ಉ.ಕ. ದಲ್ಲಿ ಟಾರ್ಗೆಟ್ 10 ಕಾರ್ಯತಂತ್ರ
Team Udayavani, Apr 21, 2019, 3:00 AM IST
ಬೆಂಗಳೂರು: ಮೊದಲ ಹಂತದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ನಿರೀಕ್ಷಿತ ಪ್ರಮಾಣದ ಸೀಟು ಪಡೆಯುವುದು ಅನುಮಾನ ಇರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸೀಟು ಪಡೆಯಲು ಎರಡೂ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.
ಎರಡನೇ ಹಂತದಲ್ಲಿ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಈಗಿರುವ ನಾಲ್ಕು ಸ್ಥಾನದ ಜತೆಗೆ ಹೆಚ್ಚುವರಿಯಾಗಿ ಆರು ಸ್ಥಾನದ ಟಾರ್ಗೆಟ್‌ನೊಂದಿಗೆ ಕಾಂಗ್ರೆಸ್-ಜೆಡಿಎಸ್ “ಅಖಾಡ’ ಪ್ರವೇಶಿಸಿದೆ.
ಬೀದರ್, ಹಾವೇರಿ, ದಾವಣಗೆರೆ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಹಾಗೂ ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿದ್ದು, ಮುಖ್ಯಮಂತ್ರಿ ಸಹಿತ ಇಡೀ ಸಮ್ಮಿಶ್ರ ಸರ್ಕಾರದ ಸಂಪುಟ ಉತ್ತರ ಕರ್ನಾಟಕ ಭಾಗಕ್ಕೆ “ಶಿಫ್ಟ್’ ಮಾಡಲಾಗಿದೆ.
ಜತೆಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಹಂತದ ಹದಿನಾಲ್ಕು ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಿ, ಜಾತಿವಾರು ಲೆಕ್ಕಾಚಾರದೊಂದಿಗೆ ಮತ ಗಳಿಕೆಯತ್ತ ತಳಮಟ್ಟದಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಹೇಳಲಾಗಿದೆ.
ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಬೀದರ್, ಕೊಪ್ಪಳ ಬಿಜೆಪಿ ವಶದಲ್ಲಿದ್ದು, ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಳ್ಳಾರಿ ಕಾಂಗ್ರೆಸ್ ವಶದಲ್ಲಿವೆ.
ಹೊಣೆಗಾರಿಕೆ: ಬಿಜೆಪಿ ವಶದಲ್ಲಿರುವ 10 ಕ್ಷೇತ್ರಗಳ ಪೈಕಿ ಬೀದರ್, ಬಾಗಲಕೋಟೆ, ದಾವಣಗೆರೆ, ಹಾವೇರಿ, ಶಿವಮೊಗ್ಗ, ವಿಜಯಪುರ ಗೆಲ್ಲುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಗುರಿ. ಇದಕ್ಕಾಗಿ ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರಗಳ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್- ಡಿ.ಕೆ.ಸುರೇಶ್ ಅವರಿಗೆ ಹಾವೇರಿ ಕ್ಷೇತ್ರದ ಉಸ್ತುವಾರಿ ಸಚಿವ ಜಮೀರ್ ಅಹಮದ್ ವಹಿಸಲಾಗಿದೆ. ಹಾವೇರಿ ಹಾಗೂ ದಾವಣಗೆರೆ, ಶಿವಮೊಗ್ಗ, ವಿಜಯಪುರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ ಮುಸ್ಲಿಂ ನಾಯಕರು ಹೆಚ್ಚಾಗಿ ಪ್ರಚಾರದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಶಿವಮೊಗ್ಗದಲ್ಲಿ ಕಳೆದ ಉಪ ಚುನಾವಣೆಯಲ್ಲಿ ಆಗಿದ್ದ ವ್ಯತ್ಯಾಸ ಗಮನಿಸಿ ಈ ಬಾರಿ ಅದನ್ನು ಸರಿಪಡಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಮಂಜುನಾಥಗೌಡ ಹಾಗೂ ಕಿಮ್ಮನೆ ರತ್ನಾಕರ್, ಭದ್ರಾವತಿಯಲ್ಲಿ ಅಪ್ಪಾಜಿ ಹಾಗೂ ಸಂಗಮೇಶ್ ನಡುವಿನ ವೈಮನಸ್ಯ ನಿವಾರಿಸಿರುವ ಡಿ.ಕೆ.ಶಿವಕುಮಾರ್ ಎಲ್ಲರನ್ನೂ ಒಟ್ಟು ಮಾಡಿಸಿ ಪ್ರಚಾರಕ್ಕೆ ಇಳಿಸುತ್ತಿದ್ದಾರೆ.
ಅದೇ ರೀತಿ ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ನಂತರ ಖುದ್ದು ಸಿದ್ದರಾಮಯ್ಯ ಅವರು ರಂಗಪ್ರವೇಶಿಸಿ ಸೂರ್ಯನಾರಾಯಣರೆಡ್ಡಿ ಸೇರಿ ಮುನಿಸಿಕೊಂಡಿದ್ದ ಇತರೆ ಮುಖಂಡರ ಜತೆ ಮಾತುಕತೆ ನಡೆಸಿ ಸರಿಪಡಿಸಿದ್ದಾರೆಂದು ಹೇಳಲಾಗಿದೆ. ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯ ಹೊಣೆಗಾರಿಕೆ ನೀಡಲಾಗಿದೆ.
ಖರ್ಗೆ ಗೆಲುವು ಕೈಗೆ ಪ್ರತಿಷ್ಠೆ: ಬಿಜೆಪಿ ಸಹ ಮೊದಲ ಹಂತದ ನಂತರ ಎರಡನೇ ಹಂತದ 14 ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಿದ್ದು ಕಾಂಗ್ರೆಸ್ ವಶದಲ್ಲಿರುವ ಚಿಕ್ಕೋಡಿ, ಕಲಬುರಗಿ ಬಳ್ಳಾರಿ, ರಾಯಚೂರು ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ತನ್ನೆಲ್ಲಾ ಶಕ್ತಿ , ತಂತ್ರಗಾರಿಕೆ ಉಪಯೋಗಿಸುತ್ತಿದೆ. ಆದರೆ, ಖರ್ಗೆ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿಯವರು ಆ ಕ್ಷೇತ್ರದ ಬಗ್ಗೆ ನಿತ್ಯ ಮಾಹಿತಿ ಪಡೆಯುತ್ತಿದ್ದಾರೆ.
ಹೀಗಾಗಿ, ರಾಜ್ಯ ಕಾಂಗ್ರೆಸ್ ನಾಯಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಮತದಾನ ನಡೆದ ಹದಿನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 10 ಸ್ಥಾನ ಗಳಿಸುವ ಗುರಿ ಹೊಂದಿತ್ತು. ಆದರೆ, ಮತದಾನದ ಬಳಿಕ ಬೆಂಗಳೂರು ಉತ್ತರ ಹಾಗೂ ಮೈಸೂರು ಬಿಟ್ಟು ಉಳಿದೆಡೆಯ ಬಗ್ಗೆ ಅನುಮಾನವಿದೆ.
ಜತೆಗೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೈತ್ರಿಕೂಟ ಯಶಸ್ವಿಯಾಗಿಲ್ಲ ಎಂಬ ಮಾತುಗಳೂ ಇವೆ. ಹೀಗಾಗಿ, ಇಲ್ಲಿ ಕಳೆದುಕೊಳ್ಳಬಹುದಾದ ಕ್ಷೇತ್ರಗಳ ಬದಲಿಗೆ ಎರಡನೇ ಹಂತದಲ್ಲಿ ಗಳಿಸಿಕೊಳ್ಳಲು ಎರಡೂ ಪಕ್ಷಗಳ ನಾಯಕರು ಬೆವರು ಹರಿಸುತ್ತಿದ್ದಾರೆ.
* ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.