ಮತದಾರರ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸಿ: ಸಿದ್ದರಾಮಯ್ಯ
Team Udayavani, Oct 27, 2020, 5:03 PM IST
ಬೆಂಗಳೂರು: ಪಕ್ಷಕ್ಕೆ ದ್ರೋಹವೆಸಗಿ, ಮತದಾರರ ಬೆನ್ನಿಗೆ ಚೂರಿ ಹಾಕಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕ್ಷೇತ್ರದ ವಿವಿಧ ಕಡೆಗಳಲ್ಲಿ ಇಂದು ರೋಡ್ ಶೋ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚಿಸಿದ ಸಿದ್ದರಾಮಯ್ಯ, ಈ ಕ್ಷೇತ್ರಕ್ಕೆ ಕ್ರಿಮಿನಲ್ ಹಿನ್ನೆಲೆಯುಳ್ಳವರು ಶಾಸಕರಾಗಬೇಕೋ ಅಥವಾ ಶುದ್ಧ ಹಸ್ತದ ಸುಸಂಸ್ಕೃತ ಹೆಣ್ಣು ಮಗಳು ಇಲ್ಲಿಂದ ವಿಧಾನಸಭೆಗೆ ಹೋಗಬೇಕೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮುನಿರತ್ನ, ಎಂಟಿಬಿ ನಾಗರಾಜ್, ಬೈರತಿ ಬಸವರಾಜು ಹಾಗೂ ಎಸ್.ಟಿ. ಸೋಮಶೇಖರ್ ಅವರು ದಿನ ಬೆಳಗಾದರೆ ಮನೆಗೆ ಬರುತ್ತಿದ್ದರು. ಬೆಳಗ್ಗೆ ಏಳುವಾಗ ಸಂಜೆ ಮಲಗುವ ಮುನ್ನ ಇವರ ಮುಖ ನೋಡಬೇಕಿತ್ತು. ಈ ಎಲ್ಲರೂ ಯಾರಿಗೂ ಹೇಳದೇ 25-30 ಕೋಟಿ ಪಡೆದುಕೊಂಡು ಬಿಜೆಪಿಗೆ ಹೋದರು. ಕೊನೆಗೆ ಅಪವಾದವನ್ನು ನಾನು ಹೊತ್ತುಕೊಳ್ಳಬೇಕಾಯಿತು. ಇವರಿಂದಾಗಿ ನನಗೆ ಕೆಟ್ಟ ಹೆಸರು ಬಂತು ಎಂದು ಹೇಳಿದರು.
ಮುನಿರತ್ನ ಅವರಿಗೆ ಕಾಂಗ್ರೆಸ್ ಪಕ್ಷ ಎರಡು ಬಾರಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿತು. ಅವರು ಈ ರೀತಿ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ ಎಂದು ಮೊದಲೇ ಗೊತ್ತಿದ್ದರೆ ಟಿಕೆಟ್ ನೀಡುತ್ತಿರಲಿಲ್ಲ. ಕ್ರಿಮಿನಲ್ ಚಟುವಟಿಕೆಗಳಿಗೆ ಮುನಿರತ್ನ ಹೆಸರುವಾಸಿ ಎಂದು ಹೇಳುತ್ತಾರೆ. ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ಶಾಂತಿಯುತವಾಗಿರಬೇಕು ಎಂದಾದರೆ ಕುಸುಮಾ ಅವರಿಗೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಯುದ್ಧಕ್ಕೂ ಮೊದಲು ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ: ಸಚಿವ ಕೆ ಸುಧಾಕರ್
ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಮಂಜೂರಾಗಿದೆ. ಅನುದಾನ ಪಡೆದುಕೊಳ್ಳಲು ಮುನಿರತ್ನ, ಬೈರತಿ ಬಸವರಾಜು ಹಾಗೂ ಸೋಮಶೇಖರ್ ಅವರ ನಡುವೆ ಭಾರಿ ಪೈಪೋಟಿ ನಡೆಯುತ್ತಿತ್ತು. ಕ್ಷೇತ್ರದಲ್ಲಿ ಇಂದು ಏನಾದರೂ ಅಭಿವೃದ್ಧಿ ನಡೆದಿದ್ದರೆ ಅದು ನಮ್ಮ ಸರ್ಕಾರ ನೀಡಿದ ಅನುದಾನದಿಂದ. ನಾನೇನೂ ನನ್ನ ಮನೆಯಿಂದ ಹಣ ತಂದು ಕೊಟ್ಟಿರಲಿಲ್ಲ. ಈ ಕುರಿತು ನಾನು ಜೆಡಿಎಸ್ ಮತ್ತು ಬಿಜೆಪಿ ಜೊತೆಗೆ ಚರ್ಚೆಗೂ ಸಿದ್ಧ ಎಂದು ಸವಾಲು ಹಾಕಿದರು.
ಅನ್ನಭಾಗ್ಯ, ಕ್ಷೀರಭಾಗತ್ಯ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಈವತ್ತು ಬಡವರು ಎರಡು ಹೊತ್ತು ನೆಮ್ಮದಿಯಾಗಿ ಊಟ ಮಾಡುತ್ತಿದ್ದರೆ ಅನ್ನಭಾಗ್ಯ ಯೋಜನೆಯೇ ಕಾರಣ. ಇದಕ್ಕೆ ನಿಮ್ಮ ಎದುರಿಗೆ ಇರುವ ನ್ಯಾಯಬೆಲೆ ಅಂಗಡಿಯ ಮುಂದೆ ತೂಗು ಹಾಕಿರುವ ಫಲಕವೇ (ಅನ್ನಭಾಗ್ಯ) ಸಾಕ್ಷಿ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಅನ್ನಭಾಗ್ಯ ಯೋಜನೆಯಲ್ಲಿ ಏಳು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಇದೀಗ ಯಡಿಯೂರಪ್ಪ ಅವರು ಅದನ್ನು ಐದು ಕೆಜಿಗೆ ಇಳಿಸಿದ್ದಾರೆ. ಅವರೇನು ಅವರ ಅಪ್ಪನ ಮನೆಯಿಂದ ಹಣ ತಂದು ಕೊಡುತ್ತಿದ್ದರೇ. ನಾನೂ ನಮ್ಮ ಅಪ್ಪನ ಮನೆಯಿಂದ ಯೋಜನೆಗೆ ಹಣ ಕೊಟ್ಟಿರಲಿಲ್ಲ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದರು.
ಮುನಿರತ್ನ ಅವರು ವ್ಯಾಪಾರ ಕುದುರಿಸಿಕೊಂಡು ಬಿಜೆಪಿಗೆ ಹೋದವರು. ಒಬ್ಬೊಬ್ಬರಿಗೆ 25 ಕೋಟಿ ಕೊಟ್ಟು ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿ ಮಾಡಿದರು. ಇಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಆ ಪಕ್ಷದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.