ಮಂಡ್ಯ ಗೌಡ್ತಿ ಜೆಡಿಎಸ್‌ಗೆ ಕಬ್ಬಿಣದ ಕಡಲೆ


Team Udayavani, Mar 22, 2019, 7:35 AM IST

mandya.jpg

ಮಂಡ್ಯ: ಲೋಕಸಭಾ ಚುನಾವಣೆಯ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಶಕ್ತಿ ಪ್ರದರ್ಶನದ ಮೂಲಕ ಜೆಡಿಎಸ್‌ಗೆ ಶಾಕ್‌ ನೀಡಿದ್ದಾರೆ. ಮಂಡ್ಯ ಗೌಡ್ತಿಯ ಅಬ್ಬರಕ್ಕೆ ದಳಪತಿಗಳು ನಡುಗಿದ್ದು, ಇದಕ್ಕೆ ಪ್ರತಿಯಾಗಿ ನಿಖಿಲ್‌ ನಾಮಪತ್ರ ಸಲ್ಲಿಸುವ ದಿನ ಲಕ್ಷಕ್ಕೂ ಹೆಚ್ಚು ಜನರನ್ನು ಕರೆತಂದು ಪ್ರತಿಷ್ಠೆ ಪ್ರದರ್ಶಿಸುವುದಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಸಾಂಕೇತಿಕವಾಗಿ ಗುರುವಾರ (ಮಾ.21) ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಯಾವುದೇ ಕಾರಣವಿಲ್ಲದೆ ದಿಢೀರನೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಮುಂದೂಡಲಾಯಿತು. ಯಾವುದೇ ಪೂರ್ವಸಿದ್ಧತೆ ಇಲ್ಲದೆ ನಾಮಪತ್ರ ಸಲ್ಲಿಸಿ ಅಪಹಾಸ್ಯಕ್ಕೆ ಗುರಿಯಾಗುವುದು ಬೇಡ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜಿಲ್ಲಾ ಕೇಂದ್ರಕ್ಕೆ ಕರೆತಂದು ಜನಸಾಗರದ ಮಧ್ಯೆ ಪುತ್ರನ ಉಮೇದುವಾರಿಕೆ ಸಲ್ಲಿಸುವ ಮಹತ್ವಾಕಾಂಕ್ಷೆ ಸಿಎಂ ಕುಮಾರಸ್ವಾಮಿ ಅವರದ್ದಾಗಿದೆ. ಈ ಸಂಬಂಧ ಈಗಾಗಲೇ ಜೆಡಿಎಸ್‌ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೆ ಕಾರ್ಯತಂತ್ರ ರೂಪಿಸಿದ್ದಾರೆ.

ನಿರೀಕ್ಷೆಗೂ ಮೀರಿದ ಜನಸಾಗರ: ಸುಮಲತಾ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎಲ್ಲರ ನಿರೀಕ್ಷೆಯನ್ನೂ ಮೀರಿ ಜನರು ಗುಪ್ತಗಾಮಿನಿಯಂತೆ ಸುಮಲತಾ ಬೆಂಬಲಿಸಲು ಆಗಮಿಸಿದ್ದರು. ಈ ಜನಪ್ರವಾಹ ಜೆಡಿಎಸ್‌ನವರ ಚುನಾವಣಾ ಲೆಕ್ಕಾಚಾರವನ್ನೇ ತಲೆಕೆಳಗು ಮಾಡುವಂತೆ ಕಂಡು ಬಂದಿತು. ಮೈತ್ರಿ ಧರ್ಮವನ್ನು ಧಿಕ್ಕರಿಸಿ ಕಾಂಗ್ರೆಸ್ಸಿಗರು ಸುಮಲತಾಗೆ ಸಾಥ್‌ ನೀಡಿರುವುದು ಜೆಡಿಎಸ್‌ನವರಿಗೆ ತಲೆಬಿಸಿ ಹೆಚ್ಚಾಗುವಂತೆ ಮಾಡಿದೆ.

ನಿಖಿಲ್‌ ಗೆಲುವು ಸುಲಭವಲ್ಲ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸುಲಭ ತುತ್ತಾಗಬಹುದೆಂದು ಭಾವಿಸಿದ್ದ ಜೆಡಿಎಸ್‌ಗೆ ಮಂಡ್ಯ ಗೌಡ್ತಿ  ಕಬ್ಬಿಣದ ಕಡಲೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರಿದ್ದರೂ ಚುನಾವಣಾ ಗೆಲುವು ಅಷ್ಟು ಸುಲಭವಾಗಿಲ್ಲ. ಅಂಬರೀಶ್‌ ಸಾವಿನ ನಂತರದಲ್ಲಿ ಜನಮಾನಸದಲ್ಲಿ ಎದ್ದಿರುವ ಅನುಕಂಪದ ಅಲೆ ಹಾಗೂ ಸ್ಥಳೀಯ ನಾಯಕತ್ವದ ಪ್ರಶ್ನೆ ಜೆಡಿಎಸ್‌ ಮುನ್ನಡೆಗೆ ಬ್ರೇಕ್‌ ಹಾಕಿದೆ.

ಪ್ರಬಲ ಅಸ್ತ್ರಗಳಿಲ್ಲ: ಸುಮಲತಾ ಪರ ಎದ್ದಿರುವ ಜನಪರ ಅಲೆಯನ್ನು ತಗ್ಗಿಸುವುದಕ್ಕೆ ಜೆಡಿಎಸ್‌ ಬಳಿ ಪ್ರಬಲವಾದ ಅಸ್ತ್ರಗಳಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಂಟು ಶಾಸಕರು, ಮೂವರು ಸಚಿವರು, ಮೂವರು ವಿಧಾನಪರಿಷತ್‌ ಸದಸ್ಯರಿದ್ದರೂ ಸೋಲಿನ ಭಯ ಬೆಂಬಿಡದೆ ಕಾಡುತ್ತಿದೆ. ಪುತ್ರನ ರಾಜಕೀಯ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಚುನಾವಣೆ ಸಿಎಂ ಕುಮಾರಸ್ವಾಮಿ ಅವರ ನಿದ್ದೆಗೆಡಿಸುವಂತೆ ಮಾಡಿದೆ. ಮೊಮ್ಮಗನ ರಾಜಕೀಯ ಭವಿಷ್ಯದ ಬಗ್ಗೆ ದೇವೇಗೌಡರೂ ಚಿಂತೆಗೀಡಾಗಿದ್ದಾರೆ. ಜೆಡಿಎಸ್‌ ಭದ್ರಕೋಟೆಯೊಳಗೆ ಸುಮಲತಾ ದಿನದಿಂದ ದಿನಕ್ಕೆ ಗಟ್ಟಿಯಾಗಿ ಬೇರೂರುತ್ತಿರುವುದು ಪಕ್ಷದ ನಾಯಕರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಜೆಡಿಎಸ್‌ಗೆ ಸಂಕಷ್ಟ: ಅಂಬರೀಶ್‌ ಕುಟುಂಬವನ್ನು ರಾಜಕೀಯವಾಗಿ ದೂರವಿಡಲು ಜೆಡಿಎಸ್‌ ನಾಯಕರು ಆಡಿದ ದುಡುಕಿನ ಮಾತುಗಳ ಪರಿಣಾಮ ಈಗ ಎದುರಿಸುವಂತಹ ಸಂಕಷ್ಟ ಸ್ಥಿತಿ ಜೆಡಿಎಸ್‌ನವರದ್ದಾಗಿದೆ. ಸುಮಲತಾ ಹಾಗೂ ಅಂಬರೀಶ್‌ ಪರವಾಗಿ ಮಾತನಾಡಿದರೂ ಅಪಾಯ. ಇಲ್ಲವೇ, ಸುಮಲತಾ ಬೆಂಬಲಕ್ಕೆ ನಿಂತಿರುವ ನಟರ ವಿರುದ್ಧ ಮಾತನಾಡಿದರೂ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಅಖಾಡದಲ್ಲಿ ಯಾವ ಮಾತುಗಳನ್ನಾಡಬೇಕೆಂಬುದೇ ಜೆಡಿಎಸ್‌ನವರಿಗೆ ಗೊತ್ತಾಗುತ್ತಿಲ್ಲ. ಜಿಲ್ಲೆ ಅಭಿವೃದ್ಧಿ ಮಾಡುವ ಮಾತುಗಳು ಅವರ ನೆರವಿಗೆ ಬರುತ್ತಿಲ್ಲ.

ಜನಾಕ್ರೋಶ: ಇಷ್ಟಲ್ಲದೆ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ ಅವರನ್ನು  ಸಮರ್ಥಿಸಿಕೊಳ್ಳುವುದಕ್ಕೆ ಬಲವಾದ ಕಾರಣಗಳೂ ಇಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಸಿಎಂ ಕುಮಾರಸ್ವಾಮಿ ಆದಿಯಾಗಿ ಸ್ಥಳೀಯ ನಾಯಕರು ಹಲವು ಕಾರಣಗಳನ್ನು ಕೊಡುತ್ತಿದ್ದರೂ ಜನಾಕ್ರೋಶ ಕಡಿಮೆಯಾಗುತ್ತಿಲ್ಲ. ನಿಖಿಲ್‌ ಅವರನ್ನು ಕರೆತಂದಿದ್ದು ನಾವೇ ಎಂದು ಸಂಸದರು, ಶಾಸಕರು ಬೊಬ್ಬಿಡುತ್ತಿದ್ದರೂ ಜನರು ಅದನ್ನು ಒಪ್ಪುತ್ತಿಲ್ಲ. ನಿಖಿಲ್‌ ಅವರನ್ನು ಒಬ್ಬ ರಾಜಕಾರಣಿಯಾಗಿ ಸ್ವೀಕರಿಸುವುದಕ್ಕೆ ಜಿಲ್ಲೆಯ ಜನರು ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲದಂತೆ ಕಂಡುಬರುತ್ತಿದೆ. 

ಹಿಂದೆಂದೂ ಕಾಣದ ಸಂದಿಗ್ಧ ಪರಿಸ್ಥಿತಿ: ಸಾಮಾಜಿಕ ಜಾಲ ತಾಣಗಳಲ್ಲಿ ನಿಖಿಲ್‌ ಅವರನ್ನು ತಮಾಷೆಯ ವಸ್ತು (ಕಾಮಿಡಿ ಪೀಸ್‌)ವಾಗಿ ಕಾಣುತ್ತಿದ್ದಾರೆ. ನಿಖಿಲ್‌ ಎಲ್ಲಿದ್ದೀಯಪ್ಪ.. ಎಂಬ ಎರಡಕ್ಷರದ ಮಾತನ್ನೇ ಹಾಸ್ಯ ದಾಟಿಯಲ್ಲಿ ನೂರಾರು ಮಾದರಿಯಲ್ಲಿ ಚಿತ್ರಿಸಿ ಟ್ರೋಲ್‌ ಮಾಡಲಾಗುತ್ತಿದೆ. ಇದು ನಿಖಿಲ್‌ ರಾಜಕೀಯ ಭವಿಷ್ಯಕ್ಕೆ ಪ್ರಮುಖ ಅಡ್ಡಗಾಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಸಂಖ್ಯೆಯ ಜನರು ಇರದಿದ್ದರೂ ಮಾತಿನ ಮೂಲಕ ನಡೆಯುತ್ತಿರುವ ಪ್ರಚಾರ ಅತಿ ವೇಗದಲ್ಲಿ ಎಲ್ಲೆಡೆ ಹರಡುತ್ತಿದೆ. ಇದಕ್ಕೆ ಜೆಡಿಎಸ್‌ನವರು ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿ ವಿಷಯದಲ್ಲಿ ಎದುರಾಗಿರುವ ರಾಜಕೀಯ ಸಂದಿಗ್ಧ ಪರಿಸ್ಥಿತಿಯನ್ನು ಜೆಡಿಎಸ್‌ನ ಸ್ಥಳೀಯ ನಾಯಕರು ಹಿಂದಿನ ಯಾವುದೇ ಚುನಾವಣೆಯಲ್ಲೂ ಎದುರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ಗೆ ಅಗ್ನಿಪರೀಕ್ಷೆ: ಸುಮಲತಾ ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸುವುದರೊಂದಿಗೆ ಜೆಡಿಎಸ್‌ನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದಾರೆ. ಇದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿರುವ ಜೆಡಿಎಸ್‌ ಕೂಡ ಮಾ.25ರಂದು ನಿಖಿಲ್‌ ನಾಮಪತ್ರ ಸಲ್ಲಿಕೆ ದಿನ ನಡೆಯುವ ಜೆಡಿಎಸ್‌ ಬಹಿರಂಗ ಸಮಾವೇಶಕ್ಕೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಕರೆತರುವ ಶಪಥ ಮಾಡಿದ್ದಾರೆ. ಒಟ್ಟಾರೆ ರಣಕಣವಾಗಿ ಮಂಡ್ಯ ಲೋಕಸಭಾ ಕ್ಷೇತ್ರ ರೂಪಾಂತರಗೊಂಡಿದೆ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಅಂಬರೀಶ್‌ ಅಭಿಮಾನದ ಹೋರಾಟದಲ್ಲಿ ಯಾವುದಕ್ಕೆ ಅಂತಿಮ ಗೆಲುವು ಸಿಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಸುಮಳಿಗೆ ಯಾರಿಂದ ರಾಜಕೀಯ ಪಾಠ?: ಪಕ್ಷೇತರ ಅಭ್ಯರ್ಥಿ ಸುಮಲತಾ ಬೆನ್ನ ಹಿಂದೆ ನಿಂತು ಚುನಾವಣಾ ಮಾರ್ಗದರ್ಶನ ಮಾಡುತ್ತಿರುವವರು ಯಾರು, ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ ಮಹಿಳೆ ರಾಜಕಾರಣದ ಪಾಠ ಯಾರಿಂದ ಕಲಿಯುತ್ತಿದ್ದಾರೆ. ಚುನಾವಣಾ ಅಖಾಡದಲ್ಲಿ ಏಕಾಂಗಿಯಾಗಿ ಜನರನ್ನು ಆಕರ್ಷಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು ಹೇಗೆ, ಮಾತಿನಲ್ಲಿ ಸ್ಪಷ್ಟತೆ, ದಿಟ್ಟತನದಿಂದ ಉತ್ತರ ನೀಡುವ ಸಾಮರ್ಥ್ಯ ಎಲ್ಲಿಂದ ಬಂತು, ಅಂಬರೀಶ್‌ ಬದುಕಿದ್ದಾಗ ರಾಜಕಾರಣದಿಂದ ಬಹಳ ಅಂತರ ಕಾಯ್ದುಕೊಂಡಿದ್ದ ಸುಮಲತಾ, ಕೇವಲ ಮೂರೇ ತಿಂಗಳಲ್ಲಿ ರಾಜಕೀಯ ಧೀಮಂತ ಶಕ್ತಿಯನ್ನು ರೂಢಿಸಿಕೊಂಡಿರುವ ಬಗ್ಗೆ ಜೆಡಿಎಸ್‌ನವರು ತಲೆಕೆಡಿಸಿಕೊಂಡಿದ್ದಾರೆ. ಸುಮಲತಾ ಚುನಾವಣಾ ರಣನೀತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೆ ತಿಣುಕಾಡುತ್ತಿದ್ದಾರೆ.

ಅಂಬರೀಶ್‌ ಹೆಸರೇ ಬ್ರಹ್ಮಾಸ್ತ್ರ: ಚುನಾವಣಾ ಸಂಗ್ರಾಮದಲ್ಲಿ ಪ್ರಭಾವಿ ನಾಯಕರ ನೆರವಿಲ್ಲದೆ, ಯಾವುದೇ ಪಕ್ಷದ ಬೆಂಬಲವಿಲ್ಲದೆ ಅಂಬರೀಶ್‌ ಹೆಸರನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಸುಮಲತಾ ಮುನ್ನಡೆಯುತ್ತಿದ್ದಾರೆ. ಈ ಅಸ್ತ್ರ ಸುಮಲತಾಗೆ ದೊಡ್ಡ ಶಕ್ತಿಯಾಗಿ ನಿಂತಿರುವಂತೆ ಕಂಡುಬರುತ್ತಿದೆ. ಅಂಬರೀಶ್‌ ನಾಮಸ್ಮರಣೆಗೆ ಜಿಲ್ಲೆಯ ಜನರು ತಲೆದೂಗುತ್ತಿದ್ದಾರೆಂಬ ಭಾವನೆ ಎಲ್ಲೆಡೆ ಮೂಡಲಾರಂಭಿಸಿದೆ. ಈ ಅನುಕಂಪದ ಅಲೆಯೇ ಸುಮಲತಾ ನಾಮಪತ್ರ ಸಲ್ಲಿಕೆಯ ದಿನ  ಮೇಲೆದ್ದು ಬಂದಂತಿತ್ತು. ಈ ಅಲೆಯನ್ನು ತಗ್ಗಿಸುವುದು ದಳಪತಿಗಳಿಗೆ ದೊಡ್ಡ ಸವಾಲಾಗಿದೆ.

ಜೆಡಿಎಸ್‌ ಶಕ್ತಿಕೇಂದ್ರದೊಳಗೆ ಸ್ತ್ರೀಶಕ್ತಿ: ಸುಮಲತಾ ಪರ ಮಹಿಳೆಯರ ಒಲವು ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಏಕೆಂದರೆ, ಬುಧವಾರ ಸುಮಲತಾ ನಡೆಸಿದ ಬಹಿರಂಗ ಸಮಾವೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಸುಮಲತಾ ಡ್ರೆಸ್‌ಕೋಡ್‌, ಶಿಸ್ತುಬದ್ಧ ನಡೆಗೆ ಗ್ರಾಮೀಣ ಮಹಿಳೆಯರು ಆಕರ್ಷಿತರಾಗಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. 

ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಅವಮಾನದ ಮಾತುಗಳಿಂದ ಆತ್ಮವಿಶ್ವಾಸ ಕಳೆದುಕೊಳ್ಳದೆ, ಮಂಡ್ಯದ ಜನರು ನನ್ನ ಕೈ ಬಿಡುವುದಿಲ್ಲವೆಂಬ ಅಚಲ ನಂಬಿಕೆಯೊಂದಿಗೆ ಚುನಾವಣಾ ಅಖಾಡದಲ್ಲಿ ಅಂಬಿ ಮಾದರಿಯಲ್ಲೇ ಒಂಟಿ ಸಲಗನಂತೆ ಮುನ್ನಡೆಯುತ್ತಿದ್ದಾರೆ. ಜೆಡಿಎಸ್‌ ಶಕ್ತಿಕೇಂದ್ರದೊಳಗೆ ನವಶಕ್ತಿಯೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ಎಂಬ ಅಶ್ವವನ್ನು ಕಟ್ಟಿಹಾಕಲಾಗದೆ ಜೆಡಿಎಸ್‌ ನಾಯಕರು ಚಡಪಡಿಸುತ್ತಿದ್ದಾರೆ.

* ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.