ಮೋದಿ vs ದೀದಿ ಜಗಳ್ಬಂದಿ
Team Udayavani, Apr 4, 2019, 6:00 AM IST
ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಬಿರುಸಿನ ವಾಕ್ಸಮರ ನಡೆದಿದೆ. ಸಿಲಿಗುರಿ ರ್ಯಾಲಿಯಲ್ಲಿ ದೀದಿ ವಿರುದ್ಧ ಮೋದಿ ಗುಡುಗಿದರೆ, ಅದರ ಬೆನ್ನಲ್ಲೇ ಕೂಛ… ಬೆಹಾರ್‌ನಲ್ಲಿ ಮೋದಿ ಟೀಕೆಗೆ ಮಮತಾ ಪ್ರತ್ಯುತ್ತರ ನೀಡಿದ್ದಾರೆ. ಕೂಛ…ಬೆಹಾರ್ ರ್ಯಾಲಿ ಗುರುವಾರಕ್ಕೆ ನಿಗದಿಯಾಗಿತ್ತಾದರೂ, ಮೋದಿ ಆರೋಪಕ್ಕೆ ಉತ್ತರಿಸುವ ಸಲುವಾಗಿಯೇ ರ್ಯಾಲಿಯನ್ನು ಒಂದು ದಿನ ಮುಂಚಿತವಾಗಿಯೇ ನಡೆಸುವ ಮೂಲಕ ದೀದಿ ಅಚ್ಚರಿ ಮೂಡಿಸಿದ್ದಾರೆ.
ಮೋದಿ- ದೀದಿ; ಏಟು- ಎದಿರೇಟು
ದೇಶದ ಇತರೆಡೆ ಅಭಿವೃದ್ಧಿ ಕಾರ್ಯ ಕೈಗೊಂಡಂತೆ ಪಶ್ಚಿಮ ಬಂಗಾಳದಲ್ಲಿ ಮಾಡಲು ಆಗಲಿಲ್ಲ.
ಏಕೆಂದರೆ, ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಭಿವೃದ್ಧಿಯ “ಸ್ಪೀಡ್ ಬ್ರೇಕರ್’ ಆಗಿ ಕೆಲಸ ಮಾಡಿ, ಪ್ರಗತಿಗೆ ಅಡ್ಡಿಯಾದರು
ರಾಜ್ಯದ ಅಭಿವೃದ್ಧಿ ವೇಗ ಪಡೆಯಬೇಕೆಂದರೆ ಮೊದಲು ಸ್ಪೀಡ್ ಬ್ರೇಕರ್ ದೀದಿ ಅಧಿಕಾರ ಕಳೆದುಕೊಳ್ಳಬೇಕು
ಮಮತಾರಿಂದಾಗಿ ಇಲ್ಲಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಸಿಗದಂತಾಗಿದೆ
ಇಂದು ನಾನು ಇಲ್ಲಿಗೆ ಬಂದಿರದಿದ್ದರೆ, ಮಮತಾರ ಹಡಗು ಮುಳುಗುತ್ತಿರುವುದು ಗೊತ್ತೇ ಆಗುತ್ತಿರಲಿಲ್ಲ
ಬಾಲಕೋಟ್ ದಾಳಿಯಿಂದ ಪಾಕ್‌ಗಿಂತ ಲೂ ಹೆಚ್ಚಿನ ನೋವು ಆಗಿದ್ದು ದೀದಿಗೆ
ನಾನು ಮೋದಿ ಅಲ್ಲ, ಅವರಂತೆ ಸುಳ್ಳು ಹೇಳುವುದಿಲ್ಲ. ಅವರೊಬ್ಬ “ಎಕ್ಸ್‌ಪೈರಿ ಬಾಬು'(ಅವಧಿ ಮುಗಿದ ನಾಯಕ)
ರಾಜ್ಯದ ಅಭಿವೃದ್ಧಿ ಬಗ್ಗೆ ಟಿವಿಯಲ್ಲಾಗಲೀ, ಸಾರ್ವಜನಿಕ ರ್ಯಾಲಿಯಲ್ಲಾಗಲೀ ಮೋದಿ ಅವರು ಮುಖಾಮುಖೀ ಚರ್ಚೆಗೆ ಬರಲಿ. ಇದು ನನ್ನ ಸವಾಲು.
ನನ್ನ ಆಡಳಿತದಲ್ಲಿ ಪಶ್ಚಿಮ ಬಂಗಾಳದ ರೈತರ ಆದಾಯವು ಮೂರು ಪಟ್ಟು ಅಧಿಕವಾಗಿದೆ.
ಅದೇ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ 12 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೀವು “ಅಮ್ಮ’ನಿಗೆ ನಮಸ್ಕರಿಸುತ್ತೀರಿ. ಅದೇ ಪಕ್ಕದ ಮನೆಯಲ್ಲಿರುವ “ಅಮ್ಮಿ’ಯನ್ನು ಗೌರವಿಸುವುದಿಲ್ಲ
ದೇಶ ವಿಭಜಿಸುವ ನಿಮ್ಮ ಕನಸು ಈಡೇರಲ್ಲ. ಮೊದಲು ದಿಲ್ಲಿಯನ್ನು ನೋಡಿಕೊಳ್ಳಿ, ಆಮೇಲೆ ಬಂಗಾಳಕ್ಕೆ ಬನ್ನಿ. ನಿಮಗೆ ಜನ ದಿಲ್ಲಿ ಕಿ ಲಡ್ಡು ತಿನ್ನಿಸುತ್ತಾರೆ
ಯುಪಿಎ ತಪ್ಪು ಸರಿಪಡಿಸಲು 5 ವರ್ಷ ಬೇಕಾಯಿತು: ಪ್ರಧಾನಿ
ಯುಪಿಎ ಸರಕಾರ ನಡೆಸಿರುವ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳಲು 5 ವರ್ಷಗಳು ಬೇಕಾದವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬುಧವಾರ ಮುಂಬೈನ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನು 2014ರಲ್ಲಿ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಆದರೆ, ಪ್ರಮುಖ ಕೆಲಸಗಳನ್ನು ಮಾಡಿದ್ದೇನೆ. ಹಿಂದಿನ ಸರಕಾರದ ತಪ್ಪುಗಳನ್ನು ಸರಿಪಡಿಸಲೇ 5 ವರ್ಷಗಳು ಬೇಕಾದವು. ಹಾಗಾಗಿ, ನನಗೆ ಇನ್ನೂ 5 ವರ್ಷಗಳ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ, ಬಾಲಕೋಟ್ ದಾಳಿಯನ್ನು ಜನ ಇನ್ನೂ ಮರೆತಿಲ್ಲ ಎಂದೂ ಹೇಳಿದ್ದಾರೆ.
ಕಾರಿನ ಡೋರಲ್ಲಿ 2 ಕೋಟಿ ಪತ್ತೆ
ತಮಿಳುನಾಡಿನ ಪೆರಂಬಲೂರ್‌ನಲ್ಲಿ ಬುಧವಾರ ಕಾರೊಂದರಲ್ಲಿ ಬರೋಬ್ಬರಿ 2.10 ಕೋಟಿ ರೂ. ನಗದು ಪತ್ತೆಯಾಗಿದೆ. ಪೊಲೀಸರ ತಂಡ ತಪಾಸಣೆ ನಡೆಸಿದಾಗ ಆರಂಭದಲ್ಲಿ ಏನೂ ಸಿಕ್ಕಿರಲಿಲ್ಲ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ, ಕಾರಿನ ಸೀಟುಗಳೊಳಗೆ ಹಾಗೂ ಬಾಗಿಲುಗಳೊಳಗೆ ನೋಟುಗಳನ್ನು ತುಂಬಿಸಿಟ್ಟಿದ್ದು
ಬೆಳಕಿಗೆ ಬಂತು. ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ) ಪಕ್ಷದ ರಾಜ್ಯ ಉಪ ಕಾರ್ಯದರ್ಶಿ ಪ್ರಭಾಕರನ್ ಮತ್ತು ಕಾರ್ಯಕರ್ತ ತಂಗದುರೈ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಸಿಎಂ ಬೆಂಗಾವಲು ವಾಹನದಲ್ಲಿ 1.8 ಕೋಟಿ!
ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಅವರ ಬೆಂಗಾವಲು ವಾಹನ ವನ್ನು ತಪಾಸಣೆ ನಡೆಸಿದಾಗ ಅದರಲ್ಲಿ 1.8 ಕೋಟಿ ರೂ. ನಗದು ಪತ್ತೆಯಾ ಗಿದ್ದು, ಅಧಿಕಾರಿಗಳನ್ನು ಅದನ್ನು ವಶಕ್ಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಬುಧವಾರ ಬೆಳಗ್ಗೆ ಅರುಣಾಚಲದಲ್ಲಿ ಪ್ರಧಾನಿ ಮೋದಿ ರ್ಯಾಲಿ ಆರಂಭವಾಗುವ ಸ್ವಲ್ಪ ಮುನ್ನ ಈ ಘಟನೆ ನಡೆದಿದೆ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್, “ಬಿಜೆಪಿ ಮತಕ್ಕಾಗಿ ಲಂಚ ಹಗರಣ ಮಾಡುತ್ತಿದೆ. ಸಿಎಂ ಖಂಡು, ಡಿಸಿಎಂ ಚೌನಾರನ್ನು ಕೂಡಲೇ ವಜಾ ಮಾಡಬೇಕು. ಪ್ರಧಾನಿ ವಿರುದ್ಧವೂ ಕೇಸು ದಾಖಲಿಸಬೇಕು’ ಎಂದು ಆಗ್ರಹಿಸಿದೆ.
ಶಾ ವಿರುದ್ಧ ಚಾವಡಾ ಕಣಕ್ಕೆ
ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಶಾಸಕ ಸಿ.ಜೆ. ಚಾವಡಾರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಗಾಂಧಿ ನಗರ ಉತ್ತರ ಅಸೆಂಬ್ಲಿ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿ ಚಾವಡಾ ಆಯ್ಕೆ ಯಾಗಿದ್ದಾರೆ. ಇವರು ಶಾಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಇನ್ನೊಂದೆಡೆ, ಚಂಡೀಗಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿದ್ದ ಪಂಜಾಬ್ ಸಚಿವ ನವಜೋತ್ ಸಿಧು ಪತ್ನಿ, ಮಾಜಿ ಶಾಸಕಿ ನವ ಜೋತ್ ಕೌರ್‌ಗೆ ಟಿಕೆಟ್ ಕೈತಪ್ಪಿದೆ. ಈ ಕ್ಷೇತ್ರದಲ್ಲಿ ಪವನ್ ಕುಮಾರ್ ಬನ್ಸಲ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರಿಂದ, ಕೌರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಲು ಜೈಲು ಕೊಠಡಿ ತಪಾಸಣೆ
ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾರೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ, ಜೈಲು ಅಧಿಕಾರಿಗಳು ಲಾಲು ಕೊಠಡಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಯಾವುದೇ ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
4 ಲಕ್ಷ ಕೋಟಿ ರೂ. ಸಾಲ ಪಡೆದ ಅಭ್ಯರ್ಥಿ!
ಈ ಸುದ್ದಿ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ತ.ನಾಡಿನ ಪೆರಂಬೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಚೆನ್ನೈ ನಿವಾಸಿಯೊಬ್ಬರು ಬರೋಬ್ಬರಿ 4 ಲಕ್ಷ ಕೋಟಿ ರೂ.ಗಳನ್ನು ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿ ದ್ದಾ ರಂತೆ. ಅಷ್ಟೇ ಅಲ್ಲ, ಅವರ ಕೈಯ್ಯಲ್ಲಿ ಸದ್ಯ 1.76 ಲಕ್ಷ ಕೋಟಿ ರೂ. ನಗದು ಇದೆಯಂತೆ! ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಮೋಹನ್‌ರಾಜ್ ಅಫಿದಾವಿತ್‌ನಲ್ಲಿ ಈ ರೀತಿ ಉಲ್ಲೇಖೀಸಿರುವುದು ನಿಜ. ಆದರೆ, ಉಲ್ಲೇಖೀಸಿರುವ ಮಾಹಿತಿ ಮಾತ್ರ ಸುಳ್ಳು. ಈ ಬಗ್ಗೆ ಕೇಳಿದರೆ, “ನಾನು 2009ರಿಂದಲೂ ಹೀಗೆ ಸುಳ್ಳು ಅಫಿದಾವಿತ್ ಸಲ್ಲಿಸುತ್ತಿದ್ದೇನೆ, ಆಗ 1,977 ಕೋಟಿ ರೂ. ನಗದು ಇದೆ ಎಂದೂ ಬರೆದಿದ್ದೆ. ಆದರೆ, ಅದರ ಸತ್ಯಾಸತ್ಯತೆ ಯಾರೂ ಪರಿಶೀಲಿಸಲಿಲ್ಲ. ದೊಡ್ಡ ರಾಜಕಾರಣಿಗಳೇ ಸುಳ್ಳು ಅಫಿದಾವಿತ್ ಸಲ್ಲಿಸುವಾಗ ನಾನೇಕೆ ಸಲ್ಲಿಸಬಾರದು’ ಎಂದು ಪ್ರಶ್ನಿಸುತ್ತಾರೆ.
ರಫೇಲ್ ಪುಸ್ತಕ ವಿವಾದ
ರಫೇಲ್ ಡೀಲ್‌ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೂ ಮುನ್ನ ಚೆನ್ನೈನ ಅಂಗಡಿಯೊಂದರಲ್ಲಿ ದಾಸ್ತಾನು ಇಡಲಾಗಿದ್ದ 500 ಪುಸ್ತಕಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದು, ಅನಂತರ ವಾಪಸ್ ನೀಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬುಧವಾರ ಈ ಕುರಿತು ಸ್ಪಷ್ಟನೆ ನೀಡಿದ ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ, “ಭಾರತೀಯ ಚುನಾವಣಾ ಆಯೋಗವಾಗಲೀ, ಮುಖ್ಯ ಚುನಾವಣಾ ಅಧಿಕಾರಿಯಾಗಲೀ ರಫೇಲ್ ಪುಸ್ತಕ ವಶಕ್ಕೆ ಪಡೆಯುವಂತೆ ಸೂಚಿಸಿಯೇ ಇರಲಿಲ್ಲ’ ಎಂದು ಹೇಳಿದ್ದಾರೆ.
ಇರಾನಿ ಕುರಿತು ಅವಹೇಳನ: ಕಾಬ್ಡೆ ಬಂಧನ
ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರಪಕ್ಷ ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ ನಾಯಕ ಜೈದೀಪ್ ಕಾಬ್ಡೆ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಇರಾನಿ “ಬಿಂದಿ’ ಕುರಿತು ಪ್ರಸ್ತಾಪಿಸಿ, ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಬ್ಡೆ ವಿರುದ್ದ ಚುನಾವಣಾ ಅಧಿಕಾರಿ ಮದನ್ ಸುಬೇದಾರ್ ದೂರು ದಾಖಲಿಸಿಕೊಂಡಿದ್ದರು. ಅನಂತರ ಅವರು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ.
ನನ್ನ ಸೇನೆ, ಮೋದಿ ಸೇನೆ, ಎಲ್ಲರ ಸೇನೆ
ಭಾರತೀಯ ಸೇನೆಯನ್ನು “ಮೋದಿಯ ಸೇನೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಮರ್ಥಿಸಿಕೊಂಡಿದ್ದಾರೆ. ತಾವು ಅಭಿನಯಿ ಸಿರುವ “ಪಿಎಂ ನರೇಂದ್ರ ಮೋದಿ’ ಚಿತ್ರದ ಬಿಡುಗಡೆಗೆ ತಡೆ ಕೋರಿ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಬೆನ್ನಲ್ಲೇ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ವಿವೇಕ್ ಮಾತನಾಡಿದ್ದಾರೆ. ಯೋಗಿ ಅವರು “ಮೋದಿಯ ಸೇನೆ’ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲ. ಅದು ನನ್ನ ಸೇನೆಯೂ ಹೌದು, ಪ್ರಧಾನಿ ಮೋದಿಯ ಸೇನೆಯೂ ಹೌದು. ಸೇನೆ ಎಲ್ಲರಿಗೂ ಸೇರಿದ್ದು ಎಂದಿದ್ದಾರೆ. ಇದೇ ವೇಳೆ, ಸಿನೆಮಾ ವಿರುದ್ಧ ಪಿಐಎಲ್ ಸಲ್ಲಿಸಿರುವ ಹಿರಿಯ ವಕೀಲರು, ಕಾಂಗ್ರೆಸ್ ನಾಯಕರೂ ಆಗಿರುವ ಸಿಂಘ್ವಿ ಮತ್ತು ಸಿಬಲ್ ವಿರುದ್ಧ ಕಿಡಿಕಾರಿದ ಒಬೆರಾಯ್, “ಅವರಿಗೆ ಸಿನಮಾ ಬಗ್ಗೆ ಭಯವೋ, ಚೌಕಿದಾರನ ದಂಡದ ಬಗ್ಗೆ ಭಯವೋ’ ಎಂದು ಪ್ರಶ್ನಿಸಿದ್ದಾರೆ.
ವಾಟ್ಸ್‌ಆ್ಯಪ್ ಗ್ರೂಪ್: ಒಪ್ಪಿಗೆ ಅಗತ್ಯ
ವಾಟ್ಸ್‌ಆ್ಯಪ್‌ನಲ್ಲಿ ಯಾವ್ಯಾವುದೋ ಗ್ರೂಪ್‌ಗ್ಳಿಗೆ ನಮ್ಮನ್ನು ಕೇಳದೆಯೇ ಸೇರಿಸಿ ಸಂದೇಶಗಳ ಸುರಿಮಳೆ ಸುರಿಸುವ ಸಮಸ್ಯೆಗೆ ಈಗ ಮುಕ್ತಿ ದೊರಕಿದೆ. ವಾಟ್ಸ್ ಆ್ಯಪ್ ಬಿಡುಗಡೆ ಮಾಡಿರುವ ಹೊಸ ಆವೃತ್ತಿಯಲ್ಲಿ ನಮ್ಮನ್ನು ಕೇಳದೆಯೇ ಯಾರೂ ಗ್ರೂಪ್‌ಗ್ಳಿಗೆ ನಮ್ಮನ್ನು ಸೇರಿಸದೇ ಇರುವ ಹೊಸ ಸೌಲಭ್ಯ ಪರಿಚಯಿಸಿದೆ. ಅದರಲ್ಲೂ ವಿಶೇಷವಾಗಿ ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ವಾಟ್ಸ್‌ಆ್ಯಪ್‌ನ ಈ ಅಪ್‌ಡೇಟ್ ಮಹತ್ವ ಪಡೆದಿದೆ. ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕೆ ಗ್ರೂಪ್‌ಗ್ಳನ್ನು ಕ್ರಿಯೇಟ್ ಮಾಡುತ್ತಿದ್ದು, ಇವುಗಳಿಗೆ ತಮ್ಮ ಕಾರ್ಯಕರ್ತರ ಜತೆಗೆ ಕಾರ್ಯಕರ್ತರಲ್ಲದವರು ಮತ್ತು ಇತರರನ್ನೂ ಸೇರಿಸುತ್ತಿದ್ದವು. ಇವೆಲ್ಲ ಸಮಸ್ಯೆಯಿಂದ ಈ ಆವೃತ್ತಿ ನಿವಾರಣೆ ನೀಡಲಿದೆ.
ಹೊಸ ಸೌಲಭ್ಯವನ್ನು ಪ್ರೈವಸಿ (ಗೌಪ್ಯತೆ) ವಿಭಾಗದಲ್ಲಿ ಸೇರಿಸಲಾಗಿದೆ. ನಮ್ಮನ್ನು ಗ್ರೂಪ್‌ಗೆ ಸೇರಿಸಬೇಕೆಂದಾದರೆ ಗ್ರೂಪ್ ಅಡ್ಮಿನ್ ನಮಗೆ ಲಿಂಕ್ ಕಳುಹಿಸಬೇಕು, ಆ ಲಿಂಕ್ ಒತ್ತಿದರೆ ಮಾತ್ರವೇ ನಾವು ಗ್ರೂಪ್‌ಗೆ ಸೇರುತ್ತೇವೆ.
ಆನ್ ಮಾಡುವುದು ಹೀಗೆ
ಸೆಟ್ಟಿಂಗ್ಸ್ – (ಅಕೌಂಟ್) ಖಾತೆ -(ಪ್ರೈವಸಿ) ಗೌಪ್ಯತೆ – (ಗ್ರೂಪ್) ಗುಂಪುಗಳು ಆಪ್ಷನ್‌ಗೆ ಹೋಗಿ
– ಇಲ್ಲಿ ಮೂರು ಆಯ್ಕೆ ಇರುತ್ತದೆ. (ನೋಬಡಿ) ಯಾರೂ ಇಲ್ಲ, (ಮೈ ಕಾಂಟ್ಯಾಕ್ಟ್) ನನ್ನ ಸಂಪರ್ಕಗಳು ಮತ್ತು ಎವೆರಿ ಒನ್ (ಎಲ್ಲರೂ). ಇದರಲ್ಲಿ ಯಾರೂ ಇಲ್ಲ ಎಂದು ಆಯ್ಕೆ ಮಾಡಿಕೊಂಡರೆ ನಮ್ಮನ್ನು ಕೇಳದೆಯೇ ಯಾವುದೇ ಗ್ರೂಪ್‌ಗೆ ಸೇರಿಸಲಾಗದು. ವೈಯಕ್ತಿಕವಾಗಿ ಗ್ರೂಪ್‌ನ ಲಿಂಕ್ ನಮಗೆ ಲಭ್ಯವಾಗುತ್ತದೆ. ನನ್ನ ಸಂಪರ್ಕಗಳು ಎಂಬುದನ್ನು ಆಯ್ಕೆ ಮಾಡಿದರೆ ನಾನು ನನ್ನ ಮೊಬೈಲ್‌ನಲ್ಲಿ ಸೇವ್ ಮಾಡಿದ ವ್ಯಕ್ತಿಗಳು ಮಾತ್ರ ಗ್ರೂಪ್‌ಗೆ ನಮ್ಮನ್ನು ಸೇರಿಸಬಹುದು. ಎಲ್ಲರೂ ಎಂಬುದು ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಾಗಿದೆ.
ಪ್ರಣಾಳಿಕೆ: ರಾಹುಲ್ ಫೋಟೋ ಬಗ್ಗೆ ಸೋನಿಯಾ ಅತೃಪ್ತಿ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ರಾಹುಲ್ ಗಾಂಧಿ ಫೋಟೋ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಅಸಮಾಧಾನಗೊಂಡಿ ದ್ದರೇ? ಹೌದು ಎನ್ನುತ್ತದೆ ಮೂಲಗಳು. ಪ್ರಣಾಳಿಕೆಯ ಮುಖಪುಟದಲ್ಲಿ ಕಾಂಗ್ರೆಸ್ ಚಿಹ್ನೆ ಹಸ್ತ, ಅಧ್ಯಕ್ಷ ರಾಹುಲ್‌ರ ಫೋಟೋವನ್ನು ಚಿಕ್ಕದಾಗಿ ಬಳಸಿಕೊಂ ಡಿದ್ದಕ್ಕೆ ಅವರು ಗರಂ ಆಗಿದ್ದರು ಎಂದು ಹೇಳಲಾಗಿದೆ. ಪ್ರಣಾಳಿಕೆ ಬಿಡುಗಡೆಗೂ ಮುನ್ನ ಎಐಸಿಸಿ ಸಂಶೋಧನ ವಿಭಾಗದ ರಾಜೀವ್ ಗೌಡ ರನ್ನು ಅವರು ಈ ಕುರಿತು ತರಾಟೆಗೆ ತೆಗೆದು ಕೊಂಡಿದ್ದರು. ಈ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಅವರು, ಸುದ್ದಿಗೋಷ್ಠಿ ವೇಳೆಯೂ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಮೌನಕ್ಕೆ ಶರಣಾಗಿದ್ದರು. ಚಿದಂಬರಂ, ಮಾಜಿ ಪ್ರಧಾನಿ ಸಿಂಗ್ ಅವರಷ್ಟೇ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ ಎಂದು ಸೋನಿಯಾ ಅವರೇ ವಕ್ತಾರ ಸುಜೇವಾಲಗೆ ಸೂಚಿಸಿದ್ದು ಕಂಡು ಬಂತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ನಮೋ ಟಿವಿ: ಆಯೋಗ ನೋಟಿಸ್
ಪ್ರಧಾನಿ ಮೋದಿ ಅವರ ರ್ಯಾಲಿ, ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡಲೆಂದೇ ಆರಂಭಿಸಲಾದ ನಮೋ ಟಿವಿ ಚಾನೆಲ್‌ಗೆ ಈಗ ಸಂಕಷ್ಟ ಎದುರಾಗಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಆಪ್ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ, ಚಾನೆಲ್ ಆರಂಭಕ್ಕೆ ಸಂಬಂಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿರುವ ಚುನಾವಣಾ ಆಯೋಗ, ಈ ಕುರಿತು ವಿವರ ನೀಡುವಂತೆ ಸೂಚಿಸಿದೆ.
ಕುಮಾರ್ ಪ್ರತಿಕ್ರಿಯೆ: ಇನ್ನೊಂದೆಡೆ ಕಾಂಗ್ರೆಸ್‌ನ ನ್ಯಾಯ್ ಯೋಜನೆ ಯನ್ನು ಟೀಕಿಸಿ, ಚುನಾವಣಾ ಆಯೋಗದಿಂದ ಷೋಕಾಸ್ ನೋಟಿಸ್ ಪಡೆದಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ನಾನು ನೀತಿ ಆಯೋಗದ ಭಾಗ ವಾಗಿ ಆ ಹೇಳಿಕೆ ನೀಡಿರಲಿಲ್ಲ, ನಾನೊಬ್ಬ ಅರ್ಥಶಾಸ್ತ್ರಜ್ಞನಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋನಿಯಾ, ಮುಲಾಯಂ, ಅಖೀಲೇಶ್ ವಿರುದ್ಧ ಯಾರು ಕಣಕ್ಕೆ?
ವಿಪಕ್ಷಗಳ ಪ್ರಮುಖ ನಾಯಕರಾದ ಸೋನಿಯಾ, ಮುಲಾಯಂ, ಅಖೀಲೇಶ್ ಯಾದವ್ ವಿರುದ್ಧ ಸ್ಪರ್ಧಿಸ ಲಿರುವ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬುಧವಾರ ಬಹಿರಂಗ ಪಡಿಸಿದೆ. ಭೋಜ್‌ಪುರಿ ನಟ ದಿನೇಶ್ ಲಾಲ್ ಯಾದವ್ ಅವರು ಎಸ್‌ಪಿ ನಾಯಕ ಅಖೀಲೇಶ್ ವಿರುದ್ಧ ಅಜಂಗಡದಲ್ಲಿ, ಮೈನ್‌ಪುರಿಯಲ್ಲಿ ಮುಲಾಯಂ ವಿರುದ್ಧ ಪ್ರೇಮ್ ಸಿಂಗ್ ಶಾಕ್ಯಾ, ರಾಯ್‌ಬರೇಲಿ ಯಲ್ಲಿ ಸೋನಿಯಾ ವಿರುದ್ಧ ಸ್ಥಳೀಯ ನಾಯಕ ದಿನೇಶ್ ಪ್ರತಾಪ್ ಸಿಂಗ್‌ರನ್ನು ಕಣಕ್ಕಿಳಿಸಲಾಗಿದೆ. ಇದೇ ವೇಳೆ, ಶಿವಸೇನೆಯ ವಿರೋಧದ ಹಿನ್ನೆಲೆಯಲ್ಲಿ ಹಾಲಿ ಸಂಸದ ಕಿರಿಟ್ ಸೋಮಯ್ಯಗೆ ಮುಂಬಯಿ ಉತ್ತರದಿಂದ ಬಿಜೆಪಿ ಟಿಕೆಟ್ ನೀಡಿಲ್ಲ.
ಅವಕಾಶ ಸಿಕ್ಕರೆ, ಯುಪಿ ಮುಖ್ಯಮಂತ್ರಿಯಾಗಿ ನಾನು ಗಳಿಸಿರುವಂಥ ಅನುಭವವನ್ನು ಕೇಂದ್ರ ಸರಕಾರದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಲು ಬಳಸುತ್ತೇನೆ.
ಮಾಯಾವತಿ, ಬಿಎಸ್‌ಪಿ ನಾಯಕಿ
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿರುವ ಕಾಂಗ್ರೆಸ್ ನಾಯಕರೇ, ನಿಮಗೆ ನಾಚಿಕೆಯಾಗುತ್ತಿಲ್ಲವೇ? ಹೋಗಿ, ಎಲ್ಲಾದರೂ ನೀರಲ್ಲಿ ಮುಳುಗಿ.
ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಅಖೀಲೇಶ್ ಮತ್ತು ಮುಲಾಯಂ ಇಬ್ಬರೂ ಬಿಜೆಪಿ ಏಜೆಂಟರುಗಳು. ದಲಿತ ರನ್ನು ಹಿಂಸಿಸಿದ ಅಧಿಕಾರಿಗಳಿಗೆ ಅಖೀಲೇಶ್ ಭಡ್ತಿ ನೀಡಿದ್ದರು. ಮುಲಾಯಂ ಸದನದಲ್ಲಿ ಮೋದಿಯನ್ನು ಹಾಡಿ ಹೊಗಳಿದ್ದರು.
ಚಂದ್ರಶೇಖರ್ ಆಜಾದ್, ಭೀಮ್ ಆರ್ಮಿ ಸಂಸ್ಥಾಪಕ
2014ರ ಚುನಾವಣೆಯಲ್ಲಿ ಮೋದಿ ಚಾಯ್‌ವಾಲಾ ಆಗಿದ್ದರು, ಈಗ ಚೌಕಿದಾರ ಆಗಿದ್ದಾರೆ. ಈ ಲೋಕಸಭೆ ಚುನಾ ವಣೆ ಮುಗಿದಾಗ ದೇಶದ ಜನರು ಅವರನ್ನು “ಬೇರೋಜ್‌ಗಾರ್'(ನಿರುದ್ಯೋಗಿ) ಮಾಡುತ್ತಾರೆ.
ಗೌರವ್ ಗೊಗೋಯ್, ಕಾಂಗ್ರೆಸ್ ಸಂಸದ
ಯುಪಿಎ ಸರಕಾರ ಪ್ರಸ್ತಾಪಿಸಿದ್ದ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ, ರಾಷ್ಟ್ರೀಯ ಗುಪ್ತಚರ ಗ್ರಿಡ್ ಅನ್ನು ಜಾರಿಗೊಳಿಸದೇ ವಿಳಂಬ ಮಾಡುವ ಮೂಲಕ ಬಿಜೆಪಿ ಸರಕಾರ ದೇಶವನ್ನು ಉಗ್ರರ ದಾಳಿಗೆ ಮುಕ್ತವಾಗಿಸುತ್ತಿದೆ.
ಚಿದಂಬರಂ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.