ಕೇಂದ್ರ ಮೈದಾನದಲ್ಲಿ 1.50 ಲಕ್ಷ ಮಂದಿಗೆ ಆಸನ: ಎಲ್ಲೆಡೆ ಭದ್ರತೆ
ನಗರಕ್ಕೆ ಇಂದು ನರೇಂದ್ರ ಮೋದಿ ಆಗಮನ
Team Udayavani, Apr 13, 2019, 6:00 AM IST
ಕೇಂದ್ರ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಿರುವುದು.
ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರು ಎ. 13ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ, ಆತಿಥ್ಯ ಸಹಿತ ಸರ್ವ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ.
ನಗರದ ಕೇಂದ್ರ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಒಂದೂವರೆ ಲಕ್ಷ ಮಂದಿ ಕುಳಿತು ವೀಕ್ಷಿಸುವಂತಾಗಲು ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ವಿಶೇಷ ಅಂದರೆ, ಈ ಬಾರಿ ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಹಿಂದೆಂದಿಗಿಂತಲೂ ಅತ್ಯಧಿಕ ವಾದ ಗರಿಷ್ಠ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅದರಲ್ಲಿಯೂ ಕಾರ್ಯಕ್ರಮ ನಡೆಯುವ ಮೈದಾನದ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಭದ್ರತ ಸಿಬಂದಿಯನ್ನು ನಿಯೋಜಿಸಲಾಗಿದೆ.
ಪ್ರಧಾನಿ ಅವರ ವಾಹನ ಹಾದು ಹೋಗುವ ರಸ್ತೆಗಳಲ್ಲಿಯೂ ಅತ್ಯಧಿಕ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಚಾರ ಸಭೆಗೆ ಬರುವವರನ್ನು ಮುಖ್ಯ ಪ್ರವೇಶ ದ್ವಾರ ಸಹಿತ ಒಟ್ಟು ಆರು ಕಡೆ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಮೋದಿ ಅವರು ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿ ದ್ದಾರೆ. ಇದಕ್ಕಾಗಿ ಕೇಂದ್ರ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ 60 ಅಡಿ ಉದ್ದ, 40 ಅಡಿ ಅಗಲದ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.
ಈ ವೇದಿಕೆಯಲ್ಲಿ ಮೋದಿಯವ ರೊಂದಿಗೆ ದ.ಕ., ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಮತ್ತು ಇತರ ನಾಯಕರು ಆಸೀನರಾಗಲಿದ್ದಾರೆ.
5,000 ವಿಐಪಿ,
1,000 ಚೌಕೀದಾರ್
ದ.ಕ., ಉಡುಪಿ, ಕಾಸರಗೋಡಿನಿಂದ ಒಟ್ಟು ಒಂದೂವರೆ ಲಕ್ಷಕ್ಕೂ ಮೀರಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರು ಕುಳಿತುಕೊಂಡೇ ಕಾರ್ಯಕ್ರಮ ವೀಕ್ಷಿಸುವಂತಾಗಲು ಅಷ್ಟೇ ಸಂಖ್ಯೆಯ ಕುರ್ಚಿಗಳನ್ನು ಕೇಂದ್ರ ಮೈದಾನದಲ್ಲಿ ಹಾಕಲಾಗಿದೆ.
ಕೆಳಗಿನ ಮೈದಾನದಲ್ಲಿ 5,000 ಮಂದಿ ವಿಐಪಿಗಳು ಮತ್ತು 1,000ಕ್ಕೂ ಅಧಿಕ ಮಂದಿ ಚೌಕೀದಾರರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಲಕ್ಷಾಂತರ ಜನ ಸೇರುವುದರಿಂದ ಎಲ್ಲರಿಗೂ ಮೋದಿಯವರ ಭಾಷಣ ವೀಡಿಯೋ ಸಹಿತ ವೀಕ್ಷಿಸುವಂತಾಗಲು ಆರು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಮೂರು ಗಂಟೆಯೊಳಗೆ ಆಸೀನರಾಗಿ
ವಿವಿಧೆಡೆಗಳಿಂದ ಬರುವ ಜನರಿಗೆ ಎರಡು ಗಂಟೆಗೇ ಮೈದಾನಕ್ಕೆ ಬರಲು ತಿಳಿಸಲಾಗಿದೆ. ಮೂರು ಗಂಟೆಯೊಳಗೆ ಎಲ್ಲರೂ ಆಸೀನರಾಗಬಹುದೆಂಬ ನಿರೀಕ್ಷೆ ಯಿದೆ. ಪ್ರಧಾನಿ ಮೋದಿಯವರು ಸಂಜೆ 4 ಗಂಟೆಗೆ ಮೈದಾನಕ್ಕೆ ಆಗಮಿಸಲಿದ್ದಾರೆ.
ಪ್ರಧಾನಿ ಆಗಮನಕ್ಕೆ ಒಂದು ಗಂಟೆ ಮೊದಲೇ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯದ ಇತರ ನಾಯಕರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಗದೀಶ್ ಪುತ್ತೂರು ಅವರಿಂದ ದೇಶಭಕ್ತಿಗೀತೆಗಳ ಗಾಯನವಿರಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ವಿಶೇಷ ಭದ್ರತೆ
ಪ್ರಧಾನಿ ಮಂಗಳೂರಿಗೆ ಆಗಮಿಸು ತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ವಿಶೇಷ ಭದ್ರತ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಪ್ರಧಾನಿ ಅವರ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಶೇಷ ಭದ್ರತ ದಳದ (ಎಸ್‌ಪಿಜಿ) ಉನ್ನತ ಅಧಿಕಾರಿಗಳು ಕಳೆದ ಬುಧವಾರವೇ ನಗರಕ್ಕೆ ಆಗಮಿಸಿ, ಕಾರ್ಯಕ್ರಮ ನಡೆಯುವ ಕೇಂದ್ರ ಮೈದಾನದ ಸಿದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೆ, ಮಂಗಳೂರು ಅಂ.ವಿಮಾನ ನಿಲ್ದಾಣ, ಅಲ್ಲಿಂದ ಕೇಂದ್ರ ಮೈದಾನಕ್ಕೆ ಆಗಮಿಸುವ ರಸ್ತೆ ಮಾರ್ಗದ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಿದ್ದಾರೆ.
ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಸಂಚಾರ ಮಾರ್ಪಾಡು ಮಾಡಲಾಗಿದ್ದು, ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಉಡುಪಿ- ಮೂಲ್ಕಿ- ಸುರತ್ಕಲ್, ಕಟೀಲು- ಬಜಪೆ- ಕಾವೂರು- ಕೂಳೂರು- ಕೊಟ್ಟಾರಚೌಕಿ ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್ ಪಾಯಿಂಟ್-ನವಭಾರತ್ ಸರ್ಕಲ್)ಪಾರ್ಕಿಂಗ್ ಸ್ಥಳಗಳು: ಕರಾವಳಿ ಉತ್ಸವ ಗ್ರೌಂಡ್, ಉರ್ವ ಮಾರ್ಕೆಟ್ ಗ್ರೌಂಡ್, ಲೇಡಿಹಿಲ್ ಚರ್ಚ್ ಗ್ರೌಂಡ್ ಮತ್ತು ಕೂಳೂರು ಗೋಲ್ಡ್‌ಫಿಂಚ್ ಸಿಟಿ ಗ್ರೌಂಡ್‌ಗಳು- ಬಸ್ಸುಗಳು. ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ಮೈದಾನ- ಕಾರುಗಳು.
ಕಾರ್ಕಳ- ಮೂಡುಬಿದಿರೆ- ಸುಳ್ಯ- ಪುತ್ತೂರು-ಬೆಳ್ತಂಗಡಿ-ಬಂಟ್ವಾಳ- ಬಿ.ಸಿ.ರೋಡ್‌ನಿಂದ ನಂತೂರು ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್ ಪಾಯಿಂಟ್- ಜ್ಯೋತಿ ಸರ್ಕಲ್)
ಪಾರ್ಕಿಂಗ್ ಸ್ಥಳಗಳು:
ಬಂಟ್ಸ್‌ಹಾಸ್ಟೆಲ್‌ನ ರಾಮಕೃಷ್ಣ ಸ್ಕೂಲ್ ಗ್ರೌಂಡ್, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಹೈಸ್ಕೂಲ್ ಗ್ರೌಂಡ್ ಮತ್ತು ಆ್ಯಗ್ನೆಸ್ ಸ್ಕೂಲ್ ಗ್ರೌಂಡ್- ಬಸ್ಸುಗಳು. ಬಲ್ಮಠದ ಶಾಂತಿನಿಲಯ ಗ್ರೌಂಡ್: ಕಾರುಗಳು.
ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ಉಪ್ಪಳ, ಕಾಸರಗೋಡು ತೊಕ್ಕೊಟ್ಟಿನಿಂದ ಪಂಪ್‌ವೆಲ್- ಕಂಕನಾಡಿ- ಮಂಗಳಾದೇವಿ ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್ ಪಾಯಿಂಟ್- ಮಂಗಳಾದೇವಿ) ಪಾರ್ಕಿಂಗ್ ಸ್ಥಳಗಳು: ಎಮ್ಮೆಕೆರೆ ಗ್ರೌಂಡ್ ಮತ್ತು ವಾಮನ ನಾಯ್ಕ ಗ್ರೌಂಡ್ಸ್, ನಂದಿಗುಡ್ಡೆ- ಬಸ್ಸುಗಳು. ಮೋರ್ಗನ್‌ಗೆàಟ್ ಗ್ರೌಂಡ್ಸ್- ಕಾರುಗಳು.
ವ್ಯಾಪಕ ಬಂದೋಬಸ್ತ್
ಬಂದೋಬಸ್ತು ಕರ್ತವ್ಯಕ್ಕೆ ನಗರದಲ್ಲಿ 5 ಎಸ್‌ಪಿ/ ಡಿಸಿಪಿ, 10 ಡಿವೈಎಸ್‌ಪಿ/ ಎಸಿಪಿ, 36 ಪಿಐಗಳು, 67 ಪಿಎಸ್‌ಐ, 147 ಎಎಸ್‌ಐ, 1207 ಎಚ್‌ಸಿ/ ಪಿಸಿ ಸೇರಿದಂತೆ ಒಟ್ಟು 1472 ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ನಿಯೋಜಿಸಲಾಗಿದೆ. 92 ಎಚ್‌ಐ, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ, 2 ಸಿಆರ್‌ಪಿಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬಂದಿಯನ್ನು ನೇಮಿಸಲಾಗಿದೆ. 4 ಎಎಸ್‌ಸಿ ತಂಡ, 1 ಬಿಡಿಎಸ್ ತಂಡ, 30 ಡಿಎಫ್‌ಎಂಡಿ/ 30 ಎಚ್‌ಎಚ್‌ಎಂಡಿಯನ್ನು ಕಾರ್ಯಕ್ರಮ ನಡೆಯುವ ಸ್ಥಳ, ವಿಮಾನ ನಿಲ್ದಾಣ, ವಿವಿಐಪಿ ಸಂಚರಿಸುವ ಸ್ಥಳದ ತಪಾಸಣೆಗಾಗಿ ಈಗಾಗಲೇ ನೇಮಿಸಲಾಗಿದೆ. ನಗರದ ಬಂದೋಬಸ್ತು ಕರ್ತವ್ಯದಲ್ಲಿ ಒಟ್ಟು 34 ಸೆಕ್ಟರ್ ಮೊಬೈಲ್‌ಗಳು, 144 ಸೂಕ್ಷ್ಮಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳು ಕಾರ್ಯ ನಿರ್ವಹಿಸಲಿವೆ.
ಸಿಸಿ ಕೆಮರಾ ಅಳವಡಿಕೆ
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ನಗರದ ವಿವಿಧ ಹೊಟೇಲ್/ ಲಾಡ್ಜ್ಗಳನ್ನು ತಪಾಸಣೆ ಮಾಡಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ, ನಿಗಾ ಇಡಲಾಗಿದೆ.
ಬಿಗು ಭದ್ರತೆ, ರಸ್ತೆಗಳಿಗೆ ಬೇಲಿ
ಬಜಪೆ: ಬಿಗು ಭದ್ರತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ತಿರುವಿನಲ್ಲಿ, ಅಂಗಡಿ ಮುಂಗಟ್ಟು ಎದುರು ಹೀಗೆ ಹಲವೆಡೆ ಬೇಲಿಗಳನ್ನು ರಚಿಸಲಾಗಿದೆ. ಕೆಂಜಾರು ನಿರ್ಗಮನ ರಸ್ತೆಯಿಂದ ಮರವೂರು ಸೇತುವೆಯ ವರೆಗೆ ಡಾಮರು ಹಾಕಲಾಗಿದೆ. ಆಗಮನ ರಸ್ತೆಗೆ ಈಗಾಗಲೇ ಡಾಮರು ಕಾಮಗಾರಿ ನಡೆಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳನ್ನು ಸ್ವತ್ಛಗೊಳಿಸುವ ಕಾರ್ಯವೂ ನಡೆದಿದೆ. ರಸ್ತೆ ಬದಿಗಳಲ್ಲಿರುವ ಹೊಂಡಗಳನ್ನು ಕೂಡ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ.
ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು
ಪ್ರಧಾನಿ ಮೋದಿ ಅವರು ನಗರಕ್ಕಾಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಮತ್ತು ಸಂಚಾರ ದಟ್ಟಣೆಯನ್ನು ಗಮನಿಸಿಕೊಂಡು ನಗರದೊಳಗೆ ಪ್ರವೇಶವಾಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗುತ್ತದೆ. ಸಿಟಿ ಬಸ್‌ಗಳು, ಸರ್ವಿಸ್ ಬಸ್‌ಗಳು, ಅಂತರ್ ಜಿಲ್ಲಾ ಬಸ್‌ಗಳು ಎ. 13ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7ರ ವರೆಗೆ ಡ್ರಾಪಿಂಗ್ ಪಾಯಿಂಟ್‌ಗಳಾದ ಜ್ಯೋತಿ, ಮಂಗಳಾದೇವಿ ಮತ್ತು ನವಭಾರತ ಸರ್ಕಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸ್ ಹೋಗಲಿವೆ. ಕೆಎಸ್ಸಾರ್ಟಿಸಿ ಬಸ್‌ಗಳು ಪಂಪ್‌ವೆಲ್- ನಂತೂರು- ಕೆಪಿಟಿ- ಕುಂಟಿಕಾನ ಮೂಲಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಅದೇ ಮಾರ್ಗದಲ್ಲಿ ವಾಪಸ್ ಹೋಗಲಿವೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಅವರು ನಿರ್ಗಮಿಸುವವರೆಗೆ ಮಂಗಳೂರು ಅಂ.ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.