ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಹೆಸರಲ್ಲೇ ಮತಯಾಚನೆ: ನಳಿನ್ ಕುಮಾರ್ ಕಟೀಲು
Team Udayavani, Apr 16, 2019, 6:00 AM IST
ಸುರತ್ಕಲ್‌ನಲ್ಲಿ ನಡೆದ ರೋಡ್ ಶೋದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಹಾಗೂ ಕೇಂದ್ರ ಸಚಿವ ಸುರೇಶ್ ಪ್ರಭು.
ಮಂಗಳೂರು: “ಕಳೆದ ಐದು ವರ್ಷಗಳಲ್ಲಿ ಸಂಸದನಾಗಿ ಕೇಂದ್ರದಿಂದ ದ.ಕ. ಜಿಲ್ಲೆಗೆ ಒಟ್ಟು 16,505 ಕೋ.ರೂ. ಅನುದಾನ ತಂದಿದ್ದು, ಅದರ ಆಧಾರದಲ್ಲೇ ಈ ಬಾರಿಯೂ ಒಂದು ಅವಕಾಶ ನೀಡುವಂತೆ ಜನರಲ್ಲಿ ಮತ ಯಾಚಿಸುತ್ತಿದ್ದೇನೆ’ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಸುರತ್ಕಲ್‌ನಲ್ಲಿ ಸೋಮವಾರ ನಡೆಸಿದ ರೋಡ್ ಶೋದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅದನ್ನು ಜನರ ಮುಂದಿಡುತ್ತಿದ್ದೇವೆ. ನಮ್ಮ ನಾಯಕರ ಹೆಸರನ್ನು ಹೇಳಿ ಮತ ಕೇಳುವುದು ಅಪರಾಧ ಅಲ್ಲ ಎಂದು ನುಡಿದರು.
ಮೋದಿಯಿಂದ ದೇಶಕ್ಕೆ ಗೌರವ
ಪ್ರಧಾನಿ ಮೋದಿ ಅವರ ಹೆಸರು ಹೇಳಿ ಮತ ಯಾಚಿಸುತ್ತಿದ್ದೇನೆ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದಲ್ಲೇ ತಲೆ ಎತ್ತಿ ನಿಲ್ಲುವಂತೆ ಮಾಡಿದ ನಾಯಕ. ಕಳೆದ 5 ವರ್ಷಗಳಲ್ಲಿ ಮಾಡಿರುವ ಸುಧಾರಣೆಗಳನ್ನು ಕಾಂಗ್ರೆಸಿಗರೇ ಮೆಚ್ಚುತ್ತಿದ್ದಾರೆ. ಭಾರತವನ್ನು ಮತ್ತಷ್ಟು ಪ್ರಗತಿಪಥದಲ್ಲಿ ಕೊಂಡೊಯ್ಯಲು ಅವರಂತಹ ನಾಯಕರು ಮತ್ತೆ ಪ್ರಧಾನಿ
ಯಾಗಬೇಕೆಂಬುದು ಎಲ್ಲ ಭಾರತೀಯರ ಆಶಯ. ಹೀಗಾಗಿ ಅವರ ಹೆಸರಿನಲ್ಲಿ ಮತ ಯಾಚನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ನೀಡಿದರು.
ನಳಿನ್ ಕಳೆದ ಐದು ವರ್ಷದಲ್ಲಿ ಏನೇನು ಕೆಲಸ ಮಾಡಿದ್ದಾರೆ. ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ ಎನ್ನುವ ಸಮಗ್ರ ಮಾಹಿತಿಯನ್ನು ಈಗಾಗಲೇ ಜನರ ಮುಂದಿಟ್ಟಿದ್ದೇನೆ. ಇನ್ನು ಮುಚ್ಚಿಡುವ ಯಾವುದೇ ಮಾಹಿತಿಗಳಿಲ್ಲ. ಆದರೆ, ಕಾಂಗ್ರೆಸ್ ಸಂಸದರು ಈ ಹಿಂದೆ ಈ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎನ್ನುವ ವಿಚಾರವೂ ಚರ್ಚೆಗೆ ಬರಬೇಕು. ಕಾಂಗ್ರೆಸ್ ಜನಪ್ರತಿನಿಧಿಗಳು ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೇ ಸಮರ್ಪಕವಾಗಿ ಬಳಕೆ ಮಾಡದಿರುವ ಉದಾಹರಣೆಗಳಿವೆ. ಅಂತಹ ನಾಯಕರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಮೂಲಸೌಕರ್ಯ
ರಸ್ತೆ ಅಭಿವೃದ್ಧಿ, ರೈಲು ನಿಲ್ದಾಣ ಅಭಿವೃದ್ಧಿ, ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಮೂಲಭೂತ ಸವಲತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿಯಲ್ಲಿ ಜಿಲ್ಲೆಯ 90571 ಫಲಾನುಭವಿಗಳಿಗೆ 1,380 ಕೋ.ರೂ. ಸಾಲವನ್ನು ಒದಗಿಸಿ, ಉದ್ಯೋಗ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 8,075 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ 81.66 ಕೋ.ರೂ. ನೆರವು ನೀಡಲಾಗಿದೆ ಎಂದು ವಿವರಿಸಿದರು.
ಸಂಸದರ ಆದರ್ಶ ಗ್ರಾಮ
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಸುಳ್ಯದ ಬಳ್ಪವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ವಿವಿಧ ಯೋಜನೆಗಳನ್ನು ಜಾರಿಗೊಳಿಸ ಲಾಗಿದ್ದು, ಸದ್ಯದಲ್ಲೆ ಬಾಕಿ ಉಳಿದಿರುವ ಕಾರ್ಯಗಳೂ ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.
ಕಳೆದ 5 ವರ್ಷಗಳಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 17.50 ಕೋ.ರೂ.ವನ್ನು ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗಿದೆ. ಗ್ರಾಮೀಣ ನೀರು ಸರಬರಾಜು, ಪ್ರಧಾನ ಮಂತ್ರಿ ಸಡಕ್ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಗೂ ಕೇಂದ್ರ ಸರಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಅನುದಾನವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
ನಳಿನ್ ಕುಮಾರ್ ಕಟೀಲು ಏನು ಮಾಡಿದ್ದಾರೆ? ಎಂದು ಪ್ರಶ್ನಿಸುವ ಕಾಂಗ್ರೆಸಿನ ರಾಜ್ಯ ನಾಯಕರು, ಮಂತ್ರಿಗಳು ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಜನರ ಮುಂದಿಡಲಿ. ಕೇವಲ ಬಾಯಿಚಪಲಕ್ಕೆ ಮಾತನಾಡುವುದನ್ನು ಬಿಟ್ಟು ಅಂಕಿ- ಅಂಶಗಳನ್ನು ಬಹಿರಂಗಪಡಿಸಿದರೆ ಉತ್ತಮ ಎಂದು ನಳಿನ್ ಹೇಳಿದರು.
ಕರಾವಳಿಯಲ್ಲಿ ರೈಲು ನಿಲ್ದಾಣ ಹಾಗೂ ರೈಲು ಹಳಿ ಅಭಿವೃದ್ಧಿಗಾಗಿ 1244 ಕೋ.ರೂ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 7,646 ಕೋ.ರೂ., ಬಂದರು ಹಾಗೂ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 230 ಕೋ.ರೂ. ಬಿಡುಗಡೆಯಾಗಿದೆ. ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ -ಅಮೃತ ಯೋಜನೆಯಲ್ಲಿ 161.ರೂ. ಅನುದಾನ ಬಂದಿದೆ. ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಅಭಿವೃದ್ಧಿಗೆ 297 ಕೋ.ರೂ. ರಾಷ್ಟ್ರೀಯ ಹೆದ್ದಾರಿ -ಮಂಗಳೂರು ಉಪ ವಿಭಾಗಕ್ಕೆ 4,367 ಕೋ.ರೂ. ಅನುದಾನ ಒದಗಿಸಲಾಗಿದೆ. ಇದಲ್ಲದೆ ಇನ್ನೂ ಹಲವು ಯೋಜನೆಗಳಡಿಯಲ್ಲಿ ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ನೆರವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಒದಗಿಸಲಾಗಿದೆ ಎಂದು ರೋಡ್‌ಶೋದಲ್ಲಿ ಭಾಗವಹಿಸಿದ್ದ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಸುರತ್ಕಲ್ ಶಾಸಕ ಡಾ| ಭರತ್ ಶೆಟ್ಟಿ ,ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ರಂದೀಪ್ ಕಾಂಚನ್, ಸುಧಾಕರ್ ಅಡ್ಯಾರ್, ಅಶೋಕ್ ಉಪಸ್ಥಿತರಿದ್ದರು.
ಮುಂದಿನ ಅವಧಿಯಲ್ಲಿ ಪ್ಲಾಸ್ಟಿಕ್
ಪಾರ್ಕ್, ಸ್ಮಾರ್ಟ್ ಪೋರ್ಟ್
ಮುಂದಿನ ಅವಧಿಯಲ್ಲಿ ಪ್ಲಾಸ್ಟಿಕ್ ಪಾರ್ಕ್, ಕೋಕನೆಟ್ ಪಾರ್ಕ್, ವಿಶೇಷ ಕೃಷಿ ವಲಯ, ಸ್ಮಾರ್ಟ್ ಪೋರ್ಟ್, ಐಟಿ ಪಾರ್ಕ್ ಮುಂತಾದ ಯೋಜನೆಗಳನ್ನು ಕರಾವಳಿ ಭಾಗಕ್ಕೆ ತರಲು ಈಗಾಗಲೇ ಆರಂಭಿಕ ಪ್ರಕ್ರಿಯೆಗಳು ನಡೆದಿವೆ. ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ತ್ವಾತಿಕ ಒಪ್ಪಿಗೆ ದೊರೆತಿದ್ದು, 1,000 ಕೋ.ರೂ. ಬಿಡುಗಡೆಯ ಭರವಸೆ ದೊರೆತಿದೆ ಎಂದು ನಳಿನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.