ಕೋಲಾರ ಲೋಕಸಭಾ ಕ್ಷೇತ್ರದ ಹಿನ್ನೋಟ
Team Udayavani, Mar 19, 2019, 7:15 AM IST
ಕೋಲಾರ: ಲೋಕಸಭಾ ಚುನಾವಣೆಗೆ ಇಂದಿನಿಂದ (ಮಾ.19)ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದೆ. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹಿನ್ನೋಟ ಮತ್ತು ವಿಶೇಷಗಳ ಅವಲೋಕನ ನಡೆಸಿದರೆ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಗಮನ ಸೆಳೆಯುತ್ತವೆ.
1952: ಕೋಲಾರ ಲೋಕಸಭಾ ಕ್ಷೇತ್ರವು ದ್ವಿಸದಸ್ಯರ ಕ್ಷೇತ್ರವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ದೊಡ್ಡತಿಮ್ಮಯ್ಯ ಮತ್ತು ಎಂ.ವಿ.ಕೃಷ್ಣಪ್ಪ ಮೊದಲ ಸಂಸದರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
1957: ಈ ಚುನಾವಣೆಯಲ್ಲಿಯೂ ಹಿಂದಿನ ಸಂಸದ ದೊಡ್ಡತಿಮ್ಮಯ್ಯ ಅವಿರೋಧವಾಗಿ ಪುನರಾಯ್ಕೆಯಾದರೆ, ಮತ್ತೋರ್ವ ಸದಸ್ಯರಾಗಿ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾದ ಕೆ.ಚಂಗಲರಾಯರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡರು.
1962: ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ವಿಂಗಡಿಸಲಾಯಿತು. ಕೋಲಾರ ಏಕ ಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ದೊಡ್ಡತಿಮ್ಮಯ್ಯ ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವಿನ ಸಾಧನೆಯನ್ನು ಮಾಡಿದ್ದರು.
1967: ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿದ ಜಿ.ವೈ.ಕೃಷ್ಣನ್ 1,31,041 ಮತಗಳನ್ನು ಶೇ.47.43 ಪ್ರಮಾಣದಲ್ಲಿ ಪಡೆದುಕೊಂಡು ಸಂಸದರಾಗಿ ಆಯ್ಕೆಯಾದರು.
1971: ಎರಡನೇ ಬಾರಿಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಜಿ.ವೈ.ಕೃಷ್ಣನ್ 2,17,037 ಮತಗಳನ್ನು ಶೇ.81.32 ಪ್ರಮಾಣದಲ್ಲಿ ಪಡೆದುಕೊಂಡು ಸಂಸದರಾಗಿ ಆಯ್ಕೆಯಾದರು.
1977: ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದ ಜಿ.ವೈ.ಕೃಷ್ಣನ್ 1,96,290 ಮತಗಳನ್ನು ಶೇ.55.85 ಪ್ರಮಾಣದಲ್ಲಿ ಪಡೆದುಕೊಂಡು 73016 ಮತಗಳ ಅಂತರದಿಂದ ಸತತವಾಗಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ದೊಡ್ಡತಿಮ್ಮಯ್ಯರ ಹ್ಯಾಟ್ರಿಕ್ ಸಾಧನೆಯನ್ನು ಸರಿಗಟ್ಟಿದರು. ಇವರ ವಿರುದ್ಧ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈ.ರಾಮಕೃಷ್ಣ 1,23,274 ಮತಗಳನ್ನು ಪಡೆದು ಸೋಲನ್ನಪ್ಪಿದರು.
1980: ಸತತ ನಾಲ್ಕನೇ ಬಾರಿಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಜಿ.ವೈ.ಕೃಷ್ಣನ್ 1,82,241 ಮತಗಳನ್ನು ಶೇ.50.19 ಪ್ರಮಾಣದಲ್ಲಿ ಪಡೆದುಕೊಂಡು ದೊಡ್ಡತಿಮ್ಮಯ್ಯರ ಹ್ಯಾಟ್ರಿಕ್ ಗೆಲುವಿನ ದಾಖಲೆಯನ್ನು ಮುರಿದರು. ಇವರ ವಿರುದ್ಧ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ಚನ್ನಯ್ಯ 84,729 ಮತಗಳನ್ನಷ್ಟೇ ಪಡೆದು, 97512 ಮತಗಳ ಅಂತರದಿಂದ ಸೋಲನ್ನಪ್ಪಿದರು.
1984: ದೇಶ ಮತ್ತು ಕರ್ನಾಟಕದಲ್ಲಿ ರಾಜಕೀಯವಾಗಿ ಬದಲಾವಣೆಯ ಗಾಳಿ ಬೀಸಿದ ದಿನಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಜಿ.ವೆಂಕಟೇಶ್ 2,39,562 ಮತಗಳನ್ನು ಶೇ.51.92 ಪ್ರಮಾಣದಲ್ಲಿ ಪಡೆದುಕೊಂಡು ಕ್ಷೇತ್ರದ ಮೊದಲ ಜನತಾಪಕ್ಷದ ಸಂಸದರಾಗಿ ಆಯ್ಕೆಯಾದರು. ಇವರ ವಿರುದ್ಧ ಸತತ ನಾಲ್ಕು ಬಾರಿಯಿಂದ ಗೆದ್ದಿದ್ದ ಜಿ.ವೈ.ಕೃಷ್ಣನ್ 1,94,797 ಮತಗಳನ್ನು ಪಡೆದು 44765 ಮತಗಳ ಅಂತರದಿಂದ ಸೋಲನ್ನಪ್ಪಿದರು.
1989: ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಡಾ.ಜಿ.ವೆಂಕಟೇಶ್ ಗೆದ್ದ ನಂತರ ಕ್ಷೇತ್ರವನ್ನು ಕಡೆಗಣಿಸಿದ್ದರಿಂದಾಗಿ ಜನತೆ ಈ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೈ.ರಾಮಕೃಷ್ಣರಿಗೆ ಶೇ.51.8 ಪ್ರಮಾಣದಲ್ಲಿ 3,50,009 ಮತಗಳನ್ನು ನೀಡಿ ಸಂಸದರಾಗಿ ಆಯ್ಕೆ ಮಾಡಿದರು.
1991: ಕೇವಲ ಎರಡು ವರ್ಷಕ್ಕೆ ಎದುರಾದ ಈ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾದರು. ಕ್ಷೇತ್ರದಾದ್ಯಂತ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಗಾಳಿ ಬೀಸುತ್ತಿತ್ತು. ಆದರೆ, ರಾಜೀವ್‌ಗಾಂಧಿಯವರ ಹತ್ಯಾ ನಂತರ ಚುನಾವಣೆ ನಡೆದಿದ್ದರಿಂದ ಕ್ಷೇತ್ರಕ್ಕೆ ಅಪರಿಚಿತರಾಗಿದ್ದರೂ ಅನುಕಂಪದ ಅಲೆಯ ಲಾಭ ಗಿಟ್ಟಿಸಿಕೊಂಡು ಕೆ.ಎಚ್.ಮುನಿಯಪ್ಪ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿಬಿಟ್ಟರು. ಮೊದಲ ಚುನಾವಣೆಯಲ್ಲಿ ಅವರು 2,35,902 ಮತಗಳನ್ನು ಶೇ.40.14 ಪ್ರಮಾಣದಲ್ಲಿ ಪಡೆದುಕೊಂಡಿದ್ದರು. ಇವರ ಪ್ರತಿಸ್ಪರ್ಧಿ ಬಿಜೆಪಿಯ ವಿ.ಹನುಮಪ್ಪ 1,73,525 ಮತಗಳನ್ನು ಪಡೆದುಕೊಂಡು 62377 ಮತಗ ಅಂತರದಿಂದ ಸೋಲನ್ನಪ್ಪಿಕೊಂಡಿದ್ದರು.
1996: ತಾವು ಎದುರಿಸಿದ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪ 3,10.345 ಮತಗಳನ್ನು ಶೇ.44.39 ಪ್ರಮಾಣದಲ್ಲಿ ಪಡೆದುಕೊಂಡು ತಮ್ಮ ಜನಪ್ರಿಯತೆಯನ್ನು ವೃದ್ಧಿಸಿಕೊಂಡಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಜನತಾದಳದ ಬಾಲಾಜಿ ಚನ್ನಯ್ಯ 2,93,307 ಪಡೆದುಕೊಂಡು 17,042 ಮತಗಳ ಅಂತರದಿಂದ ಸೋತಿದ್ದರು.
1998: ಕೇವಲ ಎರಡೇ ವರ್ಷಕ್ಕೆ ಮತ್ತೂಂದು ಚುನಾವಣೆ ಎದುರಾಯಿತು. ಇಲ್ಲೂ ಹಿಂದಿನ ಎರಡು ಅವಧಿಯಿಂದ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾದರು. ಶೇ.39.63 ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡು 3,04,261 ಮತಗಳನ್ನು ಪಡೆದು ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ ಮೂರನೇ ಸಂಸದರಾದರು. ಈ ಬಾರಿಯೂ ಜನತಾದಳದಿಂದ ಸ್ಪರ್ಧಿಸಿದ್ದ ಬಾಲಾಜಿ ಚನ್ನಯ್ಯ 2,26,289 ಮತಗಳನ್ನು ಪಡೆದುಕೊಂಡು 77,972 ಮತಗಳ ಅಂತರದಿಂದ ಸೋತಿದ್ದರು.
1999: ಕೇಂದ್ರ ಸರಕಾರದಲ್ಲಿನ ರಾಜಕೀಯ ಅಸ್ಥಿತರತೆಯಿಂದಾಗಿ ಒಂದೇ ವರ್ಷಕ್ಕೆ ಎದುರಾದ 13 ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್.ಮುನಿಯಪ್ಪ 3,21,964 ಮತಗಳನ್ನು ಶೇ.39 ಪ್ರಮಾಣದಲ್ಲಿ ಪಡೆದುಕೊಂಡು ನಾಲ್ಕನೇ ಗೆಲುವನ್ನು ದಾಖಲಿಸಿ ಈ ಹಿಂದೆ ನಾಲ್ಕು ಗೆಲುವು ಸಂಪಾದಿಸಿದ್ದ ಜಿ.ವೈ.ಕೃಷ್ಣನ್‌ರ ದಾಖಲೆಯನ್ನು ಸರಿಗಟ್ಟಿದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಂಗಮ್ಮ ಮುನಿಸ್ವಾಮಿ 2,39,382 ಮತಗಳನ್ನು ಪಡೆದುಕೊಂಡು 82,782 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.
2004: ಕ್ಷೇತ್ರಗಳ ಪುನರ್ ವಿಂಗಡನೆಗೆ ಮುನ್ನ ನಡೆದ ಈ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಚ್.ಮುನಿಯಪ್ಪ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಏಕಕಾಲದಲ್ಲಿ ಚುನಾವಣೆ ನಡೆದ ಲಾಭವನ್ನು ಪಡೆದುಕೊಂಡು 3,85,582 ಮತಗಳನ್ನು ಶೇ.42.40 ಪ್ರಮಾಣದಲ್ಲಿ ಗಿಟ್ಟಿಸಿಕೊಂಡು ಐದನೇ ಗೆಲುವಿನ ಮೂಲಕ ಹೊಸ ದಾಖಲೆಯನ್ನು ಬರೆದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಎಸ್.ವೀರಯ್ಯ 3,73,947 ಮತಗಳನ್ನು ಪಡೆದುಕೊಂಡು ಕೇವಲ 11,635 ಮತಗಳ ಅಂತರದಿಂದ ಸೋತಿದ್ದರು.
2009: ಕ್ಷೇತ್ರಗಳ ಪುನರ್‌ವಿಂಗಡನೆಯಾದ ನಂತರ ನಡೆದ ಈ ಚುನಾವಣೆಯಲ್ಲಿ ವೇಮಗಲ್ ಕ್ಷೇತ್ರ ಇಲ್ಲವಾಯಿತು. ಕೋಲಾರ ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಯಾದವು. ಲೋಕಸಭೆಗೆ ನಡೆದ ಹದಿನೈದನೇ ಚುನಾವಣೆಯಲ್ಲಿ ಸತತ ಆರನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್.ಮುನಿಯಪ್ಪ 3,44,771 ಮತಗಳನ್ನು ಪಡೆದುಕೊಂಡು ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಡಿ.ಎಸ್.ವೀರಯ್ಯರಿಗಿಂತಲೂ 23006 ಮತಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಡಬಲ್ ಹ್ಯಾಟ್ರಿಕ್ ಗೆಲುವಿನ ಸಾಧನೆಯನ್ನು ಮಾಡಿದರು. ಈ ಚುನಾವಣೆಯಲ್ಲಿ ಡಿ.ಎಸ್.ವೀರಯ್ಯ 3,21,765 ಮತಗಳನ್ನು ಪಡೆದುಕೊಂಡಿದ್ದರು.
2014: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಏಳನೇ ಬಾರಿಗೆ ಸ್ಪರ್ಧಿಸಿದ್ದ ಕೆ.ಎಚ್.ಮುನಿಯಪ್ಪ ನರೇಂದ್ರ ಮೋದಿ ಅಲೆಯ ನಡುವೆಯೂ 4,18,926 ಮತಗಳನ್ನು ಪಡೆದುಕೊಂಡು ಜೆಡಿಎಸ್‌ನ ಕೋಲಾರ ಕೇಶವರನ್ನು 47,850 ಮತಗಳ ಅಂತರದಿಂದ ಸೋಲಿಸಿದ್ದರು. ಕೋಲಾರ ಕೇಶವ 3,71,076 ಮತಗಳನ್ನು ಪಡೆದುಕೊಂಡಿದ್ದರು. ಬಿಜೆಪಿಯಿಂದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮೂರನೇ ಸ್ಥಾನಕ್ಕಿಳಿದಿದ್ದರು. ಆಮ್ ಆದ್ಮಿಯಿಂದ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಸ್ಪರ್ಧಿಯಾಗಿ 17558 ಮತಗಳನ್ನು ಪಡೆದುಕೊಂಡಿದ್ದರು.
ಕ್ಷೇತ್ರದ ವಿಶೇಷತೆಗಳು
16ರಲ್ಲಿ ಗೆದ್ದವರು 7 ಮಂದಿ!: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಈವರೆಗೂ ಹದಿನಾರು ಚುನಾವಣೆಗಳು ನಡೆದಿದ್ದರೂ ಆರಂಭದ ಎರಡು ಚುನಾವಣೆಗಳು ದ್ವಿಸದಸ್ಯವಾಗಿದ್ದರೂ ಈವರೆಗೂ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದವರು ಕೇವಲ ಏಳು ಮಂದಿ ಮಾತ್ರವೇ. ದೊಡ್ಡತಿಮ್ಮಯ್ಯ ಮೂರು ಬಾರಿ, ಇವರೊಂದಿಗೆ ದ್ವಿಸದಸ್ಯ ಕ್ಷೇತ್ರಗಳನ್ನು ಹಂಚಿಕೊಂಡ ಎಂ.ವಿ.ಕೃಷ್ಣಪ್ಪ, ಕೆ.ಚಂಗಲರಾಯರೆಡ್ಡಿ, ಆನಂತರ ನಾಲ್ಕು ಬಾರಿ ಗೆದ್ದ ಜಿ.ವೈ.ಕೃಷ್ಣನ್, ತಲಾ ಒಂದು ಬಾರಿ ಗೆದ್ದ ಡಾ.ಜಿ.ವೆಂಕಟೇಶ್, ವೈ.ರಾಮಕೃಷ್ಣ ಇವರ ನಂತರ ಸತತ ಏಳು ಗೆಲುವುಗಳನ್ನು ದಾಖಲಿಸಿದ ಕೆ.ಎಚ್.ಮುನಿಯಪ್ಪ ಈ ಕ್ಷೇತ್ರದ ಈವರೆಗಿನ ಸಂಸದರಾಗಿದ್ದಾರೆ.
ಸೋತವರು ಗೆದ್ದಿಲ್ಲ: ಕೋಲಾರ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರದ ವಿಶೇಷತೆ ಇದು. ಕೋಲಾರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಮ್ಮೆ ಚುನಾವಣೆ ಸೋತವರು ಮತ್ತೇ ಚುನಾವಣೆ ಗೆದ್ದಿದ್ದೇ ಇಲ್ಲ. ಗೆಲ್ಲುವವರು ಗೆಲ್ಲುತ್ತಲೇ ಇರುತ್ತಾರೆ. ಗೆದ್ದವರು ಒಮ್ಮೆ ಸೋತರೆಂದರೆ ಜನ ಅವರನ್ನು ಪುನರಾಯ್ಕೆ ಮಾಡಿಕೊಂಡಿದ್ದೇ ಇಲ್ಲ. ಈ ಕಾರಣದಿಂದಲೇ ಕೋಲಾರದಲ್ಲಿ ಚುನಾವಣೆ ಗೆದ್ದು ಸೋತವರಿಗೆ ರಾಜಕೀಯ ಭವಿಷ್ಯವೇ ಇಲ್ಲವೆಂಬ ಮಾತು ಹುಟ್ಟಿಕೊಳ್ಳುವಂತಾಗಿದೆ.
ಕಾಂಗ್ರೆಸ್‌ಗೆ ಸುಭದ್ರ ಕೋಟೆ: ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸುಭದ್ರ ಕೋಟೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೂ ನಡೆದಿರುವ 16 ಚುನಾವಣೆಯಲ್ಲಿ 15ರಲ್ಲಿ ಗೆದ್ದಿದ್ದು ಕಾಂಗ್ರೆಸ್. ಕೇವಲ ಒಮ್ಮೆ ಅಂದರೆ 1984ರ ಚುನಾವಣೆಯಲ್ಲಿ ಮಾತ್ರ ಜನತಾಪಕ್ಷ ಗೆಲುವು ಸಂಪಾದಿಸಿದೆ.
ಬಲವಿದ್ದರೂ ಗೆಲ್ಲದ ಜೆಡಿಎಸ್: ಪಂಚಾಯತ್ ಮಟ್ಟದಿಂದಲೇ ತನ್ನದೇ ಆದ ಬಲವನ್ನು ಜೆಡಿಎಸ್ ಪಕ್ಷ ಹೊಂದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜೆಡಿಎಸ್‌ನ ಸಾಧನೆ ಶೂನ್ಯ ಎಂದೇ ಹೇಳಬೇಕು. 1984ರಲ್ಲಿ ರಾಜ್ಯದಲ್ಲಿದ್ದ ರಾಮಕೃಷ್ಣ ಹೆಗಡೆ ಅಲೆಯಲ್ಲಿ ಡಾ.ಜಿ.ವೆಂಕಟೇಶ್ ಜನತಾ ಪಕ್ಷದಿಂದ ಗೆದ್ದಿದ್ದು ಬಿಟ್ಟರೆ, ಜಾತ್ಯತೀತ ಜನತಾದಳ ಅಭ್ಯರ್ಥಿ ಗೆಲ್ಲುವುದಿರಲಿ, ಗೆಲುವಿನ ಸಮೀಪಕ್ಕೂ ಬಾರದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಕೋಲಾರ ಜಿಲ್ಲೆಯ ಎಲ್ಲಾ ಶಾಸಕರು ಜನತಾ ಪರಿವಾರದವರೇ ಆಗಿದ್ದಾಗಲೂ ಜೆಡಿಎಸ್ ಗೆದ್ದಿರಲಿಲ್ಲ. ಇದಕ್ಕೆ ಪಕ್ಷದ ಮುಖಂಡರ ಒಳ ಒಪ್ಪಂದಗಳೇ ಕಾರಣ ಎನ್ನುವುದು ಸಾಮಾನ್ಯ ಮತದಾರರ ಆಂಬೋಣ. ಈ ಬಾರಿ ಸಮ್ಮಿಶ್ರ ಸರ್ಕಾರದ ಒಪ್ಪಂದದಲ್ಲಿ ಕೋಲಾರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದರಿಂದ ಜೆಡಿಎಸ್ ಸ್ಪರ್ಧೆಯೇ ಇಲ್ಲವಾಗಿದೆ.
ಲೋಕಸಭೆಯಲ್ಲಿ ಅರಳುವ ಕಮಲ: ಕೋಲಾರ ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆಯಲಿ, ಇಲ್ಲಿನ ಸಂಪ್ರದಾಯಿಕ ಎದುರಾಳಿಗಳು ಕಾಂಗ್ರೆಸ್ ಮತ್ತು ಜೆಡಿಎಸ್. ಇವುಗಳ ಪೈಪೋಟಿಯಲ್ಲಿ ಪಕ್ಷೇತರರು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಶಾಸಕರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ಬಿಜೆಪಿಗೆ ತನ್ನದೇ ಆದ ಹೇಳಿಕೊಳ್ಳುವಂತ ಶಕ್ತಿ ಇಲ್ಲಿಲ್ಲ. ಅಲ್ಲೊಂದು ಶಾಸಕ, ಜಿಪಂ ಸ್ಥಾನ, ನಗರಸಭೆ, ಪುರಸಭೆ ಸ್ಥಾನ ಗೆಲ್ಲುವುದಕ್ಕೆ ತೃಪ್ತಿಪಟ್ಟುಕೊಳ್ಳುವಂತ ವಾತಾವರಣ ಇದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಮಲ ಪಕ್ಷ ಅನಿರೀಕ್ಷಿತವಾಗಿ ಅರಳಲು ಪ್ರಯತ್ನಿಸುತ್ತಾ 3 ಲಕ್ಷ ಮೀರಿ ಮತ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸುತ್ತದೆ.
* ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.