ಸದ್ಯ ಸ್ಥಳೀಯ ಸಮಸ್ಯೆಗಳೇ ಪ್ರಾಧಾನ್ಯ
ಕಾರ್ಕಳ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಬೆಂಬಲ ನೀರು, ಮರಳಿನ ಬೇಡಿಕೆ
Team Udayavani, Apr 16, 2019, 6:05 AM IST
ಕಾರ್ಕಳ: ಈ ಊರಿನಲ್ಲಿ ನಾವಂದುಕೊಂಡಂತಿಲ್ಲ. ಮತದಾನಕ್ಕೆ ಕೆಲವೇ ಗಂಟೆ ಗಳಿರುವಾಗ ರಾಷ್ಟ್ರೀಯ ವಿಷಯವೇ ಪ್ರಧಾನವಾಗಿ ಬಿಡಬಹುದೇನೋ? ಆದರೆ ಸದ್ಯಕ್ಕಂತೂ ಸ್ಥಳೀಯ ವಿಷಯಗಳೇ ಪ್ರಾಧಾನ್ಯ ಪಡೆಯುತ್ತಿರುವುದು ಸುಳ್ಳಲ್ಲ.
ನಮ್ಮ ತಿರುಗಾಟ ಆರಂಭವಾಗಿದ್ದು ಕಾರ್ಕಳ ಪೇಟೆಯಿಂದಲೇ. ಅತ್ಯಂತ ಇಕ್ಕಟ್ಟಾದ ಪೇಟೆಯ ರಸ್ತೆ ಸ್ವಲ್ಪ ವಿಸ್ತಾರಗೊಳ್ಳಬೇಕು. ಅದಕ್ಕೆ ಯಾವ ಪಕ್ಷವೂ ಮನಸ್ಸು ಮಾಡುತ್ತಿಲ್ಲ ಎಂದು ಆರಂಭದಲ್ಲೇ ಸಿಕ್ಸರ್ ಬಾರಿಸಿದವರು ಕೆಲವು ನಾಗರಿಕರು. ಈ ಅಸಮಾಧಾನದ ಬಿಸಿಯನ್ನು ಹೊತ್ತುಕೊಂಡೇ ಮುಂದೆ ನಡೆದಾಗ ಎದುರಾದ ನಾಗರಿಕರ ಬೇಸರವೆಂದರೆ ಕೆರೆಗಳ ಅಭಿವೃದ್ಧಿ ಕುರಿತು.
ನಗರದಲ್ಲಿರುವ ಆನೆಕೆರೆ (24 ಎಕ್ರೆ), ಸಿಗಡಿಕೆರೆ (6 ಎಕ್ರೆ), ರಾಮಸಮುದ್ರ (70 ಎಕ್ರೆ) ಕೆರೆಗಳಲ್ಲಿ ಹೂಳು ತುಂಬಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿದರೆ ಜಲಮೂಲ ಸಂರಕ್ಷಣೆಯಾಗುತ್ತದೆ. ಜತೆಗೆ ಇಂಥ ಐತಿಹಾಸಿಕ ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಿದಂತೆಯೂ ಆಗುತ್ತದೆ. ಈ ಹಿಂದಿನ ಹಲವು ವರ್ಷಗಳ ಬೇಡಿಕೆ ಮುಂದಿನವರ ಅವಧಿಯಲ್ಲಾದರೂ ಈಡೇರಬೇಕು ಎಂಬ ಆಗ್ರಹವೂ ಹಲವು ನಾಗರಿಕರಿಂದ ವ್ಯಕ್ತವಾಯಿತು. ಕೆರೆಗಳು ಅಭಿವೃದ್ಧಿಗೊಂಡರೆ ನಗರವಷ್ಟೇ ಅಲ್ಲ, ಹತ್ತಿರದ ಗ್ರಾಮೀಣ ಪ್ರದೇಶಗಳಿಗೂ ನೀರು ಪೂರೈಸಬಹುದು. ನೀರಿನ ಬವಣೆಯನ್ನು ಹೋಗಲಾಡಿಸಲು ರಾಜಕೀಯ ಮುಖಂಡರು ಮುತುವರ್ಜಿ ವಹಿಸುತ್ತಿಲ್ಲ ಎಂಬುದು ಹಲವರ ಆರೋಪ.
ಮತ ಪ್ರತಿಫಲನ
ಚುನಾವಣೆ ಏನನ್ನಿಸುತ್ತಿದೆ ಎಂದು ಪ್ರಶ್ನೆ ಕೇಳಿದರೆ, ಈ ಬಾರಿ ಅಭ್ಯರ್ಥಿ ನೋಡಿ ಮತ ಹಾಕುತ್ತಿಲ್ಲ ಎಂದು ಫಟ್ ಅಂತ ಉತ್ತರಿಸಿದವರು ಹೆಸರು ಹಾಕಬೇಡಿ ಎಂದು ವಿನಂತಿಸಿದ ಹೊಟೇಲ್ ಮಾಲಕ ರೊಬ್ಬರು. “ಟಿವಿ, ಸೋಶಿಯಲ್ ಮೀಡಿಯಾ ನೋಡುವುದೇ ಬೇಡ ಅನಿಸುತ್ತದೆ. ಮಾಧ್ಯಮಗಳಲ್ಲಿ ಬರೇ ರಾಜಕೀಯ ಸುದ್ದಿ. ಅದರಲ್ಲೂ ವಿಶೇಷವಾಗಿ ಮಂಡ್ಯ ಚುನಾವಣೆಯದ್ದೇ ಗದ್ದಲ’ ಎಂದು ಬೇಸರ ವ್ಯಕ್ತಪಡಿಸಿದವರು ಆಸಿಫ್.
ಜಾತಿ ರಾಜಕೀಯ, ಹಣ ವ್ಯವಹಾರ ಚುನಾವಣೆ ವೇಳೆ ಮುನ್ನೆಲೆಗೆ ಬರುತ್ತಿರು ವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ರಾಜಕಾರಣಿಗಳು ಆರೋಪ- ಪ್ರತ್ಯಾರೋಪ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಯ್ಕೆಯಾದವರು ವರ್ಷಕೊಮ್ಮೆಯಾದರೂ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಒಡನಾಟವಿಟ್ಟು ಕೊಳ್ಳಬೇಕು ಎನ್ನುವ ಮೂಲಕ ಸಂಸದರ ಕಾರ್ಯವೈಖರಿ ಹೀಗೆಯೇ ಇರಬೇಕು ಎಂದವರು ಆದಿರಾಜ್ ಅಜ್ರಿ.
ಜನರ ಸೇವೆಯೇ ತಮ್ಮ ಗುರಿಯೆಂದು ರಾಜಕೀಯ ಕ್ಷೇತ್ರಕ್ಕೆ ಧುಮುಕುವ ರಾಜ ಕಾರಣಿಗಳು ಸ್ವಾರ್ಥ ಸಾಧನೆಯಲ್ಲೇ ನಿಸ್ಸೀಮರಾಗುತ್ತಾರೆ. ಕ್ಷೇತ್ರಕ್ಕೆ ತಾನು ಅನುದಾನ ಒದಗಿಸಿಕೊಟ್ಟಿದ್ದೇನೆ ಎಂದು ಜನಪ್ರತಿನಿಧಿಗಳು ಘಂಟಾ ಘೋಷವಾಗಿ ಹೇಳುವಾಗ ತಮ್ಮದೇ ಸ್ವಂತ ಹಣ ಖರ್ಚು ಮಾಡಿದ್ದಾರೆ ಎಂದು ಅಂದುಕೊಳ್ಳಬೇಕು. ಅದು ಅವರ ಕರ್ತವ್ಯವೆನ್ನುವುದನ್ನು ಮರೆಯ ಬಾರದು ಎಂದು ಟೆಂಪೋ ಚಾಲಕ ಸುಧೀರ್ ಬಂಬಿಲ ಹೇಳಿದರು.
ಕಾರ್ಯಕರ್ತರಲ್ಲೂ ಜೋಶ್ ಇಲ್ಲ
ಬಿಜೆಪಿ ಕಾರ್ಯಕರ್ತರಲ್ಲಾಗಲಿ, ಕಾಂಗ್ರೆಸ್‌ನ ಕಾರ್ಯಕರ್ತರಲ್ಲಾಗಲಿ ಚುನಾವಣೆ ಸಂದರ್ಭ ಕಂಡುಬರುವ ಜೋಶ್ ಈ ಬಾರಿ ಇಲ್ಲವೆಂದೇ ಹೇಳಬಹುದು. ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿರದ ಕಾರಣ ಜೆಡಿಎಸ್ ಸಭೆ ನಡೆಯುತ್ತಿರುವುದು ಕಡಿಮೆಯೇ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಈಗಾಗಲೇ ಕಾಯಕರ್ತರ ಸಮಾವೇಶ ನಡೆಸಿ, ಮತಪ್ರಚಾರಕ್ಕೆ ಚಾಲನೆ ನೀಡಿವೆ. ಎ.7ರಂದು ಸಿಎಂ ಕುಮಾರಸ್ವಾಮಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭ್ಯರ್ಥಿ ಪರ ಮತಯಾಚಿಸಿ, ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಸಚಿವ ಯು.ಟಿ. ಖಾದರ್, ಡಾ| ಜಯಮಾಲಾ, ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಸಮಾವೇಶದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್, ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೆಲವೆಡೆ ರೋಡ್ ಶೋ ನಡೆಸಿ ಮತಯಾಚಿಸಿದ್ದಾರೆ. ಎರಡೂ ಪಕ್ಷದ ಅಭ್ಯರ್ಥಿಗಳು ಮರಳಿನ ಸಮಸ್ಯೆ ಕುರಿತಂತೆ ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ.
ಚುನಾವಣೆ ಬಹಿಷ್ಕಾರದ ಸದ್ದು
ಮರಳುಗಾರಿಕೆ, ಕಲ್ಲು ಗಣಿಗಾರಿಕೆಗೆ ಸ್ಪಷ್ಟ ನಿಯಮ ರೂಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿದ್ದು, ಕಾರ್ಮಿಕರಿಗೆ ಸಾಕಷ್ಟು ತೊಂದರೆಯುಂಟಾಗಿದೆ. ಜನಸಾಮಾನ್ಯರಿಗೆ ಮನೆ ನಿರ್ಮಿಸಲು, ವ್ಯಾಪಾರಸ್ಥರ ವ್ಯವಹಾರಕ್ಕೂ ತೊಡಕುಂಟಾಗಿದೆ ಎಂದು ಮರಳು ಪರವಾನಿಗೆದಾರರು, ಲಾರಿ ಚಾಲಕ-ಮಾಲಕ ಸಂಘದವರು ವಿವಿಧ ಸಂಘಗಳ ಬೆಂಬಲದೊಂದಿಗೆ ಬಂಡಿಮಠದಲ್ಲಿ ಎ.1ರಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನೆರೆದ ಜನಸ್ತೋಮ ಸ್ವಯಂ ಪ್ರೇರಿತರಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದರು. ರೆಂಜಾಳ ಗ್ರಾಮದ ಹೇಡೆ¾ ಪರಿಸರಕ್ಕೆ ಕುಡಿಯುವ ನೀರು ಪೂರೈಸುವಂತೆ ಅದೆಷ್ಟೋ ಬಾರಿ ಮನವಿ ನೀಡಿದ್ದರೂ ಸಂಬಂಧಪಟ್ಟವರು ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ತೀವ್ರ ಅಸಮಾಧಾನ ತೋರ್ಪಡಿಸಿದ ಆ ಭಾಗದ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.