ಗುಟ್ಟು ಬಿಟ್ಟುಕೊಡದ ದೇವೇಗೌಡರು
Team Udayavani, Mar 21, 2019, 1:41 AM IST
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಂತಿಮವಾಗಿ ತಮ್ಮ ಸ್ಪರ್ಧೆಗೆ ತುಮಕೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಬುಧವಾರವೂ ಪದ್ಮನಾಭನಗರ ನಿವಾಸದಲ್ಲಿ ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಮುಖಂಡರೊಂದಿಗೆ ದೇವೇಗೌಡರು ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದರು. ಬೆಂಗಳೂರು ಉತ್ತರಕ್ಕಿಂತ ತುಮಕೂರು ಕ್ಷೇತ್ರ ಸುರಕ್ಷಿತ ಎಂದು ಅಂತಿಮವಾಗಿ ತುಮಕೂರಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಗುರುವಾರ ಆ ಕುರಿತು ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಸಚಿವ ಜಮೀರ್ ಅಹಮದ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನೇತೃತ್ವದ ನಿಯೋಗ ದೇವೇಗೌಡರನ್ನು ಭೇಟಿ ಮಾಡಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿತು. ಆದರೆ, ಗುಟ್ಟು ಬಿಟ್ಟುಕೊಡದ ದೇವೇಗೌಡರು, ಎರಡೂ ಕ್ಷೇತ್ರಗಳಿಂದಲೂ ಒತ್ತಡ ಇದೆ. ಸಿದ್ದರಾಮಯ್ಯ , ಪರಮೇಶ್ವರ್ ಜತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು ಎಂದು ತಿಳಿದು ಬಂದಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಬುಧವಾರ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು