ನಮಗೆ 22 ಸ್ಥಾನ ಖಚಿತ
Team Udayavani, Mar 24, 2019, 6:22 AM IST
ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಹಾಗೂ ರಾಜ್ಯ ಮೈತ್ರಿ ಸರಕಾರದ ವೈಫಲ್ಯಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿದ್ದು, ಹೊರಗಿನವರೊಂದಿಗೆ ಪಕ್ಷದ ಒಳಗಿನ ಕೆಲವರು ಗೊಂದಲ, ಭಿನ್ನಾಭಿಪ್ರಾಯ ಮೂಡಿಸಿದ್ದರು. ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಕೊಂಡು ಎಲ್ಲರೂ ಸಂಘಟಿತವಾಗಿ ಚುನಾವಣೆ ಎದುರಿಸಿ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ರಾಜ್ಯದಿಂದ ದೊಡ್ಡ ಕೊಡುಗೆ ನೀಡುತ್ತೇವೆ.
– ಇದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆತ್ಮವಿಶ್ವಾಸದ ಮಾತು. ತಾನು ಶಿಫಾರಸು ಮಾಡಿದಂತೆ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿರುವ ಅವರು ಕಳೆದ ಬಾರಿಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಚುನಾವಣೆ ಹೊಸ್ತಿ ಲಲ್ಲಿ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಸಾರ ಇದು.
– ವರಿಷ್ಠರಿಗೆ ನೀಡಿದ ಶಿಫಾರಸಿನಂತೆಯೇ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಯೇ?
ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾವು ನೀಡಿದ ಶಿಫಾರಸು, ಸಲಹೆಯಲ್ಲಿ ವ್ಯತ್ಯಾಸವಾಗಿಲ್ಲ. ನಾವು ನೀಡಿದ ಅಭಿಪ್ರಾಯದಂತೆ 21 ಅಭ್ಯರ್ಥಿಗಳ ಆಯ್ಕೆಯಾಗಿದೆ. ಗೆಲ್ಲುವ ಸಮರ್ಥ ಅಭ್ಯರ್ಥಿ ಗಳನ್ನೇ ಕಣಕ್ಕಿಳಿಸಲಾಗಿದೆ.
– ಕೆಲವು ಸಂಸದರ ಬಗ್ಗೆ ಅಪಸ್ವರವಿದ್ದರೂ ವರಿಷ್ಠರ ಬಳಿ ಸಮರ್ಥಿಸಿಕೊಂಡು ಟಿಕೆಟ್ ನೀಡಿದಂತಿದೆಯಲ್ಲ?
ಅಂಥ ಪ್ರಶ್ನೆಯೇ ಇಲ್ಲ. ವರಿಷ್ಠರು ಕೂಡ ತಮ್ಮದೇ ಆದ ಸಮೀಕ್ಷಾ ಮಾಹಿತಿಯನ್ನು ಪಡೆದಿ ದ್ದರು. ನಮ್ಮ ಶಿಫಾರಸಿನಲ್ಲಿ ಸಣ್ಣ ಪುಟ್ಟ ಕೊರತೆ, ವ್ಯತ್ಯಾಸವೂ ಕಾಣಲಿಲ್ಲ. ಸಾಮೂಹಿಕವಾಗಿ ಚರ್ಚಿಸಿ ಒಮ್ಮತದ ಅಭಿಪ್ರಾಯ ನೀಡಲಾಗಿತ್ತು. ಅದು ವರಿಷ್ಠರಿಗೂ ಮನವರಿಕೆಯಾದಂತಿದೆ. ಹಾಗಾಗಿ ಪ್ರಧಾನಿ ಮೋದಿ, ಅಮಿತ್ ಶಾ ಅವರು ಅಂತಿಮಗೊಳಿಸಿದ್ದಾರೆ.
– ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿದೆ. ಹಾಗಾದರೆ ಸಂಸದರ ಕಾರ್ಯ ವೈಖರಿಗೆ ಅಪಸ್ವರ ವ್ಯಕ್ತಪಡಿಸಿದವರು ಯಾರು?
ರಾಜ್ಯದ ಬಹುತೇಕ ಸಂಸದರಿಗೆ ಮತ್ತೆ ಸ್ಪರ್ಧಿ ಸಲು ವರಿಷ್ಠರು ಅವಕಾಶ ನೀಡಿದ್ದಾರೆ. ಹಾಲಿ ಸಂಸದರೆಲ್ಲ ಉತ್ತಮವಾಗಿ ಕಾರ್ಯ ನಿರ್ವಹಿಸಿ ದ್ದಾರೆ ಎಂಬುದು ವರಿಷ್ಠರಿಗೆ ಮನವರಿಕೆಯಾಗಿದೆ ಎಂದರ್ಥ. ವರಿಷ್ಠರು ವೈಯಕ್ತಿಕ ಅಭಿಪ್ರಾಯವನ್ನು ಪಡೆಯುವುದಿಲ್ಲ. ಅವರ ಬಳಿ ಸಮೀಕ್ಷಾ ವರದಿಗಳಿದ್ದು, ಪರಿಶೀಲಿಸಿದ್ದಾರೆ.
ಕೆಲವರು ನಮ್ಮಲ್ಲಿ ಭಿನ್ನಾಭಿಪ್ರಾಯ, ಗೊಂದಲ ಸೃಷ್ಟಿಸಲು ಯತ್ನಿಸಿ ದ್ದರು. ಇದರಲ್ಲಿ ಹೊರಗಿನವರ ಜತೆಗೆ ಒಳಗಿನವರೂ ಇದ್ದಾರೆ. ಇಂಥದ್ದೆಲ್ಲ ಇದ್ದೇ ಇರುತ್ತದೆ.
- ಮೋದಿ ಸರಕಾರದ ಸಾಧನೆ, ಮೈತ್ರಿ ಸರಕಾರದ ಕಚ್ಚಾಟದಿಂದ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದಾದರೆ ಅಭ್ಯರ್ಥಿಗಳು ನಗಣ್ಯರೇ?
ಹಾಗಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ 5 ವರ್ಷಗಳ ಅಭಿವೃದ್ಧಿ, ಸಾಧನೆ, ರಾಜ್ಯ ಮೈತ್ರಿ ಸರಕಾರದ ವೈಫಲ್ಯ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರಕಾರದ ಕೊಡುಗೆಗಳು ರಾಜ್ಯದಲ್ಲಿ 22 ಸ್ಥಾನ ಗೆಲ್ಲಲು ಉಪಯುಕ್ತವಾಗಲಿವೆ. ಹಾಲಿ ಸಂಸದರ ಕಾರ್ಯ ನಿರ್ವಹಣೆಯೂ ನೆರವಾಗಲಿದೆ.
- ಕಾಂಗ್ರೆಸ್ ಮುಖಂಡರ ಪಕ್ಷ ಸೇರ್ಪಡೆ ಮುಂದುವರಿಯುವುದೇ?
ತುಮಕೂರು ಸಹಿತ ಹಲವೆಡೆ ಕಾಂಗ್ರೆಸ್ ನಾಯಕರು ಪಕ್ಷ ಸೇರ್ಪಡೆಗೆ ಆಸಕ್ತಿ ತೋರು ತ್ತಿದ್ದಾರೆ. ಹಲವರು ನಿರಂತರ ಸಂಪರ್ಕದಲ್ಲಿದ್ದಾರೆ. ಒಬ್ಬರ ಅನಂತರ ಮತ್ತೂಬ್ಬರಂತೆ ಆಸಕ್ತರು ಹಂತಹಂತವಾಗಿ ಸೇರ್ಪಡೆಯಾಗಲಿದ್ದಾರೆ.
– ರಾಜ್ಯ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯಿದೆ, ಸಮನ್ವಯವಿಲ್ಲ ಎಂಬ ಮಾತಿದೆಯಲ್ಲ?
ಒಗ್ಗಟ್ಟಾಗಿ ತಂಡದಂತೆ ಕಾರ್ಯ ನಿರ್ವಹಿಸುತ್ತಿ ದ್ದೇವೆ. ಒಟ್ಟಾಗಿ ಚರ್ಚಿಸಿ ಒಮ್ಮತದ ಅಭಿಪ್ರಾಯ ನೀಡಿದ್ದೇವೆ. ದಿಲ್ಲಿಗೂ ಒಗ್ಗೂಡಿ ತೆರಳಿ ಚರ್ಚಿಸಿ ದ್ದೇವೆ. ಗೊಂದಲವಿಲ್ಲದಂತೆ ಸಂಘಟಿತವಾಗಿ ಹೋಗುತ್ತಿದ್ದೇವೆ. ಕೆಲವು ನಾಯಕರು, ಮುಖಂಡರ ನಡುವೆ ಸಣ್ಣ ಪುಟ್ಟ ವ್ಯತ್ಯಾಸಗಳಿರ ಬಹುದು, ಇಲ್ಲ ಎನ್ನುವುದಿಲ್ಲ. ಎಲ್ಲರನೂನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ, ಪ್ರವಾಸ ಕೈಗೊಳ್ಳಲಾಗುವುದು.
– ರಾಜ್ಯದಲ್ಲಿ ಪ್ರಧಾನಿ ಮೋದಿಯವರು ಎಷ್ಟು ರ್ಯಾಲಿ ನಡೆಸಲಿದ್ದಾರೆ?
ರಾಜ್ಯದಲ್ಲಿ ಪ್ರಧಾನಿ ಮೋದಿಯವರ ನಾಲ್ಕು ಚುನಾವಣಾ ರ್ಯಾಲಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ ಎರಡು ರ್ಯಾಲಿಗಳಲ್ಲಿ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ಆದ್ಯತೆಯ ರಾಜ್ಯವಾಗಿರುವುದರಿಂದ ಹೆಚ್ಚು ರ್ಯಾಲಿ ನಡೆಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿದರೆಂಬ ಕಾರಣಕ್ಕೆ ಕ್ಷೇತ್ರದಲ್ಲೇ ಹೆಚ್ಚು ದಿನ ಕಳೆಯುವುದಿಲ್ಲ. ದೇಶಾದ್ಯಂತ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲೂ ಪ್ರಚಾರ ನಡೆಸಲಿದ್ದಾರೆ. ಎರಡು ದಿನಗಳಲ್ಲಿ ನಾನೂ ಪ್ರವಾಸ ಆರಂಭಿಸುತ್ತೇನೆ.
– ಬಿಜೆಪಿ ಸ್ಥಿತಿಗತಿ ಬಗ್ಗೆ ಏನು ಹೇಳುವಿರಿ?
ದೇಶಾದ್ಯಂತ ಬಿಜೆಪಿಗೆ ಪೂರಕ ವಾತಾವರಣವಿದ್ದು, ಸ್ವಂತ ಬಲದ ಮೇಲೆ 300ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲೂ 22 ಸ್ಥಾನ ಗೆಲ್ಲಲಿದ್ದೇವೆ.
– ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳ ಬಗ್ಗೆ ಏನು ಹೇಳುವಿರಿ?
ನನ್ನ ಪ್ರಕಾರ ಅವರು ಈ ಬಾರಿ ಅಮೇಥಿಯಲ್ಲಿ ಸೋಲಲಿದ್ದಾರೆ. ಅವರು ಗೆಲುವು ಸಾಧಿಸುವುದು ಸುಲಭವಾಗಿಲ್ಲ, ಹೀಗಾಗಿ ಕರ್ನಾಟಕದಿಂದ ಸ್ಪರ್ಧಿಸಲು ಚಿಂತಿಸಿರಬಹುದೇನೋ. ಆದರೆ ಇಲ್ಲಿಯೂ ಅವರಿಗೆ ಸುರಕ್ಷಿತ ಕ್ಷೇತ್ರಗಳಿಲ್ಲ. ಹಾಗಾಗಿ ಅವರು ಕರ್ನಾಟಕದಿಂದ ಸ್ಪರ್ಧಿಸುವ ನಿರ್ಧಾರ ಮಾಡಿ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂದು ನನಗನಿಸುವುದಿಲ್ಲ.
– ಉತ್ತರ ಹಾಗೂ ಕರಾವಳಿ ಕರ್ನಾಟಕಕ್ಕೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆಯೊಡ್ಡುವುದಿಲ್ಲ ಎಂಬ ಮಾತಿದೆಯೆಲ್ಲ?
ಹಾಗೇನೂ ಇಲ್ಲ. ಮೈಸೂರು- ಕೊಡಗು ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧಿಸಿದರೂ ಪ್ರಬಲ ಸ್ಪರ್ಧೆಯೊಡ್ಡಲಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೂ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು. ಹಾಗಾಗಿ ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಉತ್ತಮ ಸಾಧನೆ ತೋರುವ ವಿಶ್ವಾಸವಿದೆ. ಕಾಂಗ್ರೆಸ್- ಜೆಡಿಎಸ್ ನಾಯಕರ ಕಚ್ಚಾಟದಿಂದ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನಗಳಲ್ಲಿ ಹೆಚ್ಚು ಅನುಕೂಲವಾಗುವ ನಿರೀಕ್ಷೆ ಇದೆ.
– ಮಂಡ್ಯಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿನ ಗೊಂದಲವೇನು?
ಗೊಂದಲವೇನೂ ಇಲ್ಲ. ಮಂಡ್ಯದಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲಿಗೆ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದು ಸೂಕ್ತ ಎಂಬ ಅಭಿಪ್ರಾಯವಿದೆ. ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಮಾತೂ ಇದೆ. ಸುಮಲತಾ ಅವರೇ ಗೆಲ್ಲುವ ಅಭ್ಯರ್ಥಿ ಎಂದು ಜಿಲ್ಲಾ ಘಟಕ ಕೂಡ ಅಭಿಪ್ರಾಯಪಟ್ಟಿದೆ. ಅದರಂತೆ ಮಂಡ್ಯದಲ್ಲಿ ಸುಮಲತಾ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ.
- ಕಾಂಗ್ರೆಸ್‌ನಿಂದ ಬಂದವರನ್ನೇ ಅಭ್ಯರ್ಥಿ ಮಾಡಲಾಗಿದೆ. ಇದು ವಲಸಿಗ ರಿಗೆ ಆದ್ಯತೆ ನೀಡಿದಂತಲ್ಲವೇ?
ಕಾಂಗ್ರೆಸ್‌ನಿಂದ ಬಂದವರಿಗೆ ಎಲ್ಲ ಕಡೆ ನಾವೆಲ್ಲಿ ಅವಕಾಶ ನೀಡಿದ್ದೇವೆ? ಕೇವಲ ಕಲಬುರಗಿ, ಹಾಸನದಲ್ಲಿ ಟಿಕೆಟ್ ನೀಡಲಾಗಿದೆ. ಬಳ್ಳಾರಿ ಅಭ್ಯರ್ಥಿ ದೇವೇಂದ್ರಪ್ಪ ಈ ಹಿಂದೆಯೇ ಪಕ್ಷ ಸೇರಿದ್ದರು. ಬಿಜೆಪಿ ಅಭ್ಯರ್ಥಿಗಳಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ನಿಂದ ಬಂದವರಿಗೆ ಟಿಕೆಟ್ ನೀಡಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ವ್ಯಕ್ತಿಗಳನ್ನು ಕಣಕ್ಕಿಳಿಸಲಾಗಿದೆ.
- ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.