ನಿಖಿಲ್‌ರನ್ನು ಆಂಧ್ರದಿಂದ ಕರೆತಂದಿಲ್ಲ
Team Udayavani, Mar 17, 2019, 7:42 AM IST
ಮದ್ದೂರು: ಮಂಡ್ಯ ಲೋಕಸಭಾ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಅವರನ್ನು ನಾವು ಆಂಧ್ರಪ್ರದೇಶದಿಂದ ಕರೆತಂದಿಲ್ಲ ಎಂದು ಶಾಸಕ ಕೆ.ಸುರೇಶ್‌ಗೌಡ ಪರೋಕ್ಷವಾಗಿ ಸುಮಲತಾ ಆಂಧ್ರದವರು ಎಂದು ಟೀಕಿಸಿದರು. ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪ ದೇವಾಲಯದ ಆವರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದು ನಾವು. ದೇವೇಗೌಡರ ಕುಟುಂಬ ಯಾವತ್ತೂ ನಿಖಿಲ್ ಅಭ್ಯರ್ಥಿಯಾಗಬೇಕು ಎಂದು ಹೇಳಿರಲಿಲ್ಲ. ಈ ಮಾತನ್ನು ದೇವರ ಮುಂದೆ ಹೇಳುತ್ತಿದ್ದೇನೆ. ನಮ್ಮ ಅಭ್ಯರ್ಥಿ ನಿಖಿಲ್ ಎಂದು ಧೈರ್ಯವಾಗಿ ಹೇಳಿ. ಅವರನ್ನೇನು ಪಕ್ಕದ ಆಂಧ್ರದಿಂದ ಕರೆತಂದಿಲ್ಲ. ನಮ್ಮ ಪಕ್ಕದ ಹಾಸನದಿಂದ ಕರೆತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಮೇಲೆ ನಡೆಸಿದ ದಾಳಿ ಕುರಿತಂತೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ನಾವು ನಮ್ಮ ಸೈನಿಕರ ಸಾಮರ್ಥ್ಯವನ್ನು ಪ್ರಶ್ನೆ ಮಾಡುತ್ತಿಲ್ಲ. ವಿದೇಶಿಯರು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ದಾಖಲೆಗಳಿಲ್ಲ. ಪ್ರಧಾನಿ ಮೋದಿ ಭಾಷಣವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ನಲ್ಲಿ ಒಳೇಟು: ನಾವು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಬೆಂಬಲ ಕೋರುತ್ತೇವೆ. ಅಲ್ಲಿಯೂ ಒಳೇಟು ನೀಡುವವರು ಶೇ.30ರಷ್ಟು ಜನ ಇದ್ದಾರೆ. ಹಿಂದೆ ನಾನು ಕಾಂಗ್ರೆಸ್‌ನಲ್ಲಿದ್ದಾಗ ರಮ್ಯಾ ಪರ ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ ಎಂದು ಹೇಳಿದ ಅವರು ಅಂಬರೀಶ್ ವಿರುದ್ಧ ಪರೋಕ್ಷವಾಗಿ ರಮ್ಯಾ ಪರ ಕೆಲಸ ಮಾಡಲಿಲ್ಲವೆಂಬುದನ್ನು ನೆನಪಿಸಿದರು.
ನಮಗೆ ಕಾಂಗ್ರೆಸ್ ಬಗ್ಗೆ ದ್ವೇಷ, ಅಸೂಯೆ ಇಲ್ಲ. ಮಂಡ್ಯ ಜಿಲ್ಲೆಯ ಬಗ್ಗೆ ನಿಖಿಲ್‌ಗೆ ಭಾರೀ ವಿಶ್ವಾಸವಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿ ಇಲ್ಲ. ಜನರು ಭಾವೋದ್ವೇಗಕ್ಕೆ ಒಳಗಾಗದೆ, ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಮ್ಮ ಜೊತೆ ಜನರಿದ್ದಾರೆ. ನಾವು ಮೋಸ ಮಾಡಿ ಎಲ್ಲಿಗೂ ಹೋಗೋಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಲು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು. ಮೈಸೂರು ವಿಭಾಗೀಯ ಜೆಡಿಎಸ್ ವೀಕ್ಷಕ ಸಾದೊಳಲು ಸ್ವಾಮಿ, ಜಿಪಂ ಸದಸ್ಯರಾದ ರೇಣುಕಾ ರಾಮಕೃಷ್ಣ, ಸುಚಿತ್ರಾ ಮಹೇಂದ್ರಕುಮಾರ್, ಮರಿಹೆಗ್ಗಡೆ, ತಾಪಂ ಸದಸ್ಯೆ ಜಯಲಕ್ಷ್ಮೀ, ಜೆಡಿಎಸ್ ಮುಖಂಡ ನೆಲ್ಲೀಗೆರೆ ಬಾಲು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಕೆ.ದಾಸೇಗೌಡ ಇತರರಿದ್ದರು.
ಸ್ವಾಗತ, ದೇವರಿಗೆ ಪೂಜೆ: ಕೆ.ಎಂ.ದೊಡ್ಡಿಯಿಂದ ಮದ್ದೂರು ಮಾರ್ಗವಾಗಿ ಕೊಪ್ಪಗೆ ಆಗಮಿಸಿದ ನಿಖಿಲ್‌ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ನಂತರ ಬಸ್ ನಿಲ್ದಾಣದ ಪಟಾಲದಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆಬಲವಾಡಿ ದೇವಸ್ಥಾನದ ಶ್ರೀ ತೋಪಿನ ತಿಮ್ಮಪ್ಪ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ನಿಖಿಲ್, ಡಿ.ಸಿ.ತಮ್ಮಣ್ಣ, ಸುರೇಶ್‌ಗೌಡ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸುಮಲತಾ ಕುಟುಂಬ ರಾಜಕಾರಣ ಮಾಡ್ತಿಲ್ವಾ?: ಕೆ.ಟಿ.ಶ್ರೀಕಂಠೇಗೌಡ
ಮದ್ದೂರು: ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣಾನಾ. ಸುಮಲತಾ ಮಾಡ್ತಿರೋದು ಕುಟುಂಬ ರಾಜಕಾರಣ ಅಲ್ವಾ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನಿಸಿದರು. ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪ ದೇವಾಲಯದ ಆವರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ದೇವೇಗೌಡರದ್ದು ಕುಟುಂಬ ರಾಜಕಾರಣ ಅಂತ ಟೀಕಿಸ್ತಾರೆ. ಹಾಗಾದರೆ ಸುಮಲತಾ ಮಾಡ್ತಿರೋದು ಏನು. ಅವರ ಪತಿ ಸಂಸದರು, ಸಚಿವರಾಗಿರಲಿಲ್ಲವೇ. ಸುಮಲತಾ ಮಾಡೋದು ಕುಟುಂಬ ರಾಜಕಾರಣ ಅಲ್ಲವೇ. ಇಲ್ಲಿ ಯಾರ ಆಟವೂ ನಡೆಯೋದಿಲ್ಲ ಎಂದರು. ಜಿಲ್ಲೆಯ ಅಭಿವೃದ್ಧಿಯನ್ನು ದೂರದೃಷ್ಟಿಯಾಗಿಟ್ಟುಕೊಂಡು ಸಿಎಂ ಕುಮಾರಸ್ವಾಮಿ ಅವರು 5000 ಕೋಟಿ ರೂ. ಹಣ ನೀಡಿದ್ದಾರೆ. ಅಭಿವೃದ್ಧಿಗಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಯಾವುದೇ ಚುನಾವಣೆಯಲ್ಲೂ ನಾವು ಸೋತಿಲ್ಲ. ಅದೇ ರೀತಿ ಈ ಚುನಾವಣೆಯಲ್ಲಿ ನಿಖಿಲ್ ಗೆಲುವು ನಿಶ್ಚಿತ. ಈ ಭಾಗಕ್ಕೆ ನೀರಾವರಿ ಯೋಜನೆಗಳ ಘೋಷಣೆಯಾಗಿದೆ. ಅವೆಲ್ಲವೂ ಅನುಷ್ಠಾನಗೊಳ್ಳಬೇಕಾದರೆ ನಿಖಿಲ್ ಅವರ ಗೆಲುವು ಅಗತ್ಯವಾಗಿದೆ. ಕೆರೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದು, ಜಿಲ್ಲೆಯ ಇತಿಹಾಸದಲ್ಲೇ 8 ಸಾವಿರ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಘೋಷಣೆಯಾಗಿರಲಿಲ್ಲ. ಸಿಎಂ ಕುಮಾರಸ್ವಾಮಿ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ನಿಖಿಲ್ ಬಣ್ಣದ ಸೋಗು ಹಾಕೊಂಡು ಬಂದಿಲ್ಲ: ಎಲ್‌ಆರ್‌ಎಸ್
ಮದ್ದೂರು: ನಿಖಿಲ್ ಕುಮಾರಸ್ವಾಮಿ ಬಣ್ಣದ ಸೋಗು ಹಾಕಿಕೊಂಡು ಜನರನ್ನು ಮರುಳು ಮಾಡಲು ಬಂದಿಲ್ಲ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಸುಮಲತಾ ಅಂಬರೀಶ್‌ಗೆ ಪರೋಕ್ಷ ಟಾಂಗ್ ನೀಡಿದರು. ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪ ದೇವಾಲಯದ ಆವರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು ಕುಮಾರಸ್ವಾಮಿ. ಬಣ್ಣದ ಸೋಗು ಹಾಖಿಕೊಂಡು ಬಂದಾಕ್ಷಣ ಮರುಳಾಗುವ ಜನ ಜಿಲ್ಲೆಯವರಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿದ್ದರು ಇವರೆಲ್ಲಾ ಎಂದು ಪ್ರಶ್ನಿಸಿದರು.
ನಿಖಿಲ್ ಅಭ್ಯರ್ಥಿಯಾಗುವ ಬಗ್ಗೆ ತೀರ್ಮಾನ ಮಾಡಿದ್ದು ದೇವೇಗೌಡ, ಕುಮಾರಸ್ವಾಮಿ ಅಲ್ಲ. ನಮ್ಮ ಪಕ್ಷದ ತೀರ್ಮಾನದ ಪ್ರಕಾರ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಜಿಲ್ಲೆಯಿಂದ ಸಿಎಂ ಆಗಿ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಅವರನ್ನು ನೋಡಿದ್ದೇವೆ. ಅವರ ಹಂತಕ್ಕೆ ಅವರವರ ಯೋಗ್ಯತೆಗೆ ತಕ್ಕಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಎಲ್ಲೂ ದೋಸೆ ತಿನ್ನಂಗಿಲ್ಲ: ನಾವು ಎಲ್ಲೂ ದೋಸೆ ತಿನ್ನಂಗಿಲ್ಲ ಸುದ್ದಿಯಾಗಿ ಬಿಡುತ್ತದೆ. ಇತ್ತೀಚೆಗಷ್ಟೇ ದೋಸೆ ತಿನ್ನಲು ಹೋಟೆಲ್‌ಗೆ ಹೋಗಿದ್ದೆ. ಅಲ್ಲಿಗೆ ರಾಕ್‌ಲೈನ್ ವೆಂಕಟೇಶ್, ಅಂಬರೀಶ್ ಅಣ್ಣನ ಮಗ ಅದೇ ಹೋಟೆಲ್‌ನಲ್ಲಿದ್ದರು. ಅವರ ಜೊತೆ ಮಾತನಾಡಿದೆ ಅಷ್ಟೇ. ಆಗಲೇ ನನ್ನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿದೆ. ಒಂದೂವರೆ ಗಂಟೆಗಳ ಕಾಲ ರಾಕ್‌ಲೈನ್ ವೆಂಕಟೇಶ್ ಜೊತೆ ಮಾತನಾಡಿದೆ. ಈ ವೇಳೆ ನಿಂಗೆ ಯಾಕಪ್ಪ ಮಂಡ್ಯ ಉಸಾಬರಿ.. ಬೇಗ ಕಳಚಿಕೋ ಎಂದು ಹೇಳಿದ್ದೇನೆ ಎಂದರು.
ಮಹಿಳೆಯರ ಕಣ್ಣೀರಿಗೆ ಮರುಳಾಗದಿರಿ – ಡಿ.ಸಿ.ತಮ್ಮಣ್ಣ: ಮಹಿಳೆಯರ ಕಣ್ಣೀರಿಗೆ ಮರುಳಾಗದೆ ನಿಖಿಲ್‌ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ನಾನು ಯಾವ ಪಕ್ಷಕ್ಕೆ ಹೋದರೂ ಆಗೆಲ್ಲಾ ನನ್ನನ್ನು ಬೆಂಬಲಿಸಿದ್ದೀರಾ. ಈಗ ನಿಖಿಲ್ ಬಂದಿದ್ದಾರೆ. ಅವರನ್ನು ಬೆಂಬಲಿಸಿ ಎಂದು ಕೋರಿದರು. ಕಳೆದ ಉಪ ಚುನಾವಣೆ ಸಂದರ್ಭದಲ್ಲೇ ನಿಖಿಲ್ ಅವರನ್ನು ಕರೆತರುವ ಬಗ್ಗೆ ಮಾತುಕತೆ ಆಗಿತ್ತು. ನಿಖಿಲ್ ಅವರನ್ನು ಕ್ಷೇತ್ರಕ್ಕೆ ದೊಡ್ಡ ಮನಸ್ಸಿನಿಂದ ಬರಮಾಡಿಕೊಂಡವರು ಸಂಸದ ಶಿವರಾಮೇಗೌಡರು. ಬೇರೆ ಯಾರಾಗಿದ್ದರೂ, ಟಿಕೆಟ್‌ಗೆ ಪಟ್ಟು ಹಿಡಿಯುತ್ತಿದ್ದರು ಎಂದರು.
ಪಕ್ಷದ ಯಾವ ಪಾತ್ರಕ್ಕೂ ಸೈ: ಪಕ್ಷ ನನಗೆ ಟಿಕೆಟ್ ನೀಡಿ ಜನರ ಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಜನರು ನನ್ನ ಕೈ ಹಿಡಿದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ. ನನಗೆ ಪಕ್ಷ ಯಾವ ಪಾತ್ರ ಕೊಟ್ಟರೂ ಮಾಡಲು ಸಿದ್ಧನಿದ್ದೇನೆ ಎಂದು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನನಗೆ ರಾಜಕಾರಣ ಹೊಸದು. ಆದರೆ, ನನ್ನ ಪ್ರಾಮಾಣಿಕತೆ, ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ನನ್ನ ಜೀವನಪೂರ್ತಿ ನಿಮ್ಮ ಜೊತೆ ಇರುತ್ತೇನೆ. ಸಿಎಂ.ಕುಮಾರಸ್ವಾಮಿ ಅವರು ನಿಮ್ಮ ಹೃದಯದಲ್ಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಮಂಡ್ಯ ಜನರು ಏಳಕ್ಕೆ ಏಳು ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಿದ್ದೀರಾ. ನನಗೆ ಭಾಷಣ ಮಾಡೋಕೆ ಬರೋಲ್ಲ. ನನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ದೆಹಲಿಯಲ್ಲಿ ನಿಮ್ಮ ಪರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.