ಬಿಜೆಪಿಯಲ್ಲಿ ಈ ಬಾರಿ ಯುವಕರಿಗೆ ಅವಕಾಶ: ಆರ್. ಅಶೋಕ್
Team Udayavani, Apr 9, 2019, 3:00 AM IST
ಬೆಂಗಳೂರು: ಈ ಬಾರಿ ಬಿಜೆಪಿಯಲ್ಲಿ ಯುವಕರಿಗೆ ಅವಕಾಶ ನೀಡಲಾಗಿದೆ. 2009ರಲ್ಲಿ ನಳಿನ್ ಕುಮಾರ್ ಕಟೀಲು, 2014ರಲ್ಲಿ ಪ್ರತಾಪ್ ಸಿಂಹ ಅವರಿಗೆ ಪಕ್ಷ ಅವಕಾಶ ನೀಡಿತ್ತು. ಈ ಬಾರಿ ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ನೀಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರು ಪ್ರಸ್‌ಕ್ಲಬ್ ಸೋಮವಾರ ಹಮ್ಮಿಕೊಂಡಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಎರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ರಾಜ್ಯದಿಂದ ಶಿಫಾರಸು ಮಾಡಿದವರಿಗೆ ವರಿಷ್ಠರು ಅವಕಾಶ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ ಕುಮಾರ್ ಹೆಸರು ಕಳುಹಿಸಲಾಗಿತ್ತು. ಆದರೆ, ಈ ಬಾರಿ ಯುವಕರಿಗೆ ಅವಕಾಶ ನೀಡಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್‌ನವರು ರೋಡ್ ಹಂಪ್‌ಗ್ಳನ್ನು ಹಾಕಿದ್ದಾರೆ. ಹಂಪ್ ಹಾಕಿದ ಗುತ್ತಿಗೆದಾರರು ಯಾರೆಂದು ಕೇಳಿದರೆ ಸಿದ್ದರಾಮಯ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುತ್ತಿದ್ದಂತೆ ಕಾಂಗ್ರೆಸ್‌ನವರೇ ಮೈತ್ರಿ ಸರ್ಕಾರವನ್ನು ಬೀಳಿಸುತ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತದಿಂದ ಜನ ಭ್ರಮನಿರಸನಗೊಂಡಿದ್ದಾರೆ.
ಮಂಡ್ಯ, ಹಾಸನ, ತುಮಕೂರಿನಲ್ಲಿ ಕಾರ್ಯಕರ್ತರು ಮೈತ್ರಿಗೆ ಒಪ್ಪುತ್ತಿಲ್ಲ. ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ಅವರಿಗೆ ಮೈತ್ರಿ ಸೀಮಿತವಾದಂತಿದೆ. ಎರಡನೇ ಹಂತದ ನಾಯಕರು, ಕಾರ್ಯಕರ್ತರಿಗೆ ಮೈತ್ರಿಗೆ ಒಲವಿಲ್ಲ. ಹಾಗಾಗಿ, ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ತೊಡಕಾಗಲಿದೆ ಎಂದರು.
ಮೋದಿ ಎಂದರೆ ಅಭಿವೃದ್ಧಿ: ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಯಾರಾಗಬೇಕು ಎಂಬುದು ಮುಖ್ಯ ವಿಚಾರ. ಮೋದಿಯವರು ಪ್ರಬಲ ನಾಯಕರಾಗಿ ಜನತೆಗೆ ಕಾಣುತ್ತಿದ್ದಾರೆ. ಹಾಸನದ ಕಾಂಗ್ರೆಸ್ ಸಭೆ ಹಾಗೂ ಮೈಸೂರಿನ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿದ್ದಾರೆ. ಇದು ಮೋದಿಯವರ ನಾಯಕತ್ವದ ಹಿರಿಮೆಯನ್ನು ತೋರಿಸುತ್ತದೆ. ಹಾಗಾಗಿ ರಾಜ್ಯದ 27 ಕ್ಷೇತ್ರದಲ್ಲೂ ಮೋದಿಯವರೇ ಅಭ್ಯರ್ಥಿ. ಮೋದಿ ಎಂದರೆ ಅಭಿವೃದ್ಧಿ ಎಂದು ಹೇಳಿದರು.
ಮತ್ತೂಂದು ಮೋದಿ ರ್ಯಾಲಿ: ರಾಜ್ಯದಲ್ಲಿ ಮೋದಿಯವರ ಏಳು ಚುನಾವಣಾ ರ್ಯಾಲಿ ವೇಳಾಪಟ್ಟಿ ಸಿದ್ಧವಿದ್ದು, ಮತ್ತೂಂದು ರ್ಯಾಲಿಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಹಾಗಾಗಿ, ತುಮಕೂರು ಇಲ್ಲವೇ ಹಾಸನ ಕ್ಷೇತ್ರದಲ್ಲಿ ರ್ಯಾಲಿ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ನಾನು ಸನ್ಯಾಸಿಯಲ್ಲ: ಕಾಂಗ್ರೆಸ್, ಜೆಡಿಎಸ್‌ನ ಒಕ್ಕಲಿಗ ನಾಯಕರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುತ್ತಿದ್ದು, ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಮಾತಿದೆಯೆಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, ಎಲ್ಲಿಯವರೆಗೆ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯವರೆಗೆ ನನಗೆ ಅವಕಾಶವಿಲ್ಲ. ನಾನು ಬೆಳೆಯಬೇಕಾದರೆ ಅವರಿಬ್ಬರು ಸರಿಯಲೇ ಬೇಕು.
ಅವರಿಗೆ ದಾರಿ ಮಾಡಿಕೊಡಲು ನಾನೇನು ಸನ್ಯಾಸಿಯಲ್ಲ. ಸನ್ಯಾಸ ಸ್ವೀಕರಿಸಿದಾಗ ಹೊಂದಾಣಿಕೆ ಮಾಡುತ್ತೇನೆ. ನಾನು ಇಲ್ಲೇ ಇರುತ್ತೇನೆ. ಇನ್ನೂ ರಾಜಕಾರಣ ಮಾಡುತ್ತೇನೆ. ನಾನೂ ಬೆಳೆಯಬೇಕೆಂಬ ಆಸೆ ಇದೆ, ಕನಸಿದೆ. 20 ವರ್ಷ ದೇವೇಗೌಡರ ಕುಟುಂಬವನ್ನು ಬೀದಿಯಲ್ಲಿ ಬೈದಿರುವ ಡಿ.ಕೆ.ಶಿವಕುಮಾರ್ ಈಗ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಾನು ಹಿಂದೆಂದೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ ಎಂದರು.
ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವೆ: ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಕೆಳ ಹಂತದವರೆಗೂ ಬದಲಾವಣೆ ಸಹಜ. ಅದರಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಅಧ್ಯಕ್ಷರು ಬದಲಾಗಬಹುದು. ತಾಲೂಕು, ಹೋಬಳಿ ಮಟ್ಟದಲ್ಲೂ ಬದಲಾವಣೆಯಾಗುತ್ತದೆ. ಡಿಸೆಂಬರ್‌ನಲ್ಲೇ ಬದಲಾವಣೆಯಾಗಬೇಕಿತ್ತು.
ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ಪಕ್ಷ ನನ್ನನ್ನು ಶಾಸಕ, ಸಚಿವ, ಗೃಹ ಸಚಿವ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ರಾಜ್ಯಾಧ್ಯಕ್ಷ ಸ್ಥಾನವನ್ನೂ ಒಂದಲ್ಲ ಒಂದು ಕಾಲಕ್ಕೆ ಕೊಟ್ಟೇ ಕೊಡುತ್ತಾರೆ. ಅಲ್ಲಿಯವರೆಗೆ ಕಾಯುತ್ತೇನೆ. ಟವೆಲ್ ಹೆಗಲ ಮೇಲಿರುತ್ತದೆಯೇ ಹೊರತು ಕುರ್ಚಿ ಮೇಲಲ್ಲ. ಅವಕಾಶ ಕೊಟ್ಟಾಗ ಸಮರ್ಥವಾಗಿ ನಿಭಾಯಿಸುತ್ತೇನೆ. ಈವರೆಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ ಎಂದು ಅಶೋಕ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.