ಬಿಜೆಪಿ ಎಲ್‌ಇಡಿ ಪ್ರಚಾರ ವಾಹನಗಳಿಗೆ ಚಾಲನೆ
Team Udayavani, Apr 11, 2019, 3:00 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮಾಹಿತಿ ಸಹಿತ ಬಿಂಬಿಸುವ 54 ಎಲ್‌ಇಡಿ ಪ್ರಚಾರ ವಾಹನಗಳಿಗೆ ಬುಧವಾರ ಚಾಲನೆ ನೀಡಲಾಯಿತು.
ಸಣ್ಣ ರೈತರಿಗೆ ವಾರ್ಷಿಕ 6000 ರೂ.ನೆರವು, ಎಲ್ಲರಿಗೂ ಅಡುಗೆ ಅನಿಲ ಸಂಪರ್ಕ, ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸೇರಿದಂತೆ ಕೇಂದ್ರ ಸರ್ಕಾರದ ನೂರಾರು ಸಾಧನೆಗಳ ಕುರಿತ ಮಾಹಿತಿ ಎಲ್‌ಇಡಿ ಪರದೆಯಲ್ಲಿ ಮೂಡಲಿವೆ.
ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ದೃಶ್ಯಾವಳಿಗಳು ಪ್ರಸಾರವಾಗಲಿವೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳುವ ಏ.21ರವರೆಗೆ ವಾಹನಗಳು ಸಂಚರಿಸಲಿವೆ.
ಸಂತೆ, ಮಾರುಕಟ್ಟೆ, ವಾಣಿಜ್ಯ ಪ್ರದೇಶ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ವಾಹನ ಸಂಚರಿಸಿ ಜಾಗೃತಿ ಮೂಡಿಸಲಿವೆ. ರಾಜ್ಯದಲ್ಲಿ ಚುನಾವಣೆ ಮುಗಿದ ಬಳಿಕ ಈ ವಾಹನಗಳು ಮುಂದಿನ ಹಂತದ ಮತದಾನ ನಡೆಯಲಿರುವ ಇತರ ರಾಜ್ಯಗಳಿಗೆ ತೆರಳಲಿವೆ.
ಎಲ್‌ಇಡಿ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳೀಧರ ರಾವ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಇತರರು ಪಾಲ್ಗೊಂಡಿದ್ದರು.
ಆರ್.ಅಶೋಕ್ ಮಾತನಾಡಿ, ಬಿಜೆಪಿ ಪ್ರಚಾರದಲ್ಲಿ ಮುಂದಿದೆ. ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಎಂಬಂತೆ ಎದುರಾಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಟಿಕೆಟ್ ಹಂಚಿಕೆ ಬಳಿಕವೂ ಜಗಳ ಮುಂದುವರಿದಿದೆ. ಬಿಜೆಪಿ ಮೋದಿಯವರ ಹೆಸರು ಹೇಳುತ್ತಾ ಹೆಮ್ಮೆಯಿಂದ ಪ್ರಚಾರ ಮಾಡುತ್ತಿದೆ.
ಕಾಂಗ್ರೆಸ್ ಸಹ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೆಸರು ಹೇಳಿಕೊಂಡು ಪ್ರಚಾರ ಮಾಡಲಿ ಎಂದರು. ರಾಜ್ಯ ಸಹ ವಕ್ತಾರರಾದ ಎ.ಎಚ್.ಆನಂದ್, ಎಸ್.ಪ್ರಕಾಶ್, ಮಾಳವಿಕಾ ಅವಿನಾಶ್, ಮಾಜಿ ಉಪಮೇಯರ್ ಎಸ್.ಹರೀಶ್, ಬೆಂಗಳೂರು ನಗರ ಬಿಜೆಪಿ ಕಾರ್ಯದರ್ಶಿ ಗಣೇಶ್, ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.