ಮೂರೂ ಪಕ್ಷದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ
Team Udayavani, Apr 20, 2019, 3:00 AM IST
ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಯಾವ ಪಕ್ಷದಲ್ಲಿ ಏನೆಲ್ಲಾ ಲೆಕ್ಕಾಚಾರ ಇದೆ ಎಂಬ ಸ್ಥೂಲ ಪರಿಚಯ ಇಲ್ಲಿದೆ..
ಕಾಂಗ್ರೆಸ್: 10ರಲ್ಲಿ 5 ಕ್ಷೇತ್ರಗಳಲ್ಲಿ ಮೈತ್ರಿ ಗೆಲ್ಲುವ ವಿಶ್ವಾಸ
ಕಾಂಗ್ರೆಸ್, ತನಗೆ ದಕ್ಷಿಣ ಕರ್ನಾಟಕದ ಪಾಲಿಗೆ ಬಂದಿರುವ 10 ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಮೈತ್ರಿ ಪಕ್ಷಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಎರಡು ಆಧಾರದಲ್ಲಿ ತಮ್ಮ ಸೋಲು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಪ್ರಮುಖವಾಗಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಬೆಂಗಳೂರಿನ 3 ಕ್ಷೇತ್ರಗಳಲ್ಲಿ ಕಡಿಮೆ ಮತದಾನ ಆಗಿರುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮತದಾನವಾಗಿರುವುದು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಬೆಂಗಳೂರು ನಗರದ 3 ಕ್ಷೇತ್ರಗಳನ್ನು ಹೊರತುಪಡಿಸಿ 10 ಕ್ಷೇತ್ರಗಳಲ್ಲಿ ಶೇ.65ಕ್ಕಿಂತಲೂ ಹೆಚ್ಚು ಮತದಾನವಾಗಿದ್ದು, ಗ್ರಾಮೀಣ ಪ್ರದೇಶದ ಮತದಾರರು ಮೈತ್ರಿ ಪಕ್ಷಗಳ ಪರ ಮತ ಚಲಾಯಿಸಿರುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವುದು ನಾಯಕರ ಗೆಲುವಿನ ಲೆಕ್ಕಾಚಾರ. ಅದೇ ಲೆಕ್ಕಾಚಾರದಲ್ಲಿಯೇ ಪ್ರತಿಷ್ಠಿತ ಮಂಡ್ಯ ಕ್ಷೇತ್ರದಲ್ಲಿ ಶೇ.80ರಷ್ಟು ಮತದಾನವಾಗಿರುವುದರಿಂದ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಗೆ ವರವಾಗುವ ಲಕ್ಷಣವಿದೆ ಎನ್ನುವುದು ಕಾಂಗ್ರೆಸ್ ನಾಯಕರ ವಾದ.
ಮತದಾನದ ನಂತರ ಕಾಂಗ್ರೆಸ್ ನಾಯಕರ ಆಂತರಿಕ ಲೆಕ್ಕಾಚಾರದ ಪ್ರಕಾರ ಕೋಲಾರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲಕರ ಫಲಿತಾಂಶ ಲಭಿಸುವ ಸಾಧ್ಯತೆಯಿದೆ. ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ ಹಾಗೂ ಮೈಸೂರಿನಲ್ಲಿ ಫಲಿತಾಂಶ ಯಾವ ಕಡೆಯಾದರೂ ತಿರುಗಬಹುದು ಎನ್ನುವ ವಾತಾವರಣವಿದೆ ಮಾತುಗಳು ಕೇಳಿ ಬರುತ್ತಿವೆ.
ಮತದಾನ ಕಡಿಮೆಯಾಗಿದ್ದೇ ಪ್ಲಸ್: ಬೆಂಗಳೂರಿನ 3 ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಮೈತ್ರಿ ಪಕ್ಷಗಳ ಅಭ್ಯರ್ಥಿಗಳಿಗೆ ವರದಾನವಾಗುತ್ತದೆ ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ವಿಶೇಷವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲ, ಸೋಮಣ್ಣ ಹಾಗೂ ಅಶೋಕ್‌ರಂಥಹ ನಾಯಕರು ತಟಸ್ಥ ನಿಲುವು ತಾಳಿರುವುದು ಮೈತ್ರಿಗೆ ಅನುಕೂಲವಾಗಲಿದೆ. ಅಲ್ಲದೇ, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಅಸಹನೆ ಇರುವ ಮತದಾರರು ನೋಟಾಗೂ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವ ಸಾಧ್ಯತೆಯನ್ನು ಕಾಂಗ್ರೆಸ್ ನಾಯಕರು ಲೆಕ್ಕ ಹಾಕಿಕೊಂಡಿದ್ದಾರೆ.
ಜೆಡಿಎಸ್: ತುಮಕೂರು, ಹಾಸನ, ಮಂಡ್ಯದ್ದೇ ಕುತೂಹಲ
ಜೆಡಿಎಸ್ ಪಾಲಿಗೆ ಪ್ರತಿಷ್ಠಿತ ಕ್ಷೇತ್ರಗಳಾಗಿದ್ದ ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳದ್ದೇ ಇದೀಗ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಆ ಕ್ಷೇತ್ರಗಳ ಫಲಿತಾಂಶ ಏನಾಗಲಿದೆ ಎಂಬುದೇ ಕುತೂಹಲ ಮೂಡಿಸಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್ ಮಂಡ್ಯ ಹಾಗೂ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡಿರುವುದರಿಂದ ಆ ಮೂರೂ ಕ್ಷೇತ್ರಗಳ ಸೋಲು-ಗೆಲುವು ಗೌಡರ ಕುಟುಂಬಕ್ಕೆ ಪ್ರತಿಷ್ಠೆಯೂ ಆಗಿದೆ. ಹೀಗಾಗಿ, ಅಲ್ಲಿನ ಫಲಿತಾಂಶದ ಬಗ್ಗೆ ಪಕ್ಷದ ವಲಯದಲ್ಲೂ ಶುಕ್ರವಾರ ಇಡೀ ದಿನ ಇದೇ ಚರ್ಚೆಯಾಗಿತ್ತು.
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಹಕಾರವೂ ಸಿಕ್ಕಿರುವುದರಿಂದ ಗೆಲ್ಲಿದ್ದೇವೆಂದು ಜೆಡಿಎಸ್ ನಾಯಕರು ಹೇಳಿದರೂ ತುಮಕೂರು ಹಾಗೂ ಮಂಡ್ಯದಲ್ಲಿ ಮೂಲ ಕಾಂಗ್ರೆಸ್ಸಿಗರ ಅಸಹಕಾರದ ಒಳ ಏಟಿನ ಆತಂಕವೂ ಇದೆ.
ಆದರೆ, ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಹಾಸನ, ತುಮಕೂರು ಹಾಗೂ ಮಂಡ್ಯದ ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣದ ಮಾಹಿತಿ ಪಡೆದುಕೊಂಡು ಅಲ್ಲಿನ ಶಾಸಕರು, ಮಾಜಿ ಶಾಸಕರ ಅಭಿಪ್ರಾಯ ಪಡೆದಿದ್ದು, ಆಶಾಭಾವನೆಯಲ್ಲಿದ್ದಾರೆಂದು ಹೇಳಲಾಗಿದೆ.
ಮತದಾನದ ನಂತರ ತುಮಕೂರು ಕ್ಷೇತ್ರದ ಮಧುಗಿರಿಯ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಅಮಾನತು ಮಾಡಿದ್ದು, ಆ ಇಬ್ಬರೂ ಪಕ್ಷದ ಆದೇಶ ಉಲ್ಲಂ ಸಿದ್ದಾರೆಂಬ ಆರೋಪವಿದೆ. ಹೀಗಾಗಿ, ತುಮಕೂರಿನಲ್ಲಿ ಕೆಲವು ಕಾಂಗ್ರೆಸ್ ನಾಯಕರು ಕೈ ಕೊಟ್ಟಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಮಂಡ್ಯ ವಿಚಾರದಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಅದು ಯಾರಿಗೆ ಲಾಭ ಎಂಬ ಚರ್ಚೆಗಳು ನಡೆಯುತ್ತಿವೆ. ಕೆ.ಆರ್.ನಗರ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರದಲ್ಲಿ ನಮಗೆ ಲೀಡ್ ಸಿಗಲಿದೆ ಎಂದು ಜೆಡಿಎಸ್, ಶ್ರೀರಂಗಪಟ್ಟಣ, ಮಳವಳ್ಳಿ, ಮಂಡ್ಯ, ಮದ್ದೂರಿನಲ್ಲಿ ನಮ್ಮದೇ ಲೀಡ್ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬೆಂಬಲಿಗರು ಹೇಳಿಕೊಳ್ಳುತ್ತಾರೆ.
ಒಟ್ಟಾರೆ, ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳ ಚುನಾವಣಾ ಫಲಿತಾಂಶ ಕೇವಲ ಜೆಡಿಎಸ್‌ಗಷ್ಟೇ ಅಲ್ಲದೆ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಭವಿಷ್ಯಕ್ಕೂ ಮುಖ್ಯವಾಗಿರುವುದರಿಂದ ಎರಡೂ ಪಕ್ಷಗಳ ನಾಯಕರ ಚಿತ್ತ ಫಲಿತಾಂಶದಲ್ಲೇ ನೆಟ್ಟಿದೆ.
ಬಿಜೆಪಿ: ಸಾಂಪ್ರಾದಾಯಿಕ ಮತ ವರ್ಗಾವಣೆ ಲೆಕ್ಕಾಚಾರ
ಮೊದಲ ಹಂತದ ಮತದಾನ ನಡೆದ 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಿದ್ದರೂ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಮೈಸೂರು- ಕೊಡುಗು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹಾಗೂ ಗೆಲುವಿನ ಲೆಕ್ಕಾಚಾರದ ಬಗ್ಗೆ ಪಕ್ಷದ ವಲಯದಲ್ಲಿ ಶುಕ್ರವಾರ ವಿಸ್ತೃತ ಚರ್ಚೆ ನಡೆದಿತ್ತು.
ಕೇಂದ್ರ ಸಚಿವ ಡಿ.ವಿ.ಸದಾನಂದ ಹಾಗೂ ಸಚಿವ ಕೃಷ್ಣ ಬೈರೇಗೌಡ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿರುವ ಬೆಂಗಳೂರು ಉತ್ತರ ಕ್ಷೇತ್ರದ ಫಲಿತಾಂಶದ ಬಗ್ಗೆ ತೀವ್ರ ಗಮನ ಸೆಳೆದಿದೆ. ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು. ನಂತರ ಎರಡೂ ಪಕ್ಷಗಳ ಅಭ್ಯರ್ಥಿಗಳು, ನಾಯಕರು ನಡೆಸಿದ ಪ್ರಚಾರ, ಮತದಾನ ಪ್ರಮಾಣ, ಕಳೆದ ಬಾರಿಗಿಂತಲೂ ಈ ಬಾರಿ ಶೇ.5ರಷ್ಟು ಮತದಾನ ಪ್ರಮಾಣ ಕಡಿಮೆಯಾಗಿರುವುದು, ಇದು ಉಂಟು ಮಾಡುವ ಪರಿಣಾಮ ಇತರೆ ವಿಚಾರಗಳ ಬಗ್ಗೆ ಕ್ಷೇತ್ರದ ಅಲ್ಲಲ್ಲಿ ಚರ್ಚೆ ನಡೆಯಿತು.
ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾನ ಪ್ರಮಾಣ ಹಾಗೂ ಪಕ್ಷದ ಸ್ಥಿತಿಗತಿ ಬಗ್ಗೆಯೂ ಕ್ಷೇತ್ರ ವ್ಯಾಪ್ತಿಯಲ್ಲಿ ಸೇರಿ ಪಕ್ಷದ ಮಟ್ಟದಲ್ಲೂ ಚರ್ಚೆ ನಡೆದಿತ್ತು. ಕಳೆದ ಬಾರಿಗಿಂತಲೂ ಈ ಬಾರಿ ಮತದಾನ ಪ್ರಮಾಣ ಶೇ.1.55ರಷ್ಟು ಇಳಿಕೆಯಾಗಿದ್ದು, ಇದು ಅಭ್ಯರ್ಥಿ ಗೆಲುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆಯೂ ಮಾತುಕತೆ ನಡೆದಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿತ್ತು.
ಮೈಸೂರು- ಕೊಡಗು ಕ್ಷೇತ್ರದಲ್ಲಿನ ಮತದಾನ ಪ್ರಮಾಣ ಹಾಗೂ ಗೆಲುವಿಗಿರುವ ಧನಾತ್ಮಕ ಅಂಶಗಳ ಬಗ್ಗೆಯೂ ಚರ್ಚೆ ನಡೆದಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.1.55ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದ್ದು, ಅದರ ಲಾಭ ಯಾರಿಗೆ ದಕ್ಕಲಿದೆ ಎಂಬುದು ಕುತೂಹಲ ಮೂಡಿಸಿದೆ.
ಸಾಂಪ್ರಾದಾಯಿಕ ಮತ ವರ್ಗಾವಣೆ ಲೆಕ್ಕಾಚಾರ: ಮೊದಲ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆೆಡಿಎಸ್‌ನ ಸಾಂಪ್ರದಾಯಿಕ ಮತಗಳು ಮೈತ್ರಿ ಪಕ್ಷಗಳ ಒಮ್ಮತದ ಅಭ್ಯರ್ಥಿಗಳಿಗೆ ಯಾವ ಪ್ರಮಾಣದಲ್ಲಿ ಹಂಚಿಕೆಯಾಗಲಿವೆ ಎಂಬ ಬಗ್ಗೆ ಲೆಕ್ಕಾಚಾರವೂ ನಡೆದಿದೆ. ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಗಳ ವರ್ಗಾವಣೆಯು ಬಿಜೆಪಿ ಅಭ್ಯರ್ಥಿಯ ಗೆಲುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುರಿತೂ ನಾಯಕರು ಲೆಕ್ಕಾಚಾರ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.