ಗಂಗೋತ್ರಿಯಲ್ಲಿ ಮೊದಲ ಮತದಾನ, ಸವಾಲೆಸೆಯುತ್ತಿದೆ ಹಿಮಪಾತ
Team Udayavani, Apr 3, 2019, 6:30 AM IST
ಚಾರ್‌ಧಾಮ್‌ಗಳಲ್ಲಿ ಒಂದಾಗಿರುವ ಗಂಗೋತ್ರಿಯಲ್ಲಿ ಮೊದಲ ಬಾರಿಗೆ ಮತಗಟ್ಟೆ ಸ್ಥಾಪನೆಯಾಗಲಿದೆ. ತನ್ಮೂಲಕ ದೇಶದಲ್ಲಿ ಅತಿ ಎತ್ತರದಲ್ಲಿರುವ ಮತಗಟ್ಟೆಗಳಲ್ಲಿ ಒಂದೆಂಬ ಗರಿಮೆ ಅದಕ್ಕೆ ದಕ್ಕಿದೆ. ಅಲ್ಲೀಗ ಸಾಧುಸಂತರು ಸೇರಿದಂತೆ ಒಟ್ಟು 144 ಜನ ಮತದಾನ ಮಾಡಲಿದ್ದಾರೆ. ಗಂಗೋತ್ರಿಯಲ್ಲಿ ದಿನದಿನಕ್ಕೆ ಬದಲಾಗುವ ಹವಾಮಾನವು ಏಪ್ರಿಲ್ 11ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಯಾವ ರೀತಿಯ ಸವಾಲೊಡ್ಡಲಿದೆಯೋ ಎನ್ನುವ ಕಳವಳವಂತೂ ಚುನಾವಣಾ ಆಯೋಗಕ್ಕೆ ಆರಂಭವಾಗಿದೆ.
ಬಿಡದೆ ಸುರಿಯುತ್ತಿದೆ ಹಿಮ: ಸಮುದ್ರ ಮಟ್ಟದಿಂದ 3415 ಕಿಲೋಮೀಟರ್ ಎತ್ತರದಲ್ಲಿರುವ ಗಂಗೋತ್ರಿ ಧಾಮದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಹಿಮ ಶೇಖರಣೆಯಾಗಿದೆ. ನಿತ್ಯವೂ ಹಿಮ ಸುರಿಯುತ್ತಿದ್ದು ಗಂಗೋತ್ರಿಗೆ ತೆರಳುವ ರಸ್ತೆಗಳೆಲ್ಲ ಮುಚ್ಚಿವೆ. ಗಂಗೋತ್ರಿ ಧಾಮದಲ್ಲಿರುವ ನೀರಾವರಿ ಇಲಾಖೆಯ ಅತಿಥಿ ಗೃಹವೇ ಮತದಾನ ಕೇಂದ್ರವಾಗಲಿದ್ದು, ಕಳೆದ ಬಾರಿ ಸಾಧುಸಂತರೂ ಸೇರಿದಂತೆ ಗಂಗೋತ್ರಿ ಧಾಮದ ನಿವಾಸಿಗಳೆಲ್ಲ ಮತ ನೀಡುವುದಕ್ಕಾಗಿ ಮೂವತ್ತು ಕಿಲೋಮೀಟರ್ ದೂರದ ಮತಗಟ್ಟೆಗಳಿಗೆ ಹೋಗಬೇಕಿತ್ತು.
ವಿದ್ಯುತ್, ಕುಡಿಯುವ ನೀರಿನ ಕೊರತೆ : ಗಂಗೋತ್ರಿಯಲ್ಲಿ ಮಂದಿರಕ್ಕೆ ಬಾಗಿಲು ಹಾಕಿದ ನಂತರದಿಂದ ವಿದ್ಯುತ್, ಕುಡಿಯುವ ನೀರಿನಂಥ ಮೂಲಸೌಕರ್ಯಗಳ ಅಭಾವ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಚುನಾವಣಾ ಅಧಿಕಾರಿಗಳಿಗೆ ಈ ಸ್ಥಳಕ್ಕೆ ತಲುಪಿ ಮತದಾನ ಮಾಡಿಸುವುದು ಸವಾಲುಭರಿತ ಕೆಲಸವಾಗಲಿದೆ.
ಸವಾಲುಗಳನ್ನು ಎದುರಿಸಲು ಚುನಾವಣಾಧಿಕಾರಿಗಳೂ ಭರದ ಸಿದ್ಧತೆ ನಡೆಸಿದ್ದಾರೆ. ಗಂಗೋತ್ರಿ ಹೆದ್ದಾರಿಯಲ್ಲಿ ಸಂಚಾರವನ್ನು ಸುಗಮವಾಗಿರಿಸಲು ಬಿಆರ್‌ಒ ಕೆಲಸಗಾರರನ್ನು ನಿಯೋಜಿಸಲಾಗಿದೆ. ಅಲ್ಲದೇ ವಿದ್ಯುತ್, ದೂರಸಂಚಾರ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಆಪತ್ಕಾಲೀನ ಸ್ಥಿತಿಯನ್ನು ಎದುರಿಸಲು ಮತಗಟ್ಟೆ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್, ಸೋಲಾರ್ ಲ್ಯಾಂಪ್‌ಗ್ಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.