ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ
ಅಭ್ಯರ್ಥಿಗಳೊಂದಿಗೆ ಅಭ್ಯುದಯ ಸಂವಾದ
Team Udayavani, Apr 13, 2019, 6:00 AM IST
ಐವತ್ತರ ಸಂಭ್ರಮದಲ್ಲಿರುವ ಉದಯವಾಣಿ ತನ್ನ ಮಂಗಳೂರು ಬ್ಯೂರೋ ಕಚೇರಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಜತೆ ಅಭ್ಯುದಯ ಸಂವಾದವನ್ನು ಹಮ್ಮಿಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪಾಲ್ಗೊಂಡು ತಮ್ಮ ಯೋಜನೆ-ಚಿಂತನೆಗಳನ್ನು ಸಂಪಾದಕೀಯ ಬಳಗದ ಸದಸ್ಯರೊಂದಿಗೆ ಹಂಚಿಕೊಂಡರು. ಅದರ ಸಂಗ್ರಹಿತ ರೂಪ ಇಲ್ಲಿ ನೀಡಲಾಗಿದೆ.
– ನೀವು ಸಂಸದರಾದರೆ ನಿಮ್ಮ ಆದ್ಯತೆಗಳೇನು?
ಕ್ಷೇತ್ರದ ಯುವ ಜನರು ಇಲ್ಲೇ ಕಲಿತು, ಇಲ್ಲೇ ದುಡಿಯುವ ಮುಖೇನ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಉದ್ಯೋಗಾವಕಾಶಕ್ಕೆ ಹೆಚ್ಚಿನ ಒತ್ತು ನೀಡುವೆ. ವಿಮಾನ, ರೈಲ್ವೇ ಮತ್ತು ಬಂದರು ಒಳಗೊಂಡ ಜಿಲ್ಲೆಯಲ್ಲಿ ಹಾಲಿ ಸಂಸದರ ಇಚ್ಛಾಶಕ್ತಿ-ಸಂವಹನ ಕೊರತೆಯಿಂದ ನಿರೀಕ್ಷಿತ ಪ್ರಗತಿ ಆಗಿಲ್ಲ. 36 ಕಿ.ಮೀ. ಕರಾವಳಿ ತೀರವಿದ್ದರೂ ಕೇರಳ ಮತ್ತು ಗೋವಾದಷ್ಟು ಪ್ರವಾಸೋದ್ಯಮಕ್ಕೆ ಮಹತ್ವ ನೀಡಿಲ್ಲ. ಸಿಆರ್‌ಝಡ್ ನಿಯಮಾವಳಿಯಲ್ಲಿ ಸಡಿಲಿಕೆ ಮಾಡುವತ್ತ ಆಸಕ್ತಿ ತೋರಿಲ್ಲ. ಮೆಡಿಕಲ್ ಕಾರಿಡಾರ್, ಧಾರ್ಮಿಕ ಟೂರಿಸಂ ಬೆಳವಣಿಗೆಗೆ ಒತ್ತು ನೀಡಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜಿಲ್ಲೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಆದರೆ ಬೇರೆ ಜಿಲ್ಲೆಗಳಲ್ಲಿ ಆಯಾ ಸಂಸದರು ಸಾಕಷ್ಟು ಬದಲಾವಣೆ ತಂದಿದ್ದಾರೆ. ನಮ್ಮದು ಸೌಹಾರ್ದ ಇತಿಹಾಸದ ಜಿಲ್ಲೆ. ಇಲ್ಲಿ ಬಿಜೆಪಿಯವರು ಓಟಿಗಾಗಿ ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿ ಸೌಹಾರ್ದ ಉಳಿಯಬೇಕು. ಎಲ್ಲರೂ ಏಕತೆ-ಒಗ್ಗಟ್ಟಿನಿಂದ ಇರುವ ವಾತಾವರಣ ನಿರ್ಮಿಸಲು ಪ್ರಯತ್ನಿಸುವೆ. ನನ್ನ ಧರ್ಮವನ್ನು ಆರಾಧಿಸು; ಬೇರೆ ಧರ್ಮವನ್ನೂ ಗೌರವಿಸು ಎಂಬ ತಣ್ತೀ ನನ್ನದು. ಒಟ್ಟಾರೆಯಾಗಿ ಜಿಲ್ಲೆಯ ಹಿತ ಕಾಪಾಡುವೆ.
– ಮತದಾರರಿಗೆ ನಿಮ್ಮ ಭರವಸೆ ಏನು?
ನಾನು ಯುವಜನರ ಕಷ್ಟಗಳನ್ನು ಅರಿತು ಬಂದವನು. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸೇರಿದಂತೆ ಯುವಜನರ ಜತೆಗೆ ಬೆರೆತು ಸಂಬಂಧ ಇಟ್ಟುಕೊಂಡಿರುವವನು. ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಆರೋಪವಿದೆ. ಹಾಗಾಗಿ ಯುವಕರು ದುಶ್ಚಟಗಳಿಗೆ ಬಲಿ ಬೀಳುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮುಖ್ಯ ಆದ್ಯತೆ. ಜಿಲ್ಲೆಯಲ್ಲಿ ರುವಷ್ಟು ಸಾಂಸ್ಕೃತಿಕ ಸೊಬಗು ಬೇರೆಲ್ಲೂ ಇಲ್ಲ. ತಿರುವೈಲುಗುತ್ತುವಿನಲ್ಲಿ ಕಂಬಳ ಆಚರಿಸಿಕೊಂಡು ಬಂದಿದ್ದೇನೆ. ತುಳುನಾಡಿನ ಹೆಮ್ಮೆಯ ಪಿಲಿನಲಿಕೆ ನಡೆಸಿಕೊಂಡು ಬಂದಿದ್ದೇನೆ. ಇಂಥ ಸಾಂಸ್ಕೃತಿಕ ಆಯಾಮದ ವಿವಿಧ ಕಾರ್ಯಚಟುವಟಿಕೆಗಳಿಗೆ ವಿಶೇಷ ಒತ್ತು ನೀಡುವೆ. ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಿಲಿನಲಿಕೆ ಪ್ರತಿಷ್ಠಾನದ ಹುಲಿ ಕುಣಿತವನ್ನು ಪ್ರದರ್ಶಿಸುವ ಅವಕಾಶ ನಿರೀಕ್ಷಿಸಲಾಗಿದೆ. ಜತೆಗೆ, ಮೂಲಸೌಕರ್ಯ, ರೈಲು ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯ ಚಿಂತನೆಯೂ ಇದೆ.
– ಜಿಲ್ಲೆಯಲ್ಲಿ ಶಿಕ್ಷಣ, ಪ್ರವಾಸೋದ್ಯಮಕ್ಕೆ ಯಾವ ರೀತಿಯ ಒತ್ತು ನೀಡಲು ಬಯಸಿದ್ದೀರಿ?
ನಮ್ಮದು ಶೈಕ್ಷಣಿಕವಾಗಿ ಪ್ರಬುದ್ಧ ಜಿಲ್ಲೆ. ಮುಂದಿನ ದಿನಗಳಲ್ಲಿ ಸೆಂಟ್ರಲ್ ಸ್ಕೂಲ್‌ಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಗುಣಮಟ್ಟದ ಶಿಕ್ಷಣ ಒದಗಣೆಗೆ ಪ್ರಾಮುಖ್ಯ ನೀಡಬೇಕಿದೆ. ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ನೀಡಲಾಗುವುದು. ಜಿಲ್ಲೆಯಲ್ಲಿ ಹಿನ್ನೀರಿನ ತಾಣಗಳಿದ್ದರೂ ಅವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಿಲ್ಲ. ಈ ಬಗ್ಗೆ ಗಮನಹರಿಸುವೆ. ಕರಾವಳಿಯ ತೀರ ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲಕ ಸ್ಥಳೀಯರಿಗೆ, ಮೀನು ಗಾರರಿಗೆ ಹೆಚ್ಚು ಲಾಭವಾಗುವಂತೆ ಯೋಜನೆ ರೂಪಿಸಲಾಗುವುದು.
-ನಿಮ್ಮ ಪ್ರಕಾರ, ಸ್ಥಳೀಯವಾಗಿ ಉದ್ಯೋಗಾವಕಾಶ ಹೇಗೆ ಹೆಚ್ಚಿಸಬಹುದು?
ಕರಾವಳಿಯಲ್ಲಿ ರಾಸಾಯನಿಕ ಕಾರ್ಖಾನೆಗಳನ್ನು ಆರಂಭಿಸುವ ಬದಲು ಅಟೊಮೊಬೈಲ್ ಉತ್ಪಾದನ ಸಂಸ್ಥೆ, ಐಟಿ ಕಂಪೆನಿಗಳು, ಬಿಪಿಒ, ಮಲ್ಟಿ ನೇಷನಲ್ ಕಂಪೆನಿಗಳು ಸೇರಿದಂಥ ಕಂಪೆನಿಗಳಿಗೆ ಆದ್ಯತೆ ನೀಡಬೇಕು. ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯ.
– ನಿಮ್ಮ ಪ್ರತಿಸ್ಪರ್ಧಿ ನಳಿನ್‌ಕುಮಾರ್ 3ನೇ ಬಾರಿಗೆ ಕಣದಲ್ಲಿರುವಾಗ, ಮತದಾರರು ನಿಮ್ಮನ್ನು ಏಕಾಗಿ ಆಯ್ಕೆ ಮಾಡಬೇಕು?
ಒಬ್ಬ ಸ್ಥಳೀಯ ಹುಡುಗನಾಗಿ ಪರಿಚಿತನಾಗಿದ್ದ ನನ್ನನ್ನು ಈ ಮಟ್ಟಕ್ಕೆ ತಂದಿರುವುದು ಜಿಲ್ಲೆಯ ಮತದಾರರು. ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದನ್ನು ನೀವೇ ಹೇಳಬೇಕು. ಯಾಕೆಂದರೆ ಕ್ಷೇತ್ರದಲ್ಲಿ ಎಲ್ಲಿಯೂ ನಳಿನ್ ಕುಮಾರ್ ಹೆಸರು ಕೇಳುತ್ತಿಲ್ಲ. ಬದಲಾಗಿ ಮೋದಿ ಎಂದೇ ಹೇಳುತ್ತಿದ್ದಾರೆ. ನಳಿನ್ ಅವರಿಗೆ ಮತ ಹಾಕಿ ಎಂಬ ಮಾತೇ ಇಲ್ಲ. ಹೀಗಿರುವಾಗ ಜಿಲ್ಲೆಯಲ್ಲಿ ಬದಲಾವಣೆ ನಿರೀಕ್ಷಿಸುವುದು ಸಹಜ. ನಾನು ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ, ವೈದ್ಯಕೀಯ ಕುಟುಂಬದಿಂದ ಬಂದವನು. ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಬದಲಾವಣೆ ತರಲು ಒಂದು ಅವಕಾಶ ಕೇಳುತ್ತಿದ್ದೇನೆ.
– ಕರಾವಳಿಯಲ್ಲಿ ಸದ್ಯ ಟೋಲ್‌ಗೇಟ್ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ಪರಿಹಾರಗಳೇನು?
ಪಕ್ಷಭೇದ ಬಿಟ್ಟು ಯಾರು ಯಾವಾಗ ಟೋಲ್‌ಗೇಟ್ ವಿರುದ್ಧ ಹೋರಾಟಕ್ಕೆ ಮುಂದೆ ಬಂದಿದ್ದಾರೋ ಆಗ ನಾನು ಸಂಪೂರ್ಣ ಬೆಂಬಲ ಸೂಚಿಸಿದ್ದೇನೆ. ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ ಟೋಲ್‌ಗೇಟ್ ವಿರೋಧಿ ಹೋರಾಟದಲ್ಲಿ 11 ದಿನ ಭಾಗವಹಿಸಿದ್ದೆ. ನಮ್ಮೂರಿನ ಜನರು ತಮ್ಮ ಭೂಮಿ ನೀಡಿ, ಜಿಲ್ಲೆಯ ಅಭಿವೃದ್ಧಿಗಾಗಿ ರಸ್ತೆ ಮಾಡಲು ಅವಕಾಶ ನೀಡಿ ಓಡಾಟಕ್ಕೆ ಶುಲ್ಕ ಪಾವತಿಸಬೇಕಾದ ಸನ್ನಿವೇಶ ಇದೆ. ಸರ್ವೀಸ್ ರಸ್ತೆ ಸೇರಿದಂತೆ ಯಾವುದೇ ಮೂಲ ಸೌಕರ್ಯ ನೀಡದೇ, ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿ ಅವರ ಕೈಗೊಂಬೆಯಾಗಿ ಸಂಸದರು ವರ್ತಿಸುತ್ತಿದ್ದಾರೆ. ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಹೀಗಾಗಿ ಸಂಸದನಾದರೆ ಸುರತ್ಕಲ್ ಸೇರಿದಂತೆ ಜಿಲ್ಲೆಯಲ್ಲಿರುವ ಜನವಿರೋಧಿ ಟೋಲ್ ಬಂದ್ ಮಾಡಲು ಬದ್ಧ.
– ಮಂಗಳೂರು ಅಂಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಸೌಕರ್ಯಗಳ ಅಭಿವೃದ್ಧಿಗೆ ಏನು ಮಾಡುತ್ತೀರಿ?
ಸಂಸದರು ನಮ್ಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿಯವರ ಕೈಗೆ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಜನರಿಗೆ ಉದ್ಯೋಗ ಸಮಸ್ಯೆ ಎದುರಾಗಿದೆ. ಏರ್‌ಪೋರ್ಟ್ ಪಕ್ಕದಲ್ಲಿರುವ ಗ್ರಾಮದವರಿಗೆ ಸೂಕ್ತ ಡ್ರೈನೇಜ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಜತೆಗೆ ರೈಲು ಸಂಪರ್ಕ ಉತ್ತಮಗೊಳಿಸಲು ಮತ್ತು ಮಂಗಳೂರಿನಿಂದ ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸುವುದು ಪ್ರಮುಖ ಆದ್ಯತೆ.
– ಪಂಪ್‌ವೆಲ್-ತೊಕ್ಕೊಟ್ಟು ಫ್ಲೆ$çಓವರ್ ಕಾಮಗಾರಿ ಹಿನ್ನಡೆಗೆ ಕಾಂಗ್ರೆಸ್‌ನವರೇ ಕಾರಣ ಎನ್ನುವ ಆರೋಪವಿದೆಯಲ್ಲ?
ಪಂಪ್‌ವೆಲ್ ಫ್ಲೆಓವರ್ ಕಾಮಗಾರಿ ವಿಷಯ ದಲ್ಲಿ ನಮ್ಮ ಸಂಸದರು ಎಷ್ಟು ಖ್ಯಾತರಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಂಪ್‌ವೆಲ್ ಪ್ಲೈಓವರ್ ವಿಳಂಬಕ್ಕೆ ಎಲ್ಲರೂ ಜಿಲ್ಲೆಯನ್ನು ವ್ಯಂಗ್ಯ ಮಾಡುವಂತಾಗಿದೆ. ಗಡುವು ಕೊಟ್ಟು ವರ್ಷಗಳೇ ಕಳೆದಿವೆ. ಶಿರಾಡಿ ಘಾಟಿ ಕಾಮಗಾರಿಯನ್ನು ಬಿಜೆಪಿ ಸಾಧನೆ ಎನ್ನುವವರು, ಯುಪಿಎ ಸರಕಾರ ವನ್ನು ನೆನಪಿಸಿಕೊಳ್ಳುವುದಿಲ್ಲ, ಆಸ್ಕರ್ ಬಗ್ಗೆ ಪ್ರಸ್ತಾವಿ ಸುವುದಿಲ್ಲ. ಆದರೆ ಪಂಪ್‌ವೆಲ್ ವಿಷಯ ಬಂದಾಗ ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
– ಸಂಸದರು ದ.ಕ. ಜಿಲ್ಲೆಗೆ 16,500 ಕೋ.ರೂ.ಗಳ ಯೋಜನೆ ತಂದಿರುವುದಾಗಿ ಹೇಳುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು?
ಇಷ್ಟು ಪ್ರಮಾಣದ ಅನುದಾನ ಎಲ್ಲಿ ಬಂದಿದೆ ಎಂಬುದನ್ನು ಅವರು ತೋರಿಸಲಿ; ನನಗೆ ಗೊತ್ತಿಲ್ಲ. ಗುರುಪುರ ಸೇತುವೆ ಕಾಮಗಾರಿ ಆರಂಭವಾಗುವ ಸ್ಥಳದಲ್ಲಿ ಸಿಗುವ ಬ್ಯಾನರ್‌ನಲ್ಲಿ 36 ಕೋ.ರೂ. ಎಂದು ಉಲ್ಲೇಖವಿದ್ದರೆ, ಸೇತುವೆ ಮುಗಿಯುವಲ್ಲಿ 34 ಕೋ.ರೂ.ಗಳ ಇನ್ನೊಂದು ಬ್ಯಾನರ್ ಇದೆ. ಹಾಗಾದರೆ 2 ಕೋ.ರೂ. ಎಲ್ಲಿ ಹೋಯಿತು? ಹೀಗೆ ಜಿಲ್ಲೆಗೆ ಬಂದಿರುವ ಅನುದಾನದ ಬಗ್ಗೆ ಸರಿಯಾದ ಲೆಕ್ಕವೇ ಇಲ್ಲ. ಹೀಗಾಗಿ ಯಾವ ಕ್ಷೇತ್ರ, ಯಾವ ಗ್ರಾಮಕ್ಕೆ ಹಣ ಕೊಟ್ಟಿದ್ದಾರೆ ಎಂಬುದನ್ನು ಅವರು ತೋರಿಸಲಿ. ಅವರ ಆದರ್ಶ ಗ್ರಾಮ ಬಳ್ಪದಲ್ಲಿ ಕೇವಲ 4 ಸೋಲಾರ್ ಲೈಟ್ ಮತ್ತು ಒಂದು ಬ್ಯಾಂಕ್ ಬಿಟ್ಟರೆ ಏನೂ ಆಗಿಲ್ಲ. ವಿಶೇಷವೆಂದರೆ ಡಾಮರು ರಸ್ತೆಯೇ ಇಲ್ಲ. ಹೀಗಿರುವಾಗ 16 ಸಾವಿರ ಕೋಟಿ ರೂ. ಅನುದಾನದ ಬಗ್ಗೆ ನನಗೂ ಅನುಮಾನವಿದೆ.
ಉದ್ಯೋಗ ದೊರಕಿಸುವುದು ಮುಖ್ಯ ಆದ್ಯತೆ. ಜಿಲ್ಲೆ ಸಾಂಸ್ಕೃತಿಕ ವೈಭವಕ್ಕೆ ಪ್ರಸಿದ್ಧ. ಇಲ್ಲಿರುವಷ್ಟು ಸಾಂಸ್ಕೃತಿಕ ಸೊಬಗು ಬೇರೆಲ್ಲೂ ಇಲ್ಲ. ಇಂತಹ ಸಾಂಸ್ಕೃತಿಕ ಆಯಾಮದ ವಿವಿಧ ಕಾರ್ಯ ಚಟು ವಟಿಕೆಗಳಿಗೆ ವಿಶೇಷ ಒತ್ತು ನೀಡುತ್ತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಆಶಯವನ್ನು ಹೊಂದಿದ್ದೇನೆ.
– ಮಿಥುನ್ ರೈ ,
ಕಾಂಗ್ರೆಸ್ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.