ಬಿಎಸ್‌ವೈಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ ಅಂಬರೀಶ್
Team Udayavani, Mar 26, 2019, 6:05 AM IST
ಬೆಂಗಳೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸುಮಲತಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.
ನಗರದ ಡಾಲರ್ ಕಾಲೋನಿಯಲ್ಲಿರುವ ನಿವಾಸಕ್ಕೆ ಬೆಳಗ್ಗೆ ತೆರಳಿದ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಸೂಚಿಸಿರುವುದಕ್ಕಾಗಿ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಮಾತನಾಡಿದ ಸುಮಲತಾ, ಮಂಡ್ಯ ಕ್ಷೇತ್ರದಲ್ಲಿ ನನಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಜತೆಗೆ ಅವರ ಆಶೀರ್ವಾದವನ್ನೂ ಪಡೆದಿದ್ದೇನೆ ಎಂದು ಹೇಳಿದರು.
ನಟರಾದ ದರ್ಶನ್ ಹಾಗೂ ಯಶ್ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಏನು ಬೇಕಾದರೂ ಮಾತನಾಡಲಿ. ನಾನು ಆ ಬಗ್ಗೆ ಏನೂ ಹೇಳುವುದಿಲ್ಲ. ದರ್ಶನ್ ಕೂಡ ಇದನ್ನೇ ಹೇಳಿದ್ದಾರೆ. ಯಾರು ಏನು ಬೇಕಾದರೂ ಮಾತನಾಡಲಿ. ನಾವು ಜನರ ಜೊತೆಯಲ್ಲೇ ಇರುತ್ತೇವೆ. ಗೆದ್ದ ಬಳಿಕ ಮುಂದೇನು ಎಂಬುದನ್ನೂ ಜನರನ್ನೇ ಕೇಳುತ್ತೇವೆ ಎಂದು ತಿಳಿಸಿದರು.
ಅವರನ್ನು ಬೆಂಬಲಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಉತ್ತರಿಸಿದ ಅವರು, ಈ ರೀತಿಯ ಬೆಳವಣಿಗೆಗಳಾಗುತ್ತವೆ ಎಂದು ಮೊದಲೇ ಊಹಿಸಿದ್ದೆವು. ಹೀಗಾಗಿ ಆ ಬಗ್ಗೆ ಯಾರಿಗೂ ಬೇಸರವಿಲ್ಲ. ಚುನಾವಣೆ ಬಳಿಕ ಮುಂದಿನ ವಿಚಾರಗಳ ಬಗ್ಗೆ ಚಿಂತಿಸಲಿದ್ದೇವೆ ಎಂದು ಹೇಳಿದರು.
ಸಿಎಂ ಹೇಳಿಕೆಗೆ ಯಡಿಯೂರಪ್ಪ ಆಕ್ಷೇಪ
ಸುಮಲತಾ ಅವರನ್ನು ಬೆಂಬಲಿಸುತ್ತಿರುವ ನಟ ದರ್ಶನ್, ಯಶ್ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳ್ಳೆತ್ತು ಎಂದು ಕರೆದಿರುವುದಕ್ಕೆ ಆಕ್ಷೇಪಿಸಿರುವ ಯಡಿಯೂರಪ್ಪ, ಸೋಲಿನ ಭಯದಿಂದ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಈಗಾಗಲೇ ಅಪ್ಪ ಮಕ್ಕಳಿಗೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸುಮಲತಾ ಪರ ಬಿಜೆಪಿ ಬ್ಯಾಟಿಂಗ್
ಬೆಂಗಳೂರು: ಮಂಡ್ಯದಲ್ಲಿ ಅನುಕಂಪದ ಅಲೆ ಎದ್ದು ಕಾಣುತ್ತಿದ್ದು, ಕ್ಷೇತ್ರದಲ್ಲಿ ಹಣಬಲ ಹೆಚ್ಚಾಗಿ,ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೂಡಲೇ ಕ್ಷೇತ್ರಕ್ಕೆ ವಿಶೇಷ ವೀಕ್ಷಕರನ್ನು ನಿಯೋಜಿಸಬೇಕು,ಅತಿ ಸೂಕ್ಷ್ಮ ಕ್ಷೇತ್ರ ಎಂದು ಘೋಷಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ನಾಯಕರು ಹತಾಶೆಗೊಂಡಿ ರುವುದುಅವರಮಾತುಗಳಿಂದಲೇ ವ್ಯಕ್ತವಾಗುತ್ತಿದೆ. ಸುಮಲತಾ ಅಂಬರೀಶ್ ಪರ ನಟರಾದ ದರ್ಶನ್, ಯಶ್ ಅವರು ಪ್ರಚಾರಕ್ಕೆ ಹೋದರೆ ಅವರನ್ನು ಕಳ್ಳೆತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರುತ್ತಾರೆ. ಹಾಗಾದರೆ ಇವರೇನೂ ಬೀದಿ ಬಸವನೇ ಎಂದು ಜನ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.