ಸಿಎಂ ಸೇರಿ ಯಾರಿಗೂ ಬೇಡದ ಅಭಿವೃದ್ಧಿ
Team Udayavani, Apr 12, 2019, 3:03 PM IST
ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜಿಲ್ಲೆಯ ಮೂಲ ಸಮಸ್ಯೆಗಳು ಪ್ರಧಾನವಾಗಿ ಚರ್ಚೆಗೆ ಬಾರದೆ ಅಧಿಕಾರ, ಪ್ರತಿಷ್ಠೆ, ಜಾತಿ, ವೈಯಕ್ತಿಕ ಟೀಕೆಗಳು ಹೆಚ್ಚಿನ ಮಹತ್ವ ಪಡೆದುಕೊಂಡು ಮುನ್ನೆಲೆಗೆ ಬಂದದ್ದು
ವಿಶೇಷ. ಜಿಲ್ಲೆಯ ಅಭಿವೃದ್ಧಿ ಕುರಿತ ಸ್ಪಷ್ಟ ಚಿತ್ರಣ, ಸಮಸ್ಯೆಗಳಿಗೆ ಪರಿಹಾರದ
ಮಾರ್ಗೋಪಾಯಗಳನ್ನು ಜನರ ಮುಂದಿಟ್ಟು ಮತ ಕೇಳುವ ಪ್ರಯತ್ನಕ್ಕೆ ಚುನಾವಣಾ ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿಗಳೂ ಮುಂದಾಗದಿರುವುದು ದುರಂತ.
ಮಂಡ್ಯ ಚುನಾವಣಾ ಕಣದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ಕೆ.ನಿಖೀಲ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದೆ. ಉಳಿದ ಅಭ್ಯರ್ಥಿಗಳು ಕಣದಲ್ಲಿದ್ದರೂ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.
ಮಾತಿನ ಅಬ್ಬರ: ಚುನಾವಣೆಯ ಆರಂಭದಿಂದಲೂ ದೇವೇಗೌಡರ ಕುಟುಂಬದ ಮೇಲಿನ ಅಭಿಮಾನ ಹಾಗೂ ಸ್ಥಳೀಯ ಸ್ವಾಭಿಮಾನ ವಿಚಾರಗಳಿಗೇ ಹೆಚ್ಚಿನ ಮನ್ನಣೆ ಸಿಕ್ಕಿತು. ಅದರ ಬೆನ್ನಹಿಂದೆಯೇ ಜಾತಿ
ಸೋಂಕು ಪ್ರಚಾರಕ್ಕೆ ಅಂಟಿಕೊಂಡಿತು. ಆನಂತರ ವೈಯಕ್ತಿಕ ದಾಳಿ, ಪ್ರತಿಷ್ಠೆಯ ದೊಡ್ಡ ಕದನವೇ ನಡೆಯಿತು. ಪ್ರಚಾರ ಸಮಯದಲ್ಲಿ ಈ ವಿಚಾರಗಳಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಅಭಿವೃದ್ಧಿ ವಿಚಾರಗಳಿಗೆ ಸಿಗಲೇ ಇಲ್ಲ. ಉಭಯ ಗುಂಪಿನ ಪ್ರತಿನಿಧಿಗಳ ಮಾತಿನ ಅಬ್ಬರದೊಳಗೆ ಅಭಿವೃದ್ಧಿ ವಿಚಾರಗಳು ಸಂಪೂರ್ಣವಾಗಿ ಕಳೆದುಹೋದವು.
ಪ್ರಗತಿಯ ಚಿತ್ರಣ ಕಟ್ಟಿಕೊಡಲಿಲ್ಲ: ಜೆಡಿಎಸ್ ಅಭ್ಯರ್ಥಿ ಕೆ.ನಿಖೀಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರತಿಷ್ಠೆಯ ಕದನದ ನಡುವೆ ಚುನಾವಣಾ
ಕಣದಲ್ಲಿರುವ ಇತರೆ ಅಭ್ಯರ್ಥಿಗಳೂ ಸಹ ಅಭಿವೃದ್ಧಿಯ ಕನಸುಗಳನ್ನು ಜನರಿಗೆ ಕಟ್ಟಿಕೊಡುವ ಪ್ರಯತ್ನ ನಡೆಸಲೇ ಇಲ್ಲ. ಅಧಿಕಾರದಲ್ಲಿರುವ ಜೆಡಿಎಸ್ ಕೂಡ ಅಭಿವೃದ್ಧಿಗೆ 8500 ಕೋಟಿ ರೂ. ಅನುದಾನ ನೀಡಿರುವ ಅಂಕಿಗಳನ್ನಷ್ಟೇ ಜನರ ಮುಂದಿಟ್ಟಿತು. ಆ ಅನುದಾನದ ಕಾರ್ಯಕ್ರಮಗಳು ಘೋಷಣೆಗಳಿಗಷ್ಟೇ ಸೀಮಿತವಾಗಿರುವಂತೆ ಕಂಡುಬಂದವೇ ವಿನಃ ಆ ಅನುದಾನದ ಹಿಂದಿರುವ ಚಿತ್ರಣವನ್ನು ಜನರ ಕಣ್ಣಿಗೆ ಕಟ್ಟಿಕೊಡುವ ಪ್ರಯತ್ನದಲ್ಲಿ ಸಿಎಂ ಕುಮಾರಸ್ವಾಮಿ ಆದಿಯಾಗಿ ಶಾಸಕರೂ ವಿಫಲರಾದರು.
ಟೀಕೆಗಳಿಗೇ ಆದ್ಯತೆ: ಜೆಡಿಎಸ್‌ನವರು ಸುಮಲತಾ ಜಾತಿ ವಿಷಯವನ್ನು ಕೆದಕಿದರೆ, ಅದಕ್ಕೆ ಪ್ರತಿಯಾಗಿ ಅಂಬರೀಶ್ ಅಭಿಮಾನಿಗಳು ಕುಮಾರಸ್ವಾಮಿ ಪತ್ನಿಯ ಕುಟುಂಬದ ಮೂಲವನ್ನು ಬಿಚ್ಚಿಟ್ಟರು. ಪ್ರಚಾರಕ್ಕೆ ಆಗಮಿಸಿದ ಯಶ್-ದರ್ಶನ್ ವಿರುದ್ಧ ಟೀಕಾ ಪ್ರಹಾರ, ಅದಕ್ಕೆ ತಿರುಗೇಟುಗಳು, ಅಭ್ಯರ್ಥಿ ನಿಖೀಲ್ ಬಗ್ಗೆ ಅಸಂಬದ್ಧ ಜೋಕ್‌ಗಳು, ಕುಟುಂಬ ರಾಜಕಾರಣ ವಿರುದ್ಧದ ಆಕ್ರೋಶ, ಮಹಿಳಾ ಅಭ್ಯರ್ಥಿಗೆ ಅಗೌರವ ತರುವಂತಹ ಮಾತುಗಳು, ಅಂಬರೀಶ್ ವಿರುದ್ಧ ನಡೆದ ವಾಗ್ಧಾಳಿ, ವೈಯಕ್ತಿಕ ತೇಜೋವಧೆ ಇಂತಹ ಅನೀತಿ, ಕೀಳುಮಟ್ಟದ ಹೇಳಿಕೆಗಳ ಕೆಸರೆರಚಾಟಗಳಿಂದ ಕೆಟ್ಟ ರಾಜಕಾರಣ
ಜಿಲ್ಲೆಯೊಳಗೆ ತಾಂಡವವಾಡಿತು. ಈ ಕಲುಷಿತ ರಾಜಕಾರಣದ ಕೆಸರಿನೊಳಗೆ ಅಭಿವೃದ್ಧಿ ವಿಚಾರಗಳ ಚರ್ಚೆಗೆ ಆಸ್ಪದವೇ ಸಿಗದೆ ಅಡಗಿಹೋದವು.
ಜನರೂ ಕೇಳಲಿಲ್ಲ: ಚುನಾವಣಾ ಸಮಯದಲ್ಲಿ ಅಭಿವೃದ್ಧಿ ವಿಚಾರವನ್ನು ಪ್ರಮುಖ ಮಾನದಂಡವನ್ನಾಗಿ ಬಳಸುವುದಕ್ಕೂ ಸ್ಥಳೀಯ ಜನರು ಮುಂದಾಗುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಹೇಗಿರಬೇಕಿತ್ತು, ಏನಾಗಿದೆ, ಅವಶ್ಯಕವಾಗಿ ಆಗಬೇಕಾಗಿದ್ದೇನು ಎಂಬ ವಿಷಯವಾಗಿ ಯಾರೂ ಸಹ ಅಭ್ಯರ್ಥಿಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಜಿಲ್ಲೆಯ ಪ್ರಗತಿಯನ್ನು
ಗುರಿಯಾಗಿಸಿಕೊಂಡು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಪ್ರಜ್ಞಾವಂತಿಕೆ ಜನರಿಗೆ ಇನ್ನೂ ಬಾರದಿರುವುದು ಅಸಂಬದ್ಧ ವಿಚಾರಗಳು ಹೆಚ್ಚುಮಹತ್ವ ಪಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ.
ಸಮಸ್ಯೆಗಳಿಗೆ ಸಿಗದ ಪರಿಹಾರ: ಜಿಲ್ಲೆಯಲ್ಲಿ ಪರ್ಯಾಯ ಕೃಷಿ, ಉದ್ಯೋಗ ಸೃಷ್ಟಿ, ಸಮಗ್ರ ನೀರಾವರಿ, ಕಬ್ಬಿನ ಬಾಕಿ ಸಮಸ್ಯೆ, ಮಾರುಕಟ್ಟೆ ಸೇರಿದಂತೆ ಜಿಲ್ಲೆಯ ಮೂಲ ಸಮಸ್ಯೆಗಳು ಚುನಾವಣಾ ಸಮಯದಲ್ಲಿ ಹೆಚ್ಚು ಚರ್ಚೆಯಾಗಬೇಕಿತ್ತು. ಈ ವಿಷಯಗಳಲ್ಲಿ ಅಭ್ಯರ್ಥಿಗಳಿಗೆ ಇರುವ ಪರಿಕಲ್ಪನೆ, ನಿಲುವು, ಆಲೋಚನೆಗಳು ಹೊರಬರುವುದಕ್ಕೆ ಸಾಧ್ಯವಾಗುತ್ತಿತ್ತು. ಅಭಿವೃದ್ಧಿ ಪ್ರಧಾನ ವಿಷಯಗಳು ಪ್ರಚಾರದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದ್ದರೆ ಅಭ್ಯರ್ಥಿಗಳು ಎಚ್ಚೆತ್ತುಕೊಳ್ಳಲು, ಚುನಾವಣೆ ಬಳಿಕ ಗೆದ್ದವರು ಅಭಿವೃದ್ಧಿಗೆ ಪೂರಕವಾದ ಕಾರ್ಯ ಕ್ರಮಗಳನ್ನು ರೂಪಿಸುವುದಕ್ಕೆ ನೆರವಾಗುತ್ತಿತ್ತು. ಆಗ ಪ್ರಗತಿಯ ವೇಗಕ್ಕೆ ಚುರುಕು ದೊರೆಯಲು ಸಾಧ್ಯವಾಗುತ್ತಿತ್ತು. ಚುನಾವಣೆಗೂ ಮುನ್ನವೇ ವೈಯಕ್ತಿಕ ದ್ವೇಷದ ಕಿಡಿ ಹೊತ್ತಿಕೊಂಡು ಅಭಿಮಾನ ಸ್ವಾಭಿಮಾನದ ಸೆಣಸಾಟದೊಂದಿಗೆ ಅಖಾಡ ಪ್ರವೇಶಿಸಿದ ಭ್ಯರ್ಥಿಗಳು ಚುನಾವಣೆಯ ಅಂತಿಮ ಕ್ಷಣದವರೆಗೂ ಅಭಿವೃದ್ಧಿಯ ವಿಚಾರವಾಗಿ ಸೊಲ್ಲೆತ್ತದೆ ದೂರವೇ ಉಳಿದರು. ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಮಯದಲ್ಲೂ ಪ್ರಗತಿಯ ಚಿಂತನೆಗಳು ಮೂಡದೆ ಬದಲಾವಣೆಯ ಹೊಸ ಗಾಳಿ ಬೀಸುವುದಕ್ಕೂ ಅವಕಾಶ ದೊರೆಯಲೇ ಇಲ್ಲ.
ಕನಸಾಯ್ತು ಸಮಗ್ರ ನೀರಾವರಿ: ಕಳೆದ ಎಂಬತ್ತು ವರ್ಷದಿಂದ ಕೃಷ್ಣರಾಜಸಾಗರ ಅಣೆಕಟ್ಟು ಜಿಲ್ಲೆಯಲ್ಲಿದೆ. ಇಲ್ಲಿಂದ ನೂರಾರು ಟಿಎಂಸಿ ನೀರನ್ನು ತಮಿಳುನಾಡಿನವರೆಗೂ ಹೊತ್ತೂಯ್ಯಲಗುತ್ತದೆ. ಜಿಲ್ಲೆಯ ಮಡಿಲಿನಲ್ಲೇ ಅಣೆಕಟ್ಟು ಇದ್ದರೂ ಸಮಗ್ರ ನೀರಾವರಿಯ ಕನಸು ಮಾತ್ರ ಇಂದಿಗೂ ನನಸಾಗಿಲ್ಲ. ಕೆರೆ-ಕಟ್ಟೆಗಳು ಪುನಶ್ಚೇತನ ಕಂಡಿಲ್ಲ. ಅವುಗಳಿಗೆ
ನಾಲೆಯ ಮೂಲಕ ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ತುಂಬಿಸುವ ವ್ಯವಸ್ಥೆಯೂ ಆಗಿಲ್ಲ. ಇಂತಹ ವಿಚಾರಗಳ ಬಗ್ಗೆ ಚಿಂತನೆ, ಚರ್ಚೆಗಳು ನಡೆದಿದ್ದರೆ ಆಗ ಚುನಾವಣೆಗೊಂದು ಹೊಸ ಅರ್ಥ ದೊರಕುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.