“ಕೈ’ಗೆ ಕಾಡುತ್ತಿದೆ ಇವಿಎಂ ಭೂತ
Team Udayavani, Mar 9, 2019, 2:05 AM IST
ಬೆಂಗಳೂರು: ಕಳೆದ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಇವಿಎಂ ಟ್ಯಾಂಪರಿಂಗ್ ಆರೋಪ ಕಾಂಗ್ರೆಸ್‌ಗೆ ಈಗಲೂ ಕಾಡುತ್ತಿದೆ. ಹಾಗಾಗಿ, ಇವಿಎಂ ಬಳಕೆ, ದುರ್ಬಳಕೆ ಸಾಧ್ಯತೆ ಹಾಗೂ ವಿವಿಪ್ಯಾಟ್ ಬಳಕೆ ಮಾಡುವ ಬಗ್ಗೆ ಪಕ್ಷದ ಬೂತ್‌ಮಟ್ಟದ ಕಾರ್ಯಕರ್ತರು, ಬ್ಲಾಕ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರಿಗೆ ತರಬೇತಿ ನೀಡಲು ಪಕ್ಷ ಆರಂಭಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಜಯಗಳಿಸಿದ್ದು ಕಾಂಗ್ರೆಸ್‌ಗೆ ಇವಿಎಂ ದುರ್ಬಳಕೆಯ ಬಗ್ಗೆ ಅನುಮಾನ ಹೆಚ್ಚಾಗಲು ಕಾರಣವಾಗಿತ್ತು. ಕೇಂದ್ರ ಚುನಾವಣಾ ಆಯೋಗದವರು ಇವಿಎಂ ಟ್ಯಾಂಪರಿಂಗ್ ಮಾಡಲು ಸಾಧ್ಯವಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಕಾಂಗ್ರೆಸ್‌ನವರಿಗೆ ಇವಿಎಂ ದುರ್ಬಳಕೆಯ ಭಯ ಈಗಲೂ ಕಾಡುತ್ತಿದೆ. ಅದೇ ಕಾರಣಕ್ಕೆ ಈ ಬಾರಿ ಚುನಾವಣೆಗೂ ಮೊದಲೇ ಇವಿಎಂ ಬಳಕೆ, ವಿವಿಪ್ಯಾಟ್ ಹೇಗೆ ಕೆಲಸ ಮಾಡುತ್ತದೆ, ಬೂತ್ ಮ್ಯಾನೇಜ್ ಮೆಂಟ್ ಹೇಗೆ ಮಾಡುವುದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದು, ಜೀವಂತ ಇದ್ದರೂ ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್ ಆಗಿದ್ದರೆ ಅಂತವರನ್ನು ಪತ್ತೆ ಹಚ್ಚಿ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಕೆಲಸವನ್ನು ಪಕ್ಷ ಗಂಭೀರವಾಗಿ ಮಾಡುತ್ತಿದೆ.ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ರಿಂದ 400 ಜನ ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಬ್ಲಾಕ್ ಹಂತದ ಕಾರ್ಯಕರ್ತರಿಗೆ ಇವಿಎಂಗಳನ್ನು ಹೇಗೆ ದುರ್ಬಳಕೆ ಮಾಡುತ್ತಾರೆ. ಅದನ್ನು ಕಂಡು ಹಿಡಿಯುವುದು ಹೇಗೆ? ವಿವಿಪ್ಯಾಟ್‌ಗಳ ಬಳಕೆ ಮಾಡುವುದು ಹೇಗೆ ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪಕ್ಷದ ಬೂತ್ ಮಟ್ಟದ ಏಜೆಂಟ್‌ರುಗಳಿಗೆ ಈ ಬಗ್ಗೆ ತಜ್ಞರಿಂದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.
ಜನ ಸಂಪರ್ಕಕ್ಕೆ ಆಮೆ ವೇಗ: ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಯುಪಿಎ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಳೆದ ಅಕ್ಟೋಬರ್‌ನಲ್ಲಿ ಜನಸಂಪರ್ಕ ಅಭಿಯಾನ ಆರಂಭಿಸ ಲಾಗಿದೆ. ಆದರೆ, ಈ ಅಭಿಯಾನಕ್ಕೆ ಪಕ್ಷದ ತಳ ಹಂತದ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವು ದರಿಂದ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆ ಹತ್ತಿರ ಇದ್ದರೂ, ಮತದಾರರನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಪ್ರಚಾರಕ್ಕೆ ಹಿಂದೇಟಾದ ಹೊಂದಾಣಿಕೆ ಗೊಂದಲ
ಮೈತ್ರಿ ಪಕ್ಷಗಳು ಜಂಟಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದರಿಂದ, ಎರಡೂಪಕ್ಷಗಳ ನಡುವೆ ಇನ್ನೂ ಸೀಟು ಹಂಚಿಕೆ ಆಗದಿರುವುದರಿಂದ, ಯಾವ ಕ್ಷೇತ್ರ ಜೆಡಿಎಸ್‌ಗೆ ಹೋಗುತ್ತದೆಯೋ ಎಂಬ ಗೊಂದಲಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ. ಹೀಗಾಗಿ, ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ವಿರುದ್ಧವೇ ಪೈಪೋಟಿ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಕ್ಷೇತ್ರ ಕಾಂಗ್ರೆಸ್‌ಗೆ ಉಳಿಯುವುದೋ, ಇಲ್ಲವೋ ಎಂಬ ಗೊಂದಲದಲ್ಲಿದ್ದು, ಸಕ್ರೀಯವಾಗಿ ಮತದಾರರನ್ನು ತಲುಪುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.