Virat Kohli: ಕೊಹ್ಲಿ ಎಂಬ ಕ್ರಿಕೆಟ್ ದಂತಕಥೆ
Team Udayavani, Nov 13, 2023, 8:02 AM IST
2014 ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದ ನಂತರ ನನ್ನ ಬ್ಯಾಟಿಂಗ್‌ನ ಬಗ್ಗೆ ಅನೇಕರು ಟೀಕೆ ಮಾಡಲಾರಂಭಿಸಿದರು. ಉಳಿದೆಲ್ಲ ಏಷ್ಯನ್ ಆಟಗಾರರಿಗಿಂತ ಈತ ತೀರ ಭಿನ್ನವೇನಲ್ಲ. ಉಪಖಂಡದ ಒಳಗೆ ಮಾತ್ರ ಇವರೆಲ್ಲ ಹುಲಿಗಳು, ಹೊರಗೆ ಬಿದ್ದರೆ ಇಲಿಗಳಷ್ಟೇ ಎಂಬ ಧಾಟಿಯ ಮಾತುಗಳು ನನಗೆ ಕಿರಿಕಿರಿಯುಂಟು ಮಾಡಿದ್ದವು. ಅದಾಗಲೇ ಆಸ್ಟ್ರೇಲಿಯಾದ ಪ್ರವಾಸ ಕಣ್ಣೆದುರಿಗಿತ್ತು. ಸರಿಯಾದ ಪೂರ್ವತಯಾರಿ ಇಲ್ಲದೇ ಆಸ್ಟ್ರೇಲಿಯಾಕ್ಕೆ ಹೋದರೆ ನನ್ನ ಕತೆ ಮುಗಿದಂತೆಯೇ ಲೆಕ್ಕ ಎಂಬುದು ನನಗೆ ಅರ್ಥವಾಗಿ ಹೋಗಿತ್ತು. ಆಸ್ಟ್ರೇಲಿಯಾದ ಅಂಗಳಗಳು ಇಂಗ್ಲೆಂಡ್ ಪಿಚ್‌ಳಿಗಿಂತ ಹೆಚ್ಚು ಪುಟಿಯುವ ಪಿಚ್‌ಗಳು.
ಹಾಗಾಗಿ ಆಸಿಸ್ ತಂಡವನ್ನು ಎದುರಿಸಲು ಬೇಕಾದ ಎಲ್ಲಾ ತಯಾರಿಗೆ ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ. ಸಚಿನ್‌ರಿಂದ ಕೆಲವು ಸಲಹೆ ಸೂಚನೆಗಳನ್ನು ಪಡೆದುಕೊಂಡು, ದಿನ ಬೆಳಿಗ್ಗೆಯೆದ್ದು ಸತತವಾಗಿ ಬ್ಯಾಟು ಬೀಸುತ್ತಿದ್ದೆ. ಕಠಿಣ ಪರಿಶ್ರಮವಿಲ್ಲದೇ ರಣರಂಗ ಗೆಲ್ಲುವುದು ಕಷ್ಟವಿದೆ ಎಂಬುದು ತಿಳಿದಿತ್ತು. ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಪ್ರಾಕ್ಟಿಸು ಮಾಡಿ ಎಷ್ಟೋ ಬಾರಿ ಮಾಂಸ ಖಂಡಗಳ ಸೆಳೆತಕ್ಕೂ ಒಳಗಾಗಿದ್ದಿದೆ. ಅದರ ಫಲವಾಗಿ ಮುಂದೆ ಆಸಿಸ್ ಪ್ರವಾಸದಲ್ಲಿ ನಾನು ಸಾಕಷ್ಟು ರನ್ನುಗಳನ್ನು ಗಳಿಸಿದ್ದು, ನನ್ನಲ್ಲಿ ಹೊಸ ಆತ್ಮವಿಶ್ವಾಸ ಚಿಗುರಿಸಿತ್ತು. ದೇಶದ ಹೊರಗೆ ವೇಗದ ಬೌಲರ್‌ಗಳನ್ನು ಎದುರಿಸುವ ಬಗೆ ನನಗರ್ಥವಾಗಿತ್ತು.
ನಿಜ ಹೇಳಬೇಕೆಂದರೆ, ನಾನು ಸ್ವಾಭಾವಿಕ ಪ್ರತಿಭಾನ್ವಿತ ಆಟಗಾರನಲ್ಲ. ಹಾಗಾಗಿ ಪ್ರತಿನಿತ್ಯ ನಾನು ನೆಟ್ ಪ್ರಾಕ್ಟಿಸ್ ಮಾಡುತ್ತೇನೆ. ಮ್ಯಾಚ್ ಇಲ್ಲದಿದ್ದರೆ ಬೆಳಿಗ್ಗೆ ಮತ್ತು ಸಂಜೆ ನಾಲ್ಕು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು, ಪಂದ್ಯವಿರುವ ದಿನ ಒಂದೂವರೆ ಗಂಟೆಗಳ ಕಾಲದ ಕಸರತ್ತನ್ನು ಖಡ್ಡಾಯವಾಗಿಸಿಕೊಂಡಿದ್ದೇನೆ. ಆಹಾರ ಪದ್ದತಿಯೂ ಅಷ್ಟೇ, ಪ್ರೋಟಿನ್ ರಿಚ್ ಆಹಾರ ಕ್ರಮ ನನ್ನದು. ಜಂಕ್ ಫುಡ್ ತಿನ್ನದೇ ದಶಕಗ ಳಾಗಿರಬಹುದೇನೋ. ತಿನ್ನಬೇಕು ಎನ್ನಿಸುವುದಿಲ್ಲವಾ ಎಂದರೆ, ಖಂಡಿತವಾಗಿಯೂ ಅನ್ನಿಸುತ್ತದೆ. ಆದರೆ ನನ್ನ ವೃತ್ತಿ ಜೀವನದೆದುರು ಇನ್ಯಾವುದೂ ನನಗೆ ಮುಖ್ಯವಲ್ಲ. ವೃತ್ತಿಜೀವನ ಮುಗಿದ ನಂತರ ತಿನ್ನುವುದು ಇದ್ದೇ ಇದೆ. ಅಲ್ಲಿಯವರೆಗೂ ನನ್ನ ಕರಿಯರ್ ನನ್ನ ಪ್ರಾಮುಖ್ಯತೆ..’
ವಿರಾಟ್ ಕೊಹ್ಲಿ ಹಿಂದೊಮ್ಮೆ ನುಡಿದ ಮಾತುಗಳು. ಆತನ ಗೆಲುವಿನ ಹಿಂದೆ, ಆತ ಇಂದು ನಿಂತಿರುವ ಔನ್ನತ್ಯದ ಹಿಂದೆ ಇರಬಹುದಾದ ಪರಿಶ್ರಮದ ಚಿತ್ರಣ.
“ಬಹುಶಃ ಹೊಸ ತಲೆಮಾರಿನ ಆಟಗಾರರ ಪೈಕಿ ನಾ ಕಂಡ ಅತ್ಯಂತ ಪರಿಶ್ರಮಿ ಬ್ಯಾಟ್ಸಮನ್ ಎಂದರೆ ವಿರಾಟ್ ಕೊಹ್ಲಿ. ಅದೊಮ್ಮೆ ಅವನುಳಿದುಕೊಂಡಿದ್ದ ಹೊಟೇಲ್ಲೊಂದರಲ್ಲಿ ನಾನು, ವಸೀಂ ಭಾಯ್ ಉಳಿದುಕೊಂಡಿದ್ದೆವು. ಅದು ಗೊತ್ತಾದ ತಕ್ಷಣವೇ, ಆತ ನಮ್ಮ ಬಳಿ ಸಲಹೆ ಪಡೆದುಕೊಳ್ಳುವುದಕ್ಕೆ ಬಂದಿದ್ದ. ನಮಗೆ ನಿಜಕ್ಕೂ ಖುಷಿಯಾಗಿತ್ತು. ಒಂದೆರಡು ಶತಕಗಳನ್ನು ಬಾರಿಸಿದ ಮರುಕ್ಷಣವೇ ಲೆಜೆಂಡುಗಳಂತೆ ವರ್ತಿಸುವ ಹುಡುಗರಿಗಿಂತ ವಿರಾಟ್ ತೀರ ವಿಭಿನ್ನವಾಗಿ ನಿಲ್ಲುತ್ತಾನೆ. ಆಟದ ಬಗೆಗಿನ ಅವನ ಆ ಸಮರ್ಪಣಾ ಭಾವವೇ ಅವನನ್ನು ಗೆಲ್ಲಿಸುತ್ತಿರುವುದು’ ಎನ್ನುತ್ತ ಇದೇ ವಿರಾಟ್‌ನನ್ನು ಹೊಗಳಿದ್ದು ಪಾಕಿಸ್ತಾನದ ಸ್ಪಿನ್ ದಂತಕತೆ ಸಕ್ಲೇನ್ ಮುಶಾ¤ಕ್.
ಇಂದು ವಿರಾಟ್ ಏರಿ ನಿಂತ ಎತ್ತರವನ್ನು ನಾವೆಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತೇವೆ. ಆತನದ್ದು ಅದೃಷ್ಟದ ಎಂದುಬಿಡುತ್ತೇವೆ. ಆದರೆ ಜಯದ ಬೆಟ್ಟವೇರುವ ಮುನ್ನ ಬೆಟ್ಟದಷ್ಟು ಪರಿಶ್ರಮ ಆತನ ಬೆನ್ನಿಗಿದೆ ಎಂಬುದನ್ನು ಮರೆತುಬಿಡುತ್ತೇವೆ. ವಿಶ್ವಕಪ್‌ನಲ್ಲಿ ದಾಖಲೆಗಳ ಸರಮಾಲೆ ಬರೆಯುತ್ತಿರುವ ಕಿಂಗ್ ಕೋಹ್ಲಿಯ ಬಗ್ಗೆ ಹೀಗೆ ನಾಲ್ಕು ಸಾಲು ಬರೆಯಬೇಕು ಅನ್ನಿಸಿತು ನೋಡಿ ಹಬ್ಬದ ಈ ಹೊತ್ತಿಗೆ.
-ಗುರುರಾಜ ಕೊಡ್ಕಣಿ, ಯಲ್ಲಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.