ಅಚ್ಚರಿ ಫಲಿತಾಂಶಕ್ಕೆ ಕಮಲ ಕಸರತ್ತು ;ಆರು ಕ್ಷೇತ್ರಗಳತ್ತ ಚಿತ್ತ
Team Udayavani, Mar 16, 2019, 12:30 AM IST
ಬೆಂಗಳೂರು: ರಾಜ್ಯದಲ್ಲಿ 22 ಲೋಕಸಭಾ ಸ್ಥಾನ ಗೆಲ್ಲುವ ಗುರಿಯಿಟ್ಟುಕೊಂಡಿರುವ ಬಿಜೆಪಿಯು ಅನ್ಯ ಪಕ್ಷಗಳ ಸಂಸದರಿರುವ ಕ್ಷೇತ್ರಗಳ ಪೈಕಿ ಆರು ಕಡೆ ಅಚ್ಚರಿಯ ಫಲಿತಾಂಶಕ್ಕಾಗಿ ಕಾರ್ಯತಂತ್ರ ಹೆಣೆಯುತ್ತಿದೆ.
ಈ ನಡುವೆ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ನಂತರದ ಆಯಾ ಪಕ್ಷಗಳಲ್ಲಿನ ಗೊಂದಲ, ಸ್ಥಳೀಯ ನಾಯಕರು, ಕಾರ್ಯಕರ್ತರಲ್ಲಿನ ಅಸಮಾಧಾನವು ಬಿಜೆಪಿಗೆ ವರದಾನವಾಗಿ ಪರಿಣಮಿಸಿದಂತಿದೆ. ಹಾಗಾಗಿ ಅಭ್ಯರ್ಥಿ ಆಯ್ಕೆ ಸೇರಿ ಎಲ್ಲ ಹಂತದಲ್ಲೂಬಿಜೆಪಿ ಯು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ. ಆಯ್ದ ಕ್ಷೇತ್ರಗಳ ಬೆಳವಣಿಗೆಯನ್ನು ವರಿಷ್ಠರೂ ಸೂಕ್ಷ್ಮವಾಗಿಗಮನಿಸುತ್ತಿದ್ದು, ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 15 ಸಂಸದರನ್ನು ಹೊಂದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರ ಸ್ಥಾನ ತೆರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕೆಂದು ಹೊರಟಿರುವ ಬಿಜೆಪಿ ಅದಕ್ಕೆ ಪೂರಕವಾಗಿ ರಾಜ್ಯದಿಂದಲೂ 22 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಜೆಪಿ ನಾಯಕರು ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಆರು ಕ್ಷೇತ್ರಗಳತ್ತ ಬಿಜೆಪಿ ಚಿತ್ತ
ಬಿಜೆಪಿಯೇತರ ಸಂಸದರಿರುವ ಕ್ಷೇತ್ರಗಳ ಪೈಕಿ ಪ್ರಮುಖವಾಗಿ ಕಲಬುರಗಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಗೆಲುವಿಗೆ ರೂಪು ರೇಷೆಗಳನ್ನು ಸಿದಟಛಿಪಡಿಸುತ್ತಿದೆ. ಈ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಸಾಧ್ಯವಿರುವ ಎಲ್ಲ ರೀತಿಯ “ಅಸ್ತ್ರ’ಗಳ ಪ್ರಯೋಗಕ್ಕೆ ಸಲಕರಣೆ ಗಳನ್ನು ಹೊಂದಿಸುವ ಕಾರ್ಯದಲ್ಲಿ ಸದ್ಯ ನಿರತವಾಗಿದೆ.
1 ಶತಾಯಗತಾಯ ಮಣಿಸಲು ಪಣ
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶತಾಯಗತಾಯ ಮಣಿಸಬೇಕೆಂದು ಪಣ ತೊಟ್ಟಂತಿರುವ ಬಿಜೆಪಿ ಈಗಾಗಲೇ ಕ್ಷೇತ್ರದಲ್ಲಿ ಸಂಘಟನೆಗೆ ಒತ್ತು ನೀಡಿದೆ. ಪ್ರಧಾನಿ ಮೋದಿ ಕಲಬುರಗಿಯಲ್ಲಿ ಚುನಾವಣಾ ರ್ಯಾಲಿಯನ್ನೂ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್ ನಾಯಕರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಅವರ ಸಾಲಿಗೆ ಡಾ.ಉಮೇಶ್ ಜಾಧವ್ ಹೊಸ ಸೇರ್ಪಡೆಯಾಗಿದ್ದಾರೆ. ಕೋಲಿ, ಈಡಿಗ ಹಾಗೂ ಲಂಬಾಣಿ ಸಮುದಾಯದ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯು ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಸದಾಶಿವ ಆಯೋಗದ ವರದಿ ಜಾರಿಯಾಗದಿರುವುದು, ಕಲಬುರಗಿಯಲ್ಲಿ ಅಭಿವೃದಿಟಛಿ ಕಾರ್ಯಗಳ ಕುಂಠಿತ ಇತರೆ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಗೆಲುವಿಗೆ ಬೆವರು ಹರಿಸಲಾರಂಭಿಸಿದೆ.
2 ಬಳ್ಳಾರಿಯಲ್ಲಿ ಸಂಘಟಿತ ಹೋರಾಟ
14 ವರ್ಷಗಳ ಕಾಲ ಬಿಜೆಪಿ ನಿಯಂತ್ರಣದಲ್ಲಿದ್ದ ಬಳ್ಳಾರಿ ಕ್ಷೇತ್ರವನ್ನು ಕಳೆದ ಉಪಚುನಾವಣೆಯಲ್ಲಿ ಕಳೆದುಕೊಂಡಿತ್ತು. ಉಪಚುನಾವಣೆ ಸಂದರ್ಭದಲ್ಲಿ ಉಂಟಾದ ಲೋಪಗಳನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಈಗಾಗಲೇ ಒತ್ತು ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್‌ನ ಅತೃಪ್ತ ಶಾಸಕರಲ್ಲಿ ಪ್ರಮುಖರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ್, ರಮೇಶ್ ಜಾರಕಿಹೊಳಿ ಅವರ “ಸಹಕಾರ’ ಗಳಿಸುವ ಪ್ರಯತ್ನ ನಡೆಸಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮ ಹಾಕುತ್ತಿದೆ. ಜತೆಗೆ ಶಾಸಕ ಬಿ.ಶ್ರೀರಾಮುಲು ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಸಂಘಟಿತ ಹೋರಾಟಕ್ಕೆ ಸಜ್ಜಾಗಿದೆ.
3 ಚಿಕ್ಕಬಳ್ಳಾಪುರದಲ್ಲಿ ಗೆಲುವಿನ ಲೆಕ್ಕಾಚಾರ
ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಬಿಜೆಪಿಯು ಸಂಘಟನೆಗೆ ಒತ್ತು ನೀಡಿ ಪ್ರಚಾರ ಚುರುಕುಗೊಳಿಸಿದೆ. ಕಳೆದ ಬಾರಿ ಕೇವಲ 9520 ಮತಗಳ ಅಂತರದಿಂದ ಪರಭಾವಗೊಂಡಿದ್ದ ಬಿಜೆಪಿಯ ಬಿ.ಎನ್. ಬಚ್ಚೇಗೌಡ ಅವರು ಈ ಬಾರಿಯೂ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ದೇವನಹಳ್ಳಿಯಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಸಿ ಚುನಾವಣಾ ರಣಕಹಳೆ ಮೊಳಗಿಸಿ ಹೋಗಿದ್ದಾರೆ. ಕಳೆದ ಬಾರಿ ಸೋಲಿನ ಅನುಕಂಪ ಹಾಗೂ ಮೈತ್ರಿ ಪಕ್ಷಗಳ ಒಡಕಿನ ಲಾಭ ಪಡೆಯುವ ಲೆಕ್ಕಾಚಾರದಲ್ಲೇ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.
4 ಗೆಲುವಿಗೆ ಕಾರ್ಯತಂತ್ರ
ಕೋಲಾರ ಕ್ಷೇತ್ರದಲ್ಲೂ ಈ ಬಾರಿ ಕಮಲವನ್ನು ಅರಳಿಸುವ ನಿಟ್ಟಿನಲ್ಲಿ ಬಿಜೆಪಿ ಕಸರತ್ತು ಆರಂಭಿಸಿದೆ. ಕಳೆದ ಬಾರಿ ಸೋಲುಂಡಿದ್ದ ಡಿ.ಎಸ್.ವೀರಯ್ಯ ಜತೆಗೆ ಚಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ಇತರರು ಆಕಾಂಕ್ಷಿಗಳಾಗಿದ್ದಾರೆ. ಹಾಲಿ ಸಂಸದ ಕೆ. ಎಚ್.ಮುನಿಯಪ್ಪ ವಿರುದಟಛಿದ ಜನಾಕ್ರೋಶ, ಪಕ್ಷದ ಶಾಸಕರೇ ಪ್ರತಿರೋಧ ತೋರುತ್ತಿರುವುದು, ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಹೊಂದಾಣಿಕೆ ಕೊರತೆಯನ್ನೇ ಪ್ರಧಾನವಾಗಿಟ್ಟುಕೊಂಡು ಗೆಲುವಿಗೆ ರೂಪುರೇಷೆ ಸಿದಟಛಿಪಡಿಸುತ್ತಿದೆ.
5 ಜೆಡಿಎಸ್ ಪ್ರಾಬಲ್ಯ ಕ್ಷೇತ್ರದತ್ತ ಕಣ್ಣು
ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲೂ ಈ ಬಾರಿ ಬಿಜೆಪಿ ಅಚ್ಚರಿಯ
ಫಲಿತಾಂಶ ನಿರೀಕ್ಷೆಯಲ್ಲಿ ರಾಜಕಾರಣ ಮಾಡುತ್ತಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ನ ಹಲವರು ಅಸಮಾಧಾನಗೊಂಡಿದ್ದಾರೆ. ಜತೆಗೆ ವಂಶಾಡಳಿತವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿ ಮತದಾರರನ್ನು ಸೆಳೆಯಲು ಬಿಜೆಪಿ ಲೆಕ್ಕಾಚಾರ ನಡೆಸಿದೆ. ಕ್ಷೇತ್ರದ ಹಾಸನ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕರಿರುವುದು ಕಾರ್ಯಕರ್ತರದಲ್ಲಿ ಉತ್ಸಾಹ ಹೆಚ್ಚಿಸಿದೆ. ಮಾಜಿ ಸಚಿವ ಕಾಂಗ್ರೆಸ್‌ನ ಎ.ಮಂಜು ಕೂಡ ಬಿಜೆಪಿಯಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತೀವ್ರ ಸ್ಪರ್ಧೆಯೊಡ್ಡಲು ಕಮಲ ಪಾಳಯ ಸಜ್ಜಾಗಿದೆ.
6 ಕಾದುನೋಡುವ ತಂತ್ರ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್ ಜೆಡಿಎಸ್‌ನಿಂದ ಸ್ಪರ್ಧೆ ಹಾಗೂ ಸುಮಲತಾ ಅಂಬರೀಶ್ ಅವರು ಸ್ಪರ್ಧೆಗೆ ಮುಂದಾಗಿರುವುದರಿಂದ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗುತ್ತಿದ್ದು, ವಿಚಿತ್ರ ತಿರುವು ಪಡೆಯುತ್ತಿದೆ. ಹಾಗಾಗಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಈ ನಡುವೆ ಸುಮಲತಾ ಅವರೊಂದಿಗೆ ಬಿಜೆಪಿ ನಾಯಕ ಆರ್.ಅಶೋಕ್ ಮಾತುಕತೆ ನಡೆಸಿದ್ದರೆ, ಸುಮಲತಾ ಅವರು ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಕಾದು ನೋಡುವ ತಂತ್ರ ನಡೆಸಿರುವ ಬಿಜೆಪಿಯು ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಅಂತಿಮ ಹಂತದಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವರಿಗೆ ಬೆಂಬಲ ಸೂಚಿಸುವ ಬಗ್ಗೆಯೂ ಚಿಂತಿಸಿದೆ.
22 ಸ್ಥಾನ ಗೆಲ್ಲಲು ಬಿಜೆಪಿಗೆ ಪೂರಕ ವಾತಾವರಣ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು, 22 ಸ್ಥಾನ ಗೆಲ್ಲುವ ಗುರಿಗೆ ಪೂರಕವಾಗಿ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಬಿಜೆಪಿ ಸಂಸದರಿರುವ ಕ್ಷೇತ್ರ ಉಳಿಸಿಕೊಳ್ಳುವ ಜತೆಗೆ ಆರು ಪ್ರಮುಖ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಮಂಡ್ಯ ಹಾಗೂ ಹಾಸನ ಕ್ಷೇತ್ರದ ರಾಜಕೀಯ ಬೆಳವಣಿಗೆಯನ್ನು ವರಿಷ್ಠರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವರ ಸೂಚನೆಯಂತೆಯೇ ಮುಂದುವರಿ ಯಲಾಗುವುದು. ಉಳಿದ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಬಿಜೆಪಿಗೆ ಪೂರಕವಾಗಿರುವ ಅಂಶಗಳನ್ನು ಬಳಸಿಕೊಂಡು ಕಾರ್ಯಪ್ರವೃತ್ತವಾಗಿದ್ದೇವೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.
ಎಂ.ಕೀರ್ತಿ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.