ಬೆಂಗಳೂರು ದಕ್ಷಿಣ ಅಭ್ಯರ್ಥಿ ಯಾರು?
Team Udayavani, Mar 23, 2019, 6:55 AM IST
ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕೇಂದ್ರಕ್ಕೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರು ಕಣಕ್ಕಿಳಿಯುವರೇ ಎಂಬ ಪ್ರಶ್ನೆ ಹುಟ್ಟಿ ಹಾಕಿದೆ.
ಕೇಂದ್ರ ಸಚಿವ ಅನಂತ ಕುಮಾರ್ ನಿಧನರಾದ ಬಳಿಕ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂತು. ಇದಕ್ಕೆ ಆರಂಭದಲ್ಲಿ ಹೆಚ್ಚು ಆದ್ಯತೆ ನೀಡದಂತಿದ್ದ ತೇಜಸ್ವಿನಿ ಅನಂತ ಕುಮಾರ್ ಅವರು ನಂತರ ಪಕ್ಷ ಬಯಸಿದರೆ ಸ್ಪರ್ಧಿಸುವಾಗಿ ಹೇಳಿ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿದ್ದರು. ಜತೆಗೆ ತಮಗಿರುವ ಜನ ಸಂಪರ್ಕಗಳ ಮೂಲಕ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು.
ಜತೆಗೆ ಪಕ್ಷದ ಕಾರ್ಯಕ್ರಮಗಳಲ್ಲೂ ಕ್ರಮೇಣ ಭಾಗವಹಿಸುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ಈ ನಡುವೆ ತೇಜಸ್ವಿನಿ ಅನಂತ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗುತ್ತಿದ್ದಂತೆ ಕ್ಷೇತ್ರದ ಕೆಲ ಬಿಜೆಪಿ ನಾಯಕರಿಂದ ಅಪಸ್ವರ ಕೇಳಿಬರಲಾರಂಭಿಸಿತು. ಮುಖ್ಯವಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಇತರರಿಗೆ ತೇಜಸ್ವಿನಿ ಅವರು ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಅಸಮಾಧಾನವಿತ್ತು ಎನ್ನಲಾಗಿದೆ.
ಇದು ಪಕ್ಷದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಶೋಕ್ ಅವರು ಕ್ಷೇತ್ರದ ಪ್ರಮುಖ ನಾಯಕರ ಸಭೆ ನಡೆಸಿ ತೇಜಸ್ವಿನಿ ಅನಂತ ಕುಮಾರ್ ಅವರ ಹೆಸರನ್ನೇ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಶಿಫಾರಸು ಮಾಡಲು ತೀರ್ಮಾನಿಸಿದರು. ನಂತರ ತೇಜಸ್ವಿನಿ ಅನಂತ ಕುಮಾರ್ ಅವರು ಸ್ಥಳೀಯ ನಾಯಕರನ್ನು ಭೇಟಿಯಾಗಿ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡಿದರು. ತೇಜಸ್ವಿನಿ ಅನಂತ ಕುಮಾರ್ ಅವರೇ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿತವಾಗಿತ್ತು.
ತೀವ್ರ ಕಸಿವಿಸಿ: ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲೂ ಇದೇ ವಿಚಾರ ಚರ್ಚೆಯಾಗಿ ಶಿಫಾರಸು ಕೂಡ ಆಗಿತ್ತು. ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಗುರುವಾರ ಬಿಡುಗಡೆಯಾಗುವ ಕೆಲ ಹೊತ್ತಿನ ಮೊದಲು ತೇಜಸ್ವಿನಿ ಅನಂತ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿದ್ದುದು ತೀವ್ರ ಕಸಿವಿಸಿ ಉಂಟು ಮಾಡಿದೆ. ಜತೆಗೆ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ. ಈ ಮಧ್ಯೆ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರ ಹೆಸರು ಕೇಳಿಬರುತ್ತಿದೆ.
ಎಸ್.ಎಂ.ಕೃಷ್ಣ ಸ್ಪರ್ಧೆ?: ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರು ಸಹ ಕೇಳಿಬರುತ್ತಿದೆ. ಒಂದೊಮ್ಮೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ರಾಜ್ಯದಿಂದ ಸ್ಪರ್ಧಿಸಲು ಬಯಸಿದರೆ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ನೀಡಿ ಸಂಸದ ಡಿ.ಕೆ.ಸುರೇಶ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಇವೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಿಲ್ಲ ಎನ್ನಲಾಗಿದೆ.
ಮೋದಿ ಸ್ಪರ್ಧೆ ವದಂತಿ: ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಶುಕ್ರವಾರ ದಟ್ಟವಾಗಿ ಕೇಳಿಬಂತು. ಒಂದೊಮ್ಮೆ ಕರ್ನಾಟಕದಲ್ಲಿ ಮೋದಿಯವರು ಸ್ಪರ್ಧಿಸಲು ಮುಂದಾದರೆ ಅವರನ್ನು ಬೆಂಗಳೂರು ದಕ್ಷಿಣದಿಂದಲೇ ಕಣಕ್ಕಿಳಿಸಿದರೆ ರಾಜ್ಯದಲ್ಲಿ ಇನ್ನಷ್ಟು ಸ್ಥಾನ ಗೆಲ್ಲಬಹುದು ಎಂಬ ಕಾರಣ ನೀಡಲಾಗುತ್ತಿದೆ. ಇಷ್ಟಾದರೂ ಮೋದಿಯವರ ಸ್ಪರ್ಧೆ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಆ ಮಾಹಿತಿ ಸುಳ್ಳು ಎಂದು ಹೇಳಿದ್ದಾರೆ.
ಬಿಜೆಪಿಯ ಸಂಘಟನಾ ವ್ಯವಸ್ಥೆ ಹಾಗೂ ಚುನಾವಣಾ ತಯಾರಿ ಸಂಬಂಧಿಸಿದಂತೆ ಮೂರು ವಿಭಾಗಗಳಿವೆ. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಇತ್ಯಾದಿ ಹುದ್ದೆಯಲ್ಲಿರುವವರು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿರುವ ಕೆಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಾರೆ. ಇನ್ನು ಕೆಲವರಿಗೆ ಅವಕಾಶ ಇರುವುದಿಲ್ಲ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.
ಸಂಘ ಪರಿವಾರದ ರಾಮ್ ಮಾಧವ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನು ಸಂಘಟನಾ ಕಾರ್ಯದರ್ಶಿ ಹುದ್ದೆ. ಇದು ಪಕ್ಷದ ಸಂಘಟನೆಗೆ ಸೀಮಿತವಾಗಿದೆ. ಪಕ್ಷದೊಳಗೆ ಇದ್ದು, ತಳಮಟ್ಟದಿಂದ ಕಾರ್ಯಕರ್ತರಲ್ಲಿ ಸಂಘಟನೆ ಮತ್ತು ಪಕ್ಷದ ಬಲವರ್ಧನೆಗೆ ಕೆಲಸ ಮಾಡುವ ಮಹತ್ವದ ಜವಾಬ್ದಾರಿಯಾಗಿದೆ. ಈ ಸ್ಥಾನದಲ್ಲಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ವಿಮುಕ್ತರಾದ ನಂತರವಷ್ಟೇ ಸರ್ಕಾರದ ಭಾಗವಾಗಿ ಸೇವೆ ಸಲ್ಲಿಸಲು ಅವಕಾಶ ಇದೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ.
ಅಭ್ಯರ್ಥಿ ಘೋಷಣೆಯಾಗದಿರಲು ಸಂಭವನೀಯ ಕಾರಣ
* ಕಾದು ನೋಡುವ ತಂತ್ರ
* ಬಿ.ಎಲ್.ಸಂತೋಷ್, ಎಸ್.ಎಂ.ಕೃಷ್ಣ ಸ್ಪರ್ಧೆ ಸಾಧ್ಯತೆ?
* ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ವದಂತಿ
* ಸೂಕ್ತ ಸಮರ್ಥ ಅಭ್ಯರ್ಥಿ ಹುಡುಕಾಟ?
* ಎರಡನೇ ಪಟ್ಟಿ ತೇಜಸ್ವಿನಿ ಅನಂತಕುಮಾರ್ ಹೆಸರಿನ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.