540 ಕೋಟಿ ರೂ. ನಗದು, ಮದ್ಯ ವಶ
ಕರ್ನಾಟಕದಲ್ಲಿ 26.53 ಕೋಟಿ ರೂ. ನಗದು, ಸಾಮಗ್ರಿ ವಶಕ್ಕೆ
Team Udayavani, Mar 27, 2019, 6:41 AM IST
ಕೋಲ್ಕತಾದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಸಂಬಂಧಿ ಹಾಗೂ ಬಿಜೆಪಿ ಅಭ್ಯರ್ಥಿ ಚಂದ್ರಕುಮಾರ್ ಬೋಸ್ ಚುನಾವಣಾ ಪ್ರಚಾರದ ವೇಳೆ ಮಗುವೊಂದನ್ನು ಎತ್ತಿಕೊಂಡರು.
ಹೊಸದಿಲ್ಲಿ: ಚುನಾವಣಾ ಆಯೋಗವು ಚುನಾವಣೆ ನೀತಿ ಸಂಹಿತೆ ಘೋಷಣೆ ಮಾಡಿದ ಈ ಹದಿನೈದು ದಿನಗಳಲ್ಲಿ ದೇಶದ ವಿವಿಧೆಡೆ ಒಟ್ಟು 540 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗೂ ಇತರ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಭಾರೀ ಪ್ರಮಾಣದ ನಗದು ಹಾಗೂ ಮದ್ಯವನ್ನು ಚುನಾವಣಾ ಆಯೋಗದ ವಿಚಕ್ಷಣಾ ದಳಗಳು ಪತ್ತೆ ಮಾಡಿ ಜಪ್ತಿ ಮಾಡಿವೆ.
ಸಾವಿರಾರು ಚುನಾವಣಾ ವೀಕ್ಷಕರು, ವೆಚ್ಚ ಪರಿಶೀಲನೆ ನಡೆಸುವ ತಂಡ ಹಾಗೂ ಅಂಕಿ ಅಂಶ ಮತ್ತು ವಿಚಕ್ಷಣೆ ತಂಡಗಳನ್ನು ಚುನಾವಣೆ ಆಯೋಗ ದೇಶಾದ್ಯಂತ ನೇಮಕ ಮಾಡಿದೆ. ಈ ತಂಡಗಳು ಕಪ್ಪು ಹಣ ಹಾಗೂ ನೀತಿ ಸಂಹಿತೆ ಉಲ್ಲಂ ಸಿ ಆಮಿಷಗಳನ್ನು ಒಡ್ಡುವ ಸನ್ನಿವೇಶಗಳ ಮೇಲೆ ನಿಗಾ ಇಡಲಿದೆ. ತಮಿಳುನಾಡಿನಲ್ಲಿ ಅಧಿಕ ಪ್ರಮಾಣದ ಚುನಾವಣಾ ಅಕ್ರಮ ದಾಖಲಾಗಿದೆ. ಇಲ್ಲಿ ಒಟ್ಟು 107 ಕೋಟಿ ರೂ. ಮೌಲ್ಯದ ನಗದು ಹಾಗೂ ಇತರ ಸಾಮಗ್ರಿಗಳು ಸಿಕ್ಕಿವೆ. ಕರ್ನಾಟಕದಲ್ಲಿ 26.53 ಕೋಟಿ ರೂ. ಮೌಲ್ಯದ ನಗದು ಹಾಗೂ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗವೇ ಮಂಗಳವಾರ ಮಾಹಿತಿ ನೀಡಿದೆ.
ಕಾಂಗ್ರೆಸ್‌ನಿಂದ ವೀಡಿಯೋ ಬಿಡುಗಡೆ; ನಕಲಿ ಎಂದ ಬಿಜೆಪಿ
ನೋಟು ಅಮಾನ್ಯ ಘೋಷಣೆಯಾದ ಬಳಿಕ ಬಿಜೆಪಿ ನಾಯಕ ಎನ್ನಲಾದ ವ್ಯಕ್ತಿಯೊಬ್ಬರು ಶೇ. 40ರಷ್ಟು ಕಮಿಷನ್‌ಗೆ ಹಳೇ ನೋಟುಗಳನ್ನು ಬದಲಾಯಿಸಿಕೊಡುತ್ತಿದ್ದ ವೀಡಿಯೋವೊಂದನ್ನು ಕಾಂಗ್ರೆಸ್ ಹಾಗೂ ವಿಪಕ್ಷಗಳು ಮಂಗಳವಾರ ಬಿಡುಗಡೆ ಮಾಡಿವೆ. ವೀಡಿಯೋದಲ್ಲಿರುವ ಸಂಭಾಷಣೆ ಯಂತೆ, 5 ಕೋಟಿ ರೂ. ಮೊತ್ತದ ಹಳೇ ನೋಟುಗಳನ್ನು “ಬಿಜೆಪಿ ನಾಯಕ’ ಬದಲಿಸಿಕೊಡುವ ವಾಗ್ಧಾನ ನೀಡುತ್ತಾನೆ. ಆದರೆ, 30 ನಿಮಿಷಗಳ ಈ ವಿಡಿಯೋದ ವಿಶ್ವಾಸಾರ್ಹತೆಯನ್ನು ಬಹಿರಂಗ ಮಾಡಿಲ್ಲ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹಾಗೂ ವಿಪಕ್ಷಗಳ ಇತರೆ ನಾಯಕರು, “ಇದೊಂದು ಸ್ಪಷ್ಟ ದೇಶದ್ರೋಹದ ಪ್ರಕರಣ. ಜನರ ಹಣವನ್ನು ದೋಚಿ ಪಕ್ಷಕ್ಕೆ ನೀಡಲಾಗಿದೆ. ಕಳ್ಳ ಯಾರು, ಚೌಕಿದಾರ ಯಾರು ಎಂದು ನೀವೇ ಹೇಳಿ’ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಚಿವ ಜೇಟಿÉ, ಇದೊಂದು ನಕಲಿ ವಿಡಿಯೋ. ಬಿಎಸ್‌ವೈ ಡೈರಿ ಬಳಿಕ ಮತ್ತೂಂದು ನಕಲಿಯನ್ನಿಟ್ಟುಕೊಂಡು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೇಠಿಯಲ್ಲಿ ರಾಹುಲ್‌ಗೆ ಸೆಡ್ಡು
ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ಪ್ರಭಾವ ಹೆಚ್ಚುತ್ತಿರುವ ಆತಂಕದ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಹಾಜಿ ಸುಲ್ತಾನ್ ಅವರ ಪುತ್ರ ಹಾರೂನ್ ರಶೀದ್ ಎಂಬವರು ಈಗ ಅಮೇಠಿಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಕಾಂಗ್ರೆಸ್‌ಗೆ ತಲೆನೋವು ಶುರುವಾಗಿದೆ. ಹಾಜಿ ಸುಲ್ತಾನ್ ಅವರು ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ನಾಮನಿರ್ದೇಶಕರಾಗಿದ್ದವರು. ಈಗ ಅವರ ಪುತ್ರ ಹಾರೂನ್ ಕಾಂಗ್ರೆಸ್ ವಿರುದ್ಧವೇ ಸಮರ ಸಾರಿದ್ದು, ಅಮೇಠಿಯನ್ನು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷಿಸಿದ್ದನ್ನು ಖಂಡಿಸಿ ರಾಹುಲ್ ವಿರುದ್ಧ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ. ಮೌಲಾನಾ ಆಜಾದ್, ಪಂಡಿತ್ ನೆಹರೂ, ಇಂದಿರಾ, ರಾಜೀವ್‌ರೊಂದಿಗೆ ನನ್ನ ಅಪ್ಪ ಕಾರ್ಯನಿರ್ವಹಿಸಿದ್ದರು. ನಮಗೆ ಅಧಿಕಾರದ ಯಾವುದೇ ಆಸೆಯಿಲ್ಲ. ಆದರೆ, ಅಮೇಠಿಯನ್ನು ಕಡೆಗಣಿಸಿದ್ದರಿಂದ ನೊಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ ಹಾರೂನ್.
ಸ್ಪರ್ಧಿಸದಂತೆ ಪಕ್ಷ ಸೂಚಿಸಿತು: ಜೋಷಿ
ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಕ್ಷದಿಂದಲೇ ನಮಗೆ ಆದೇಶ ಬಂದಿತ್ತು ಎಂಬ ವಿಚಾರವನ್ನು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಬಹಿರಂಗಪಡಿ ಸಿದ್ದಾರೆ. ತಾವು ಪ್ರತಿನಿ ಧಿಸುತ್ತಿರುವ ಕಾನ್ಪುರ ಕ್ಷೇತ್ರದ ಮತದಾರರಿಗೆ ಪತ್ರ ಬರೆದಿರುವ ಅವರು, “ಈ ಬಾರಿ ನೀವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದು ಪಕ್ಷದ ನಾಯಕತ್ವದ ನಿರ್ಧಾರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಅವರು ನನಗೆ ತಿಳಿಸಿದರು’ ಎಂದು ಹೇಳಿದ್ದಾರೆ.
ಇಲ್ಲಿ ನಡೆಯುತ್ತೆ ಕಾಫಿ ಪೆ ಚರ್ಚಾ!
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿರುವ ಈ ಕಾಫಿ ಹೌಸ್‌ಗೂ, ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ. ಇಲ್ಲಿನ ಕಾಫಿಯ ಘಮದಲ್ಲಿ ದೇಶದ ರಾಜಕಾರಣದ ಚರ್ಚೆಗಳು ಮುಗಿಲೆತ್ತರಕ್ಕೆ ಸಾಗುತ್ತವೆ. ಹಿಂದೊಮ್ಮೆ ಯೌವನದ ಉತ್ಸಾಹದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಇಲ್ಲಿಗೆ ಸೈಕಲ್ ತುಳಿಯುತ್ತಾ ಬಂದು ಕಾಫಿ ಹೀರಿ ರಾಜಕೀಯ ಚರ್ಚೆಗೆ ದನಿಯಾಗುತ್ತಿದ್ದದ್ದೂ ಇದೆ. ಸುಮಾರು ಆರು ದಶಕಗಳ ಹಿಂದೆ ಇಲ್ಲಿ ನೆಹರು ಹಾಗೂ ವಿ.ಪಿ.ಸಿಂಗ್ ಕಾಫಿ ಹೀರುತ್ತ ರಾಜಕೀಯ ಚರ್ಚೆ ನಡೆಸುತ್ತಿದ್ದರು. ಇಂದಿಗೂ ಇಲ್ಲಿನ ಕಾಫಿಯ ಹಬೆ ಮತ್ತು ರಾಜಕೀಯ ಚರ್ಚೆ ಮಿಳಿತವಾಗುತ್ತಲೇ ಇದೆ.
ಈ ಕಾಫಿ ಹೌಸ್ ಸಾಮಾನ್ಯ ಕಚೇರಿ ಯಂತೆಯೋ ಅಥವಾ ಹೊಟೇಲ್‌ನಂತೆಯೋ ಇಲ್ಲ. ಬದಲಿಗೆ ಎತ್ತರದ ತಾರಸಿ ಹಾಗೂ ಕಮಾನುಗಳನ್ನು ನೋಡಿದರೆ ಚರ್ಚ್ ನಂತೆ ಕಾಣಿಸುತ್ತದೆ. ಕಾಫಿ ಹೀರುತ್ತಾ ಇಲ್ಲಿ ಕನೆ#ಶನ್ ಕೂಡ ನಡೆಯಬಹುದು! ಉತ್ತರ ಪ್ರದೇಶದಂಥ ಉಸಿರುಕಟ್ಟುವ ರಾಜಕೀಯ ವಾತಾವರಣದ ಮಧ್ಯೆಯೂ ಈ ಕಾಫಿ ಹೌಸ್ ಒಳಗೆ ರಾಜಕೀಯ ಭಿನ್ನ ವಿಭಿನ್ನ ಅಭಿಪ್ರಾಯಗಳು ಮುಕ್ತವಾಗಿ ಹರಿದಾಡುತ್ತವೆ. ಈ ಕಾಫಿ ಹೌಸ್ 1957 ರಿಂದಲೂ ರಾಜಕೀಯ ಚರ್ಚೆಗೆ ಕಿವಿಯಾಗಿದೆ. ಈ ಬಾರಿಯಂತೂ ಎಸ್ಪಿ- ಬಿಎಸ್ಪಿ ಮೈತ್ರಿ, ಪ್ರಿಯಾಂಕಾ ವಾದ್ರಾ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದು ಹಾಗೂ ಮುಂದೆ ದಿಲ್ಲಿಯಲ್ಲಿ ಯಾವ ಸರಕಾರ ಬಂದೀತು ಎಂಬ ಚರ್ಚೆಗಳು ಕಾಫಿಗಿಂತ ಬಿಸಿಯಾಗಿ ನಡೆಯುತ್ತಿವೆ. ಈ ಕಾಫಿ ಹೌಸ್ ನಗರದ ಕೇಂದ್ರ ಭಾಗದಲ್ಲಿದೆ. ಇಲ್ಲಿ ಸುತ್ತಲಿನ ಪ್ರದೇಶಗಳಲ್ಲಿ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳೇ ಇರುವು ದರಿಂದ ಇದು ಎಲ್ಲ ರಾಜಕೀಯ ಚಟುವಟಿಕೆ ಗಳ ಅಡ್ಡೆಯ ರೀತಿ ಕೆಲಸ ಮಾಡುತ್ತದೆ. ಕಾಫಿ ಹೌಸ್ ಆರಂಭದ ಅನಂತರದಲ್ಲಿ ಕಾಫಿ ಹೀರುವ ಹಾಗೂ ನೀಡುವ ವಿಧಾನದಲ್ಲಿ ಭಾ ಬದಲಾವಣೆಯೇ ಆಗಿದೆ. ಏರ್ ಕಂಡೀಷನ್ ಕೋಣೆಗಳು, ಐಷಾರಾಮಿ ಕೆಫೆಗಳು ಕಣ್ತೆರೆದಿವೆ. ಆದರೆ ಈ ಕಾಫಿ ಹೌಸ್‌ಗೆ ಇವ್ಯಾವುವೂ ಸಾಟಿಯಾಗಲಾರದು. ಅಷ್ಟೇ ಅಲ್ಲ, ಇಲ್ಲಿನ ಕಾಫಿ ದರ ಕೂಡ ಕಡಿಮೆಯೇ. 26 ರೂ.ಗೆ ಒಂದು ರುಚಿಕಟ್ಟಾದ ಹಬೆಯಾಡುವ ಕಾಫಿ ಸಿಗುತ್ತದೆ. ಇದಕ್ಕೊಂದು ಸ್ವಲ್ಪ ಕ್ರೀಮ್ ಸೇರಿಸಬೇಕು ಎಂದಾದರೆ 37 ರೂ. ಕೊಟ್ಟರೆ ಸಾಕು. ಕ್ಯಾಪುಚಿನೋಗೆ ಹೋಲಿಸಿದರೆ ಈ ದರ ಏನೇನೂ ಅಲ್ಲ ಬಿಡಿ. ಬೇರೆ ತಿಂಡಿ ತಿನಿಸು ದರವೂ ಕೈಗೆಟಕುವಂತೆಯೇ ಇದೆ. ವೆಜ್ ಸ್ಯಾಂಡ್‌ವಿಚ್‌ಗೆ 43 ರೂ. ಎಗ್ ಸ್ಯಾಂಡ್‌ವಿಚ್‌ಗೆ
50 ರೂ.
ಇದು ಯಾವುದೇ ಒಂದು ವರ್ಗದ ಕಾಫಿ ಹೌಸ್ ಅಲ್ಲ. ವಕೀಲರು, ಪತ್ರಕರ್ತರು, ಉದ್ಯಮಿಗಳು ಸೇರಿ ಎಲ್ಲ ವಲಯದ ಜನರಿಗೂ ಇದು ಆಕರ್ಷಣೆಯ ಸ್ಥಳ. ಮೊದಲೆಲ್ಲ ಇಲ್ಲಿ ಚರ್ಚೆ ಬಿಸಿಯೇರುತ್ತಿತ್ತು. ಆದರೆ ಇತರರ ಅಭಿಪ್ರಾಯಕ್ಕೂ ಗೌರವವಿರುತ್ತಿತ್ತು. ಇತ್ತೀಚೆಗೆ ಚರ್ಚೆಯ ಕಾವು ಕೈಗೂ ಹತ್ತುತ್ತಿದೆ. ಕೆಲವು ಬಾರಿ ವಾಗ್ವಾದ ತಾರಕ್ಕೇರಿದ್ದೂ ಇದೆ. ಒಂದೆರಡು ಬಾರಿ ಕುರ್ಚಿ ಎತ್ತಿ ಹೊಡೆಯುವ ಮಟ್ಟಕ್ಕೂ ಚರ್ಚೆ ಹೋಗಿದ್ದಿದೆ. ಆದರೆ ಅದನ್ನು ಮೀರಿ ಹಿಂಸಾಚಾರ ಎಂದೂ ನಡೆದಿಲ್ಲ ಎಂದು ಇಲ್ಲಿನ ಕೆಲಸಗಾರರು ಹೇಳುತ್ತಾರೆ.
ಕ್ಷೇತ್ರ ಅದಲು ಬದಲು
ಉತ್ತರಪ್ರದೇಶದಲ್ಲಿ 29 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೇಂದ್ರ ಸಚಿವೆ ಮನೇಕಾ ಗಾಂಧಿ (ಸುಲ್ತಾನ್‌ಪುರ), ವರುಣ್ ಗಾಂಧಿ (ಪಿಲಿಬಿತ್), ಸಚಿವ ಮನೋಜ್ ಸಿನ್ಹಾ (ಗಾಜಿಪುರ್) ಅವರು ಸ್ಥಾನ ಪಡೆದಿದ್ದಾರೆ. ಮನೇಕಾ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ವರುಣ್‌ಗೆ ಹಾಗೂ ವರುಣ್ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಮನೇಕಾಗೆ ನೀಡಲಾಗಿದೆ. ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿದೆ. ರೀಟಾ ಬಹುಗುಣ ಜೋಷಿ ಅಲಹಾಬಾದ್‌ನಿಂದ ಕಣಕ್ಕಿಳಿಯಲಿದ್ದಾರೆ. ಏತನ್ಮಧ್ಯೆ, ಹಿರಿಯ ನಾಯಕರಾದ ಅಡ್ವಾಣಿ, ಜೋಷಿ ಬಳಿಕ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್‌ರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಬಿಜೆಪಿ ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಶತ್ರುಘ್ನ ಕಾಂಗ್ರೆಸ್‌ಗೆ: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಗುರುವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ತಾವೇ ಪ್ರತಿನಿಧಿಸುತ್ತಿರುವ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಬಡತನದ ಮೇಲೆ ಸರ್ಜಿಕಲ್ ದಾಳಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ರಾಜಸ್ಥಾನದ ಸೂರತ್‌ಗಡ ಮತ್ತು ಬುಂದಿಯಲ್ಲಿ ನಡೆಸಿದ ರ್ಯಾಲಿಯಲ್ಲಿ, ತಾವು ಸೋಮವಾರವಷ್ಟೇ ಘೋಷಿಸಿದ ದೇಶದ ಕಡುಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಯೋಜನೆಯು ಬಡತನದ ಮೇಲೆ ಕಾಂಗ್ರೆಸ್ ನಡೆಸಲಿರುವ ಸರ್ಜಿಕಲ್ ದಾಳಿ ಎಂದು ಅವರು ಬಣ್ಣಿಸಿದ್ದಾರೆ. ಅಲ್ಲದೆ, 21ನೇ ಶತಮಾನದಲ್ಲಿ ದೇಶದಲ್ಲಿ ಒಬ್ಬನೇ ಒಬ್ಬ ಬಡವನೂ ಇರದಂತೆ ನಾವು ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ. “ಬಿಜೆಪಿಯು ಬಡವರನ್ನೇ ನಿರ್ಮೂಲನೆ ಮಾಡಲು ಹೊರಟರೆ, ನಾವು ಬಡತನವನ್ನು ನಿರ್ಮೂಲನೆ ಮಾಡುತ್ತೇವೆ. ನ್ಯಾಯ್ ಯೋಜನೆಯು ಬಡವರಿಗೆ ನೀಡುತ್ತಿರುವ ಉಚಿತ ಕೊಡುಗೆಯಲ್ಲ, ಬದಲಿಗೆ ಇದು ಅವರಿಗೆ ನೀಡುತ್ತಿರುವ ನ್ಯಾಯ’ ಎಂದೂ ರಾಹುಲ್ ಘೋಷಿಸಿ ದ್ದಾರೆ. ಇದಾದ ಬಳಿಕ ಬುಂದಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಆಡಳಿತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಕೆಲಸವೇ ಇಲ್ಲವಾಗುತ್ತಿದೆ. ಏಕೆಂದರೆ, ಅವರು ಜಿಎಸ್‌ಟಿ ಅರ್ಜಿ ಭರ್ತಿ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡುವಂತಾಗಿದೆ’ ಎಂದೂ ಹೇಳಿದ್ದಾರೆ.
ಅಜಂಖಾನ್ ವಿರುದ್ಧ ಜಯಪ್ರದಾ ಕಣಕ್ಕೆ
ಸಮಾಜವಾದಿ ಪಕ್ಷದ ಮಾಜಿ ಸಂಸದೆ, ನಟಿ ಜಯಪ್ರದಾ ಮಂಗಳವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ನಾಯಕತ್ವದ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಅವರೊಬ್ಬ ಧೈರ್ಯಶಾಲಿ ನಾಯಕನಾಗಿದ್ದು, ಅವರ ಕೈಯ್ಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಉತ್ತರಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಜಯಪ್ರದಾಗೆ ಟಿಕೆಟ್ ನೀಡಲಾಗಿದ್ದು, ಎಸ್‌ಪಿ ನಾಯಕ ಅಜಂ ಖಾನ್ ವಿರುದ್ಧ ಅವರು ಸ್ಪರ್ಧಿಸಲಿದ್ದಾರೆ.
ಪಕ್ಷಪಾತ ನಡೆಸಿದರೆ ಕಠಿನ ಕ್ರಮ ಖಚಿತ
ರಾಜ್ಯ ಚುನಾವಣಾ ಆಯುಕ್ತರು, ಅಧಿಕಾರಿಗಳು ಹಾಗೂ ಚುನಾವಣಾ ಪರಿವೀಕ್ಷಕರು ಪಕ್ಷಪಾತ ನಿಲುವು ವ್ಯಕ್ತಪಡಿಸಿದರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ. ಈ ಹಿಂದೆ ಐದು ರಾಜ್ಯಗಳ ಚುನಾವಣೆ ವೇಳೆ ಕೆಲವು ಪ್ರಕರಣಗಳು ವರದಿಯಾಗಿದ್ದವು. ನೇಮಕಗೊಂಡ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗ ಸಂಪೂರ್ಣ ವಿಶ್ವಾಸ ಹೊಂದಿದೆ. ಆದರೆ ಪಕ್ಷಪಾತ ಮನೋಭಾವ ವ್ಯಕ್ತಪಡಿಸಿದ ಸುಳಿವು ಸಿಕ್ಕರೂ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರೋರಾ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಪ್ರಚಾರ ಗೀತೆ ಬಿಡುಗಡೆ
ಬಿಜೆಪಿ ಮಂಗಳವಾರ ತನ್ನ ಚುನಾವಣಾ ಪ್ರಚಾರದ ಗೀತೆಯನ್ನು ಬಿಡುಗಡೆ ಮಾಡಿದೆ. ಕಲಾವಿದರಾದ ಸರಳಾ ಶಿಂದೆ, ಅಂತರಾ ಶಿಂದೆ, ಶೈಲೇಂದ್ರ ಮತ್ತು ಅಭಿಜಿತ್ ಶಿಂದೆ ಅವರು ಈ ಗೀತೆ ಹಾಡಿದ್ದಾರೆ. ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ಸಾಧನೆಗಳನ್ನು ಹಾಡಿನಲ್ಲಿ ಬಿಂಬಿಸಲಾಗಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟ, ರಾಷ್ಟ್ರೀಯ ಭದ್ರತೆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಈ ಹಾಡಿನಲ್ಲಿ ಬೆಳಕು ಚೆಲ್ಲಲಾಗಿದೆ.
ಪಾಕ್ ನಡೆಸುತ್ತಿರುವ ಭಯೋತ್ಪಾದಕ ಕೃತ್ಯಗಳ ವಿರುದ್ಧ ಅಮೆರಿಕದ ಮಾದರಿ ಯಲ್ಲಿ ಪ್ರತಿಕ್ರಿಯೆ ನೀಡಲು ಪ್ರಧಾನಿ ಮೋದಿಯವರಿಗಷ್ಟೇ ಸಾಧ್ಯ. ಪುಲ್ವಾಮಾ ದಾಳಿ ಬಳಿಕ ವಿಳಂಬ ಮಾಡದೇ ನಾವು ಪಾಕ್ ಮೇಲೆ ದಾಳಿ ನಡೆಸಿದೆವು.
ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಕಡುಬಡವರಿಗೆ ವರ್ಷಕ್ಕೆ 72 ಸಾವಿರ ರೂ.ಗಳನ್ನು ನೀಡುವ ಕಾಂಗ್ರೆಸ್‌ನ ಯೋಜನೆಯನ್ನು ಬೆಂಬಲಿಸುತ್ತೀರೋ, ಇಲ್ಲವೋ? ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ನಿಲುವು ಸ್ಪಷ್ಟಪಡಿಸಲಿ.
ರಣದೀಪ್ ಸುಜೇವಾಲಾ, ಕಾಂಗ್ರೆಸ್ ವಕ್ತಾರ
ಭಗವಾನ್ ಶ್ರೀರಾಮ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಒಂದು ಕಾಲದಲ್ಲಿ ಕೋರ್ಟ್‌ಗೆ ದಾಖಲೆಗಳನ್ನು ಒದಗಿಸಿದ್ದ ಕಾಂಗ್ರೆಸ್ ಈಗ ರಾಮಭಕ್ತಿ ಪ್ರದರ್ಶಿಸು ತ್ತಿದೆ. ಪ್ರಿಯಾಂಕಾ ವಾದ್ರಾ ತಮ್ಮನ್ನು ತಾವು ರಾಮ ಭಕ್ತೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಸ್ಮತಿ ಇರಾನಿ, ಕೇಂದ್ರ ಸಚಿವೆ
ದೇಶದ ಜನರಿಗೆ ಪ್ರಧಾನಿ ಮೋದಿ ನೇತೃತ್ವದ ಸ್ಪಷ್ಟ ಬಹುಮತ ಹೊಂದಿ ರುವ ಸರಕಾರ ಬೇಕು. ಆದರೆ ಕಾಂಗ್ರೆಸ್ ಅದರದ್ದೇ ನೇತೃತ್ವದ ತೇಪೆ ಹಾಕಿದ ಸರಕಾರ ರಚಿಸಲು ಮುಂದಾಗಿದೆ. ಜನಕ್ಕೆ ಗುತ್ತಿಗೆ ಆಧಾರದ ಪ್ರಧಾನಿ ಬೇಕಾಗಿಲ್ಲ.
ಮುಖಾ¤ರ್ ಅಬ್ಟಾಸ್, ಕೇಂದ್ರ ಸಚಿವ
ಚುನಾವಣೆಗೂ ಮುನ್ನ ವಿಪಕ್ಷಗಳು ಬಿಜೆಪಿ ವಿರುದ್ಧ ಒಟ್ಟಾಗಿ ಸೆಣಸದಿ ದ್ದರೂ, ಚುನಾವಣೆ ಬಳಿಕ ಒಟ್ಟಾಗಿ ಸರಕಾರ ರಚಿಸುವುದಂತೂ ಖಚಿತ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸು ವುದೇ ಎಲ್ಲಾ ವಿಪಕ್ಷಗಳ ಗುರಿಯಾಗಿದೆ.
ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.