ಜಾರಕಿಹೊಳಿ “ನಾಯಕ’ರ ಹಕೀಕತ್ತು
ಅಧಿಕಾರಕ್ಕಾಗಿ ಸಹೋದರರ ಜಗಳ
Team Udayavani, Apr 27, 2019, 11:50 AM IST
ಬೆಳಗಾವಿ: ಜಿಲ್ಲೆಯ ರಾಜಕಾರಣದ ಮೇಲೆ ಪ್ರಭುತ್ವ ಸಾಧಿಸುವ ತಂತ್ರದ ಭಾಗವಾಗಿ ಕಳೆದೊಂದು ದಶಕದಿಂದ ಜಾರಕಿಹೊಳಿ ಸಹೋದರರು ನಡೆಸುವ ಒಂದಲ್ಲ ಒಂದು ರಾಜಕೀಯ ಮೇಲಾಟ ಈಗ ಹೊಸ ಆಯಾಮ ಪಡೆದುಕೊಂಡಿದ್ದು ಅದಕ್ಕೆ ರಮೇಶ ಜಾರಕಿಹೊಳಿ ಹೊಸ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಈಗ ಜಾರಕಿಹೊಳಿ ಕುಟುಂಬದಲ್ಲಿ ಕೇಳಿ ಬರುತ್ತಿ ರುವ ಬಂಡಾಯದ ಮಾತುಗಳು ರಾತೋರಾತ್ರಿ ಸೃಷ್ಟಿಯಾದ ಬಂಡಾಯವಲ್ಲ. ಜಿಲ್ಲೆಯಲ್ಲಿರುವ ಪ್ರಬಲ ಲಿಂಗಾಯತ ಕೋಮಿನ ಮುಖಂಡರ ಮೌನದ ಲಾಭ ಪಡೆದುಕೊಂಡು ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಹೊಸ ಹೊಸ ತಂತ್ರ ಹೂಡುತ್ತಲೇ ಇದ್ದಾರೆ. ಸುಸೂತ್ರವಾಗಿ ನಡೆಯುವ ಸರ್ಕಾರಕ್ಕೆ ಆತಂಕ ಉಂಟು ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಆವರ ಆಟ ಮೇಲಾಟ ಈಗ ಹೊಸ ಆಯಾಮ ಪಡೆದುಕೊಂಡಿದೆ. ಟೀಕೆಗಳು ವೈಯಕ್ತಿಕವಾಗುತ್ತಿವೆ. ಈಗ ಕೇಳಿಬರುತ್ತಿದ್ದ ಆರೋಪ- ಪ್ರತ್ಯಾರೋಪಗಳು ಕುಟುಂಬದ ಪರಿಮಿತಿ ಮೀರಿ ನಡೆಯುತ್ತಿವೆ. ಸರ್ಕಾರ ಸಹ ಇದು ತನ್ನ ಬುಡಕ್ಕೆ ಬಂದಿರುವುದರಿಂದ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ. ಸತೀಶ, ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ ತಮ್ಮ ಆಟ ಆಡದೇ ಬಿಟ್ಟಿಲ್ಲ. ಇವರ ಮೇಲಾಟದ ರುಚಿ ಯನ್ನು ಈಗಾಗಲೇ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಈಗ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಂಡಿದ್ದಾರೆ.
ಹಾಗೆ ನೋಡಿದರೆ 2010ಕ್ಕೂ ಮೊದಲೇ ಜಾರಕಿಹೊಳಿ ಸಹೋದರರ ರಾಜಕೀಯ ಮೇಲಾಟ ಆರಂಭವಾಗಿದೆ. ಅಹಿಂದ ವರ್ಗದ ಸಮುದಾಯ ದಲ್ಲಿ ಬಹಳ ಪ್ರಭಾವಿಗಳಾಗಿದ್ದ ವಿ.ಎಲ್. ಪಾಟೀಲ ಕುಟುಂಬದಲ್ಲಿ ಕಂಡು ಬಂದ ಆಂತರಿಕ ಮನಃಸ್ತಾಪದಿಂದ ಅವರು ರಾಜಕೀಯದಲ್ಲಿ ಹಿಂದೆ ಬಿದ್ದರು. ವಿ.ಎಲ್. ಪಾಟೀಲ ಕುಟುಂಬದ ರಾಜಕೀಯ ಹಿನ್ನಡೆಯ ಲಾಭ ಪಡೆದ ಜಾರಕಿಹೊಳಿ ಸಹೋದರರು ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದರು. ಜಿಲ್ಲೆಯ ಪ್ರಬಲ ಸಮಾಜ ಲಿಂಗಾಯತ ನಾಯಕರ ಮೌನ ಇವರಿಗೆ ಮತ್ತಷ್ಟು ಅನುಕೂಲವಾಯಿತು.
2010ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಾಲಚಂದ್ರ ಜಾರಕಿಹೊಳಿ ಸರ್ಕಾರದ ವಿರುದ್ಧ ಬಂಡೆದಿದ್ದರು. ಆಗ ಅವರು ಅನರ್ಹತೆ ಶಿಕ್ಷೆಗೂ ಒಳಗಾಗಿದ್ದರು. ನಂತರ ಸರ್ವೋತ್ಛ ನ್ಯಾಯಾಲಯದಲ್ಲಿ ಅನರ್ಹತೆ ಶಿಕ್ಷೆಯ ವಿರುದ್ಧ ಗೆದ್ದು ಬಂದರು. ನಂತರ ಸತೀಶ ಜಾರಕಿಹೊಳಿ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ, ಆ ಮೇಲೆ ರಮೇಶ ಜಾರಕಿಹೊಳಿ ಬಂಡಾಯ ಎದ್ದಿದ್ದರು. ಇದೆಲ್ಲವೂ ನಡೆದಿದ್ದು ಅಧಿಕಾರ ಹಾಗೂ ಜಿಲ್ಲೆಯ ಮೇಲಿನ ಹಿಡಿತಕ್ಕಾಗಿ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇಷ್ಟೇ ಅಲ್ಲ 2013ರಲ್ಲಿ ಲಿಂಗಾಯತ ಸಮಾಜದ ನಾಯಕ ಪ್ರಕಾಶ ಹುಕ್ಕೇರಿ ತಮಗೆ ಮುಂದೆ ಅಡಚಣೆ ಆಗಬಹುದು ಎಂಬ ಮುಂದಾ ಲೋಚನೆಯಿಂದ ಅವರನ್ನು ಲೋಕಸಭೆಗೆ ಕಳುಹಿಸುವಲ್ಲಿ ಸತೀಶ ಯಶಸ್ವಿಯಾದರು. ಈ ಸಮಾಜದ ಕೆಲವು ಪ್ರಭಾವಿ ನಾಯಕರು ಅಧಿಕಾರ ವಂಚಿತರಾಗಿ ಬೇರೆ ಪಕ್ಷಕ್ಕೆ ಹೋದರು. ಈ ಎಲ್ಲ ಬೆಳವಣಿಗೆಗಳು ಜಿಲ್ಲೆಯ ಮೇಲೆ ನಿಯಂತ್ರಣ ಸಾಧಿಸಲು ಜಾರಕಿಹೊಳಿ ಅವರಿಗೆ ವರವಾದವು.
ವ್ಯವಸ್ಥಿತ ರಾಜಕಾರಣ: ನಾಲ್ಕು ದಶಕಗಳ ಹಿಂದೆ ತಾಲೂಕುಗಳಲ್ಲಿ ಅಬಕಾರಿ ಗುತ್ತಿಗೆ ಹಿಡಿಯುತ್ತಿದ್ದ ಗೋಕಾಕದ ಜಾರಕಿಹೊಳಿ ಕುಟುಂಬ ಈಗ ರಾಜ್ಯ ಸರ್ಕಾರಕ್ಕೇ ತಲ್ಲಣ ಉಂಟು ಮಾಡುವಷ್ಟು ಬೆಳೆದಿದೆ. ಗೋಕಾಕ ತಾಲೂಕು ರಾಜಕಾರಣದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆಯದ ಕ್ಷೇತ್ರ. ಆದರೆ ಇಲ್ಲಿನ ನಾಯಕರು ಮಾತ್ರ ರಾಷ್ಟ್ರಮಟ್ಟದಲ್ಲಿ ಸದಾ ಸುದ್ದಿ ಮಾಡಿದ್ದಾರೆ. ಈ ಸಾಲಿನಲ್ಲಿ ಹಿಂದಿನ ನಾಯಕರಾದ ವಿ.ಎಸ್. ಕೌಜಲಗಿ ಮತ್ತು ಈಗ ಜಾರಕಿಹೊಳಿ ಸಹೋದರರು ಪ್ರಮುಖವಾಗಿ ಕಂಡು ಬರುತ್ತಾರೆ.
ಜಾರಕಿಹೊಳಿ ಸಹೋದರರ ರಾಜಕೀಯ ಇತಿಹಾಸ ನೋಡಿದಾಗ ಅಂತಹ ರೋಚಕತೆ ಏನೂ ಕಾಣುವುದಿಲ್ಲ. ಆದರೆ ಹಂತ ಹಂತವಾಗಿ ಮತ್ತು ವ್ಯವಸ್ಥಿತವಾಗಿ ಜಿಲ್ಲೆಯ ರಾಜಕಾರಣದ ಮೇಲೆ ಬಲವಾದ ಹಿಡಿತ ಸಾಧಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇವರ ಆಟಕ್ಕೆ ಹಳೆಯ ಹುಲಿಗಳಾದ ರಾಯಬಾಗದ ವಸಂತರಾವ್ ಪಾಟೀಲ, ಗೋಕಾಕ ತಾಲೂಕಿನ ವಿ.ಎಸ್. ಕೌಜಲಗಿ ಜಿಲ್ಲೆಯ ಮೇಲಿನ ಹಿಡಿತ ಕಳೆದುಕೊಂಡರೆ ನಂತರ ಮಾಜಿ ಸಂಸದ ಅಮರಸಿಂಹ ಪಾಟೀಲ, ಪ್ರಭಾಕರ ಕೋರೆ ಮೊದಲಾದ ನಾಯಕರು ಕಾಂಗ್ರೆಸ್ ತೊರೆದರು. ಅದರಲ್ಲೂ ಅಮರಸಿಂಹ ಪಾಟೀಲ 2014ರಲ್ಲಿ ತಮ್ಮ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೂ ಜಾರಕಿಹೊಳಿ ಕುಟುಂಬದವರ ಮೇಲಾಟದಿಂದ ಕಾಂಗ್ರೆಸ್ ಪಕ್ಷವನ್ನೇ ತೊರೆದು ಬಿಜೆಪಿ ಸೇರಿದರು.
ಕಿತ್ತಾಟ ಶುರು ಆಗಿದ್ದು ಏಕೆ?
ಕುಟುಂಬದಲ್ಲಿ ಎಲ್ಲ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದ ಸತೀಶ ಆಗ ರಮೇಶ ಅವರನ್ನು ಗೋಕಾಕಕ್ಕೆ ಹಾಗೂ ಬಾಲಚಂದ್ರ ಅವರನ್ನು ಅರಭಾವಿಗೆ ತಂದು ಗಟ್ಟಿಯಾಗಿ ಅಲ್ಲೇ ಬೇರು ಬಿಡುವಂತೆ ಮಾಡಿದರು. ಅಲ್ಲಿಂದ ಈ ಎರಡೂ ಕ್ಷೇತ್ರಗಳು ಜಾರಕಿಹೊಳಿ ಕುಟುಂಬದ ಮಡಿಲಿಗೆ ಬಂದವು. ಇಡೀ ಗೋಕಾಕ ತಾಲೂಕು ಜಾರಕಿಹೊಳಿ ಕುಟುಂಬ ಮಯವಾಯಿತು. ಮೂವರು ಸಹೋದರರ ನಂತರ ಭೀಮಶಿ ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ ರಮೇಶ ವಿರುದ್ಧ ಬಿಜೆಪಿಯಿಂದ ಕಾಟಾಚಾರದ ಸ್ಪರ್ಧೆ ಮಾಡಿದರು. ಬೇರೆ ಯಾರೂ ತಮ್ಮ ವಿರುದ್ಧ ಬರಬಾರದು. ರಾಜಕಾರಣದಲ್ಲಿ ಬೆಳೆಯಬಾರದು ಎಂಬ ಉದ್ದೇಶದಿಂದ ಜಾರಕಿಹೊಳಿ ಅವರೇ ಪ್ರಭಾವ ಬೀರಿ ಭೀಮಶಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದರು. ಆದರೆ ಭೀಮಶಿಗೆ ರಾಜಕೀಯ ಕ್ಷೇತ್ರ ಅಷ್ಟು ಒಲಿಯದ ಕಾರಣ ಅವರು ಅದರಿಂದ ದೂರ ಸರಿದರು. ಇನ್ನು ಚುನಾವಣೆಯಲ್ಲಿ ಬಾಲಚಂದ್ರ ಹಾಗೂ ರಮೇಶ ಅವರಿಗೆ ನೆರವಾಗುತ್ತಿರುವ ಲಖನ್ ಅವರಿಗೆ ರಾಜಕೀಯ ಆಶ್ರಯ ಕಲ್ಪಿಸಲು ಪ್ರಯತ್ನಗಳು ನಡೆದಿವೆ. ಅದರ ಜವಾಬ್ದಾರಿಯನ್ನೂ ಸಹ ಸತೀಶ ಅವರೇ ತೆಗೆದುಕೊಂಡಿದ್ದಾರೆ.
ಲಕ್ಷ್ಮೀ ಹೆಬ್ಟಾಳಕರ ಎಂಟ್ರಿ: 2013ರವರೆಗೆ ಯಾವುದೇ ಸಮಸ್ಯೆ ಇಲ್ಲದೇ ಎಲ್ಲವೂ ನಡೆಯಿತು. 2013ರಲ್ಲಿ ಖಾತೆಯ ವಿಷಯವಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸತೀಶ ಮಧ್ಯೆ ಶೀತಲ ಸಮರ ಆರಂಭ ವಾಯಿತು. ಸತೀಶ ಸರ್ಕಾರಕ್ಕೆ ಅಸಹಕಾರ ತೋರುತ್ತ¤ ಬಂದರು. ಇದೇ ಸಮಯದಲ್ಲಿ ಲಕ್ಷ್ಮೀ ಹೆಬ್ಟಾಳಕರ ಅವರು ಸತೀಶ ಅವರನ್ನು ಓವರ್‌ಟೇಕ್ ಮಾಡಿ ಡಿ.ಕೆ. ಶಿವಕುಮಾರ ಮೂಲಕ ಇಲ್ಲಿನ ಕೆಲಸಗಳನ್ನು ಮಾಡಿಸಿಕೊಳ್ಳುತ್ತ ಬಂದರು. ಇದು ಜಾರಕಿಹೊಳಿ ಅವರ ಸಿಟ್ಟಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು. ಇದೇ ಅವಧಿಯಲ್ಲಿ ರಮೇಶ ಪರವಾಗಿ ನಿಂತ ಹೆಬ್ಟಾಳಕರ ಸಚಿವ ಸ್ಥಾನವನ್ನು ರಮೇಶಗೆ ಕೊಡಿಸುವಲ್ಲಿ ಯಶಸ್ವಿಯಾದರು.
ಮೈತ್ರಿ ಸರ್ಕಾರದಲ್ಲಿ ಮತ್ತೆ ರಮೇಶ ಜಾರಕಿಹೊಳಿ ಸಚಿವರಾದರೂ ಬಹಳ ದಿನ ಇರಲಿಲ್ಲ. ಆಗ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸತೀಶ ಮತ್ತೆ ಸಚಿವರಾದರು. ಈ ಎಲ್ಲ ಬೆಳವಣಿಗೆಗಳು ರಮೇಶ ಹಾಗೂ ಸತೀಶ ನಡುವೆ ಸಂಬಂಧ ಹಳಸಲು ಕಾರಣವಾಯಿತು. ತಮ್ಮ ವಿರುದ್ಧ ಪಿತೂರಿ ಮಾಡಿದ ಮೂವರ ಮೇಲೆ ಈಗ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಸತೀಶ ದಿನಕ್ಕೊಂದು ಹೊಸ ಮಾತಿನ ಆಸ್ತ್ರ ಬಿಡುತ್ತಿದ್ದಾರೆ. ವೈಯಕ್ತಿಕ ಟೀಕೆಗಳ ಜೊತೆಗೆ ರಮೇಶ ಅವರ ಅಳಿಯ ಅಂಬಿರಾವ್ ಪಾಟೀಲ ಹೆಸರನ್ನು ನಡುವೆ ಎಳೆ ತಂದಿರುವ ಸತೀಶ ಈ ಮೂಲಕ ಕೌಟುಂಬಿಕ ಜಗಳಕ್ಕೆ ಹೊಸ ತಿರುವನ್ನೂ ನೀಡಿದ್ದಾರೆ. ಜಾರಕಿಹೊಳಿ ಸಹೋದರರ ಈ ರಾಜಕೀಯ ಮೇಲಾಟಕ್ಕೆ ಸರ್ಕಾರ ಯಾವ ರೀತಿ ಅಂಕುಶ ಹಾಕುತ್ತದೆ ಎಂಬುದೇ ಎಲ್ಲರನ್ನು ಕಾಡುತ್ತಿರುವ ಕುತೂಹಲ.
ಪ್ರಾಬಲ್ಯಕ್ಕಾಗಿ ಪೈಪೋಟಿ
1995ರಲ್ಲಿ ಗೋಕಾಕ ತಾಲೂಕಿನಲ್ಲಿ ಲಿಂಗಾಯತ ಮತ್ತು ಜಾರಕಿಹೊಳಿ ಕುಟುಂಬದ ಮಧ್ಯೆ ನೇರ ಯುದ್ಧ ಆರಂಭವಾಯಿತು. ಆಗ ಸತೀಶ ಪ್ರಬಲವಾಗಿ ಬೆಳೆದರು. 1998ರಲ್ಲಿ ಬೆಳಕಿಗೆ ಬಂದ ಲಂಚದ ಟೇಪ್ ಹಗರಣ ಲಿಂಗಾಯತ ಸಮಾಜದ ಪ್ರಭಾವಿ ಮುಖಂಡ ವಿ. ಎಸ್. ಕೌಜಲಗಿ ಅವರ ರಾಜಕೀಯ ಜೀವನಕ್ಕೆ ಕೊನೆ ಹಾಡಿತು. ಮೊದಲು ಸಹಕಾರ, ಶಿಕ್ಷಣ ನಂತರ ರಾಜಕೀಯದ ಮೂಲಕ ವಿಧಾನ ಪರಿಷತ್ ಹಾಗೂ ವಿಧಾನಸಭೆ ಪ್ರವೇಶ ಮಾಡಿದ ಜಾರಕಿಹೊಳಿ ಸಹೋದರರು ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದರು. ಇದರೊಂದಿಗೆ ಗೋಕಾಕದಲ್ಲಿ ಲಿಂಗಾಯತ ಪ್ರಾಬಲ್ಯ ಸಹ ಮುರಿದು ಹೋಯಿತು.
ಬೇಡಿದ ಖಾತೆ ಕೊಟ್ಟರೆ ಸಾಕು
ಜಿಲ್ಲೆಯಲ್ಲಿ ಒಂದು ಮಾತಿದೆ “ಜಾರಕಿಹೊಳಿ ಸಹೋದರರಿಂದ ಯಾವುದೇ ತೊಂದರೆ ಬರಬಾರದು ಎಂದರೆ ಅವರು ಬೇಡಿದ ಖಾತೆಯನ್ನು ಕೊಡಬೇಕು. ಅವರು ಕೇಳಿದ ಖಾತೆ ಸಿಕ್ಕರೆ ಸರ್ಕಾರಕ್ಕೆ ಯಾವುದೇ ಆತಂಕ ಇರುವುದಿಲ್ಲ.’ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸತೀಶ್‌ಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ಕೊಟ್ಟಿದ್ದರೆ ರಮೇಶ ಜಾರಕಿಹೊಳಿ ಸಚಿವರಾಗಲು ಮುಂದೆ ಬರುತ್ತಲೇ ಇರಲಿಲ್ಲ. ಅಷೇr ಅಲ್ಲ ಇವತ್ತು ಸತೀಶ ಹಾಗೂ ರಮೇಶ ನಡುವೆ ಭಿನ್ನಮತ ಸ್ಫೋಟವಾಗುತ್ತಿರಲಿಲ್ಲ. ಸರ್ಕಾರವನ್ನು ಅಲ್ಲಾಡಿಸುವಂತಹ ಬೆಳವಣಿಗೆಗಳು ನಡೆಯುತ್ತಿರಲಿಲ್ಲ ಎಂಬುದು ಅವರ ರಾಜಕಾರಣವನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ರಾಜಕೀಯ ವಿಶ್ಲೇಷಕ ಅಶೋಕ ಚಂದರಗಿ ಅಭಿಪ್ರಾಯ.
ಆದರೆ ಕೆಲವು ತಿಂಗಳಿಂದ ನಡೆದಿರುವ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಮತ್ತೂಮ್ಮೆ ಬಿರುಗಾಳಿ ಎಬ್ಬಿಸಿವೆ. ಎರಡು ದಶಕಗಳ ಹಿಂದೆ ತಮಗೆ ಅಡ್ಡಿ ಮಾಡಿದ್ದ ವಿ.ಎಸ್.ಕೌಜಲಗಿ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಿದ ಜಾರಕಿಹೊಳಿ ಸಹೋದರರು ಈಗ ಪರಸ್ಪರ ಕಚ್ಚಾಡುವ ಮೂಲಕ ಈ ಬಿರುಗಾಳಿಗೆ ಕಾರಣವಾಗಿದ್ದಾರೆ. ಸಹೋದರರ ಈ ಕಚ್ಚಾಟಕ್ಕೆ ಉಳಿದ ನಾಯಕರಿಂದ ಅಂತಹ ಬೆಂಬಲ ಕಂಡುಬರದೇ ಇರುವುದು ಗಮನಿಸಬೇಕಾದ ಅಂಶ. 2013ರಲ್ಲಿ ಸತೀಶ್ ಜಾರಕಿಹೊಳಿ ಖಾತೆಯ ಅಸಮಾಧಾನದ ಆಟ ಆಡಿದರು. ಸರ್ಕಾರ ಬಂದ ಆರೇ ತಿಂಗಳಲ್ಲಿ ಸತೀಶ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದರು. ತಾವು ಬೇಡಿದ ಖಾತೆ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದರು. 2015ರಲ್ಲಿ ರಮೇಶ ಜಾರಕಿಹೊಳಿ ಸಚಿವರಾದರು. 2018ರಲ್ಲಿ ಬಂದ ಮೈತ್ರಿ ಸರ್ಕಾರದಲ್ಲಿ ರಮೇಶ ನಂತರ ಮತ್ತೆ ಸತೀಶ ಸಚಿವ ಸ್ಥಾನ ವಹಿಸಿಕೊಂಡರು. ಆದರೆ ಇದರ ಮಧ್ಯೆ ಶಾಸಕಿ ಹೆಬ್ಟಾಳಕರ ಹಾಗೂ ಡಿ.ಕೆ. ಶಿವಕುಮಾರ ಅವರ ಹಸ್ತಕ್ಷೇಪ ಕುಟುಂಬದ ಸದಸ್ಯರಲ್ಲಿ ಬಿರುಕು ಉಂಟು ಮಾಡಲು ಕಾರಣವಾಯಿತು. ಸಚಿವ ಸ್ಥಾನ ಕಳೆದುಕೊಂಡ ರಮೇಶ ಜಾರಕಿಹೊಳಿ ಬಂಡಾಯ ಎದ್ದರು.
ಜಗಳ ಹೊಸದೇನಲ್ಲ
ಗೋಕಾಕ ಭಾಗದಲ್ಲಿ ಜಾರಕಿಹೊಳಿ ಕುಟುಂಬದ ಜಗಳ ಹೊಸದೇನಲ್ಲ. ನಾವು ಈ ರೀತಿಯ ಜಗಳವನ್ನು ಬಹಳಷ್ಟು ಸಲ ನೋಡಿದೇªವೆ. ಇದೆಲ್ಲಾ ನಡೆಯುವುದು ಅಧಿಕಾರದ ಆಸೆಗಾಗಿ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ತಮ್ಮ ಕುಟುಂಬವನ್ನು ಬಿಟ್ಟು ಬೇರೆ ಯಾರಿಗೂ ಅಧಿಕಾರ ಮತ್ತು ಅವಕಾಶ ಸಿಗಬಾರದು ಎಂಬುದು ಈ ಸಹೋದರರ ಉದೇªಶ. ಅದಕ್ಕಾಗಿ ಈ ಎಲ್ಲಾ ನಾಟಕ ಎಂಬುದು ತಾಲೂಕಿನ ಜನರ ಅಭಿಪ್ರಾಯ. ಕಳೆದ ಹಲವಾರು ವರ್ಷಗಳಿಂದ ಜಾರಕಿಹೊಳಿ ಸಹೋದರರನ್ನು ನೋಡುತ್ತಾ ಬಂದಿರುವ ತಾಲೂಕಿನ ಜನರಿಗೆ ಈಗಿನ ಜಗಳ ಹಾಗೂ ಅವರ ಭಿನ್ನಾಭಿಪ್ರಾಯ ಗಂಭೀರ ವಿಷಯವೇ ಅಲ. ಇವರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಹೊರಗಿನವರಿಗೆ ಕುಟುಂಬದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಹೀಗಾಗಿ ಅವರ ಸಣ್ಣ ಪುಟ್ಟ ವಿಷಯಗಳು ದೊಡ್ಡದಾಗಿ ರಾರಾಜಿಸುತ್ತಿವೆ. ಇದು ರಾಜಕೀಯ ಲಾಭದ ಆಸೆ ಎಂಬುದು ಅವರನ್ನು ಹತ್ತಿರದಿಂದ ನೋಡಿರುವ ತಾಲೂಕಿನ ಹಿರಿಯ ರಾಜಕೀಯ ಮುಖಂಡ ಬಸನಗೌಡ ಪಾಟೀಲ್ ಅವರ ಅನಿಸಿಕೆ. ಜಾರಕಿಹೊಳಿ ಸಹೋದರರು ಗೋಕಾಕದ ಜಾಗೀರದಾರರೇನಲ್ಲ. ಅವರು ಕಟ್ಟಿರುವ ಸಾಮ್ರಾಜ್ಯ ಸಹ ಜನರ ಪರವಾಗಿದ್ದಲ್ಲ. ಈಗ ಅವರಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಿರಬಹುದು. ಆದರೆ ಇದೆಲ್ಲವೂ ನಡೆದಿರುವುದು ಅಧಿಕಾರಕ್ಕಾಗಿ. ಕುಟುಂಬದ ಮೇಲೆ ಅಧಿಪತ್ಯ ಸಾಧಿಸುವುದಕ್ಕಾಗಿ. ತಾಲೂಕಿನ ಜನರು ಇವತ್ತಿಗೂ ಅವರನ್ನು ಪ್ರೀತಿಯಿಂದ ಒಪ್ಪಿಕೊಂಡಿಲ್ಲ. ಆದರೆ ಸನ್ನಿವೇಶಗಳು ಅವರನ್ನು ನಾಯಕರನ್ನಾಗಿ ಒಪ್ಪುವಂತೆ ಮಾಡಿವೆ ಎಂಬುದು ಗೋಕಾಕದ ರಾಜಕೀಯ ನಾಯಕರ ಮಾತು. ಜಾರಕಿಹೊಳಿ ಸಹೋದರರಿಗೆ ಬೆದರಿಕೆ ಹಾಕುವದನ್ನು ಬಿಟ್ಟು ಬೇರೆ ಬೇರೆ ತಂತ್ರ ಇಲ್ಲ. ಅವರಿಗೆ ಬೇಕಾದ ಖಾತೆ ಕೊಟ್ಟರೆ ಸರ್ಕಾರ ಸುಸೂತ್ರವಾಗಿ ನಡೆಯುತ್ತದೆ. ಈ ಹಿಂದೆ ನನ್ನ ತಮ್ಮ ಸತೀಶ ಮುಖ್ಯಮಂತ್ರಿ ಆಗುವವರೆಗೆ ನಾನು ಸುಮ್ಮನೆ ಕೊಡುವುದಿಲ್ಲ ಎಂದು ಹೇಳಿದ್ದ ರಮೇಶ ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದೂ ಸಹ ಅನುಮಾನ ಬರುವಂಥದ್ದು. ಬೆದರಿಕೆಯ ಇನ್ನೊಂದು ತಂತ್ರ ಎಂಬ ಅಭಿಪ್ರಾಯ ತಾಲೂಕಿನಲ್ಲಿದೆ.
ಕಾಂಗ್ರೆಸ್ ಸುತ್ತ ಗಿರಕಿ
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಕಾಂಗ್ರೆಸ್ ಹೈಕಮಾಂಡ್‌ನ ಅಸಹಾಯಕತೆ ಎಂಬುದು ಜಿಲ್ಲೆಯ ನಾಯಕರ ಅಸಮಾಧಾನ. ಕೆಪಿಸಿಸಿ ದುರ್ಬಲವಾಗಿರುವ ಕಾರಣದಿಂದಲೇ ಈ ಸಮಸ್ಯೆ ಆರಂಭವಾಗಿದೆ. ಜಾರಕಿಹೊಳಿ ಅವರು ಕೆಪಿಸಿಸಿ ಹಾಗೂ ಬೆಳಗಾವಿ ಜಿಲ್ಲೆಯ ನಡುವಿನ ಸಂಪರ್ಕವನ್ನೇ ತಪ್ಪಿಸಿದರು. ಬೆಳಗಾವಿ ಜಿಲ್ಲೆಗೆ ನಾವೇ ಹೈಕಮಾಂಡ್ ಎನ್ನುವ ವಾತಾವರಣ ನಿರ್ಮಾಣ ಮಾಡಿದರು. ಹೀಗಾಗಿ ಬೆಳಗಾವಿ ಮಟ್ಟಿಗೆ ಕೆಪಿಸಿಸಿ ಬಹಳ ನಿಷ್ಕ್ರಿಯ ಮತ್ತು ದುರ್ಬಲವಾಯಿತು. ಜಿಲ್ಲೆಯಲ್ಲಿ ಏಕವ್ಯಕ್ತಿ ಆಡಳಿತ ಆರಂಭವಾಯಿತು. 1970ರ ದಶಕದಲ್ಲಿ ಜಾರಕಿಹೊಳಿ ಕುಟುಂಬದ ಬಗ್ಗೆ ಗೋಕಾಕ ಆಗಲಿ ಅಥವಾ ಜಿಲ್ಲೆಯವರಿಗಾಗಲಿ ಗೊತ್ತಿರಲೇ ಇಲ್ಲ. 1989ರ ಅವಧಿಯಲ್ಲಿ ಜಾರಕಿಹೊಳಿ ಕುಟುಂಬದವರು ಸಹಕಾರ ರಂಗದ ಪ್ರವೇಶ ಮಾಡಿದರು. ಅದುವರೆಗೆ ವಸಂತರಾವ್ ಪಾಟೀಲ ಹಿಡಿತದಲ್ಲಿದ್ದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಜಾರಕಿಹೊಳಿ ಕುಟುಂಬದ ನಿಯಂತ್ರಣಕ್ಕೆ ಬಂತು. ನಂತರ 1991ರಲ್ಲಿ ನಾಯಕ್ ಸ್ಟೂಡೆಂಟ್ ಫೆಡರೇಷನ್ ಮೂಲಕ ಶಿಕ್ಷಣ ಕೇÒತ್ರದ ಪ್ರವೇಶ ಆಯಿತು. ಮುಂದೆ ಸತೀಶ ಜಾರಕಿಹೊಳಿ ವಿಧಾನ ಪರಿಷತ್ ಚುನಾವಣೆಯ ಮೂಲಕ ರಾಜಕೀಯ ರಂಗದ ಪ್ರವೇಶ ಮಾಡಿದರು. ಆಗ ಸತೀಶ ಜನತಾ ದಳದಿಂದ ಆಯ್ಕೆಯಾಗಿದ್ದರು. ಚುನಾವಣೆಗೆ ಮುನ್ನ ಸತೀಶಗೆ ಟಿಕೆಟ್ ಕೊಡುವ ವಿಚಾರದಲ್ಲಿ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಜಿಲ್ಲೆಯ ನಾಯಕರ ಒತ್ತಡ ಅವರ ಕೈಕಟ್ಟಿ ಹಾಕಿತ್ತು. ಮುಂದೆ ಜಿಲ್ಲೆಯ ಪ್ರಬಲ ಕೋಮಿನ ಇದೇ ನಾಯಕರು ಪಶ್ಚಾತಾಪಪಡುವ ವಾತಾವರಣ ನಿರ್ಮಾಣ ಆಯಿತು. ವಿಧಾನ ಪರಿಷತ್ ಮೂಲಕ ಪ್ರಮುಖ ನಾಯಕರಾಗಿ ಬೆಳೆದ ಸತೀಶ ಜಾರಕಿಹೊಳಿ ತಮ್ಮ ಕುಟುಂಬದ ಮಾಸ್ಟರ್ ಮೈಂಡ್ ಆಗಿ ಬೆಳೆದರು. ಸಹೋದರರ ಎಲ್ಲ ರಾಜಕೀಯ ನಿರ್ಣಯಗಳು ಸತೀಶ ಮೂಲಕವೇ ನಿರ್ಧಾರವಾಗುತ್ತಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.