“ರಾಜಾಹುಲಿ’ “ಸಾರಥಿ’ ಅಬ್ಬರ
Team Udayavani, Apr 3, 2019, 6:00 AM IST
ರಾಜ್ಯದ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯದಲ್ಲಿ ಮತದಾರರ ಓಲೈಕೆಗೆ ಅಭ್ಯರ್ಥಿಗಳು ನಾನಾ ಬಗೆಯ ಕಸರತ್ತು ನಡೆಸುತ್ತಿದ್ದು, ಮಂಗಳವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚಿತ್ರನಟರಾದ ಯಶ್, ದರ್ಶನ್, ಪ್ರೇಮ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಸ್ಟಾರ್‌ಗಳ ದಂಡೇ ಪ್ರಚಾರ ನಡೆಸಿತು. ನಿಖೀಲ್ ಪರ ಶಾಸಕಿ ಅನಿತಾ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಮತಯಾಚಿಸಿ, ಮತದಾರರ ಮನ ಗೆಲ್ಲುವ ಯತ್ನ ನಡೆಸಿದರು.
ಅಂಬರೀಶ್ ಅಭಿಮಾನಿಗಳನ್ನು ನಂಬಿದ್ದೇನೆ: ಸುಮಲತಾ
ಗ್ರಾಮಗಳಲ್ಲಿ ಸುಮಲತಾ ಬಿರುಸಿನ ಪ್ರಚಾರ ನಡೆಸಿದಾಗ ಅಂಬಿ ಅಭಿಮಾನಿಗಳು, ಕಾಂಗ್ರೆಸ್, ರೈತ ಸಂಘ, ಬಿಜೆಪಿ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು. ಪಟಾಕಿ ಸಿಡಿಸಿ, ಜಯಘೋಷ ಕೂಗಿದರು. ಮಹಿಳೆಯರು ಆರತಿ ಬೆಳಗಿ, ಸ್ವಾಗತಿಸಿದರು. ಈ ವೇಳೆ, ಮತದಾರರಿಗೆ ಸುಮಲತಾ ಮಾಡಿದ ಮನವಿ ಹೀಗಿತ್ತು.
ದ್ವೇಷ, ಕುತಂತ್ರ ರಾಜಕಾರಣ ಹಾಗೂ ಬೆನ್ನಿಗೆ ಚೂರಿ ಹಾಕುತ್ತಿರುವ ನಾಯಕರನ್ನು ತಿರಸ್ಕರಿಸಿ.ಹಣ ಬಲವೋ, ಜನ ಬಲವೋ ಎಂಬುದನ್ನು ಏ.18ರಂದು ತೋರಿಸಿ.ಅಂಬಿಯನ್ನು ಪ್ರೀತಿಸುವ ಜನರಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಅವರಿದ್ದಾಗ ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ.
ಯಾರು ಏನೇ ಷಡ್ಯಂತ್ರ ಮಾಡಿದರೂ ಗೆಲುವು ನನ್ನದೆ. ಅಂಬರೀಶ್ ಅಭಿಮಾನಿಗಳನ್ನು ನಂಬಿಕೊಂಡು ನಾನು ಚುನಾವಣೆ ಸ್ಪರ್ಧಿಸಿದ್ದೇನೆ. ಅಂಬರೀಶ್ ಮುಂದೆ ಕೂರಲಾಗದೆ ಕೈಕಟ್ಟಿ ನಿಲ್ಲುತ್ತಿದ್ದವರು ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಜಾತಿ ರಾಜಕಾರಣ, ಕುಟುಂಬ ರಾಜಕಾರಣವಾಯಿತು. ಈಗ ಅಂತ್ಯಕ್ರಿಯೆ
ರಾಜಕಾರಣ ಮಾಡುತ್ತಿದ್ದಾರೆ.
ತಮ್ಮಣ್ಣರನ್ನು ಮಂತ್ರಿ ಮಾಡಿದ್ದೇ ಅಂಬರೀಶ್. ಡಿ.ಸಿ.ತಮ್ಮಣ್ಣ ಕೃತಜ್ಞತೆಯೇ ಇಲ್ಲದ ಮನುಷ್ಯ.
ಅಂಬರೀಶ್ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅವರು ಜನರ ಹೃದಯದಲ್ಲಿದ್ದಾರೆ.
ಎತ್ತಿನಗಾಡಿ ಏರಿದ “ಗಜಕೇಸರಿ”: ಎತ್ತಿನಗಾಡಿ ಏರಿ ಮಂಡ್ಯ ಬಡಾವಣೆಯ ವಿವಿಧ ಬೀದಿಗಳಲ್ಲಿ ಸಂಚರಿಸಿದ ದರ್ಶನ್, ಸುಮಲತಾ ಕ್ರಮ ಸಂಖ್ಯೆ 20, ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ನೀಡಲು ಮರೆಯಬೇಡಿ ಎಂದು ಮನವಿ ಮಾಡಿದರು. ಅಭಿಮಾನಿಗಳು ಹೂವಿನ ಹಾರ ಹಾಕಿ, ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಅವರಿಗೆ ಜೈಕಾರ ಕೂಗಿದರು. ನೆನಪಿರಲಿ ಪ್ರೇಮ್ ಹಾಗೂ ಚೇತನ್ ಸಾಥ್ ನೀಡಿದರು. ಅಭಿಮಾನಿಯೊಬ್ಬರು ದರ್ಶನ್‌ಗೆ ಹಸಿರು ಟವೆಲ್ ಹಾಕಿದಾಗ, ರೈತರ ಪರವಾಗಿ ಘೋಷಣೆ ಕೂಗಿದರು. ಬೀಡಿ ಕಾರ್ಮಿಕ ಕಾಲೋನಿಯಲ್ಲಿ ತಲೆಗೆ ಮುಸ್ಲಿಂ ಟೋಪಿ ಧರಿಸಿ, ಟವಲ್ ಹಾಕಿಕೊಂಡು, ಉರ್ದು ಭಾಷೆಯಲ್ಲೇ ಮಾತನಾಡಿ, ಮತಯಾಚನೆ ಮಾಡಿದರು. ಶಂಕರಮಠ ಬಳಿ ಬರುತ್ತಿದ್ದಂತೆ ಅಭಿಮಾನಿಗಳು ಕುಡಿಯಲು ಎಳನೀರು ನೀಡಿದರು. ಅಂಬರೀಶ್‌ರನ್ನು ಬೆಳೆಸಿದಂತೆ ಸುಮಲತಾಗೆ ಸಹಕಾರ ನೀಡಿ ಎಂದರು.
ಅಂಬರೀಶ್ ಪ್ರೀತಿ ನಿಷ್ಕಲ್ಮಶ
ಶ್ರೀರಂಗಪಟ್ಟಣ ತಾಲೂಕಿನ ಊರಮಾರಕಸಲಗೆರೆಯಲ್ಲಿ ರಣಕಹಳೆ ಊದುವ ಮೂಲಕ ಯಶ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಅವರ ಮತಯಾಚನೆಯ ಪರಿ ಹೀಗಿತ್ತು.
ಅಮ್ಮ (ಸುಮಲತಾ)ನನ್ನು ಸೋಲಿಸಲು ಮೂವರು ಸುಮಲತಾರಿಂದ ನಾಮಪತ್ರ ಸಲ್ಲಿಸಿ ಜನರನ್ನು ಕನ್‌ಫ್ಯೂಸ್ ಮಾಡಲು ಹೊರಟಿದ್ದಾರೆ. ಮಂಡ್ಯ ಜನರು ಕನ್‌ಫ್ಯೂಸ್ ಆಗುವಷ್ಟು ದಡ್ಡರಲ್ಲ.
ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ನಿಷ್ಕಲ್ಮಶವಾಗಿತ್ತು. ಅವರ ಪ್ರೀತಿ ಎಂದಿಗೂ ನಾಟಕೀಯವಾಗಿರಲಿಲ್ಲ. ಮಂಡ್ಯ ಎಂದರೆ ಅಂಬರೀಶಣ್ಣಂಗೆ ಬಹಳ ಪ್ರೀತಿ. ಹೃದಯವಂತಿಕೆಗೆ ಮತ್ತೂಂದು ಹೆಸರೇ ಅಂಬರೀಶ್.
ನನ್ನ ಯಶಸ್ಸಿನ ಹಿಂದೆ ಅಂಬರೀಶಣ್ಣನ ಆಶೀರ್ವಾದವಿದೆ. ಅದುವೆ, ಅಮ್ಮನ ಬೆಂಬಲಕ್ಕೆ ನಿಲ್ಲುವಂತೆ ಮಾಡಿದೆ.
ಸ್ಟಾರ್‌ಗಳನ್ನು ನೋಡಲು ಬರ್ತಾರೆ, ಓಟ್ ಹಾಕಲ್ಲ: ಜಿಟಿಡಿ
ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಪ್ರಚಾರ ನಡೆಸಿದ ಸಚಿವ ಜಿ.ಟಿ.ದೇವೇಗೌಡರ ಮಾತಿನ ಪರಿ ಹೀಗಿತ್ತು:
ಸುಮಲತಾರನ್ನು ಜನರು ಗೌರವಿಸುತ್ತಾರೆ. ಆದರೆ, ಓಟ್ ಹಾಕೋದಿಲ್ಲ.
ಅಂಬರೀಶ್ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ಸೋತರೂ, ಗೆದ್ದರೂ ಚಿತ್ರರಂಗದಲ್ಲಿ ನಾಯಕರಾಗಿಯೇ ಇದ್ದರು. ದ್ವಾರಕೀಶ್, ಹುಣಸೂರಿನಲ್ಲಿ ನಿಂತಾಗ ಪ್ರಚಾರದ ವೇಳೆ ಜನ ಮುಗಿಬಿದ್ದರು. ಆದರೆ, ಮತಪೆಟ್ಟಿಗೆ ಒಡೆದಾಗ ಠೇವಣಿ ಬರಲಿಲ್ಲ.
ಪುತ್ರನ ಪರ ಅನಿತಾ ಪ್ರಚಾರ
ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಚನ್ನಕೇಶವ ದೇವಾಲಯದಲ್ಲಿ ನಿಖೀಲ್ ಜೊತೆ ವಿಶೇಷ ಪೂಜೆ ಸಲ್ಲಿಸಿ, ಪುತ್ರನ ಪರ ಅನಿತಾ ಕುಮಾರಸ್ವಾಮಿ ಪ್ರಚಾರ ಆರಂಭಿಸಿದರು. “ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಸಹಸ್ರಾರು ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಮನೆ ಮಗನೆಂದು ನಿಖೀಲ್ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ’ ಎಂದು ಮನವಿ ಮಾಡಿದರು.
ಕುಮಾರಣ್ಣನೇ ನನಗೆ ಸ್ಟಾರ್ ಪ್ರಚಾರಕರು
ಕೆ.ಆರ್.ಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿಖೀಲ್ ಮತಯಾಚಿಸಿದರು. ಅಭಿಮಾನಿಗಳು ದಾರಿಯುದ್ದಕ್ಕೂ ನಿಖೀಲ್‌ಗೆ ಪುಷ್ಪವೃಷ್ಟಿಗೈದರು. ಹಲವರು ಜೆಸಿಬಿಯ ತೊಟ್ಟಿಲಿನಲ್ಲಿ ಕುಳಿತು ನಿಖೀಲ್‌ಗೆ ಪುಷ್ಪಾರ್ಚನೆ ಮಾಡಿದರು. ಮೆರವಣಿಗೆ ವೇಲೆ ಎಲ್ಲೆಡೆ ಟ್ರಾಕ್ ಜಾಮ್ ಕಂಡು ಬಂತು. ಈ ವೇಳೆ ಮಾತನಾಡಿದ ಅವರು;
ರೈತರ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಬಂದಿದ್ದೇನೆ. ಜೀವನಪೂರ್ತಿ ರೈತರೊಂದಿಗಿದ್ದು ಕೆಲಸ ಮಾಡಲು ಜನ ಅವಕಾಶ ಕಲ್ಪಿಸಿಕೊಡಬೇಕು.
ನನ್ನ ಪರವಾಗಿ ಚಿತ್ರರಂಗದ ಯಾವುದೇ ನಾಯಕ ನಟರು ಪ್ರಚಾರ ಮಾಡುತ್ತಿಲ್ಲ. ಕುಮಾರಣ್ಣನೇ ನನಗೆ ಸ್ಟಾರ್ ಪ್ರಚಾರಕರು.
ಹಾಸನ ಪಕ್ಕದ ಜಿಲ್ಲೆಯಾಗಿರುವ ಮಂಡ್ಯ, ನನ್ನ ತವರು ಜಿಲ್ಲೆ ಎಂಬ ಭಾವನೆ ನನ್ನದು.
ಜಿಲ್ಲೆಯ ಋಣ ನನ್ನ ಮೇಲಿದೆ.
ಟೀಕೆ ಮಾಡುವಷ್ಟು ದೊಡ್ಡದಾಗಿ ಬೆಳೆದಿಲ್ಲ. ನಿಮ್ಮ ಮನೆಯ ಹುಡುಗ ನಾನು.
ಹಾಸನ ಮತ್ತು ಮಂಡ್ಯ ಜಿಲ್ಲೆಗಳು ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷಕ್ಕೆ ಎರಡು ಕಣ್ಣುಗಳಿದ್ದಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.