗಿ ಇಂಟರ್‌ವ್ಯೂ ಪಾಸಾಗುತ್ತೇನೆಂದು ಅವನಿಗೆ ಪ್ರತಿಸಲವೂ ಅನ್ನಿಸುತ್ತದೆ. ಆದರೆ ಉಸಿರಿನಲ್ಲಿ ಬೆರೆತಿರುವ ತಳಮಳದ ಸುಳಿವು ಅವರಿಗೆ ಸಿಕ್ಕಿ ಬಿಟ್ಟರೆ ಎಂಬ ಭಯದಲ್ಲಿ ಉಸಿರೆಳೆದುಕೊಳ್ಳುವುದನ್ನೂ ಮರೆತು, ಮುಗುಳ್ನಗುವ ಯತ್ನಕ್ಕೆ ಮುಖವೇ ಸಹಕರಿಸದೆ, ಉತ್ತರವೆಂದು ತಾನು ಬಡಬಡಿಸುತ್ತಿರುವ ಮಾತಿಗೆ ಅರ್ಥವೇ ಇಲ್ಲವೆಂದು ಗೊತ್ತಿದ್ದೂ ಕೂಡ ಅದನ್ನು ನಿಲ್ಲಿಸಲು ಗೊತ್ತಾಗದೆ, ಆ ಅಸಂಬದ್ಧ ಮಾತಿನ ಸುಳಿಯಲ್ಲಿ ಅವನ ಇಂಟರ್‌ವ್ಯೂ ಮುಳುಗಿ ಹೋಗುತ್ತಿತ್ತು. ಬದುಕು ಕೂಡ ಮುಳುಗಿ ಹೋದಂತೆ ಅನ್ನಿಸುತ್ತಿತ್ತು.
ಇದನ್ನೆಲ್ಲ ನೆನೆಯುತ್ತಾ ಅವನು ಹತಾಶೆಯನ್ನು ಆವಾಹಿಸಿಕೊಂಡು ಕಣ್ಮುಚ್ಚಿ ಕೂತಿ¨ªಾಗ ಡ್ರೈವರ್ ಒಮ್ಮೆಗೆ “ಹೋ…’ ಎಂದು ಕಿರುಚಿದ್ದು ಕೇಳಿಸಿ ಕಣ್ಣು ತೆರೆದು ನೋಡಿದರೆ, ಇದೆಲ್ಲವೂ ಕೊನೆಯಾಗುವ ಕ್ಷಣ ಹತ್ತಿರ ಬಂತೇನೋ ಎನ್ನುವಂತೆ ರಸ್ತೆಯ ಮಧ್ಯೆ ಯೂ-ಟರ್ನ್ ತೆಗೆಯಲು ಹೊರಟ ಟ್ರಕ್ ಒಂದರ ಮುಸುಡಿಗೆ ಬಡಿದು ನಾಶವಾಗುವಂತೆ ಇವರ ಕಾರು ನುಗ್ಗುತ್ತಿತ್ತು. ಡ್ರೈವರ್ ಬ್ರೇಕ್ ಒದ್ದಿದ್ದನಾದರೂ ಸಾವು ಇವರ ಜೊತೆ ಮೂರನೆಯವನಾಗಿ ಕಾರಿನೊಳಗೆ ಕೂತಂತೆ ಭಾಸವಾಗಿ ಡ್ರೈವರ್ ಜೊತೆಗೆ ಅವನು ಕೂಡ ಕಿರುಚತೊಡಗಿದ. ಯಾಕೋ ಇದು ಹೀಗೆ ಕೊನೆಯಾಗಬಾರದೆಂದು ಅನ್ನಿಸತೊಡಗಿತ್ತು. ಇವರಿಬ್ಬರ ಕೋರಸ್ಸಿನ ಪ್ರಾರ್ಥನೆ ಫಲಿಸುವಂತೆ ಕಾರು ಕೂಡ ಟ್ರಕ್ಕಿಗೆ ನೇರವಾಗಿ ಗುದ್ದದೆ ಅಂಚಿಗೆ ಸವರಿ ಸಾಗಿತ್ತು. ಅಪಾಯ ದೂರವಾದ ಕೂಡಲೇ ಅವನು ಮತ್ತು ಡ್ರೈವರ್ ಪರಸ್ಪರ ಮುಖ ನೋಡಿಕೊಂಡು ನಗತೊಡಗಿದರು, ಕಾರಿನ ಡ್ಯಾಶ್ ಬೋರ್ಡಿನಲ್ಲಿದ್ದ ಲಾಫಿಂಗ್ ಬುದ್ಧನಿಗೆ ಕೂಡ ಗಾಬರಿಯಾಗುವ ಹಾಗೆ!
ಅವನು ಇಂಟರ್‌ವ್ಯೂಗೆ ಕುಳಿತಾಗ ಉಸಿರಿನ ಬೆಲೆ ಅರ್ಥವಾದವನಂತೆ ಶಾಂತವಾಗಿ ಉಸಿರೆಳೆದುಕೊಂಡು, ಸಾವು-ಬದುಕಿನ ರಹಸ್ಯಮಯ ತಮಾಷೆ ತನಗೊಬ್ಬನಿಗೇ ಗೊತ್ತಿದೆಯೇನೋ ಎನ್ನುವಂತೆ ಮುಗುಳ್ನಗುತ್ತಾ ಪ್ರಶ್ನೆಗಳನ್ನು ಎದುರಿಸಲು ಸಜ್ಜಾದವನಂತೆ ತಲೆಯೆತ್ತಿದ.
-ಕಿರಣ್ ಕುಮಾರ್ ಕೆ. ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.