ಲಿಂಗಾಯತ, ಮಹದಾಯಿ ಹೋರಾಟ ಧ್ವನಿ ಗೌಣ
Team Udayavani, Apr 9, 2019, 3:00 AM IST
ಹುಬ್ಬಳ್ಳಿ: ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹಾಗೂ ಮಹದಾಯಿ ಹೋರಾಟಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದವು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಚಳವಳಿಗಳು ಗೌಣವಾಗಿವೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರಾಜ್ಯ, ಹೊರ ರಾಜ್ಯಗಳಲ್ಲಿ ನಡೆದರೂ ಹೋರಾಟ ತೀವ್ರತೆ ಪಡೆದಿದ್ದು ಮಾತ್ರ ಉತ್ತರ ಕರ್ನಾಟಕದಲ್ಲಿ. ಪರ-ವಿರೋಧ ಹೋರಾಟಗಳು ಸಾಕಷ್ಟು ತೀವ್ರತೆ ಪಡೆದಿದ್ದವು. ಪೈಪೋಟಿಗೆ ಬಿದ್ದಂತೆ ಸಮಾವೇಶದ ಮೇಲೆ ಸಮಾವೇಶ, ಹೇಳಿಕೆ, ಆರೋಪ-ಪ್ರತ್ಯಾರೋಪಗಳು ಕೇಳಿ ಬಂದವು.
ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನದ ನ್ಯಾಯ ಪಡೆಯುತ್ತೇವೆಂದು ಪರವಾಗಿದ್ದವರು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿರುದ್ಧವಾಗಿದ್ದವರು ಶಪಥ ಮಾಡುತ್ತಲೇ ಸಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೆಲವು ನಾಯಕರು ಸೋಲು ಅನುಭವಿಸಿದರು. ಅಲ್ಲಿಂದಲೇ ಪರ-ವಿರೋಧ ಹೋರಾಟದ ಕಾವು ತಣ್ಣಗಾಗುತ್ತ ಸಾಗಿತ್ತು.
ಪ್ರತ್ಯೇಕ ಧರ್ಮ ಪರ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿದ್ದ ಡಾ| ಶರಣ ಪ್ರಕಾಶ ಪಾಟೀಲ, ವಿನಯ ಕುಲಕರ್ಣಿ, ಬಸವರಾಜ ರಾಯರಡ್ಡಿ, ಬಿ.ಆರ್.ಪಾಟೀಲ ಸೋಲು ಕಂಡರು. ಈ ಸೋಲಿಗೆ ಕೇವಲ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೊಂದೇ ಕಾರಣವಾಗಿರಲಿಲ್ಲ.
ಆಯಾ ಕ್ಷೇತ್ರದ ಸ್ಥಳೀಯ ಸಮಸ್ಯೆ, ಆಡಳಿತ ವಿರೋಧಿ ನೀತಿ, ಸಿಟ್ಟು, ಅತಿಯಾದ ಆತ್ಮವಿಶ್ವಾಸ ಸೇರಿದಂತೆ ಹಲವು ಅಂಶಗಳು ಕಾರಣವಾಗಿದ್ದವು. ಆದರೆ, ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೇ ಕಾರಣ ಎಂದು ಬಿಂಬಿಸಲಾಗಿತ್ತು. ಆದರೆ, ಇದೇ ಹೋರಾಟದ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ ಗೆಲುವು ಸಾಧಿಸಿದರು. ಹೋರಾಟದ ಜತೆಗೆ ಆಗಾಗ ಕಾಣಿಸಿಕೊಂಡಿದ್ದ ಎಂ.ಸಿ.ಮನಗೂಳಿ ಕೂಡ ಗೆಲುವಿನ ರುಚಿ ಕಂಡರು.
ವಿಧಾನಸಭಾ ಚುನಾವಣೆ ನಂತರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾವು ಕಳೆದುಕೊಂಡಿತ್ತು. ರಾಜಕಾರಣಿಗಳು ಹೋರಾಟದಿಂದ ಹಿಂದೆ ಸರಿದರೆ, ಹೋರಾಟದ ಪರವಾಗಿದ್ದ ಸ್ವಾಮೀಜಿಗಳಲ್ಲಿ ಪ್ರಮುಖರಾಗಿದ್ದ ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾದರು. ಹೋರಾಟದ ಜೀವಂತಿಕೆಗೆ ಯತ್ನಿಸಿದ್ದ ಮಾತೆ ಮಹಾದೇವಿಯವರು ಲಿಂಗೈಕ್ಯರಾಗಿದ್ದು ಹೋರಾಟಕ್ಕೆ ದೊಡ್ಡ ಪೆಟ್ಟು ಕೊಟ್ಟಿತು.
ತಣ್ಣಗಾದ ಮಹದಾಯಿ: ಅದೇ ರೀತಿ, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಹದಾಯಿ ಹೋರಾಟ ಈ ಭಾಗದಲ್ಲಿ ತನ್ನದೇ ಆದ ಪ್ರಭಾವ ಬೀರಿತ್ತು. ವಿಶೇಷವಾಗಿ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ನರಗುಂದ ಹಾಗೂ ನವಲಗುಂದದಲ್ಲಿ ಸತತ ಮೂರು ವರ್ಷಗಳವರೆಗೆ ಹೋರಾಟ ಜೀವಂತಿಕೆ ಪಡೆದುಕೊಂಡಿತ್ತು. ವಿಧಾನಸಭಾ ಚುನಾವಣೆ ವೇಳೆ ಹಲವು ರಾಜಕಾರಣಿಗಳಿಗೆ ಆತಂಕ ಮೂಡಿಸುವ ಹಂತಕ್ಕೆ ಹೋರಾಟದ ಧ್ವನಿ ಮೊಳಗತೊಡಗಿತ್ತು.
ದಿನ ಕಳೆದಂತೆ ಹೋರಾಟದಲ್ಲೇ ಭಿನ್ನ ಧ್ವನಿ ಕಾಣಿಸಿಕೊಂಡಿತು. ಹೋರಾಟಗಾರರಲ್ಲೇ ಪರಸ್ಪರ ಅಪನಂಬಿಕೆ, ಆರೋಪ-ಪ್ರತ್ಯಾರೋಪ, ತಾವು ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ, ವ್ಯಕ್ತಿ ಪ್ರತಿಷ್ಠೆ ಎಲ್ಲದರ ಫಲವಾಗಿ ಮಹದಾಯಿ ಹೋರಾಟ ಕಳೆಗುಂದಿತು. ಮಹದಾಯಿ ಬಗ್ಗೆ ನಮ್ಮ ಸಂಸದರು ಲೋಕಸಭೆಯಲ್ಲಿ ಸಂಘಟಿತ ಧ್ವನಿ ತೋರಲಿಲ್ಲ.
ನಮ್ಮ ಪರವಾಗಿ ಧ್ವನಿ ಎತ್ತಿ, ಪ್ರಧಾನಿ ಮಧ್ಯಪ್ರವೇಶಕ್ಕೆ ಯತ್ನಿಸಲಿಲ್ಲ ಎಂಬುದು ಹೋರಾಟಗಾರರ ಬಹುದೊಡ್ಡ ಆಕ್ಷೇಪ, ಆರೋಪವಾಗಿತ್ತು. ಇದೀಗ ಸಂಸದರ ಆಯ್ಕೆಯ ಲೋಕಸಭಾ ಚುನಾವಣೆ ಬಂದಿದೆ. ಈ ವೇಳೆ, ಹೋರಾಟದ ಧ್ವನಿ ಗಟ್ಟಿಯಾಗಿ ಮೊಳಗಬೇಕಾಗಿತ್ತು. ಆದರೆ, ಹೋರಾಟ ಎಲ್ಲೋ ಮುಳುಗಿದಂತೆ ತೋರುತ್ತಿದೆ. ಯಾವ ರಾಜಕೀಯ ಪಕ್ಷವೂ ಈ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ.
ವಿಧಾನಸಭಾ ಚುನಾವಣೆ ಕಳೆದು ವರ್ಷದೊಳಗೆ ಎದುರಾದ ಲೋಕಸಭಾ ಚುನಾವಣೆಗೆ ಈ ಎರಡೂ ಚಳವಳಿಗಳು ಎಲ್ಲಿವೆ ಎಂದು ಹುಡುಕಾಡುವ ರೀತಿಯಲ್ಲಿ ಹೋರಾಟದ ಧ್ವನಿ ಮೌನಕ್ಕೆ ಜಾರಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.