ಬೆಂಗಳೂರು ಉತ್ತರ: ಕಸ-ತ್ಯಾಜ್ಯದ ಹೂಳು, ನಿತ್ಯದ ಗೋಳು
ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರಕ್ಕೆ ಲಗ್ಗೆ ಇಡಲು ಕಾಂಗ್ರೆಸ್, ಜೆಡಿಎಸ್ ಕಸರತ್ತು
Team Udayavani, Mar 25, 2019, 6:28 AM IST
ಬೆಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಒಳಗೊಂಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು ಮತ್ತು ಸಂಚಾರ ದಟ್ಟಣೆ ಸಹಿತ ಹತ್ತಾರು ಸಮಸ್ಯೆಗಳು ಎದ್ದು ಕಾಣುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆ, ಒಳಚರಂಡಿ ವ್ಯವಸ್ಥೆ ಇಲ್ಲದಿರು ವುದು, ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯ ನಡೆದಿದೆಯಾದರೂ ಸಂಚಾರ ದಟ್ಟಣೆ, ಕಸ ವಿಲೇವಾರಿ ಸಮಸ್ಯೆಗಳು ಕ್ಷೇತ್ರದ ಜನರನ್ನು ತೀವ್ರವಾಗಿ ಬಾಧಿಸುತ್ತಿವೆ.
ಕ್ಷೇತ್ರವ್ಯಾಪ್ತಿ
ಕೆ.ಆರ್.ಪುರ, ದಾಸರಹಳ್ಳಿ, ಹೆಬ್ಟಾಳ, ಬ್ಯಾಟರಾಯನಪುರ, ಮಹಾಲಕ್ಷ್ಮೀ ಬಡಾವಣೆ, ಪುಲಿಕೇಶಿ ನಗರ, ಯಶವಂತಪುರ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಬೆಂಗಳೂರು ಉತ್ತರ ಕ್ಷೇತ್ರವು ಬಿಜೆಪಿಯ ಬಿಗಿ ಹಿಡಿತದಲ್ಲಿದೆ. ಅಚ್ಚರಿಯ ವಿಷಯ ಎಂದರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮಲ್ಲೇಶ್ವರ ಮಾತ್ರ ಬಿಜೆಪಿ ತೆಕ್ಕೆಯಲ್ಲಿದೆ. ಉಳಿದಂತೆ ಮಹಾಲಕ್ಷ್ಮೀ ಬಡಾವಣೆ ಮತ್ತು ದಾಸರಹಳ್ಳಿ ಜೆಡಿಎಸ್, ಬ್ಯಾಟರಾಯನಪುರ, ಹೆಬ್ಟಾಳ, ಕೆ.ಆರ್.ಪುರ, ಪುಲಿಕೇಶಿನಗರ ಮತ್ತು ಯಶವಂತಪುರ ಕಾಂಗ್ರೆಸ್ ಹಿಡಿತದಲ್ಲಿವೆ.
ಕ್ಷೇತ್ರದಲ್ಲಿ 12,60,356 ಪುರುಷ ಮತ್ತು 11,41,116 ಮಹಿಳಾ ಮತ ದಾರರ ಸಹಿತ 24,01,472 ಮತ ದಾರರಿದ್ದಾರೆ. ಶೇ.7.46ರಷ್ಟು ಗ್ರಾಮೀಣ ಭಾಗದಲ್ಲಿ ಮತ್ತು ಶೇ. 92.54ರಷ್ಟು ಮತದಾರರು ನಗರ ಪ್ರದೇಶದಲ್ಲಿದ್ದಾರೆ.
ಬಿಜೆಪಿ ಚುನಾವಣ ಅಸ್ತ್ರ
2004ರಿಂದಲೇ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರದಿಂದ 2014ರ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಗೆಲುವು ಸಾಧಿಸಿದ್ದಾರೆ. ರೈಲ್ವೇ, ಕಾನೂನು ಮತ್ತು ಅಂಕಿಅಂಶ ಖಾತೆಯ ಸಚಿವರಾಗಿ ಸೇವೆ ನಿರ್ವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ನನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಮಾತ್ರವಲ್ಲದೆ ಹೊಸ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಸಂಸತ್‌ನಲ್ಲಿ ಕಾವೇರಿ, ಮಹಾದಾಯಿ ವಿಚಾರ ಪ್ರಸ್ತಾವವಾದಾಗ ರಾಜ್ಯದ ಪರ ನಿಂತಿದ್ದಾರೆ.
ಕಳೆದ 5 ವರ್ಷಗಳಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಕ್ಷೇತ್ರಕ್ಕೆ ಬಂದಿರುವ 25 ಕೋ. ರೂ. ಗಳಲ್ಲಿ 22.45 ಕೋ. ರೂ.ಗಳ ವಿನಿಯೋಗ ಮಾಡಲಾಗಿದೆ. ವಾರ್ಡ್ ಕಚೇರಿ, ಬೆಂಗಳೂರು ಒನ್, ಉದ್ಯಾನವನಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಮುದಾಯ ಭವನ, ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣ, ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೆಟ್ರೋ ವ್ಯವಸ್ಥೆ ಇದೆ. ರಾಜ್ಯದ ಮೈತ್ರಿ ಸರಕಾರದ ವೈಫಲ್ಯ, ಸಂಸದರ ಸಾಧನೆ, ಸಂಸದರ ವೈಯಕ್ತಿಕ ವರ್ಚಸ್ಸು, ಮೋದಿ ಸರಕಾರದ ಸಾಧನೆಗಳೇ ಬಿಜೆಪಿಗೆ ಪ್ಲಸ್ ಪಾಯಿಂಟ್.
ಕಾಂಗ್ರೆಸ್ ಚುನಾವಣ ಅಸ್ತ್ರ
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಸಾಧನೆ ಮತ್ತು ಬಗೆಹರಿಯದ ಸಮಸ್ಯೆಗಳ ಬಗ್ಗೆ ಚರ್ಚೆ ಈಗ ಆರಂಭವಾಗಿದೆ. ಸಂಸದರು ಕ್ಷೇತ್ರಕ್ಕೆ ಅಗತ್ಯವಿರುವ ಶಾಶ್ವತ ಯೋಜನೆಗಳನ್ನು ರೂಪಿಸುವಲ್ಲಿ ಇನ್ನಷ್ಟು ಒತ್ತು ನೀಡಬೇಕಿತ್ತು ಎಂಬುದು ಇಡೀ ಕ್ಷೇತ್ರದ ಜನರ ಅಭಿಪ್ರಾಯವಾಗಿದೆ. ಸಂಸದರ ಬಗೆಗಿನ ಈ ವೈಫಲ್ಯ, ಹಿಂದಿನ ಕಾಂಗ್ರೆಸ್ ಮತ್ತು ಈಗಿನ ಮೈತ್ರಿ ಸರಕಾರದ ಸಾಧನೆಗಳು, ಕೇಂದ್ರದಲ್ಲಿನ ಮೋದಿ ಸರಕಾರದ ವೈಫಲ್ಯಗಳು ಕಾಂಗ್ರೆಸ್‌ನ ಚುನಾವಣ ಅಸ್ತ್ರ.
ಆದರ್ಶ ಗ್ರಾಮ
2014-15ರಲ್ಲಿ ಆದರ್ಶ ಗ್ರಾಮ ಯೋಜನೆ ಯಡಿ ಸಂಸದರು ಯಶವಂತಪುರದ ನೆಲಗುಳಿ ಗ್ರಾಮ ಪಂಚಾಯತ್‌ನ್ನು ದತ್ತು ಪಡೆದಿದ್ದರು. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಒಳಚರಂಡಿ ಕಾಮಗಾರಿ, ನೈರ್ಮಲ್ಯ ಯೋಜನೆ, ರಸ್ತೆ ಕಾಮಗಾರಿ ಸಹಿತ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಶೇ.100ರಷ್ಟು ಶೌಚಾಲಯ ನಿರ್ಮಾಣ, 138 ಸೋಲಾರ್ ದೀಪಗಳ ಅಳವಡಿಕೆ, 10 ಲ. ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 2016-17ರಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮೀನುಕುಂಟೆ ಗ್ರಾ. ಪಂ. ನ್ನು ದತ್ತು ಪಡೆದಿದ್ದರು. ಇಲ್ಲಿನ ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ, ಶೌಚಾ ಲಯ, ದೇವಸ್ಥಾನದ ದಾಸೋಹ ಭವನ, ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಎರಡೂ ಗ್ರಾ. ಪಂ.ಗಳಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿನ ರಕ್ಷಣಾ ಇಲಾಖೆಯ ಜಾಗ ಮತ್ತು ಸಾರ್ವಜನಿಕರ ನಡುವಿನ ಸುಮಾರು 24 ಬಗೆಯ ವಿವಾದಗಳನ್ನು ಕೇಂದ್ರ ರಕ್ಷಣಾ ಸಚಿವರ ಮೂಲಕ ಬಗೆಹರಿಸಿದ ತೃಪ್ತಿ ಇದೆ. ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗಾಗಿ ಸಂಪೂರ್ಣ ಅನುದಾನ ಬಳಸಲಾಗಿದೆ.
– ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.