2023 Recap: ನಮ್ಮನ್ನು ಅಗಲಿದ ವಿವಿಧ ರಂಗದ ಸಾಧಕರು
Team Udayavani, Dec 30, 2023, 7:50 PM IST
2023ರಲ್ಲಿ ವಿವಿಧ ರಂಗದ ಹಲವು ಸಾಧಕ-ಸಾಧಕಿಯರು ಇಹಲೋಕದ ಯಾತ್ರೆ ಮುಗಿಸಿದ್ದು, ಆ ಪೈಕಿ ಪ್ರಮುಖ ಸಾಧಕರ ಕುರಿತು ಕಿರು ವರದಿ:
ಜನವರಿ-2023
ಟಾಟಾ ಸನ್ಸ್‌ನ ನಿವೃತ್ತ ನಿರ್ದೇಶಕ ಕೃಷ್ಣ ನಿಧನ (01/01/2023)
ದೇಶದ ಪ್ರಮುಖ ಉದ್ಯಮ ಸಂಸ್ಥೆ ಟಾಟಾ ಗ್ರೂಪ್‌ನಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದ, ಟಾಟಾ ಸನ್ಸ್‌ನ ನಿವೃತ್ತ ನಿರ್ದೇಶಕ ಆರ್.ಕೆ.ಕೃಷ್ಣಕುಮಾರ್ (84) ನಿಧನ ಹೊಂದಿದ್ದರು.
ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ ಅವರ ಆಪ್ತರೂ ಆಗಿದ್ದ ಕೃಷ್ಣಕುಮಾರ್, ಟಾಟಾ ಗ್ರೂಪ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ 2013ರಲ್ಲಿ ನಿವೃತ್ತರಾಗಿದ್ದರು. ನಂತರ ಅವರು ಆರ್‌ಎನ್‌ಟಿ ಎಸೋಸಿಯೇಟ್ಸ್ ಮತ್ತು ಟಾಟಾ ಟ್ರಸ್ಟ್‌ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.
ಹೆಚ್ಚಿನ ಆಧ್ಯಾತ್ಮಿಕ ಒಲವು ಹೊಂದಿದ್ದ ಅವರು ಟಾಟಾ ಟ್ರಸ್ಟ್ ಮೂಲಕ ಹಲವು ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.
02/01/2023
ಸಿದ್ದೇಶ್ವರ ಶ್ರೀ ಲಿಂಗೈಕ್ಯ
ನಡೆದಾಡುವ ದೇವರೆಂದೆ ಖ್ಯಾತರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜೀಗಳು ಲಿಂಗೈಕ್ಯರಾಗಿದ್ದರು.
ಭಕ್ತರ ಹೃದಯ ಮಂದಿರದಲ್ಲಿ ಪವಿತ್ರ ಸ್ಥಾನ ಪಡೆದಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಧ್ರುವತಾರೆಯಾಗಿ ಧಾರ್ಮಿಕ, ಸಾಮಾಜಿಕ ಇನ್ನಿತರ ಕ್ಷೇತ್ರಗಳಿಗೆ ಬೆಳಕು ನೀಡಿದವರು.
ನುಡಿದಂತೆ ನಡೆದವರು, ಸರಳತೆ, ಸೂಕ್ಷ್ಮತೆ, ಅರಿಷಡ್ವರ್ ಗಳನ್ನು ಮೆಟ್ಟಿ ನಿಂತು, ಜ್ಞಾನವನ್ನು ಪಸರಿಸಿ ಮಾದರಿಯಾದ ವರು. ಹಣ ಪಟ್ಟದ ಮೋಹಗಳಿಗೆಂದು ಒಳಗಾಗದೆ ಸಾರ್ಥಕ ಬದುಕು ಕಂಡ ಶತಮಾನದ ಸಂತ.
08/01/2023
ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ನಿಧನ
ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಜಯನಗರದ ಎಲ್‌ಐಸಿ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ನಿಧನ ಹೊಂದಿದ್ದರು. “ತಾಯಿ ನುಡಿ’ ದಿನಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು, ಕನ್ನಡಪ್ರಭ ದಿನಪತ್ರಿಕೆ ಆರಂಭದ ವೇಳೆ ಸೇವೆ ಸಲ್ಲಿಸಿದ್ದರು.ಜತೆಗೆ ಹಲವು ವರ್ಷಗಳ ಕಾಲ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
10/01/2023
ಚಂದ್ರಗಿರಿ ತೀರದಲ್ಲಿ ಖ್ಯಾತಿಯ ಸಾಹಿತಿ ಡಾ. ಸಾರಾ ಅಬೂಬಕರ್ ನಿಧನ
“ಚಂದ್ರಗಿರಿ ತೀರ ದಲ್ಲಿ’ ಕಾದಂಬರಿಯ ಮೂಲಕ ನಾಡಿನಾದ್ಯಂತ ಖ್ಯಾತರಾಗಿದ್ದ ಹಿರಿಯ ಲೇಖಕಿ,ಮಹಿಳಾ ಹೋರಾಟಗಾರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ನಾಡೋಜ ಡಾ. ಸಾರಾ ಅಬೂಬಕರ್ (87) ನಿಧನ ಹೊಂದಿದ್ದರು.
17/01/2023
ಜಗತ್ತಿನ ಹಿರಿಯಜ್ಜಿ ಇನ್ನಿಲ್ಲ
ಜಗತ್ತಿನ ಅತೀ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದ ಫ್ರಾನ್ಸ್‌ನ ನನ್ ಲೂಸಿಲ್ ರ್‍ಯಾಂಡಮ್ ಇಹಲೋಕ ತ್ಯಜಿಸಿದ್ದರು.
ತಮ್ಮ 119ನೇ ಜನ್ಮದಿನ ಆಚರಣೆಗೆ ಕೆಲವೇ ದಿನಗಳು ಬಾಕಿಯಿರುವಂತೆ ಅವರು ಕೊನೆಯುಸಿರೆಳೆದಿದ್ದಾರೆ. ಅವರನ್ನು ಎಲ್ಲರೂ ಪ್ರೀತಿಯಿಂದ ಸಿಸ್ಟರ್ ಆ್ಯಂಡ್ರೆ ಎಂದು ಕರೆಯುತ್ತಿದ್ದರು.
1904ರ ಫೆ.11ರಂದು ದಕ್ಷಿಣ ಫ್ರಾನ್ಸ್‌ನ ಅಲೆಸ್ ನಗರದಲ್ಲಿ ಜನಿಸಿದ್ದರು. ವಿಶ್ವದ ಹಿರಿಯಜ್ಜಿ ಎಂದು ಕರೆಸಿಕೊಂಡಿದ್ದು ಮಾತ್ರವಲ್ಲದೇ ಕೊರೊನಾ ಸೋಂಕು ತಗಲಿದರೂ ಬದುಕುಳಿದ ಜಗತ್ತಿನ ಹಿರಿಯ ನಾಗರಿಕರಲ್ಲಿ ಒಬ್ಬರು ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
24/01/2023
ಐಐಎಂ ಬೆಂಗಳೂರು ಕ್ಯಾಂಪಸ್ ವಿನ್ಯಾಸಕ ಬಿ.ವಿ.ದೋಶಿ ನಿಧನ
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನ ಕ್ಯಾಂಪಸ್ ವಿನ್ಯಾಸ ಮಾಡಿದ ಖ್ಯಾತ ವಾಸ್ತುಶಿಲ್ಪಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ವಿಠಲ ದಾಸ್ ದೋಶಿ (95) ನಿಧನ ಹೊಂದಿದ್ದರು.
ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳ ಮೂಲಕ ವಿಶ್ವವಿಖ್ಯಾತರಾಗಿದ್ದ ದೋಶಿ, ಅಹ್ಮದಾಬಾದ್‌ನ ಸಿಇಪಿಟಿ, ದಿಲ್ಲಿಯ ಎನ್ ಐಎಫ್ಟಿ ಸಹಿತ ಹಲವು ಖ್ಯಾತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಮತ್ತು ಇತರ ಕಟ್ಟಡಗಳ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
30/01/2023
ಕವಿ, ಕತೆಗಾರ ಕೆ.ವಿ. ತಿರುಮಲೇಶ್ ಇನ್ನಿಲ್ಲ
ಕನ್ನಡದ ವಿಭಿನ್ನ ಧ್ವನಿಯ ಕವಿ, ಕಥೆಗಾರ, ಅನುವಾದಕ ಹಾಗೂ ವಿಮರ್ಶಕ ಕೆ.ವಿ. ತಿರುಮಲೇಶ್ (82) ಇನ್ನು ನೆನಪು ಮಾತ್ರ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಸಮೀಪದ ಕಾರಡ್ಕದಲ್ಲಿ ಜನಿಸಿದ್ದ ಅವರು ಪ್ರಾಧ್ಯಾಪಕರಾಗಿದ್ದರು. 1975ರಿಂದ ಹೈದರಾಬಾದ್‌ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಫೆಬ್ರವರಿ-2023
06/02/2023
ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ ನಿಧನ
ಪ್ರಕೃತಿಯ ರಮ್ಯ ಸೌಂದರ್ಯವನ್ನು ಚಿತ್ರಕಲೆಯ ಮೂಲಕ ಅರಳಿಸಿ ಕಲಾರಾಧಕರನ್ನು ದೃಶ್ಯಕಾವ್ಯದಲ್ಲಿ ಮಿಂದೇಳುವಂತೆ ಮಾಡಿದ್ದ ಹಾಗೂ ತಮ್ಮ ಕಲಾ ಕುಂಚದ ಮೂಲಕ ದೇವತೆಗಳನ್ನೇ ಧರೆ ಗಿಳಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದ್ದ ನಾಡಿನ ಅಪ್ರತಿಮ ಹಿರಿಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ (ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ವರ್ಮ) ಇನ್ನಿಲ್ಲ.
16/02/2023
ತೆಂಕುತಿಟ್ಟಿನ ಪ್ರಖ್ಯಾತ ಭಾಗವತ,
ಪ್ರಸಂಗಕರ್ತ, ಹಿರಿಯ ಯಕ್ಷ ವಿದ್ವಾಂಸ
ಬಲಿಪ ನಾರಾಯಣ ಭಾಗವತರು ಇನ್ನಿಲ್ಲ
ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಭಾಗವತ ಹಾಗೂ ಭಾಗವತಿಕೆ ಭೀಷ್ಮ ಎಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರು (86) ಮಾರೂರು ಗ್ರಾಮದ ನೂಯಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದರು.
ಬಲಿಪರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾ. 13ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತಿ ದಂಪತಿಯ ಪುತ್ರರಾಗಿ ಜನಿಸಿದರು. 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರು ಅಜ್ಜ ದಿಣ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಬಲಿಪರು ತೆಂಕುತಿಟ್ಟು ಯಕ್ಷರಂಗದಲ್ಲಿ ಅಗ್ರಪಂಕ್ತಿ ಯಲ್ಲಿದ್ದ ಭಾಗವತರಾಗಿದ್ದು “ಭೀಷ್ಮ’, “ಯಕ್ಷರಂಗದ ದಂತಕತೆ’ ಎಂದೇ ಖ್ಯಾತರು.
21/02/2023
ಅಂಬಾತನಯ ಮುದ್ರಾಡಿ ನಿಧನ
ಕವಿ, ನಾಟಕಕಾರ, ಅಂಕಣಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿ, ಸಾಹಿತ್ಯ ಕ್ಷೇತ್ರದ ದಿಗ್ಗಜ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಮುದ್ರಾಡಿಯ ಸ್ವಗೃಹದಲ್ಲಿ ಫೆ. 21ರಂದು ನಿಧನ ಹೊಂದಿದ್ದರು.
ಅವರಿಗೆ 88 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಅವರು ಅಗಲಿದ್ದಾರೆ.
1935ರಲ್ಲಿ ಬೂಬ ಶೆಟ್ಟಿಗಾರ್, ಪುಟ್ಟಮ್ಮ ದಂಪತಿಯ ಮಗನಾಗಿ ಜನಿಸಿದ ಕೇಶವ ಶೆಟ್ಟಿಗಾರ ಅವರು ಅಂಬಾತನಯ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದರು. 8ನೇ ತರಗತಿ ಕಲಿತರೂ ಅವರಿಲ್ಲಿರುವ ಪ್ರತಿಭೆಯಿಂದ
ಮುದ್ರಾಡಿ ಹಾಗೂ ಹೆಬ್ರಿಯಲ್ಲಿ 36 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಶಿಕ್ಷಕ ವೃತ್ತಿಯ ಜತೆ ಅವರಲ್ಲಿರುವ ಕನ್ನಡ ಭಾಷಾ ಪ್ರೌಢಿಮೆಯಿಂದ ಶಿಕ್ಷಕವಾಣಿಯ ಸಂಪಾದಕರಾಗಿ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಾದ್ಯಂತ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಮಾರ್ಚ್ 2023
19/03/2023
ಮಿಲೆಟ್ ಮ್ಯಾನ್ ಸತೀಶ್ ನಿಧನ
ದೇಶದಲ್ಲಿ ಸಿರಿಧಾನ್ಯವನ್ನು ಜನಪ್ರಿಯಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿ “ಮಿಲೆಟ್ ಮ್ಯಾನ್’ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಿ.ವಿ.ಸತೀಶ್ (77) ಹೈದರಾಬಾದ್‌ನಲ್ಲಿ ರವಿವಾರ ನಿಧನರಾಗಿದ್ದರು.
ಮೂಲತಃ ಮೈಸೂರಿನವರಾಗಿದ್ದರೂ ಅವರ ಶಿಕ್ಷಣ ಮತ್ತು ಕಾರ್ಯಕ್ಷೇತ್ರ ಕರ್ನಾಟಕದಿಂದ ಹೊರಗೇ ಇದ್ದಿತ್ತು. ಸತೀಶ್ ಅವರು, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಸ್ತಾಪುರ ಗ್ರಾಮದಲ್ಲಿ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ (ಡಿಡಿಎಸ್)ಯ ಸಂಸ್ಥಾಪನೆ ಮಾಡಿ, ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿರಿ ಧಾನ್ಯಗಳ ಬೆಳೆ, ಪರಿಸರ ಸಹ್ಯ ಕೃಷಿ, ಆರ್ಥಿಕವಾಗಿ ಮಿತವ್ಯಯಿಯಾಗಿರುವ ಸಿರಿಧಾನ್ಯಗಳ ಬೆಳೆಯನ್ನು ಅವರು ಜನಪ್ರಿಯ ಗೊಳಿ ಸಿದ್ದರು. ಜತೆಗೆ ಅದನ್ನುಡಿಡಿಎಸ್ ಮೂಲಕ ವಿತರಿಸುವ ವ್ಯವಸ್ಥೆಯನ್ನೂ ಮಾಡಿದ್ದರು.
23/03/2023
ಶ್ರವಣಬೆಳಗೊಳದ ಶ್ರೀ ಜಿನೈಕ್ಯ
ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಗುರುವಾರ ಮುಂಜಾನೆ ಜಿನೈಕ್ಯರಾದರು. ಅವರು ಐದು ದಶಕಗಳ ಕಾಲ ಜೈನ ಮಠದ ಪೀಠಾಧ್ಯಕ್ಷರಾಗಿದ್ದರು.
ಶ್ರೀಗಳು ಮೂಲತಃ ಹೆಬ್ರಿ ಸಮೀಪದ ವರಂಗದವರು. 1949ರ ಮೇ 3 ರಂದು ವರಂಗದಲ್ಲಿ ಜನಿಸಿದ್ದರು. ಜೈನ ಧರ್ಮ ಪ್ರಚಾರ ದೊಂದಿಗೆ ಅಹಿಂಸೆಯಿಂದ ಸುಖ ಎಂಬ ಸಂದೇಶ ಸಾರುವ ಕಾಯಕ ಯೋಗಿಯಾಗಿ ಶ್ರವಣ ಬೆಳಗೊಳದ ಸಂತನೆಂದೇ ಖ್ಯಾತರಾಗಿದ್ದ ಸ್ವಾಮೀಜಿ ವೈರಾಗ್ಯ ಮೂರ್ತಿ ಶ್ರೀ ಗೊಮ್ಮಟೇಶ್ವರನ ನೆಲೆವೀಡು ಶ್ರವಣಬೆಳ ಗೊಳವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಮೂಲಕ ಜೈನಧರ್ಮದ ಸಾರವನ್ನು ಜಗತ್ತಿಗೆ ಪರಿಚಯಿಸಲು ಜೀವನವನ್ನು ಮುಡಿಪಾಗಿಟ್ಟಿದ್ದರು.
ಏಪ್ರಿಲ್- 2023
12/04/2023
ಕೇಶುಬ್ ಮಹೀಂದ್ರಾ ನಿಧನ
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಗ್ರೂಪ್‌ನ ಗೌರವ ಅಧ್ಯಕ್ಷ ಕೇಶುಬ್ ಮಹೀಂದ್ರಾ (99) ಬುಧವಾರ ಮುಂಬಯಿಯ ನಿವಾಸದಲ್ಲಿ ನಿಧನ ಹೊಂದಿದ್ದರು.
1923 ಅ.9ರಂದು ಜನಿಸಿದ್ದ ಅವರು ಪೆನ್ಸಿಲ್ವೇನಿಯಾ ವಿ.ವಿ.ಯಿಂದ ಪದವಿ ಪಡೆದಿದ್ದರು. ದೇಶದ ವಾಹನೋದ್ಯಮ ಕ್ಷೇತ್ರದ ಆರಂಭಿಕ ವರ್ಷಗಳಲ್ಲಿ ಅವರ ಕೊಡುಗೆ ಮಹತ್ವದ್ದು. 1947ರಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಗೆ ಸೇರಿಕೊಂಡ ಅವರು 1963ರಲ್ಲಿ ಅಧ್ಯಕ್ಷರಾದರು. 48 ವರ್ಷಗಳ ಕಾಲ ಕಂಪೆನಿಯನ್ನು ಮುನ್ನಡೆಸಿದ್ದಾರೆ.
ಮೇ -2023
02/05/2023
ಗಾಂಧೀಜಿ ಮೊಮ್ಮಗ ಅರುಣ್ ನಿಧನ
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ಅರುಣ್ ಗಾಂಧಿ (89) ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನ ಹೊಂದಿದ್ದರು. 1934 ಎ.14ರಂದು ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ಅವರಿಗೆ ಜನಿಸಿದ್ದ ಅರುಣ್ ಗಾಂಧಿಯವರು ಲೇಖಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದರು. ಅಜ್ಜ ಮಹಾತ್ಮಾ ಗಾಂಧಿಯವರಂತೆಯೇ ಕೆಲವೊಂದು ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು.
19/05/2023
ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಇನ್ನಿಲ್ಲ
ನಾರಾಯಣ ನೇತ್ರಾಲಯ ಆಸ್ಪತ್ರೆ ಸಂಸ್ಥಾಪಕ ಡಾ. ಕೆ. ಭುಜಂಗ ಶೆಟ್ಟಿ (69) ನಿಧನ ಹೊಂದಿದ್ದರು. ಅವರು 1978 ರಲ್ಲಿ ತಮ್ಮ ಎಂಬಿಬಿಎಸ್ ಮಾಡಿದ ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ನಂತರ ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು.
ಜುಲೈ -2023
05/07/2023
ವಿಹಿಂಪ ಪ್ರಮುಖ ಕೇಶವ ಹೆಗಡೆ ನಿಧನ
ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಕೇಶವ ಹೆಗಡೆ (63) ಹೃದಯಾಘಾತದಿಂದ ನಿಧನ ಹೊಂದಿದ್ದರು.
1982ರಿಂದ ವಿಶ್ವ ಹಿಂದೂ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ, ಅನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದ ಹೆಗಡೆ, ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅಯೋಧ್ಯೆ ರಾಮಮಂದಿರ ಹೋರಾಟ, ದತ್ತ ಪೀಠ ಹೋರಾಟ, ಲವ್ ಜಿಹಾದ್ ವಿರುದ್ಧದ ಹೋರಾಟ, ದೇವಾಲಯ ರಕ್ಷಣೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
17/07/2023
ಖ್ಯಾತ ಗಣಿತಜ್ಞೆ ಡಾ. ಮಂಗಳಾ ನಿಧನ
ಖ್ಯಾತ ಗಣಿತಜ್ಞೆ, ವಿಜ್ಞಾನಿ, ಸಾಹಿತಿ, ಶಿಕ್ಷಕಿ, ಸಂಶೋಧಕಿ, ಚಿಂತಕಿ ಡಾ. ಮಂಗಳಾ ನಾರ್ಲಿಕರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದರು.
ಗಣಿತ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಡಾಣ ಮಂಗಳಾ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ. ಗಣಿತ ಕ್ಷೇತ್ರದಲ್ಲಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿ ಸಿದ್ದಾರೆ. ತಮ್ಮ ಪುಸ್ತಕಗಳು ಮತ್ತು ಶಾಲಾ ಪಠ್ಯಕ್ಕೆ ತಮ್ಮ ಕೊಡುಗೆಯ ಮೂಲಕ ಮಕ್ಕಳಿಗೆ ಗಣಿತದ ಪರಿಕಲ್ಪನೆಗಳನ್ನು ಸರಳೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
24/07/2023
ಆರೆಸ್ಸೆಸ್ ಜ್ಯೇಷ್ಠ ಪ್ರಚಾರಕ ಮದನ್ ದಾಸ್ ದೇವಿ ನಿಧನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಮದನ್ ದಾಸ್ ದೇವಿ (81) ಅವರು ಹೃದಯ ಸ್ತಂಭನಕ್ಕೀಡಾಗಿ ನಿಧನ ಹೊಂದಿದ್ದರು.
1970ರಿಂದ 1992ರವರೆಗೆ ಸತತ 22 ವರ್ಷಗಳ ಕಾಲ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾಗಿದ್ದರು. ದೇಶಾದ್ಯಂತ ತಾಲೂಕು, ಮಹಾವಿದ್ಯಾಲಯ ಮತ್ತು ನಗರ ಮಟ್ಟದಲ್ಲಿ ಸುಸಂಸ್ಕೃತ ಕಾರ್ಯಕರ್ತರ ತಂಡದ ಸ್ಥಾಪನೆಗೆ ವಿಶೇಷ ಗಮನ ಹರಿಸಿದ್ದರು. 2009ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ಸ್ವೀಕರಿಸಿದ್ದರು.
24/07/2023
ದಲಿತಪರ ಹೋರಾಟಗಾರ ನಿಧನ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಮುಖ ದಲಿತಪರ ಹೋರಾಟಗಾರ ಮಿಲಿಂದ್ ಮಕ್ವಾನ (54) ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಕ್ಯಾಲಿಫೋರ್ನಿಯ ವಿಧಾನಸಭೆಯಲ್ಲಿ ಜಾರಿಗೆ ತರಲು ಮುಂದಾಗಿರುವ ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಮಿಲಿಂದ್ ತೀವ್ರವಾಗಿ ಖಂಡಿಸಿದ್ದರು. “ಇದು ಅಮೆರಿಕದಲ್ಲಿರುವ ಇತರೆ ಹಿಂದೂಗಳು ಹಾಗೂ ದಲಿತರ ನಡುವೆ ತಾರತಮ್ಯ ಮೂಡಿಸಲಿದೆ’ ಎಂದು ಹೇಳಿದ್ದ ಅವರು ಇತ್ತೀಚೆಗೆ ಈ ವಿಚಾರವಾಗಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ್ದರು.
ಆಗಸ್ಟ್- 2023
08/08/2023
ಪೆಪ್ಪರ್‌ಫ್ರೈ ಸಿಇಒ ಲೇಹ್‌ನಲ್ಲಿ ನಿಧನ
ಗೃಹ ಅಲಂಕಾರಿಕ ವಸ್ತುಗಳ ಪ್ರಖ್ಯಾತ ಆನ್‌ಲೈನ್ ಸಂಸ್ಥೆ ಪೆಪ್ಪರ್‌ಫ್ರೈನ ಸಹ ಸಂಸ್ಥಾಪಕ, ಸಿಇಒ ಹಾಗೂ ಖ್ಯಾತ ಉದ್ಯಮಿ ಅಂಬರೀಶ್ ಮೂರ್ತಿ (51) ಲೇಹ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಬೈಕ್‌ಟ್ರಿಪ್‌ಗಳ ಬಹಳ ಆಸಕ್ತರಾಗಿದ್ದ ಮೂರ್ತಿ ಆಗಾಗ ಟ್ರಿಪ್ ಗಳನ್ನು ಮಾಡುತ್ತಲೇ ಇದ್ದವರು. ಈ ಬಾರಿ ಮುಂಬಯಿಯಿಂದ ಲೇಹ್‌ಗೆ ಬೈಕ್ ಟ್ರಿಪ್ ಮೂಲಕ ತೆರಳಿದ್ದರು. ಲಡಾಖ್‌ನಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದರು. ಲೇಹ್‌ಗೆ ತೆರಳಿದಾಗ ಅಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದರು.
15/08/2023
ʻಸುಲಭ್ ಶೌಚಾಲಯʼದ ಪ್ರವರ್ತಕ ಬಿಂದೇಶ್ವರ್ ಪಾಠಕ್ ನಿಧನ
ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥೆಯ ಮೂಲಕ ಭಾರತದಲ್ಲಿ ಸುಲಭ ಶೌಚಾಲಯಗಳನ್ನು ಸ್ಥಾಪಿಸಿ,ಸ್ವಚ್ಛತ ಕ್ರಾಂತಿಯನ್ನೇ ಮಾಡಿದ ಬಿಂದೇಶ್ವರ ಪಾಠಕ್ ಹೃದಯಸ್ತಂಭನದಿಂದ ನಿಧನ ಹೊಂದಿದ್ದರು.
22/08/2023
ಗಣಿತಶಾಸ್ತ್ರಜ್ಞ ಸಿ.ಆರ್.ರಾವ್ ನಿಧನ
ಸಂಖ್ಯಾಶಾಸ್ತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ, ಜಗತ್ತಿನ ಮನ್ನಣೆ ಗಳಿಸಿದ್ದ ಕರ್ನಾಟಕದ ಬಳ್ಳಾರಿ ಮೂಲದ ಗಣಿತಶಾಸ್ತ್ರಜ್ಞ ಡಾಣಕಲ್ಯಂಪುಡಿ ರಾಧಾಕೃಷ್ಣ ರಾವ್ (103) ನ್ಯೂಯಾರ್ಕ್‌ನ ಬಫೆಲೋದಲ್ಲಿ ನಿಧನರಾಗಿದ್ದರು.
ಪ್ರಸಕ್ತ ವರ್ಷವಷ್ಟೇ ಅವರಿಗೆ ಸಂಖ್ಯಾಶಾಸ್ತ್ರದಲ್ಲಿ 75 ವರ್ಷಗಳ ಹಿಂದೆ ಅಭೂತಪೂರ್ವ ಸಾಧನೆ ಮಾಡಿದ್ದನ್ನು ಪರಿಗಣಿಸಿ “ಇಂಟರ್‌ನ್ಯಾಶನಲ್ ಪ್ರೈಸ್ ಇನ್ ಸ್ಟಾಟಿಸ್ಟಿಕ್ಸ್’ ಗೌರವವನ್ನು ಪ್ರದಾನ ಮಾಡಿ ಗೌರವಿಸಲಾಗಿತ್ತು.
ಸೆಪ್ಟೆಂಬರ್- 2023
28/09/2023
ಕೃಷಿ ಕ್ಷೇತ್ರಕ್ಕೆ ಜೀವ ತುಂಬಿದ ಹಿರಿಯ ವಿಜ್ಞಾನಿ ಸ್ವಾಮಿನಾಥನ್ ನಿಧನ
ದೇಶದ ಹಸುರು ಕ್ರಾಂತಿಯ ಹರಿಕಾರ ಡಾಣ ಎಂ.ಎಸ್. ಸ್ವಾಮಿನಾಥನ್ (98) ನಿಧನ ಹೊಂದಿದ್ದರು. ಉತ್ತಮ ಆಹಾರ ಮತ್ತು ಪೌಷ್ಟಿಕಾಂಶ ಗಳು ಜೀವನಕ್ಕೆ ಅಗತ್ಯ ಎಂದು ಪ್ರತಿಪಾದಿ ಸುತ್ತಿದ್ದ ಅವರು 1960ರ ದಶಕದ ಬರ ಗಾಲದ ಅವಧಿಯಲ್ಲಿ ಕೃಷಿ ಕ್ಷೇತ್ರದ ದಿಶೆ ಯನ್ನೇ ಬದಲಿಸಿದ ಹಸುರು ಕ್ರಾಂತಿಯ ಹರಿಕಾರರಾಗಿದ್ದರು.
ಭಾರತೀಯ ಕೃಷಿ ಸಂಶೋಧನ ಸಂಸ್ಥೆಯ ನಿರ್ದೇಶಕ, ಕೃಷಿ ಸಂಶೋಧನ ಮಂಡಳಿಯ ಮಹಾನಿರ್ದೇಶಕ,ಕೃಷಿ ಸಂಶೋಧನೆ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದರು.
ಅಕ್ಟೋಬರ್- 2023
09/10/2023
ಹಿರಿಯ ಪತ್ರಕರ್ತ ರಂಗನಾಥ ರಾವ್ ನಿಧನ
ಹಿರಿಯ ಪತ್ರಕರ್ತ, ಸಾಹಿತಿ, ಅನುವಾದಕ ಜಿ.ಎನ್.ರಂಗನಾಥ್ ರಾವ್ (81) ಅವರು ನಿಧನ ಹೊಂದಿದ್ದರು.
ರಾಜ್ಯದ ಹಲವು ಪತ್ರಿಕೆ ಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನ ರಾಗಿದ್ದರು.
11/10/2023
96ನೇ ವಯಸ್ಸಲ್ಲಿ ಅಕ್ಷರ ಕಲಿತ ಕಾತ್ಯಾಯಿನಿ ಅಮ್ಮ ನಿಧನ
ಕೇರಳದ ಸಾಕ್ಷರತಾ ಅಭಿಯಾನದ ಮುಖೇನ ವಿದ್ಯಾಭ್ಯಾಸ ಪಡೆದ ರಾಜ್ಯದ ಅತ್ಯಂತ ಹಿರಿಯ ವಿದ್ಯಾರ್ಥಿನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾತ್ಯಾಯಿನಿ ಅಮ್ಮ ಇಹಲೋಕ ತ್ಯಜಿಸಿದ್ದರು. ಅಳಪ್ಪುಳ ಜಿಲ್ಲೆಯ ಚೆಪ್ಪಡ್ ಗ್ರಾಮದ ನಿವಾಸಿಯಾಗಿದ್ದ ಕಾತ್ಯಾಯಿನಿ ಅಮ್ಮ, ತಮ್ಮ 96ನೇ ವಯಸ್ಸಿನಲ್ಲಿ ಸಾಕ್ಷರತೆ ಅಭಿಯಾನದ “ಅಕ್ಷರಲಕ್ಷಂ’ ಪರೀಕ್ಷೆ ಬರೆದಿದ್ದರಲ್ಲದೆ, ಈ ಪರೀಕ್ಷೆ ಬರೆದಿರುವ ರಾಜ್ಯದ 43,330 ಅಭ್ಯರ್ಥಿಗಳ ಪೈಕಿ ಇವರೇ ಅತ್ಯಂತ ಹಿರಿಯರಾಗಿದ್ದರು. ಜತೆಗೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಮೂಲಕ ಪ್ರಖ್ಯಾತಿಗಳಿಸಿದ್ದರು.
13/10/2023
26 ವರ್ಷದ ಭುವನಸುಂದರಿ ಸ್ಪರ್ಧಿ ನಿಧನ
ಭುವನ ಸುಂದರಿ ಸ್ಪರ್ಧೆಯ ಮಾಜಿ ಸ್ಪರ್ಧಿ, 2015ರಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ರೂಪದರ್ಶಿ ಶೆರಿಕಾ ಡಿ ಅರ್ಮಾಸ್ (26) ಅನಾರೋಗ್ಯದಿಂದ ನಿಧನ ಹೊಂದಿದ್ದರು.
ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ದುಡಿಯುತ್ತಿದ್ದ ಫೌಂಡೇಶನ್‌ನ ಸಹಯೋಗದೊಂದಿಗೆ ಸಮಾಜ ಸೇವೆಗಳಲ್ಲೂ ಭಾಗಿಯಾಗುತ್ತಿದ್ದರು ಎನ್ನಲಾಗಿದೆ.
29/10/2023
ಸಂಘದ ಹಿರಿಯ ಪ್ರಚಾರಕ ಆರ್.ಹರಿ ನಿಧನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ಮಾಜಿ ಬೌದ್ಧಿಕ್ ಪ್ರಮುಖ್ ಆರ್.ಹರಿ(93) ನಿಧನ ಹೊಂದಿದ್ದರು. ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಬೆಳವಣಿಗೆಗೆ ಶ್ರಮಿಸಿದ್ದರು. ಮಲಯಾಳದಲ್ಲಿ ಒಟ್ಟು 43 ಪುಸ್ತಕ ಬರೆದಿದ್ದಾರೆ, ಹಿಂದಿಯಲ್ಲಿ 11, ಇಂಗ್ಲಿಷ್‌ನಲ್ಲಿ 2 ಪುಸ್ತಕಗಳನ್ನು ರಚಿಸಿದ್ದಾರೆ.
ನವೆಂಬರ್-2023
05/11/2023
ಪೇಜಾವರ ಶ್ರೀಗಳ ಪೂರ್ವಾಶ್ರಮದ
ತಂದೆ ಅಂಗಡಿಮಾರು ಕೃಷ್ಣ ಭಟ್ಟರು ನಿಧನ
ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಸ್ವಾಮೀಜಿಗಳ ಪೂರ್ವಾಶ್ರಮದ ತಂದೆ, ಜೋತಿಷಿ, ಪಂಚಾಂಗಕರ್ತೃ, ಪಕ್ಷಿಕೆರೆ ಸಮೀಪದ ಅಂಗಡಿಮಾರು ಕೃಷ್ಣ ಭಟ್ಟ (103) ಅವರು ನ. 5ರಂದು ನಿಧನ ಹೊಂದಿದ್ದರು.
23/11/2023
ಸುಪ್ರೀಂನ ಮೊದಲ ಮಹಿಳಾ
ನ್ಯಾಣ ಮೂರ್ತಿ ಫಾತಿಮಾ ನಿಧನ
ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಎಂ.ಫಾತಿಮಾ ಬೀವಿ (96)ಅವರು ಗುರುವಾರ ನಿಧನ ಹೊಂದಿದ್ದರು.
ಸುಪ್ರೀಂನ ಮೊದಲ ಮಹಿಳಾ ನ್ಯಾಯಾಧೀಶೆ ಎನ್ನುವ ಖ್ಯಾತಿಯ ಜತೆಗೆ, ಇಂತಹ ಮಹತ್ವದ ಸಾಧನೆ ಮಾಡಿದ ಮುಸ್ಲಿಂ ಸಮುದಾಯದ ಮೊದಲ ಮಹಿಳೆ ಎಂಬ ಗರಿಯೂ ಅವರಿಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.