ಪ್ರಕಾಶ ಹುಕ್ಕೇರಿ ಒಳಗೋ..ಹೊರಗೋ..?
Team Udayavani, Mar 18, 2019, 11:29 AM IST
ಬೆಳಗಾವಿ: ಕಾಂಗ್ರೆಸ್‌ನಲ್ಲಿ ತಮ್ಮವರಿಂದಲೇತೀವ್ರ ವಿರೋಧ ಕಟ್ಟಿಕೊಂಡಿರುವ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಮನಸ್ಸು ಬದಲಾಯಿಸಿ ಪಕ್ಷದ ಟಿಕೆಟ್‌ನಿಂದಲೇ ಚಿಕ್ಕೋಡಿಯಲ್ಲಿ ಸ್ಪರ್ಧೆ ಮಾಡುವರೇ ಅಥವಾ ಇಲ್ಲವೇ..? ಎಂಬ ಪ್ರಶ್ನೆಗೆ ಸೋಮವಾರ ಬಹುಶಃ ಉತ್ತರ ಸಿಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶಜಾರಕಿಹೊಳಿ ಮಾ.18ರಂದು ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದು, ಈ ಸಭೆ ಚುನಾವಣೆ ದೃಷ್ಟಿಯಿಂದ ಬಹಳ ಮಹತ್ವ ಪಡೆದು ಕೊಂಡಿದೆ.
ಸಚಿವರು ಸೇರಿ ಜಿಲ್ಲೆಯ ಅದರಲ್ಲೂ ಚಿಕ್ಕೋಡಿ ಭಾಗದ ಕಾಂಗ್ರೆಸ್ ನಾಯಕರ ಜತೆ ತೀವ್ರ ಭಿನ್ನಾಭಿಪ್ರಾಯ ಬೆಳೆಸಿಕೊಂಡಿರುವ ಪ್ರಕಾಶ ಹುಕ್ಕೇರಿ ಈ ಸಭೆಯಲ್ಲಿ ಭಾಗವಹಿಸುವರೇ ಅಥವಾ ಹೊರಗುಳಿಯುವರೇ ಎಂಬ ಕುತೂಹಲದ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಚಿಕ್ಕೋಡಿಯ ಕಾಂಗ್ರೆಸ್ ಮೂಲಗಳ ಪ್ರಕಾರ ಈ ಸಭೆಯಲ್ಲಿ ಪ್ರಕಾಶ ಹುಕ್ಕೇರಿ ಭಾಗವಹಿಸುವುದು ಅನುಮಾನ. ಒಂದು ವೇಳೆ ಸಭೆಯಲ್ಲಿ ಪಾಲ್ಗೊಂಡರೆ ಚಿಕ್ಕೋಡಿಯಿಂದ ಅವರು ಸ್ಪರ್ಧೆ ಮಾಡಬಹುದೆಂಬ ನಿರೀಕ್ಷೆ ಮಾಡಬಹುದು. ಇಲ್ಲದಿದ್ದರೆ ಅವರಿಗೆ ಪರ್ಯಾಯ ಅಭ್ಯರ್ಥಿ ಆಯ್ಕೆ ಮಾಡುವುದು ಅನಿವಾರ್ಯ ವಾಗಲಿದೆ ಎನ್ನಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಜಿಲ್ಲೆಯ ನಾಯ ಕರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ರಾಜ್ಯ ರಾಜಕಾರಣ ಬಿಟ್ಟು ದೆಹಲಿಗೆ ಹೋಗಿದ್ದ ಪ್ರಕಾಶ ಹುಕ್ಕೇರಿ, ಸಂಸದರಾದ ನಂತರ ಚಿಕ್ಕೋಡಿ-ಸದಲಗಾ ಕ್ಷೇತ್ರ ಬಿಟ್ಟು ಬೇರೆ ಯಾವ ವಿಧಾನಸಭಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಎಲ್ಲ ಅನುದಾನ ಅವರ ಕ್ಷೇತ್ರಕ್ಕೆ ಮಾತ್ರ ಖರ್ಚಾಗಿದೆ ಎಂಬ ಅಸಮಾಧಾನ ಪಕ್ಷದಲ್ಲಿದೆ. ಮಾಜಿ ಶಾಸಕರು ಇದರ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿದ್ದಾರೆ. ಇದು ಪ್ರಕಾಶ ಹುಕ್ಕೇರಿಗೆ ನುಂಗಲಾರದ ತುತ್ತಾಗಿದೆ.
ಸಂಸದರಾಗಿದ್ದ ಐದು ವರ್ಷದ ಅವಧಿಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರ ಬಿಟ್ಟು ಉಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲ. ಮುಖ್ಯವಾಗಿ ಬಿಜೆಪಿ ಶಾಸಕ ಉಮೇಶ ಕತ್ತಿಯವರ ಸ್ವಕ್ಷೇತ್ರ ಹುಕ್ಕೇರಿಗೆ ಕೆಲ ಅನುದಾನ ಬಿಡುಗಡೆ ಮಾಡಿರುವದು ಸಹಜವಾಗಿಯೇ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಮುನಿಸಿಕೊಳ್ಳುವಂತೆ ಮಾಡಿದೆ. ಹೀಗಾಗಿ ಹಾಲಿ ಸಂಸದರ ಬಗ್ಗೆ ಶಾಸಕರು, ಮಾಜಿ ಶಾಸಕರು ಹಾಗೂ ಜನರಲ್ಲಿ ಮೊದಲಿನ ಒಲವಿಲ್ಲ ಎಂಬುದು ಕಾಂಗ್ರೆಸ್ ಮುಖಂಡರ ಹೇಳಿಕೆ.
ಇದನ್ನೇ ಕಾರಣವಾಗಿಟ್ಟುಕೊಂಡು ಬೆಂಗಳೂರಿ ನಲ್ಲಿ ನಡೆದ ಜಿಲ್ಲೆಯ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಪ್ರಕಾಶ ಹುಕ್ಕೇರಿ ಹಾಗೂ ಜಿಲ್ಲೆಯ ಮಾಜಿ ಶಾಸಕರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿದ್ದರು. ಇದರಿಂದ ಮುನಿಸಿಕೊಂಡಿದ್ದ ಹುಕ್ಕೇರಿ ಸಭಾತ್ಯಾಗ ಮಾಡಿದ್ದರು. ಆಗ ಸಚಿವ ಸತೀಶ ಜಾರಕಿಹೊಳಿ ಹೋದರೆ ಹೋಗಲಿ ಬೇರೆ ಅಭ್ಯರ್ಥಿಯನ್ನು ತರೋಣ ಎಂಬ ಮಾತು ಆಡಿದ್ದರು. ಎಲ್ಲ ಅಸಮಾಧಾನದ ಮಧ್ಯೆ ಚಿಕ್ಕೋಡಿಯಲ್ಲಿ ಸತೀಶ ಜಾರಕಿಹೊಳಿಯವರು ಕಾರ್ಯಕರ್ತರ ಸಭೆ ಕರೆದಿರುವುದು ಬಹಳ ಕುತೂಹಲ ಕೆರಳಿಸಿದೆ. ಕಳೆದ ಎರಡು ದಿನ ಕ್ಷೇತ್ರದ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿರುವ ಪ್ರಕಾಶ ಹುಕ್ಕೇರಿ ಅವರ ಮುಂದಿನ ನಡೆ ಸಹ ಕಾತರ ಹುಟ್ಟಿಸಿದೆ.
ಬೆಳಗಾವಿಗೂ ಬೇಡವೇ?: ಚಿಕ್ಕೋಡಿಯಲ್ಲಿ ವಾತಾ ವರಣ ಸರಿಯಾಗಿಲ್ಲ ಎಂಬುದನ್ನು ಮನಗಂಡಿರುವ ಪ್ರಕಾಶ ಹುಕ್ಕೇರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ,ಈ ಭಾಗದ ನಾಯಕರು ಇದಕ್ಕೆ ಸರಿಯಾದ ಸ್ಪಂದನೆ ನೀಡದಿರುವುದು ಅವರಿಗೆ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಭಾಗದ ಯಾವ ನಾಯಕರೂ ಪ್ರಕಾಶ ಹುಕ್ಕೇರಿ ಪರ ನಿಲ್ಲಲಿಲ್ಲ. ಅಲ್ಲಿ ಶಿವಕಾಂತ ಸಿದ್ನಾಳ, ವಿ.ಎಸ್.ಸಾಧುನವರ ಹಾಗೂ ಅಶೋಕ ಪಟ್ಟಣ ಅವರ ಹೆಸರು ಮಾತ್ರ ಪ್ರಸ್ತಾಪವಾಗಿದೆ ಎಂಬುದು ಮೂಲಗಳ ಹೇಳಿಕೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹುಕ್ಕೇರಿಇದುವರೆಗೆ ತಮ್ಮ ನಿಲುವು ಏನು ಎಂಬುದನ್ನು ಖಚಿತ ಪಡಿಸಿಲ್ಲ. ಪರಿಸ್ಥಿತಿ ಕೈಮೀರಿದರೆ ಅನಿವಾರ್ಯವಾಗಿ ಮತ್ತೆ ಚಿಕ್ಕೋಡಿಯಿಂದಲೇ ಸ್ಪರ್ಧೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದು, ಇದೇ ಕಾರಣದಿಂದ ಸೋಮವಾರದ ಸಭೆಗೆ ಹಾಜರಾಗಬಹು ದು ಎಂಬುದು ಅವರ ಆಪ್ತರ ಹೇಳಿಕೆ.
ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿ ಬಿಟ್ಟರೆ ಬೇರೆ ಹೆಸರು ಪ್ರಸ್ತಾಪವಾ ಗಿಲ್ಲ. ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ. ರಾಜಕೀಯದಲ್ಲಿ ಸಹಜ. ಅದನ್ನು ಸರಿಪಡಿಸಲಾಗುವುದು. ಇದನ್ನು ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡಲಿದ್ದೇವೆ
ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ.
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.