ನಾನೂ ಚೌಕಿದಾರ: ಪ್ರಧಾನಿ ಸಂವಾದ ಇಂದು
Team Udayavani, Mar 31, 2019, 6:00 AM IST
ಬೆಂಗಳೂರು: “ನಾನೂ ಚೌಕಿದಾರ’ ಅಭಿಯಾನದಡಿ ಪ್ರಧಾನಿ ಮೋದಿಯವರು ಭಾನುವಾರ ಸಂಜೆ 5 ಗಂಟೆಗೆ ದೇಶದ 500 ಕಡೆ ನಾನಾ ವರ್ಗದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ಕಾರ್ಯಕ್ರಮ ಆಯೋಜನೆ ಯಾಗಿದ್ದು, ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು “ನಾನೂ ಚೌಕಿದಾರ’ ಅಭಿಯಾನದ ರಾಜ್ಯ
ಸಹ ಸಂಚಾಲಕ ಕರುಣಾಕರ್ ಕಾಸಲೆ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ಬಡತನ, ಭ್ರಷ್ಟಾಚಾರ, ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ
ಮಾಡಲು “ನಾನು ಚೌಕಿದಾರ’ ಎಂದು ಕರೆದುಕೊಂಡರು. ಈ ಅಭಿಯಾನಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಹೆಸರಿನೊಂದಿಗೆ ಚೌಕಿದಾರ್ ಎಂದು
ಸೇರಿಸಿಕೊಂಡಿದ್ದಾರೆ. ಭಾನುವಾರ ನಡೆಯುವ ಸಂವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ,
ಚಿತ್ರದುರ್ಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಇತರೆ
ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕ ಬಾಲಾಜಿ ಮಾತನಾಡಿ, 10ದಿನಗಳಿಂದ “ನಾನೂ ಚೌಕಿದಾರ’ ಆ್ಯಷ್‌ಟ್ಯಾಗ್‌ನಡಿ ಹೊಸ ಚಿಂತನೆ, ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ.
ವುಗಳನ್ನು ಪರಿಶೀಲಿಸಿ ಆಯ್ದ ಕೆಲ ಪ್ರಶ್ನೆಗಳಿಗೆ ಪ್ರಧಾನಿಯವರು
ಉತ್ತರಿಸಲಿದ್ದಾರೆ. ಭಾನುವಾರ ಸಂಜೆ 5 ಗಂಟೆಗೆ ಶುರುವಾಗುವ ಸಂವಾದ ಸುಮಾರು ಒಂದೂವರೆ ಗಂಟೆ ಕಾಲ ನಡೆಯಲಿದೆ ಎಂದು ಹೇಳಿದರು.ರಾಜ್ಯ ಬಿಜೆಪಿ ಸಹ ವಕ್ತಾರ ಎಸ್.ಪ್ರಕಾಶ್, ಬೆಂಗಳೂರು ಕೇಂದ್ರ ಕ್ಷೇತ್ರ ವ್ಯಾಪ್ತಿಯ ಮಾರತ್ ಹಳ್ಳಿಯ “ಇ-ಜೋನ್’ನಲ್ಲಿ ಆಯೋಜಿಸಲಾಗಿರುವ ಸಂವಾದ ಕೇಂದ್ರದಲ್ಲಿ ಸಾವಿರಾರು ಮಂದಿ
ಪಾಲ್ಗೊಳ್ಳಲಿದ್ದಾರೆ. ಈ ಕೇಂದ್ರದಲ್ಲಿ ಕೆಲವರೊಂದಿಗೆ ಪ್ರಧಾನಿಯವರು “ನಮೋ ಆ್ಯಪ್’ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು. ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್ ಇತರರು ಉಪಸ್ಥಿತರಿದ್ದರು.
ಏಪ್ರಿಲ್ 10-12ಕ್ಕೆ ರಾಜ್ಯದಲ್ಲಿ ಮೋದಿ ಪ್ರಚಾರ
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 8 ರಂದು ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ರ್ಯಾಲಿಯಲ್ಲಿ
ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಏ. 10 ಮತ್ತು 12 ರಂದು ರಾಜ್ಯದಲ್ಲಿ ಬಿಜೆಪಿ
ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ
ಉಪಮುಖ್ಯಮಂತ್ರಿ ಆರ್. ಅಶೋಕ್ ತಿಳಿಸಿದರು. ಶನಿವಾರ ನಗರದಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಲೋಕಸಭಾ
ಚುನಾವಣೆ ನಿಮಿತ್ತ ರಾಜ್ಯದ 7 ಕಡೆ ಮೋದಿ ಅವರಿಂದ ರ್ಯಾಲಿ ಏರ್ಪಡಿಸಲಾಗಿದೆ.
ಈಗಾಗಲೇ ಎರಡು ಕಡೆ ಮುಗಿದಿದ್ದು, ಉಳಿದ ಐದು ಕಡೆ ರ್ಯಾಲಿ ನಡೆಯಲಿದೆ. ಬೆಂಗಳೂರಿನಲ್ಲಿ ಏ. 2 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮಾ.31 ರಂದು ಸಂಜೆ 5
ಗಂಟೆಗೆ ಮೋದಿ ಅವರಿಂದ “ನಾನು ಚೌಕಿದಾರ್’ ವಿಡಿಯೋ ಸಂವಾದ ಏರ್ಪಡಿಸಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.