ಮೊದಲ ಕಣದಲ್ಲಿ ಕಲಿಗಳ ಜಿದ್ದಾಜಿದ್ದಿ
Team Udayavani, Mar 27, 2019, 8:21 AM IST
ಏಪ್ರಿಲ್ 18ರಂದು ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಯ ಕಣ ಈಗ ಸ್ಪಷ್ಟವಾಗಿದೆ. ಮೊದಲ ಹಂತದ ಚುನಾವಣೆ ಬಹುತೇಕ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರಗಳಲ್ಲಿ ಕನಿಷ್ಠ ಆರು ಕ್ಷೇತ್ರಗಳು ಇಡೀ ರಾಜ್ಯವನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ತುರುಸಿನ ಸ್ಪರ್ಧೆ ಹೊಂದಿದೆ. ಈ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ತುಮಕೂರು ಹೊರತುಪಡಿಸಿ ಎಲ್ಲೆಡೆ ದ್ವಿಕೋನ ಸ್ಪರ್ಧೆಯೇ ಇದೆ. ತುಮಕೂರಿನಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದ ಹನುಮೇಗೌಡರು ಕಣದಿಂದ ವಾಪಸ್ ಆಗದೆ ಇದ್ದರೆ ಅಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ ಇದೆ. ಈ ಸಲ ಮಂಡ್ಯ ತಾರಾ ರಂಗು ಪಡೆದರೆ, ಹಾಸನ ಜಿದ್ದಾಜಿದ್ದಿಯ ಮತ್ತು ತುಮಕೂರು ಹೆವಿವೇಟ್ ಕಣವಾಗಲಿದೆ. ಎಲ್ಲ ಕ್ಷೇತ್ರಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಚಂದ್ರಪ್ಪ v/s ನಾರಾಯಣಸ್ವಾಮಿ
ಮಧ್ಯ ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ಒಂದಾದ ಕೋಟೆನಾಡು ಚಿತ್ರದುರ್ಗದಲ್ಲಿ ಲೋಕಸಭಾ ಕಾವು ದಿನೇದಿನೇ ಏರತೊಡಗಿದೆ. ಮೈತ್ರಿ ಪಕ್ಷದಿಂದ ಹಾಲಿ ಸಂಸದ ಬಿ.ಎನ್. ಚಂದ್ರಪ್ಪ ಮತ್ತೂಮ್ಮೆ ಸ್ಪರ್ಧಿಸಿದ್ದು, ಬಿಜೆಪಿ ಆನೇಕಲ್ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಇಬ್ಬರೂ ವಲಸೆ ಅಭ್ಯರ್ಥಿಗಳೇ ಅಖಾಡದಲ್ಲಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಸಮಯದಲ್ಲಿ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು.
ಹೀಗಾಗಿ ಹಾಲಿ ಸಂಸದ ಚಂದ್ರಪ್ಪ ಅವರಿಗೇ ಟಿಕೆಟ್ ಸಿಕ್ಕಿರುವುದರಿಂದ ಪಕ್ಷದ ಉಳಿದ ಆಕಾಂಕ್ಷಿಗಳ ಧ್ವನಿ ಜಿಲ್ಲೆಯ ಗಡಿಯನ್ನೂ ದಾಟಿಲ್ಲ. ನಿರೀಕ್ಷೆಯಂತೆ ಚಂದ್ರಪ್ಪ ಅವರಿಗೇ ಟಿಕೆಟ್ ದಕ್ಕಿದ್ದು, ಎರಡನೇ ಬಾರಿ ಸಂಸದರಾಗುವ ಹುಮ್ಮಸ್ಸಿನಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇನ್ನು ಬಿಜೆಪಿ ಅಳೆದುತೂಗಿ ಆನೇಕಲ್ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದು, ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಸಂಸದ ಜನಾರ್ದನ ಸ್ವಾಮಿ ಸ್ಥಳೀಯರಾಗಿದ್ದು ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ನಡುವೆ ಲಿಂಗಸುಗೂರು ಮಾಜಿ ಶಾಸಕ ಮಾನಪ್ಪ ವಜ್ಜಲ ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲು ಉತ್ಸಾಹ ತೋರಿದರೂ ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ಸಿಗಲಿಲ್ಲ. ಕೊನೆಗೆ ಬಿಜೆಪಿ ವರಿಷ್ಠರು ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದು, ಇದಕ್ಕೆ ಭೋವಿ ಸಮುದಾಯದ ವಿರೋಧವೂ ವ್ಯಕ್ತವಾಗಿದೆ.
ಶೋಭಾ v/s ಪ್ರಮೋದ್
ಬಿಜೆಪಿ ಅಭ್ಯರ್ಥಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಡುವೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕದನ ಏರ್ಪಟ್ಟಿದೆ. ಶೋಭಾ ಕರಂದ್ಲಾಜೆ ಪರ ಪಕ್ಷದೊಳಗೇ ಟಿಕೆಟ್ ನೀಡಲು ಮೊದಲು ವಿರೋಧವಿತ್ತಾದರೂ ಆಮೇಲೆ ಶಮನವಾದಂತಿದೆ.
ಜೆಡಿಎಸ್ ತೆಕ್ಕೆಗೆ ಹೋದ ಈ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಮಾಜಿ ಸಚಿವ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕಳೆದ ಸಲ ಶೋಭಾ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದ ಕೆ ಜಯಪ್ರಕಾಶ್ ಹೆಗ್ಡೆ ಈ ಸಲ ಬಿಜೆಪಿಯಲ್ಲಿಯೇ ಇದ್ದಾರೆ. ಸಾಮಾನ್ಯವಾಗಿ ಬಿಜೆಪಿ ಭದ್ರಕೋಟೆ ಎನಿಸಿರುವ ಇಲ್ಲಿ, ಬಿಜೆಪಿಗೆ ಶಾಸಕರು ಯಾವ ಮಟ್ಟದಲ್ಲಿ ಸಹಕರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಅವರನ್ನು ಮತದಾರರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೂ ಕುತೂಹಲ
ನಳಿನ್‌ಕುಮಾರ್ v/s ಮಿಥುನ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸ್ಪರ್ಧಿಸಿದ್ದಾರೆ. ಮೂರನೇ ಬಾರಿ ಸಂಸತ್ ಪ್ರವೇಶಿಸಲು ನಳಿನ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಿಂದ ರಮಾನಾಥ ರೈ ಕಣಕ್ಕಿಳಿಯುತ್ತಾರೆಎಂಬ ಗುಲ್ಲಿನ ನಡುವೆಯೇ, ಈ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡಿರುವುದರಿಂದ ಟಿಕೆಟ್ ಮಿಥುನ್ ರೈ ಪಾಲಾಗಿದೆ.
ಮಿಥುನ್ ರೈ ಕಾಂಗ್ರೆಸ್ ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದವರು.ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಕೈಜೋಡಿಸಿ ಎಂದು ನಳಿನ್ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಳಿನ್ ಬಗ್ಗೆ ಪಕ್ಷದೊಳಗೆ ಆರಂಭದಲ್ಲಿ ಅಪಸ್ವರ ಕಾಣಿಸುತಿತ್ತು. ವಿಶೇಷವೆಂದರೆ, ಇಬ್ಬರೂ ಅಭ್ಯರ್ಥಿಗಳು ಬಂಟ ಸಮುದಾಯಕ್ಕೆ ಸೇರಿದವರಾದ್ದರಿಂದ ಸ್ಪರ್ಧೆ ಹೆಚ್ಚು ರಂಗೇರಲಿದೆ.
ಪ್ರತಾಪ್ v/s ವಿಜಯಶಂಕರ್
ಬಿಜೆಪಿಯಿಂದ ಕಳೆದ ಬಾರಿ ಮೈಸೂರು-ಕೊಡಗು ಲೋಕಸಭಾ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ್ದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಸಿ.ಎಚ್.ವಿಜಯ ಶಂಕರ್ ಸ್ಪರ್ಧಿಸಿದ್ದಾರೆ. ಇಬ್ಬರೂ ಸ್ಪರ್ಧಿಗಳು ಸೋಮವಾರ ಅಪಾರ ಜನಸ್ತೋಮದೊಂದಿಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಳೆದ ಸಲ ಬಿಜೆಪಿಯಲ್ಲಿದ್ದ ಸಿ.ಎಚ್. ವಿಜಯಶಂಕರ್, ಹಾಸನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
ಈ ಸಲ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಮೈಸೂರಿನಲ್ಲಿಯೇ ಕಣಕ್ಕಿಳಿಯುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇವರ ಬೆನ್ನಿಗೆ ನಿಂತಿದ್ದರೂ, ಮಿತ್ರ ಪಕ್ಷ ಜೆಡಿಎಸ್ ಯಾವ ಮಟ್ಟಕ್ಕೆ ಬೆಂಬಲ ನೀಡುತ್ತದೆ ಎನ್ನುವ ಕುತೂಹಲ ಇದ್ದೇ ಇದೆ. ಜೆಡಿಎಸ್ ನಾಯಕರ್ಯಾರೂ ನಾಮಪತ್ರ ಸಲ್ಲಿಕೆ ವೇಳೆ ಬಾರದೆ ಇರುವುದು ಮೈತ್ರಿ ನಡುವೆ ಸಮನ್ವಯತೆ ಇಲ್ಲ ಎಂಬುದನ್ನು ಸಾರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮೈಸೂರು-ಕೊಡಗು ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಮತ ಯಾಚನೆ ಮಾಡುತ್ತಿದ್ದಾರೆ.
ಧ್ರುವನಾರಾಯಣ v/s ಪ್ರಸಾದ್
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಹಾಲಿ ಸಂಸದ ಧ್ರುವನಾರಾಯಣ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸ್ಪರ್ಧಿಸಿದ್ದಾರೆ.ಧ್ರುವನಾರಾಯಣ ಅವರಿಗೆ ಶ್ರೀನಿವಾಸ ಪ್ರಸಾದ್ ರಾಜಕೀಯ ಗುರು. ಆದರೆ ಈ ಬಾರಿ ಕ್ಷೇತ್ರದಲ್ಲಿ ಗುರು- ಶಿಷ್ಯರ ನಡುವೆ ಕದನ ಏರ್ಪ ಟ್ಟಂತಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಇಬ್ಬರೂ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದು, ತಂತ್ರ-ಪ್ರತಿತಂತ್ರ ಹೂಡುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸುವಾಗ ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ನಾಯಕರ ಜತೆ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ಡಾ. ಶಿವಕುಮಾರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಸಲ ಧ್ರುವನಾರಾಯಣ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎ ಆರ್ ಕೃಷ್ಣಮೂರ್ತಿ ಈ ಸಲ ಕಾಂಗ್ರೆಸ್‌ನಲ್ಲೇ ಇದ್ದಾರೆ.
ಸುಮಲತಾ v/s ನಿಖಿಲ್
ಚುನಾವಣೆ ಘೋಷಣೆಯಾಗುವ ಮೊದಲೇ ತಾರಾ ರಂಗು ಪಡೆದ ಕ್ಷೇತ್ರ ಮಂಡ್ಯ. ಇಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರು ಪಕ್ಷೇತರರಾಗಿ ಕಣಕ್ಕಿಳಿದರೆ, ಅವರ ಪರ ನಟರಾದ ದರ್ಶನ್ ಮತ್ತು ಯಶ್ ಸಾಥ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್ ಕಣಕ್ಕಿಳಿಯುವುದರೊಂದಿಗೆ ಈ ಕ್ಷೇತ್ರ ಮತ್ತಷ್ಟು ಜಿದ್ದಾಜಿದ್ದಿಯ ಕಣವಾಗಿದೆ. ಬಿಜೆಪಿಯಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಬೆಂಬಲ ನೀಡಿದೆ.
ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನಲ್ಲೇ ಉಳಿಸಿಕೊಳ್ಳಬೇಕೆಂದು ಜೆಡಿಎಸ್ ಯತ್ನಿಸುತ್ತಿದೆ. ಆದರೆ ಸ್ಥಳಿಯ ಕೆಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸುಮಲತಾಅವರಿಗೆ ಬೆಂಬಲಿಸಿರುವುದರಿಂದ ಜೆಡಿಎಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜತೆಗೆ ಸುಮಲತಾ ನಡೆಸಿದ್ದ ರ್ಯಾಲಿಯಲ್ಲಿ ಕೆಲವು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದು ಜೆಡಿಎಸ್‌ನ್ನು ಇನ್ನೂ ಚಿಂತೆಗೀಡು ಮಾಡಿದೆ. ಇಬ್ಬರೂ ಸ್ಪರ್ಧಿಗಳು ಭರದಿಂದ ಪ್ರಚಾರ ನಡೆಸಿದ್ದಾರೆ.
ಪ್ರಜ್ವಲ್ v/s ಎ.ಮಂಜು
ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಗೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಡುವೆ ಹಾಸನದಲ್ಲಿ ತೀವ್ರ ಸೆಣಸಾಟ ಇದ್ದಂತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ಹಾಗೂ ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರನ್ನು ಶತಾಯ ಗತಾಯ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಧುರೀಣರು, ಜಿಲ್ಲಾ ಕಾಂಗ್ರೆಸ್ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಎ.ಮಂಜು ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿ ಟಿಕೆಟ್ ಪಡೆದುಕೊಂಡಿದ್ದರು. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲೇಬೇಕೆಂದು ಕ್ಷೇತ್ರದ ಮತದಾರ ರಲ್ಲಿ ವಿನಂತಿ ಮಾಡಿಕೊಳ್ಳುತ್ತ ಮತ ಯಾಚನೆ ಮಾಡುತ್ತಿದ್ದಾರೆ. ನಾಮ ಪತ್ರ ಸಲ್ಲಿಸುವ ದಿನ ಬೆಳಗ್ಗೆ ಮನೆಯಲ್ಲಿ ಗೋ ಪೂಜೆ ನೆರವೇರಿಸಿದ ಎ.ಮಂಜು ಬಳಿಕ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಪೌರಕಾರ್ಮಿಕ ದಂಪತಿಯ ಪಾದ ಪೂಜೆ ನೆರವೇರಿಸಿದ್ದು ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.
ದೇವೇಗೌಡ v/s ಬಸವರಾಜು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಳೆದು ತೂಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿಯಿಂದ ಬಿ.ಎಸ್. ಬಸವರಾಜು ಕಣಕ್ಕಿಳಿದಿದ್ದಾರೆ. ಆದರೆ ಈ ಹಿಂದೆ ಮಾಜಿ ಸಚಿವ ಸೊಗಡು ಶಿವಣ್ಣ ನಡುವಿನ ಮುಸುಕಿನ ಗುದ್ದಾಟ ಶಮನವಾದಂತಿದೆ. ಸಂಸದ ಮುದ್ದಹನುಮೇಗೌಡ ಅವರು ಮೈತ್ರಿ ನಿರ್ಧಾರದ ಮೇಲೆ ಮುನಿಸಿಕೊಂಡು ಮತ್ತೂಮ್ಮೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ರಾಜಣ್ಣ ಸಹ ಕಣಕ್ಕಿಳಿದಿರುವುದು ಗೌಡರಿಗೆ ಆತಂಕಕ್ಕೆ ಕಾರಣವಾಗಿದೆ. ಮುದ್ದಹನುಮೇಗೌಡರನ್ನು ಡಿಸಿಎಂ ಪರಮೇಶ್ವರ್ ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಇದರಿಂದ ಎಚ್.ಡಿ.ದೇವೇಗೌಡರಿಗೆ ಸಂಕಷ್ಟ ಎದುರಾದಂತಾಗಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಆಶ್ಚರ್ಯವಿಲ್ಲ.
ಮೊಯ್ಲಿ v/s ಬಚ್ಚೇಗೌಡ
ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸ್ಪರ್ಧಿಸಿದ್ದಾರೆ. ಬಿಎಸ್‌ಪಿಯಿಂದ ಡಾ.ಸಿ.ಎಸ್.ದ್ವಾರಕನಾಥ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದಕ್ಕೆ ಕಾಂಗ್ರೆಸ್ ಸುಲಭ ವಾಗಿ ಜಯ ಗಳಿಸಿತ್ತು. ಆದರೆ ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಿರುವುದರಿಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಡುವೆ ನೇರ ಹಣಾ ಹಣಿ ನಡೆಯಲಿದೆ. ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಕೂಡ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಸಿಪಿಎಂನಿಂದ ಎಸ್. ವರಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದಾರೆ.
ಮುನಿಯಪ್ಪ v/s ಮುನಿಸ್ವಾಮಿ ಕೋಲಾರ ಕ್ಷೇತ್ರದಲ್ಲಿ ಸತತ 7 ಬಾರಿ ಗೆಲುವು
ಸಾಧಿಸಿರುವ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್‌ನಲ್ಲಿ ಅಪಸ್ವರ ವಿದ್ದರೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾ ಯಣ ಸ್ವಾಮಿ ಹಾಗೂ ಮುನಿಯಪ್ಪ ನಡುವಿನ ಭಿನ್ನಮತ ಶಮನ ವಾಗಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದರೂ ಎಸ್. ಮುನಿಸ್ವಾಮಿ ಅವರಿಗೆ ಟಿಕೆಟ್ ಲಭಿಸಿದೆ. ಸದ್ಯ ಅವರು ಬಿಬಿಎಂಪಿ ಸದಸ್ಯರಾಗಿದ್ದು, ಪರಿಶಿಷ್ಟ ಜಾತಿ (ಬಲಗೈ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಛಲವಾದಿ ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ
ಅವರ ಹೆಸರು ರೇಸ್‌ನಲ್ಲಿ ಕೇಳಿ ಬಂದಿತ್ತು. ಸದ್ಯ ರಾಜ್ಯ ನಾಯಕರಿಗೆ ಶಾಕ್ ನೀಡಿರುವ ಬಿಜೆಪಿ ಹೈಕಮಾಂಡ್ ಮುನಿಸ್ವಾಮಿ ಹೆಸರನ್ನು ಅಧಿಕೃತಗೊಳಿಸಿದೆ.
ಸುರೇಶ್ v/s ಅಶಥನಾರಾಯಣ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಡಿ.ಕೆ. ಸುರೇಶ್ ಹಾಗೂ ಬಿಜೆಪಿಯ ಅಶ್ವಥ ನಾರಾಯಣ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ಮೈತ್ರಿ ಪಕ್ಷದ ನಾಯಕರಾದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಹಾಗೂ ಸಹೋದರ ಡಿ.ಕೆ. ಶಿವ ಕುಮಾರ್ “ಜೋಡೆತ್ತು’ಗಳು ಪ್ರಚಾರ ಆರಂಭಿಸಿದ್ದಾರೆ.
ಬೆಂಗಳೂರು ನಗರ, ರಾಮನಗರ ಜಿಲ್ಲೆ, ಹಾಗೂ ಕುಣಿಗಲ್ ಕ್ಷೇತ್ರವನ್ನೊಳಗೊಂಡ ಅತಿ ದೊಡ್ಡ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆಶಿ ಸಹೋದರರು ಮೊದಲಿನಿಂದಲೂ ತಮ್ಮ ಹಿಡಿತ ಇಟ್ಟುಕೊಂಡಿದ್ದಾರೆ. ಬಿಜೆಪಿಯಿಂದ ಮೊದಲು ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಹಾಗೂ ಅವರ ಪುತ್ರಿ ನಿಶಾ ಅವರ ಹೆಸರು ಕೇಳಿಬಂದಿತ್ತಾದರೂ ಕಡೇ ಕ್ಷಣದಲ್ಲಿ ಅಶ್ವಥ ನಾರಾಯಣ ಅವರ ಹೆಸರನ್ನುಪ್ರಕಟಿಸುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ.
ಸದಾನಂದ v/s ಕೃಷ್ಣಬೈರೇಗೌಡ
ಬಿಜೆಪಿಯಿಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿರುದ್ಧ ಮೈತ್ರಿ ಪಕ್ಷದಿಂದ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹೊಂದಾಣಿಕೆ ಸೂತ್ರದ ಪ್ರಕಾರ, ಜೆಡಿಎಸ್ ಪಾಲಾಗಿದ್ದ ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ಗೆ ಬಿಟ್ಟುಕೊಡುವ ಮೂಲಕ ಜೆಡಿಎಸ್ ಅಚ್ಚರಿ ಮೂಡಿಸಿದೆ.
ಇಲ್ಲಿಂದ ಅಂತಿಮವಾಗಿ ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಸದಾನಂದಗೌಡರ ವಿರುದ್ಧ ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಭಾರೀ ಅಂತರದಲ್ಲಿ ಸೋಲನ್ನಪ್ಪಿದ್ದರು. ಈ ಸಲ ಈ ಕ್ಷೇತ್ರ ಮೊದಲಿಗೆ ಜೆಡಿಎಸ್ ಪಾಲಾಗಿದ್ದರಿಂದ ಸ್ವತಃ ದೇವೇಗೌಡರೇ ಕಣಕ್ಕಿಳಿಯಲಿದ್ದಾರೆ ಎಂಬ ಜಿಜ್ಞಾಸೆ ಮೂಡಿತ್ತು. ಆ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಗೌಡರು ತುಮಕೂರಿನಲ್ಲಿ ಸ್ಪರ್ಧಿಸಲು ಮುಂದಾಗಿದ್ದರಿಂದ ಈ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.
ಆರಂಭದಲ್ಲಿ ಮಾಜಿ ಸಚಿವ ಬಿ ಎಲ್ ಶಂಕರ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗುತ್ತದೆ ಎನ್ನುವ ವರದಿಗಳು ಬಂದಿದ್ದವು. ಆದರೆ ಕೊನೆಗೆ, ಕೃಷ್ಣ ಬೈರೇಗೌಡರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಜಾಫರ್ ಷರೀಪ್ ಆರು ಸಲ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ 2004ರ ನಂತರ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಇಲ್ಲಿ ಇಬ್ಬರೂ ಸ್ಪರ್ಧಿಗಳು ಒಕ್ಕಲಿಗರಾಗಿರುವುದರಿಂದ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮೋಹನ್ v/s ಅರ್ಷದ್
ಹಾಲಿ ಸಂಸದರಾದ ಪಿ.ಸಿ.ಮೋಹನ್ ಅವರು ಮೂರನೇ ಬಾರಿಗೆ ಸಂಸತ್ ಪ್ರವೇಶಿಸಲು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನಿಂದ ಕಳೆದ ಬಾರಿ ಇಲ್ಲಿಯೇ ಸ್ಪರ್ಧಿಸಿ ಸೋತಿದ್ದ ರಿಜ್ವಾನ್ ಅರ್ಷದ್ ಈ ಸಲ ಇನ್ನೊಮ್ಮೆ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಪಕ್ಷೇತರರಾಗಿ ನಟ ಪ್ರಕಾಶ್ ರಾಜ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಮತದಾರರು. ರಿಜ್ವಾನ್ ಅರ್ಷದ್ ಪರ ಕ್ಷೇತ್ರದಲ್ಲಿ ಜಮೀರ್ ಅಹಮದ್ ಪ್ರಚಾರ ಮಾಡಲಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆ ವೇಳೆ ಬಾರದ ರೋಷನ್ ಬೇಗ್ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಪಿ.ಸಿ.ಮೋಹನ್ ಅವರ ಬಗ್ಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಅಸಮಾಧಾನಗೊಂಡಿದ್ದಾರೆನ್ನಲಾಗಿದ್ದು, ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ. ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ. 2008ರಲ್ಲಿ ರೂಪುಗೊಂಡ ಈ ಕ್ಷೇತ್ರದಲ್ಲಿ ಈವರೆಗೆ ಎರಡು ಚುನಾವಣೆಗಳು ನಡೆದಿದ್ದು, ಎರಡೂ ಸಲವೂ ಬಿಜೆಪಿಯ ಪಿ ಸಿ ಮೋಹನ್ ಗೆದ್ದಿದ್ದಾರೆ. ಈ ಸಲವೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ಹರಿಪ್ರಸಾದ್ v/s ತೇಜಸ್ವಿ
ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಮೊದಲಿನಿಂದಲೂ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದ್ದರೂ ಕೊನೇ ಕ್ಷಣದಲ್ಲಿ ಹೈಕಮಾಂಡ್ ಅಳೆದು ತೂಗಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ.
ಇದರಿಂದ ತೇಜಸ್ವಿನಿ ಅನಂತಕುಮಾರ್ ಅವರ ಬೆಂಬಲಿಗರಿಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಬಾರಿ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್‌ನಿಂದ ನಂದನ್ ನಿಲೇಕಣಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು. 1996ರಿಂದ ಸತತ ಆರು ಬಾರಿ ಇಲ್ಲಿ ಗೆಲುವು ಸಾಧಿಸಿದ್ದ ಅನಂತ್‌ಕುಮಾರ್ ನಿಧನದ ತರುವಾಯ ಈಗ ಇನ್ನೊಮ್ಮೆ ಬಿಜೆಪಿಗೆ ಈ ಕಣ ಪಣವೊಡ್ಡುತ್ತಿದೆ. ಬಹುಸಮಯ ಗಳಿಂದ ಬಿಜೆಪಿ ವಶದಲ್ಲಿದ್ದ ದಕ್ಷಿಣದ ಭದ್ರಕೋಟೆ ಮೇಲೆ ಈ ಬಾರಿ ಕಾಂಗ್ರೆಸ್ ಕಣ್ಣಿಟ್ಟಿದೆ. ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ಅಚ್ಚರಿ ಮೂಡಿಸಿದೆ. 1999ರಲ್ಲಿ ಹರಿಪ್ರಸಾದ್ ಅವರು ಇಲ್ಲಿ ಸ್ಪರ್ಧಿಸಿ ಅನಂತ್ ಕುಮಾರ್ ವಿರುದ್ಧ ಸೋತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.