Deepavali: ಮತ್ತೆ ಮೂಡಿತು ಬೆಳಕು
Team Udayavani, Nov 13, 2023, 3:45 PM IST
ರೈಲು ಉದ್ದನೆಯ ಸಿಳ್ಳೆ ಹಾಕುವುದರೊಂದಿಗೆ ಸೇತುವೆಯೊಂದನ್ನು ದಾಟುತಿತ್ತು. ಆ ಕರ್ಣಬೇಧಕ ಸದ್ದಿಗೆ ರಘುನಾಥ ರೈಗಳು ಎಚ್ಚರಗೊಂಡರು. ಬಹುಶಃ ಸಮಯ ಮಧ್ಯರಾತ್ರಿ ಆಗಿರಬೇಕು. ಕಣ್ಣುಜ್ಜಿಕೊಳ್ಳುತ್ತಾ ಗಾಜಿನ ಕಿಟಕಿಯಿಂದ ಹೊರಗೆನೋಡಿದರು. ನಟ್ಟಿರುಳಿನಲ್ಲಿ ದೃಶ್ಯಗಳು ಸ್ಪಷ್ಟವಾಗದಿದ್ದರೂ ದೀಪಾಲಂಕಾರಗಳು ಅವರ ಕಣ್ಣಿಗೆ ಬಿದ್ದವು. ದೂರದಲ್ಲೊಂದು ಪಟಾಕಿ ಮೇಲಕ್ಕೆ ಚಿಮ್ಮಿ ಹೂವಿನಂತೆ ಅರಳಿದಾಗ ರೈಗಳು ಆ ದಿನವನ್ನು ನೆನಪಿಸಿಕೊಂಡರು.
ಆರು ವರ್ಷಗಳ ಹಿಂದೆ ರೈಗಳು ರೈಲೊಂದು ತನ್ನನ್ನು ಸೀಳಿ ಹೋಗಲೆಂದು ಪ್ರಾರ್ಥಿಸುತ್ತಾ ಹಳಿಯಲ್ಲಿ ಮಲಗಿದ್ದರು. ನಿರಂತರ ತನ್ನನ್ನು ಹಂಗಿಸುವ ಹೆಂಡತಿ ಈ ದಿನ ಹೇಳಿದ ಮಾತು ಅವರ ಹೃದಯವನ್ನು ಚೂರಿಯಂತೆ ಇರಿದಿತ್ತು. ಹೆಂಡತಿಯ ಪಾಲಿಗೆ ಬಂದ ಜಮೀನಿನಲ್ಲಿ ಕೃಷಿ ಮಾಡುವ ಗೋಜಿಗೆ ರೈಗಳು ಹೋಗಿರಲಿಲ್ಲ. ಅತಿ ಸೊಕ್ಕಿನ ಸವಿತಾ, ರೈಗಳು ಏನು ಮಾಡಿದರೂ ಅದರಲ್ಲಿ ತಪ್ಪು ಹುಡುಕುತ್ತಿದ್ದಳು. ಮನೆಯಲ್ಲಿ ಸವಿತಾಳ ಮಾತೇ ಅಂತಿಮ.
ಅವಳ ಪಾಲಿಗೆ ರಘುನಾಥರು ದಂಡ ಪಿಂಡ ಎನಿಸಿಕೊಂಡಿದ್ದರು. ಅಲ್ಪಸ್ವಲ್ಪ ಸ್ವಾಭಿಮಾನ ಇನ್ನೂ ಉಳಿಸಿಕೊಂಡಿದ್ದ ಅವರು ಬೇರೆಯವರ ಜಮೀನಿನಲ್ಲಿ ಕೂಲಿಕಾರ್ಮಿಕರಾಗಿ ದುಡಿದು ಮನೆಯನ್ನು ನಡೆಸುತ್ತಿದ್ದರು. ಇದ್ದ ಇಬ್ಬರು ಮಕ್ಕಳನ್ನು ಸಮೀಪದ ಸರಕಾರಿ ಶಾಲೆಗೆ ಸೇರಿಸಿದರೂ, ಅವರ ಹೊಟ್ಟಬಟ್ಟೆಗೇನೂ ಕೊರತೆ ಮಾಡಿರಲಿಲ್ಲ. ತಮ್ಮ ಸಮುದಾಯದವರು ದುಬಾರಿ ಸೀರೆ, ಒಡವೆ, ಮೇಕಪ್‌ಗಳು ಸಹಿತ ಸಮಾರಂಭಗಳಲ್ಲಿ ಮೆರೆಯುವುದನ್ನು ಕಾಣುವಾಗ ಗಂಡನ ಮೇಲಿನಸವಿತಾಳ ಜುಗುಪ್ಸೆ ಹೆಚ್ಚುತಿತ್ತು. ಹೀಗಿರಲು ರಘುನಾಥ ರೈಗಳು ಜ್ವರ ಪೀಡಿತರಾದರು. ವಾರವಾದರೂ ಕಡಿಮೆಯಾಗದ ಜ್ವರ, ತಲೆನೋವು, ಸುಸ್ತುಗಳಿಂದ ನಲುಗಿದ ಅವರ ರಕ್ತಪರೀಕ್ಷೆ ಮಾಡಿದ ಡಾಕ್ಟರ್, ಅವರಿಗೆ ತೀವ್ರ ಸ್ವರೂಪದ ಡೆಂಗ್ಯೂ ಬಾಧಿಸಿದೆ ಎಂದರು. ಅನಿವಾರ್ಯವಾಗಿ ರೈಗಳು ತಮ್ಮ ಸ್ಥಿತಿ ಸುಧಾರಿಸುವವರೆಗೆ ಆಸ್ಪತ್ರೆಯಲ್ಲಿರಬೇಕಾಯಿತು. ಕೂಡಿಟ್ಟಿದ್ದ ಸ್ವಲ್ಪ ಹಣವನ್ನೂ ಕಾಯಿಲೆ ನುಂಗಿ ಹಾಕಿತ್ತು.
ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಹಲವು ದಿನಗಳ ವಿಶ್ರಾಂತಿ ಅಗತ್ಯವಿದ್ದ ಅವರಿಗೆ ಕೆಲಸಕ್ಕೆ ಹೋಗಲಾಗಲಿಲ್ಲ. ಅಷ್ಟರಲ್ಲಿ ದೀಪಾವಳಿ ಬಂದಿತು. ಪ್ರತಿವರ್ಷ ರಘುನಾಥರು ಹೆಂಡತಿ ಮಕ್ಕಳಿಗೆ ಹೊಸಬಟ್ಟೆ, ಸಿಹಿ ತಿನಿಸು, ಪಟಾಕಿ ತರುತ್ತಿದ್ದರು. ಈ ಬಾರಿ ಅವರ ಕೈಯಲ್ಲಿ ನಯಾಪೈಸೆ ಇರಲಿಲ್ಲ. ಸಾಲ ಕೇಳಲು ಸ್ವಾಭಿಮಾನ ಬಿಡಲಿಲ್ಲ. ಆ ಬಾರಿ ಹೊಸಬಟ್ಟೆ, ಪಟಾಕಿಗಳಿಲ್ಲದೇ ಅವರ ಮನೆಯಲ್ಲಿ ಬೆಳಕಿನ ಬದಲಿಗೆ ಕತ್ತಲೆ ಆವರಿಸಿತ್ತು. ಬಾಹ್ಯ ಕತ್ತಲಿಗೆ ದೀಪ ಹಚ್ಚಬಹುದು. ಆದರೆ ಸವಿತಾಳ ಒಳಗಿನ ಕತ್ತಲನ್ನು ಓಡಿಸುವುದು ಹೇಗೆ? ಕತ್ತಲಲ್ಲಿ ನಿಶಾಚರಿಗಳು ಲಗ್ಗೆಯಿಡುವಂತೆ ಸವಿತಾಳ ನಾಲಗೆಯಿಂದ ಕ್ರೂರವಾದ ಮಾತುಗಳು ಹೊರಬಂದವು.
ನಿಮ್ಮನ್ನು ಮದುವೆಯಾದಾಗಲೇ ನನ್ನ ಬಾಳು ಕತ್ತಲಾಯಿತು. ಒಂದು ದೀಪಾವಳಿಯನ್ನೂ ಆಚರಿಸುವ ಯೋಗ್ಯತೆಯಿಲ್ಲದ ದಂಡ ಪಿಂಡ ನಿಮ್ಮನ್ನು ಕಟ್ಟಿಕೊಂಡದ್ದು ನನ್ನಕರ್ಮ.. ಭೂಮಿಗೆ ಭಾರವಾಗಿ ಹೀಗೆ ಬದುಕುವುದಕ್ಕಿಂತ ಎಲ್ಲಾದರೂ ಹೋಗಿ ಸಾಯಿರಿ…
ಮೊದಲೇ ನೊಂದಿದ್ದ ರಘುನಾಥ ರೈಗಳಿಗೆ ಸವಿತಾಳ ಮಾತುಗಳು ಗಾಯಕ್ಕೆ ಉಪ್ಪು ಸವರಿದಂತಾಯಿತು. ಹೌದು, ಅವಳು ಹೇಳಿದ್ದೂ ನಿಜ. ತಾನಿರುವುದು ಅವಳಪಾಲಿನ ಆಸ್ತಿಯಲ್ಲಿ.. ನಾನು ನಿಜಕ್ಕೂ ದಂಡ ಪಿಂಡ… ಮುಂದೆ ಊರವರೂ ನನ್ನನ್ನು ಹಂಗಿಸತೊಡಗುತ್ತಾರೆ. ಇಂತಹ ಕೆಟ್ಟ ಬದುಕಿಗಿಂತ ಸಾವೇ ಮೇಲು..
ಮನೆಯಲ್ಲಿ ನಡೆದುದನ್ನು ಯೋಚಿಸುತ್ತಾ ರೈಲಿಗಾಗಿ ಕಾಯುತ್ತಾ ಮಲಗಿದ ರೈಗಳಿಗೆ ಧಡ್ ಎಂಬ ಶಬ್ದ, ಜೊತೆಗೆ ಯಾರೋ ಕಿರುಚಿದ್ದು ಕೇಳಿಸಿತು. ಇವರು ಮಲಗಿದ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಹಾಗೂ ಎತ್ತರದಲ್ಲಿ ರೈಲು ಹಳಿಗೆ ಸಮಾಂತರವಾಗಿ ರಸ್ತೆಯೊಂದು ಹಾದುಹೋಗುತಿತ್ತು. ದಡದಡನೆ ಉರುಳುತ್ತಾ ವ್ಯಕ್ತಿಯೊಬ್ಬ ಸಮೀಪದ ಪೊದರಿಗೆ ಬಂದು ಬಿದ್ದುದನ್ನು ಕಂಡು ಏಳುವುದೋ ಬೇಡವೋ ಎಂದು ರೈಗಳು ಯೋಚಿಸಿದರು. ಅಷ್ಟರಲ್ಲಿ ಬಿದ್ದ ವ್ಯಕ್ತಿ ಹೇಗೋ ಎದ್ದು ಈ ಕಡೆ ಬಂದ. ಅವನಿಗೆ ಒಂದಷ್ಟು ತರಚು ಗಾಯಗಳಷ್ಟೇ ಆಗಿತ್ತು. ಅಷ್ಟರಲ್ಲಿ ದೂರದಲ್ಲಿ ರೈಲಿನ ಸದ್ದು ಕೇಳಿಸಿತು.
ಬೈಕಿನಿಂದ ಬಿದ್ದ ವ್ಯಕ್ತಿಗೆ ಹಳಿಯಲ್ಲಿ ಮಲಗಿರುವ ರೈಗಳು ಕಾಣಿಸಿದರು. ಕೈಕಾಲುಗಳಲ್ಲಿ ಅಲ್ಲಲ್ಲಿ ತರಚು ಗಾಯಗಳು ಉರಿಯುತ್ತಿದ್ದರೂ ರಕ್ತ ಜಿನುಗುತ್ತಿದ್ದರೂ ಲೆಕ್ಕಿಸದೇ ಕುಂಟುತ್ತಾ ಓಡಿ ಬಂದ ಆತ ರಘುನಾಥರನ್ನು ಎಳೆದು ಹಳಿಯಿಂದ ಹೊರಗೆ ಹಾಕಿದ. ಆ ಪ್ರಯತ್ನದಲ್ಲಿ ಆತನೂ ಕೆಳಗೆ ಬಿದ್ದ. ಕೂದಲೆಳೆ ಅಂತರದಲ್ಲಿ ರೈಲು ಇವರಿಬ್ಬರನ್ನು ದಾಟಿ ಹೋಯಿತು.
ರಘುನಾಥರು ಆರ್ತನಾದಮಾಡುವವರಂತೆ ದೊಡ್ಡ ಸ್ವರದಲ್ಲಿ ಅತ್ತರು. ಆ ವ್ಯಕ್ತಿ ತನಗೆ ತಿಳಿದ ಹರಕು ಮುರಕು ಕನ್ನಡದಲ್ಲಿ ಇವರನ್ನು ಸಮಾಧಾನಿಸಲು ಪ್ರಯತ್ನಪಟ್ಟ.ರಘುನಾಥರ ಕಥೆ ಕೇಳಿದಾಗ, “ನೀವು ಸಂಕಟ ತಾಳದೇ ಮನೆಬಿಟ್ಟು ಹೊರಟಿದ್ದೀರಿ. ಅದಕ್ಕೆ ಸಾವೊಂದೇ ಪರಿಹಾರವೇ? ಚೆನ್ನಾಗಿ ಬದುಕಿ ತೋರಿಸಿಯೂ ಇದಕ್ಕೆ ಉತ್ತರ ನೀಡಬಹುದಲ್ಲವೇ?… ನಿಮಗೆ ಈ ಊರಲ್ಲಿರಲು ಇಷ್ಟವಿಲ್ಲದಿದ್ದರೆ ನನ್ನ ಜೊತೆ ಬನ್ನಿ..’ ಎಂದು ಕರೆದ. ಬಹಳ ಸಮಯದ ಮಾತುಕತೆ ಹಾಗೂ ಆಲೋಚನೆಯ ನಂತರ ರೈಗಳ ದುಃಖ ಕುಗ್ಗಿತು. ಆ ನಲುವತ್ತರ ಆಸುಪಾಸಿನ ವ್ಯಕ್ತಿಯ ಜೊತೆ ಹೊರಡಲು ತೀರ್ಮಾನಿಸಿದರು.
ಇಬ್ಬರೂ ಬಿದ್ದಿದ್ದ ಬೈಕಿನ ಬಳಿ ಬಂದರು. ಅದನ್ನು ಎತ್ತಿ ನಿಲ್ಲಿಸಿದರು. ಬೈಕಿಗೂ ಹೆಚ್ಚಿನ ಹಾನಿಯೇನೂ ಆಗಿರಲಿಲ್ಲ. ಬೈಕಿನ ಹಿಂದೆ ಕುಳಿತು ಆತನಿದ್ದ ಹೊಟೇಲ್‌ಗೆ ತಲುಪಿದ ರಘುನಾಥರು ಮರುದಿನ ಬೆಳ್ಳಂಬೆಳಗ್ಗೆ ಆತನ ಕಾರಲ್ಲಿ ಆತನ ಊರಾದ ದೆಹಲಿಗೆ ಹೊರಟರು. ಭಾರತದ ಪ್ರಮುಖ ನಗರಗಳಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದ ದೀಪಕ್ ಮೆಹ್ತಾ, ರಘುನಾಥ ರೈಗಳಿಗೆ ತನ್ನ ಕಂಪೆನಿಯಲ್ಲಿ ಕೆಲಸ ನೀಡಿದರು. ಹಲವು ಸಂದರ್ಭಗಳಲ್ಲಿ ಮೆಹ್ತಾರ ಡ್ರೈವರ್ ಹಾಗೂ ಸಹಾಯಕನಾಗಿಯೂ ರಘುನಾಥರು ಹೋಗುತ್ತಿದ್ದರು. ಅವರಿಗೆ ಇರಲು ಉತ್ತಮ ವ್ಯವಸ್ಥೆ ಕಲ್ಪಿಸುವ ಜೊತೆಗೆ ಉತ್ತಮ ಸಂಬಳವನ್ನೂ ಮೆಹ್ತಾ ನೀಡುತ್ತಿದ್ದರು.
ಇದುವರೆಗೂ ಎಲ್ಲವನ್ನೂ ಮರೆತಂತೆ ಬದುಕುತ್ತಿದ್ದ ರೈಗಳಿಗೆ ಈ ಬಾರಿ ಮಕ್ಕಳ ನೆನಪು ಬಹುವಾಗಿ ಕಾಡಿತು. ಮೆಹ್ತಾರಲ್ಲಿ ಈ ಬಗ್ಗೆ ಹೇಳಿದಾಗ, ಒಮ್ಮೆ ಊರಿಗೆ ಹೋಗಿ ಬರುವಂತೆ ಸೂಚಿಸಿದ ಆತ ಇವರ ಹೆಂಡತಿ ಮಕ್ಕಳಿಗೆಂದು ಉಡುಪುಗಳು, ಉಡುಗೊರೆಗಳು, ಪಟಾಕಿ ಹೀಗೆ ಎಲ್ಲವನ್ನೂ ಕೊಟ್ಟು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಅವರನ್ನು ಕಳುಹಿಸಿಕೊಟ್ಟಿದ್ದರು. ರೈಲ್ವೇ ಸ್ಟೇಷನ್ ನಿಂದ ಕಾರೊಂದನ್ನು ಗೊತ್ತುಮಾಡಿ ರೈಗಳು ಊರಕಡೆ ಪಯಣ ಬೆಳೆಸಿದರು.
ಎಲ್ಲೂ ದೀಪಗಳ ಸಾಲು, ಪಟಾಕಿಗಳ ಅಬ್ಬರ. ಒಮ್ಮೆಲೇ ತನ್ನ ಹೆಂಡತಿ ಮಕ್ಕಳು ತನ್ನನ್ನು ಮರೆತು ದೀಪಾವಳಿಯ ಸಂಭ್ರಮದಲ್ಲಿರಬಹುದೆಂಬ ಯೋಚನೆ ರೈಗಳ ಮನಸ್ಸನ್ನು ಕಲಕಿತು. ಹಿಂದು ಮುಂದು ಯೋಚಿಸದೇ ಹೊರಟು ಬಂದು ತಾನು ತಪ್ಪು ಮಾಡಿದೆನೇ? ನಿರಂತರ ತನ್ನನ್ನುಹಂಗಿಸುತ್ತಿದ್ದ ಹೆಂಡತಿ ತಾನು ಸತ್ತಿರಬಹುದೆಂದು ಇನ್ನೊಂದು ಮದುವೆಯಾಗಿಲ್ಲ ಎಂಬುದರಲ್ಲಿ ಏನು ಗ್ಯಾರಂಟಿ? ಅಥವಾ ಹಾಗಿಲ್ಲದಿದ್ದರೂ
ಅವರೆಲ್ಲಾ ತನ್ನನ್ನು ಮರೆತು ಸಂಭ್ರಮಿಸುತ್ತಿರಬಹುದೇ? ತನ್ನ ಬರುವಿಕೆಯನ್ನು ಅವರು ಸ್ವಾಗತಿಸಿಯಾರೇ?…. ಛೆ! ತಾನು ಬರಬಾರದಿತ್ತು. ಈಗ ಕಾರನ್ನು ತಿರುಗಿಸಲು ಹೇಳಿ ಮರಳುವುದು ಲೇಸು ಎಂದು ರೈಗಳಿಗೆ ಅನಿಸಿತು. ಆದದ್ದಾಗಲಿ.., ಹೇಗೂ ಬಂದಾಯಿತು. ಮನೆಯವರೆಗೊಮ್ಮೆ ಹೋಗಿಯೇಬರೋಣ.. ಎಂದುಕೊಂಡು ಕಾರನ್ನು ನಿಲ್ಲಿಸುವಂತೆ ಹೇಳಿ ಇಳಿದು ಮನೆಕಡೆ ನಡೆಯುತ್ತಾ ಹೊರಟರು.
ಮನೆಯೊಳಗೆ ಲೈಟೊಂದು ಉರಿಯುತ್ತಿರುವಂತೆ ಕಿಟಕಿಯಿಂದ ಕಂಡಿತು. ಆದರೆ ಮನೆಯೆದುರು ದೀಪಗಳಿರಲಿಲ್ಲ. ಬಹುಶಃ ಎಲ್ಲರೂ ಮಲಗಿರಬಹುದೆಂದುಕೊಂಡರು. ಮನೆಯ ಅಂಗಳ ತಲುಪಿ ಜಗಲಿಯ ಬಳಿ ಬರಬೇಕಾದರೆ ಒಳಗಿನಿಂದ ಮಾತು ಕೇಳಿಸಿತು.
“ಮಕ್ಕಳೇ, ನಿಮ್ಮ ಅಪ್ಪ ಎಲ್ಲಿರುವರೋ? ಅವರು ಬದುಕಿದ್ದಾರೋ ಇಲ್ಲವೋ?.. ನನ್ನ ಹಾಳುನಾಲಗೆಯಿಂದ ಅವರನ್ನು ದೂರಮಾಡಿದೆ..’ ಸವಿತಾ ಮಾತನಾಡುತ್ತಾ ಅಳುತ್ತಿದ್ದಳು. “ಅಳಬೇಡಮ್ಮಾ, ಅಪ್ಪ ಒಂದು ದಿನ ಬಂದೇ ಬರುತ್ತಾರೆ…’ ಮಗ ಅಮ್ಮನನ್ನು ಸಮಾಧಾನಿಸಲು ಪ್ರಯತ್ನಿಸುತ್ತಾ ತಾನೂ ಅಳುತ್ತಿದ್ದ. ಮಗಳೂ ಅಳುತ್ತಿದ್ದಳು. ತಡೆಯಲಾರದೇ ರಘುನಾಥ ರೈಗಳು, “ಸವಿತಾ…’ ಎಂದು ಕರೆದರು. “ಅಮ್ಮಾ ಹೊರಗಡೆಯ ಲೈಟ್ ಹಾಕು. ಅದು ಅಪ್ಪನದ್ದೇ ಸ್ವರ.. ಅಪ್ಪ ಬಂದಿದ್ದಾರೆ…’ ಮಕ್ಕಳಿಬ್ಬರೂ ಲೈಟು ಹಾಕಿ ಓಡಿ ಹೊರಬಂದರು
. ಉಡುಪು ಹಾಗೂ ನಿಲುವಿನಲ್ಲಿ ಬದಲಾವಣೆಯಿದ್ದರೂ, ಅದು ತಮ್ಮ ಅಪ್ಪನೆಂಬುದರಲ್ಲಿ ಅವರಿಗೆ ಸಂದೇಹವಿರಲಿಲ್ಲ.. ಸವಿತಾ ಓಡಿ ಹೊರಬಂದವಳೇ ಒಂದು ಆರ್ತನಾದದೊಂದಿಗೆ ರಘುನಾಥರ ಕಾಲಿಗೆ ಬಿದ್ದು ಮನಸೋಇಚ್ಛೆ ಅತ್ತಳು. ಯಾರೋ ಹಚ್ಚಿ ಬಿಟ್ಟ ಪಟಾಕಿಯೊಂದು ಮೇಲಕ್ಕೇರಿ ಸಿಡಿದು ಹೂವಿನಂತೆ ಅರಳಿತು. ಆ ಬೆಳಕು ನೀರು ತುಂಬಿದ ಇವರೆಲ್ಲರ ಕಣ್ಣುಗಳಲ್ಲಿ ಪ್ರತಿಫಲಿಸುತಿತ್ತು.
-ಜೆಸ್ಸಿ ಪಿ. ವಿ,ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.