ಜೆಡಿಎಸ್ ಭದ್ರಕೋಟೆಯೊಳಗೇ ದಳದ ತಳಮಳ
Team Udayavani, Apr 12, 2019, 6:05 AM IST
ಮಂಡ್ಯ: ಜೆಡಿಎಸ್‌ಗೆ ಗೋಲಿ ಆಡಿಕೊಂಡು ಗೆಲ್ಲಬಹುದಾದ ಕ್ಷೇತ್ರ ಯಾವುದಾದರೂ ಇದ್ದರೆಅದು ಮಂಡ್ಯ ಲೋಕಸಭಾ ಕ್ಷೇತ್ರವಾಗಿತ್ತು. ಎಲ್ಲಾ ಕ್ಷೇತ್ರಗಳಲ್ಲೂ ಆ ಪಕ್ಷದ ಶಾಸಕರೇ ಇದ್ದು ಜೆಡಿಎಸ್ ನ ಶಕ್ತಿಕೇಂದ್ರ ಎನಿಸಿತ್ತು. ಆದರೆ, ಸುಮಲತಾ ರಾಜಕೀಯ ಪ್ರವೇಶದ ಬಳಿಕ ಎದ್ದಿರುವ ಸುನಾಮಿಯಿಂದ ಭದ್ರಕೋಟೆಯೊಳಗೆ ಜೆಡಿಎಸ್, ಗೆಲುವಿಗೆ ತಳಮಳಿಸುವಂತಾಗಿದೆ.
ಅಂಬರೀಶ್ ಸಾವಿನ ನಂತರ ಸುಮಲತಾ ರಾಜಕೀಯ ಪ್ರವೇಶ ಮಾಡುವುದನ್ನು
ಯಾರೊಬ್ಬರೂ ನಿರೀಕ್ಷಿಸಿಯೇ ಇರಲಿಲ್ಲ. ಜೆಡಿಎಸ್‌ಗೆ ಅತ್ಯಂತ ಸುರಕ್ಷಿತ ಕ್ಷೇತ್ರವೆನಿಸಿದ್ದ ಮಂಡ್ಯದಿಂದ ಪುತ್ರ ನಿಖೀಲ್‌ನನ್ನು ಕಣಕ್ಕಿಳಿಸಿ ಆತನಿಗೆ ರಾಜಕೀಯಭವಿಷ್ಯ ಕಟ್ಟಿಕೊಡುವುದು ಸಿಎಂ ಕುಮಾರಸ್ವಾಮಿ ಕನಸಾಗಿತ್ತು. ಪುತ್ರನ ಪಟ್ಟಾಭಿಷೇಕಕ್ಕೆ ಪೂರ್ವಸಿದಟಛಿತೆಯನ್ನು ಭರ್ಜರಿಯಾಗಿಯೇ ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿರುಗಾಳಿಗೆ ಸಿಲುಕಿ ಧೂಳಿಪಟವಾಗಿದ್ದ ಕಾಂಗ್ರೆಸ್‌ನೊಳಗೆ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಇಲ್ಲವೆಂಬ ಹೀನಾಯ ಪರಿಸ್ಥಿತಿ ಇತ್ತು.
ಇದೇ ವೇಳೆಗೆ, ದಿಢೀರ್ ರಾಜಕೀಯ ಪ್ರವೇಶಮಾಡಿ ಕಾಂಗ್ರೆಸ್ ಮಾತ್ರವಲ್ಲದೆ ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಠಿಸಿದವರು ಸುಮಲತಾ. ಸಮರ್ಥ ಅಭ್ಯರ್ಥಿಯೇ ಇಲ್ಲದೆ, ರಾಜಕೀಯ ಅಸ್ತಿತ್ವವನ್ನೇ ಉಳಿಸಿಕೊಳ್ಳಲಾದೆ ಕಂಗೆಟ್ಟಿದ್ದ ಕಾಂಗ್ರೆಸ್ ಪಾಲಿಗೆ ಸುಮಲತಾ ಹೊಸ ಶಕ್ತಿಯಾಗಿ ಕಂಡು ಬಂದರು. ಚುನಾವಣಾ ಪೂರ್ವದಲ್ಲಿ ಜಿಲ್ಲಾದ್ಯಂತ ನಡೆಸಿದ ಪ್ರವಾಸ, ಅದಕ್ಕೆ ದೊರೆತ ಜನಮನ್ನಣೆ ಹಾಗೂ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಎದ್ದ ಅಲೆ ಇವೆಲ್ಲವೂ ದಳಪತಿಗಳನ್ನು ಬೆಸ್ತು ಬೀಳುವಂತೆ ಮಾಡಿತು.
ಸುಮಲತಾ ರಾಜಕೀಯ ಪ್ರವೇಶವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಅದನ್ನು ಅಷ್ಟೇ ಸೂಕ್ಷ್ಮವಾಗಿ ನಿಭಾಯಿಸುವುದಕ್ಕೆ ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್‌ನ ಯಾವೊಬ್ಬ ನಾಯಕರೂ ಮುಂದಾಗಲಿಲ್ಲ. ಬದಲಾಗಿ ಸುಮಲತಾ ವಿರುದ್ಧ ವಾಗ್ಧಾಳಿ ನಡೆಸಿದ್ದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಯಿತು.
ಸುಮಲತಾ, ಕಾಂಗ್ರೆಸ್ ಟಿಕೆಟ್ ಬಯಸಿದರೂ ಅದು ಸಿಗಲಿಲ್ಲ. ಮೈತ್ರಿ ಸೂತ್ರದನ್ವಯ ಕಾಂಗ್ರೆಸ್ ಅಂತಿಮವಾಗಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಟ್ಟಿತು. ಹೀಗಾಗಿ, ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕದನ ಕಣ ಪ್ರವೇಶಿಸಿದರು. ಕಾಂಗ್ರೆಸ್ ಹೈಕಮಾಂಡ್ ಮೈತ್ರಿ ಧರ್ಮ ಪಾಲನೆಗೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದರೂ, ಇದಕ್ಕೆ ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಕ್ಯಾರೆ ಎನ್ನಲಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸುಮಲತಾ ಬೆಂಬಲಕ್ಕೆ ನಿಂತರು.
ನಿರ್ಣಾಯಕ ಅಂಶ: ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಬ್ಬರೂ ಪ್ರಬಲ ಒಕ್ಕಲಿಗ ಜನಾಂಗದ ಅಭ್ಯರ್ಥಿಗಳು. ಒಕ್ಕಲಿಕಸಮುದಾಯದ ಅಭ್ಯರ್ಥಿಗಳು
ಅಖಾಡದಲ್ಲಿರುವುದರಿಂದ ಈ ಜನಾಂಗದಮತಗಳು ಇಬ್ಬರಿಗೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಹಂಚಿ ಹೋಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಆದರೆ, ಈ ವರ್ಗದ ಮತಗಳು ಯಾರ ಪಾಲಾಗಲಿವೆ ಎನ್ನುವುದು ಇನ್ನೂ ರಹಸ್ಯ.
ಕಳೆದ ವಿಧಾನಸಭಾ ಚುನಾವಣೆ ವೇಳೆಒಕ್ಕಲಿಗರೆಲ್ಲರೂ ಒಗ್ಗಟ್ಟಾಗಿ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ದರಿಂದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಬಾವುಟ ರಾರಾಜಿಸಿತ್ತು. ಆ ವೇಳೆ, ಇತರ ವರ್ಗದ ಮತಗಳು ನಿರ್ಣಾಯಕ ಎನಿಸಿರಲಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಹಿಂದ ಮತಗಳನ್ನು ಯಾರು ತೆಕ್ಕೆಗೆ ತೆಗೆದುಕೊಳ್ಳುವರೋ ಅವರೇ ಅಂತಿಮವಾಗಿ ಗೆಲುವಿನ ದಡ ಮುಟ್ಟುವರು ಎನ್ನಲಾಗುತ್ತಿದೆ.
ತಂದೆ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿರುವುದು, ದೇವೇಗೌಡರ ಕುಟುಂಬದ ಕುಡಿ ಎನ್ನುವುದು, ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಶಾಸಕರು ಇರುವುದು, ಮೈತ್ರಿ ಪಕ್ಷದ ಬೆಂಬಲ ನಿಖೀಲ್‌ಗೆ ಪ್ಲಸ್ ಪಾಯಿಂಟ್. ಇನ್ನು, ಬಿಜೆಪಿ, ರೈತಸಂಘ, ಅಂಬರೀಶ್ ಅಭಿಮಾನಿಗಳು,ಸಿನಿಮಾರಂಗದ ಬೆಂಬಲ, ಪತಿಯ ಸಾವಿನ
ಅನುಕಂಪ ಸುಮಲತಾಗೆ ಪ್ಲಸ್ ಪಾಯಿಂಟ್.
ಕ್ಷೇತ್ರವ್ಯಾಪ್ತಿ: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮೇಲುಕೋಟೆ, ಕೆ.ಆರ್.ಪೇಟೆ, ಕೆ.ಆರ್.ನಗ ರ, ಮಂಡ್ಯ, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರು ವಿಧಾನಸಭಾ ಕ್ಷೇತ್ರಗಳು ಬರಲಿವೆ. 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರಿದ್ದಾರೆ. ಇವರಲ್ಲಿ ಮೂವರು ಸಚಿವರು,ಮೂವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ.
– ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.