ಕೃಷ್ಣ-ಕಾಫಿ ನಾಡಿನಲ್ಲೂ ಅಬ್ಬರಕ್ಕೆ ಕೊರತೆ; ಮತದಾರ ತೀರ್ಪಿನೊಂದಿಗೆ ಸಿದ್ಧ
Team Udayavani, Apr 17, 2019, 6:30 AM IST
ಉಡುಪಿ: “ದೇಶದ ರಕ್ಷಣೆಗೆ ಮೋದಿ ಬೇಕು, ನಮ್ಮದೇನಿದ್ದರೂ ಬಿಜೆಪಿಯ ಶೋಭಾ ಕರಂದ್ಲಾಜೆಯವರಿಗೆ ಮತ’ ಎಂದು ಬಿಜೆಪಿ ಅಭಿಮಾನಿಗಳು, ಕಾರ್ಯಕರ್ತರು ಹೇಳುತ್ತಿದ್ದರೆ, “ಶೋಭಾ ಕರಂದ್ಲಾಜೆಯವರು ಕ್ಷೇತ್ರಕ್ಕೆ ಭೇಟಿ ಕೊಡಲಿಲ್ಲ, ಅವರಿಗೇಕೆ ಮತ ಹಾಕಬೇಕು? ಆದ್ದರಿಂದ ಈ ಬಾರಿ ಪ್ರಮೋದ್ ಮಧ್ವರಾಜರಿಗೆ ಮತ’ ಎಂಬುದು ಕಾಂಗ್ರೆಸ್- ಜೆಡಿಎಸ್ ಅಭಿಮಾನಿಗಳ ವರಸೆ.
“ಶೋಭಾ ಕರಂದ್ಲಾಜೆಯವರು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರ ಪಡೆಯಲಿಲ್ಲ’ ಎಂಬುದು ಬಿಜೆಪಿ ಕಾರ್ಯಕರ್ತರ ಪ್ರತಿವರಸೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರಾದ್ಯಂತ ಕಣದ ಅಂತಿಮ ಚಿತ್ರಣ ಹೇಗಿದೆ ಎಂಬುದನ್ನು ಗಮನಿಸುವಾಗ ಮತದಾರನ ಜಾಣ್ಮೆ ಅರಿವಿಗೆ ಬರುತ್ತದೆ. ಜತೆಗೆ ಒಂದೊಂದು ಕಡೆ ಒಂದೊಂದು ಪಕ್ಷ ಪ್ರಾಬಲ್ಯ ಹೊಂದಿದೆ. ಇದು ಸ್ಥಳೀಯ ಮುಖಂಡರ ವರ್ಚಸ್ಸನ್ನೂ ಆಧರಿಸಿರುವುದೂ ಸುಳ್ಳಲ್ಲ. ಕ್ಷೇತ್ರಕಾರ್ಯದ ಸಾರವನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, “ಶೋಭಾ ಕರಂದ್ಲಾಜೆಯವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಪಾಸಿಟಿವ್ ಬಲವಾಗಿ ಕಂಡರೆ, ಪ್ರಮೋದ್ ಮಧ್ವರಾಜರಿಗೆ ಶೋಭಾರ ನೆಗೆಟಿವ್ (ಶೋಭಾರ ಬಗ್ಗೆ ಕೇಳಿಬರುತ್ತಿರುವ ಟೀಕೆಗಳು) ಎಂಬುದೇ ಶಕ್ತಿ’ ಎಂಬಂತಾಗಿದೆ.
ಬಿಜೆಪಿ ವಲಯ, ಜನಸಾಮಾನ್ಯರಲ್ಲಿ ಮೋದಿ ವಿಜೃಂಭಿಸುತ್ತಿದ್ದರೆ, ಜೆಡಿಎಸ್- ಕಾಂಗ್ರೆಸ್ ಪಾಳಯದಲ್ಲಿ ಶೋಭಾ ನೆಗೆಟಿವ್ ಆಗಿ ವಿಜೃಂಭಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸಿಪಿಐ ಕಾರ್ಯಕರ್ತರು ಸರ್ಜಿಕಲ್ ಸ್ಟ್ರೈಕ್‌ನಿಂದ ಬಿಜೆಪಿಗೆ ಹೆಚ್ಚಿನ ಆಕರ್ಷಣೆ ಒದಗಿದೆ ಎನ್ನುತ್ತಾರೆ. ಜೆಡಿಎಸ್- ಕಾಂಗ್ರೆಸ್ ಪಾಳಯದವರು ಏಕ್‌ದಂ “ಶೋಭಾ ಅವರು ಕ್ಷೇತ್ರಕ್ಕೇ ಬರಲಿಲ್ಲ. ನಮ್ಮನ್ನು ನೋಡದವರಿಗೆ ನಾವೇಕೆ ಮತ ಹಾಕಬೇಕು’ ಎಂದು ಪ್ರಶ್ನಿಸುತ್ತಾರೆ. ಬಿಜೆಪಿ ಕಾರ್ಯಕರ್ತರಿಗೆ ಮೋದಿಯಿಂದ ಬಲ ಬಂದಿರುವುದಂತೂ ನಿಜ. ಬಿಎಸ್‌ಪಿ ಅಭ್ಯರ್ಥಿ ಕನಿಷ್ಠ 25 ಸಾವಿರ ಮತ ಗಳಿಸಬಹುದೆಂದು ಆ ಪಕ್ಷದ ಕಾರ್ಯಕರ್ತ ಸಂಜೀವರ ಅಭಿಪ್ರಾಯ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಗಡಿ ಎನಿಸಿರುವ, ನಕ್ಸಲ್‌ಪೀಡಿತ ಪ್ರದೇಶ ಮಾಳದಲ್ಲಿ ಬಿಜೆಪಿಗೇ ಹೆಚ್ಚು ಒಲವು ಇದೆ ಎನ್ನುತ್ತಾರೆ ಮಾಳದ ಗೂಡಂಗಡಿ ಮಾಲಕ ರಮೇಶ್. ಕೊಪ್ಪ ಪರಿಸರದಲ್ಲಿ ಬಿಜೆಪಿ- ಜೆಡಿಎಸ್ ಸಮಬಲ ಹೊಂದಿದೆ ಎಂಬುದು ಗಾರೆ ಕಾರ್ಮಿಕ ನಾರಾಯಣರ ಅಭಿಮತ. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದೇ ಕ್ಷೇತ್ರದ ನೆಮ್ಮಾರಿನಲ್ಲಿ ಬಿಜೆಪಿ ಪರ ಒಲವು ಕಂಡುಬರುವುದನ್ನು ವ್ಯಾಪಾರಿ ಅನಿತಾ ಭಟ್, ಕುಂಚಬೈಲಿನಲ್ಲಿ ಜೆಡಿಎಸ್- ಕಾಂಗ್ರೆಸ್ ಒಲವು ಇರುವುದನ್ನು ರೈತ ಲೋಕಣ್ಣ ಜಿ.ಎಂ. ಬೊಟ್ಟು ಮಾಡುತ್ತಾರೆ. “ಹೋದ ಬಾರಿ ಬಿಜೆಪಿಯವರಿಗೆ ಓಟ್ ಹಾಕಿದ್ದೆವು. ಈ ಬಾರಿ ನೋಡಬೇಕು’ ಎಂದು ಆಯ್ಕೆ ಮುಂದು ಕುಳಿತುಕೊಳ್ಳುತ್ತಾರೆ ಮಾಗಿದ ವಯಸ್ಸಿನ ಕೃಷಿಕ ಚಿನ್ನಪ್ಪ ಗೌಡರು.
ಅಡಿಕೆಗೆ ಹಳದಿ ರೋಗ, ಕಾಳುಮೆಣಸಿಗೆ ಬೋರಾ ಗಂಟುಹುಳ ರೋಗ, ಭತ್ತಕ್ಕೆ, ಕಾಡು ಪ್ರಾಣಿಗಳ ಹಾವಳಿ, ಕಾಫಿಗೆ ಅಧಿಕ ಮಳೆಯಿಂದ ತೊಂದರೆ-ಇವು ಯಾವುದಕ್ಕೂ ಶೋಭಾ ಕರಂದ್ಲಾಜೆಯವರಿಂದ ಪರಿಹಾರ ಸಿಕ್ಕಿಲ್ಲ ಎಂದು ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತ ಲೋಕಣ್ಣ ವಾದಿಸಿದರೆ, ಮೋದಿ ಸರಕಾರವೂ ಪರಿಹಾರವನ್ನು ಕೊಡುತ್ತಿದೆ. ಅಡಿಕೆ ರೋಗಕ್ಕೆ ಔಷಧವೇ ಸಿಕ್ಕಿಲ್ಲ. ಕಾಫಿಗೆ ಮಳೆ ಹೆಚ್ಚು ಬಂದಾಗ ಸಮಸ್ಯೆಯಾಗುತ್ತದೆ ಎಂದು ಬಿಜೆಪಿ ಒಲವಿನ ಕೃಷಿಕರಾದ ಗಡಿಗಲ್‌ನ ರವೀಂದ್ರ, ವೆಂಕಟೇಶ ಭಟ್‌ರ ಪ್ರತಿವಾದ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡೂ ಪಕ್ಷಗಳ ಅಸ್ತಿತ್ವವಿದೆ.ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಇದೆ ಎಂದು ಉಡುಪಿ ಗುಂಡಿಬೈಲಿನಲ್ಲಿರುವ ಬ್ಯಾಂಕೊಂದರ ಪ್ರಬಂಧಕ ಮೂಲತಃ ಚಿಕ್ಕಮಗಳೂರು ಜಿಲ್ಲೆ ಅಂಗಲಗಂಡಿ ನಿವಾಸಿ ಭಾಸ್ಕರ್ ಉಲ್ಲೇಖೀಸುತ್ತಾರೆ. ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಎನ್‌ಆರ್ ಪುರದಲ್ಲಿ ಬಿಜೆಪಿಗೆ ಹೆಚ್ಚು ಒಲವು ಕಂಡುಬಂದರೆ ಬಾಳೆಹೊನ್ನೂರು, ಬಣಕಲ್, ಶಾಂತಿಪುರ, ದುಗ್ಲದಲ್ಲಿ ಸಮಬಲದ ವಾತಾವರಣ. ಆಂದಿ, ಹೇರೂರಿನಲ್ಲಿ ಕಾಂಗ್ರೆಸ್‌ನತ್ತ ಒಲವು ತೋರಿಬರುತ್ತಿದೆ.
ಬಾಳೆಹೊನ್ನೂರಿನ ಪಾನ್‌ಬೀಡ ಅಂಗಡಿಯ ಶಿವಣ್ಣ ಅವರು “ಯಾರು ಬಂದರೆ ಏನು? ನಮಗೆ ಗ್ರಾಹಕರೇ ಲಕ್ಷ್ಮೀ’ ಎಂದು ಹೇಳುತ್ತಾ ಜೆಡಿಎಸ್ ನತ್ತ ನಿಲ್ಲುತ್ತಾರೆ. ಜಯಪುರದಂತಹ ಕೆಲವೆಡೆ ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಚಾರಕ್ಕೆ ಬಂದಿಲ್ಲ. “ಸರ್ಜಿಕಲ್ ಸ್ಟ್ರೈಕ್‌ನಿಂದ ಮೋದಿ ಪರ ಒಲವು ಹೆಚ್ಚಾಗಿದೆ. ಆದರೆ ಶೋಭಾರಿಗಲ್ಲ’ ಎಂದು ಸಿಪಿಐ ಮಾಜಿ ಪದಾಧಿಕಾರಿ ಮುರಳಿಯವರ ಅಂಬೋಣ. ಕಳಸ, ಮೂಡಿಗೆರೆಯಲ್ಲಿ ಸಿಪಿಐ, ದಸಂಸ ಕಾರ್ಯಕರ್ತರದ್ದು ಜೆಡಿಎಸ್‌ಗೆ ಬೆಂಬಲವಿದೆ.
ತಮಿಳುನಾಡು ಚುನಾ ವಣೆ ಹೊಣೆ ಹೊತ್ತಿದ್ದ ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿಯವರು ಊರಿಗೆ ಮರಳಿ ಬಿಜೆಪಿ ಪ್ರಚಾರದಲ್ಲಿ ತೊಡಗಿ ಕೊಂಡಿದ್ದರು. ಶೃಂಗೇರಿಯಲ್ಲಿ ಕಾಂಗ್ರೆಸ್ ಶಾಸಕ ರಿಂದ, ಉಳಿದೆಡೆ ಬಿಜೆಪಿ ಶಾಸಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಮಲ್ಪೆಯಲ್ಲಿ ಪ್ರಮೋದ್ ಪರ ವಾಗಿ, ಕಾರ್ಕಳ ಬೈಲೂರಿನಲ್ಲಿ ಬಿಜೆಪಿಯತ್ತ ಮನಸ್ಸಿದೆ ಎನ್ನುತ್ತಾರೆ ಮಲ್ಪೆಯಲ್ಲಿ ಕೆಲಸ ಮಾಡುವ ಬೈಲೂರಿನ ರಾಜ ಅವರು.
ಉಡುಪಿ- ಚಿಕ್ಕಮಗಳೂರು: 15,13,940 ಮತದಾರರು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಗಿಂತ ಈಗ 1,62,595 ಮತದಾರರು ಹೆಚ್ಚಳವಾಗಿದ್ದು, ಶೇ. 10.74 ಹೆಚ್ಚಳ ದಾಖಲಾಗಿದೆ. 2014ರ ಚುನಾವಣೆ ವೇಳೆ ಒಟ್ಟು 13,51,245 ಮತದಾರರಿದ್ದರೆ, ಈ ಬಾರಿ 15,13,940 ಮಂದಿ ಇದ್ದಾರೆ. ಇವರಲ್ಲಿ 7,38,691 ಪುರುಷರು, 7,75,102 ಮಹಿಳೆಯರು. ತೃತೀಯ ಲಿಂಗಿಗಳು 47.
ವಿಭಿನ್ನ ಸಮಸ್ಯೆಗಳು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಳುಮೆಣಸು, ಕಾಫಿ, ಭತ್ತ ಬೆಳೆಯುವವರ ಸಮಸ್ಯೆ ಢಾಳಾಗಿ ಕಂಡುಬಂದರೆ, ಉಡುಪಿ ಜಿಲ್ಲೆಯಲ್ಲಿ ಬೇಸಗೆಯಲ್ಲಿ ಕುಡಿಯುವ ನೀರು, ಮಳೆ ಗಾಲದಲ್ಲಿ ಕೃತಕ ನೆರೆ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತಿರುವುದು ಸ್ಪಷ್ಟ.
ಮೋದಿನ್/ “ಪ್ರ’ಮೋದ್‌ನ್ ಬುಡ್ರೆಗ್ ಆಪುಂಡಾ?
ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋದಿ ಸದ್ದು ಕೇಳಿಸುತ್ತಿ¤ದೆ. ” ಮೋದಿನ್ ಬುಡ್ರೆಗ್ ಆಪುಂಡಾ?’ ಎಂದು ಕೆಲವೆಡೆ ಕೇಳಿ ಬಂದರೆ, “ವೈಕ್ಲ ಎಂಕ್ಲೆನ್ ಕೈತ ಚಿಹ್ನೆ ಇಜ್ಜಿಯತ್ತಾ!’ ಎಂಬ ಕೊರಗು ಉಡುಪಿ, ಕಾಪು, ಕಾರ್ಕಳ, ಹೆಬ್ರಿ ಮೊದಲಾದೆಡೆ ಕೇಳಿಬರುತ್ತಿದೆ. ಕಲ್ಯಾಣಪುರ ಹೊಳೆಯಾಚೆ ಬ್ರಹ್ಮಾವರ, ಕುಂದಾಪುರ ತಾಲೂಕಿನ ಕುಂದಕನ್ನಡದ ಭಾಗಗಳಲ್ಲಿಯೂ ಕಾಂಗ್ರೆಸ್ ಚಿಹ್ನೆ ಇಲ್ಲದಿರುವ ಕೊರತೆ ಕಾಣಿಸುತ್ತದೆ. ಇಲ್ಲಿಯೂ “ಮೋದಿನ ಬಿಡುಕಾಗತ್ತಾ ಮಾರಾಯೆÅ? ‘ ಎಂಬ ಅಭಿಪ್ರಾಯವನ್ನು ಹೇಳುತ್ತಾರೆ. ಹಿರಿಯ ಮತದಾರರಿಗೆ ಕಾಂಗ್ರೆಸ್ ಚಿಹ್ನೆ ಇಲ್ಲದಿರುವುದು ನೋವು ತಂದಿದೆ. ಕರಾವಳಿ ಭಾಗದಲ್ಲಿ ಪ್ರಮೋದ್ ಮಧ್ವರಾಜರು ತಮ್ಮವ ಎಂಬ ಭಾವನೆಯೂ ಸುಪ್ತವಾಗಿದೆ.
ಹೀಗಾಗಿ “ಪ್ರಮೋದ್ರೆನ್ ಬುಡ್ರೆಗ್ಲಾ ಆಪುಜಿ?’ ಎಂಬ ಭಾವನೆಯೂ ಹಲವರಿಂದ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗೆ ಬಂದಂತೆ ಉಡುಪಿಗೂ ಪ್ರಧಾನಿ ಮೋದಿಯವರು ಬರಬೇಕಿತ್ತು. ಆಗ ಇಡೀ ವಾತಾವರಣದ ಬಿಸಿ ಇನ್ನಷ್ಟು ಏರುತ್ತಿತ್ತು ಎಂದೂ ಹಲವರು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ಚಿಹ್ನೆ: ಎರಡೂ ಪಕ್ಷಗಳಿಗೆ ಸವಾಲು
ಜೆಡಿಎಸ್ ಚಿಹ್ನೆಯನ್ನು ಜನರಿಗೆ ಮನ ವರಿಕೆ ಮಾಡುವ ಸವಾಲು ಕಾಂಗ್ರೆಸ್ / ಜೆಡಿಎಸ್ ಎರಡೂ ಪಕ್ಷಗಳಿಗೆ ಇದೆ. ಬಿಸಿಲಿನ ಬಿಸಿಯಲ್ಲಿಯೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡು ತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಲೆಕ್ಷನ್ ಜೋಶ್ ಅಷ್ಟಾಗಿ ಕಾಣುತ್ತಿಲ್ಲ. ಆದರೂ ಎಲ್ಲ ಮತದಾರರಿಗೆ ಮತ ಹಾಕಲು ಉತ್ಸಾಹವಿದೆ. ಎಲ್ಲರಲ್ಲೂ ಮತ ಹಾಕುವ ಕರ್ತವ್ಯಪ್ರಜ್ಞೆ ಕಂಡುಬರುತ್ತಿದೆ.
ಹಿಂದಿನ ದಿನ ಕೂಲಿ ಕಾರ್ಮಿಕರ ನಾಡಿ ಪರೀಕ್ಷೆ !
ಕೂಲಿಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಶೇ. 10-20 ಮಂದಿ ಅಸ್ಸಾಂ, ಉತ್ತರ ಕರ್ನಾ ಟಕದವರು. ಇವರಿಗೆ ಇಲ್ಲಿ ಮತದಾನದ ಹಕ್ಕಿಲ್ಲ. ಸ್ಥಳೀಯ ಕೂಲಿ ಕಾರ್ಮಿಕರ ಮತಗಳು ಹಿಂದಿನ ದಿನವೇ ನಿಗದಿಯಾಗುತ್ತವೆ ಎಂದರು ಮಾರ್ಮಿಕ ವಾಗಿ ಕಾಂಡ್ಯದ ರಂಜಿತ್.
ಆಮೆ- ಮೊಲದ ಕತೆ ನೆನಪು!
“ಸರ್ ಮೂಡಿಗೆರೆಯಲ್ಲಿ ಕೇಳುವುದೇ ಬೇಡ. ನಾವೇ ಮುಂದೆ. ಆದರೆ ಒಂದೇ ಒಂದು ಹೆದರಿಕೆ. ಆಮೆ – ಮೊಲದ ಓಟದಂತೆ ಆಗ ಬಾರದು’ ಎನ್ನುತ್ತಾರೆ ಹಾಸ್ಯ ಧಾಟಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಪುನೀತ್, ಅವಿನಾಶ್.
ಅಪರೂಪದಲ್ಲಿ ಕಾಣುವ ಗೌಡರ ಪ್ರೇಮ
ಅಪರೂಪದಲ್ಲಿ ಕಂಡುಬರುವ ದೇವೇ ಗೌಡರು-ಕುಮಾರಸ್ವಾಮಿ ಮುಖಂಡತ್ವಕ್ಕೆ ಮೆಚ್ಚುಗೆ ಕುಂಚಬೈಲಿನಲ್ಲಿದೆ. ನಮ್ಮ ಕುಮಾರಣ್ಣ ರೈತರಿಗೆ ಅನುಕೂಲ ಮಾಡಿ ಕೊಡುತ್ತಿದ್ದಾರೆ. ಎನ್ನುತ್ತಾರೆ ಸ್ಥಳೀಯ ರೈತ ಲೋಕಣ್ಣ.
ಮಾಸದ ಸುಂದರೇಶ್!
1984 ಮತ್ತು 1988ರಲ್ಲಿ ಕಾಂಗ್ರೆಸ್‌ಗೆ ಸಡ್ಡು ಹೊಡೆದು ಸ್ಪರ್ಧಿಸಿದ ಸಿಪಿಐನ ಬಿ.ಕೆ. ಸುಂದರೇಶ್ ಅವರು ಆ ಕಾಲದ ಜನರಲ್ಲಿ ಇನ್ನೂ ಜೀವಂತವಾಗಿದ್ದಾರೆ. “ಅವರ ಸಾಮರ್ಥ್ಯ ಅದ್ಭುತವಾದುದು. ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೇ ಸಮಸ್ಯೆಯಾದರೂ ತತ್‌ಕ್ಷಣ ಧಾವಿಸಿ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಅವರ ಕಾಲಾನಂತರ ಪತ್ನಿ ರಾಧಾ ಸುಂದರೇಶ್ ಸಂಘಟನೆಯನ್ನು ಮುಂದುವರಿಸಿದರು. ಬಳಿಕ ತಣ್ಣಗಾಯಿತು. ಸುಂದರೇಶ್ ಇರುತ್ತಿದ್ದರೆ ಒಂದೆರಡು ಶಾಸಕರನ್ನು ಖಂಡಿತವಾಗಿ ಹೊಂದಿರುತ್ತಿದ್ದರು’ ಎಂಬುದು ಅವರ ಅಭಿಮಾನಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಣತಿ ನಿವಾಸಿ ಕೃಷಿಕ ಜಯಶಂಕರ್.
ಮತದಾರರಿಗೆ ಆಸಕ್ತಿ
“ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮತಗಟ್ಟೆಗೆ ಹೋಗಲು ಏಳೆಂಟು ಕಿ.ಮೀ. ನಡೆಯಬೇಕು. ಆದರೂ ಶೇ. 90-92 ಮತದಾನ ಆಗುತ್ತದೆ’ ಎಂಬ ಅಭಿಪ್ರಾಯವನ್ನು ಉಡುಪಿ -ಚಿಕ್ಕಮಗಳೂರು ಜಿಲ್ಲೆಯ ಗಡಿ ನೆಮ್ಮಾರು ಗ್ರಾ.ಪಂ. ಪಿಡಿಒ ಮಂಜು ದಳವಾಯಿಯವರ ಅಭಿಪ್ರಾಯ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.