Year Ender: ಸೌತ್‌ನಲ್ಲಿ ಈ ವರ್ಷ ಸಿನಿಮಾಗಿಂತ ವಿವಾದಗಳದ್ದೇ ಹೆಚ್ಚು ಸದ್ದು – ಸುದ್ದಿ
2024ರಲ್ಲಿ ಅತೀ ಹೆಚ್ಚು ವಿವಾದಕ್ಕೀಡಾದ ವಿಚಾರಗಳ ಸುತ್ತ ಒಂದು ನೋಟ...
Team Udayavani, Dec 7, 2024, 5:54 PM IST
2024 ಸೌತ್ ಚಿತ್ರರಂಗಕ್ಕೆ ಸಿನಿಮಾಗಳ ವಿಚಾರದಲ್ಲಿ ಸಮಾಧಾನಕರ ಹಾಗೂ ಸ್ಮರಣೀಯ ವರ್ಷ. ವಿವಾದಗಳ ವಿಚಾರದಿಂದಲೂ ದಕ್ಷಿಣ ಭಾರತದ ಸಿನಿಮಾರಂಗ ಈ ವರ್ಷ ಅತೀ ಹೆಚ್ಚು ಸದ್ದು ಮಾಡಿದೆ.
ದರ್ಶನ್, ಧನುಷ್ , ನಯನತಾರಾ ಹೀಗೆ ಖ್ಯಾತ ಕಲಾವಿದರು ಈ ವರ್ಷ ರೀಲ್ ಲೈಫ್‌ನಲ್ಲಿ ಸದ್ದು ಮಾಡಿದ್ದಕ್ಕಿಂತ ರಿಯಲ್ ಲೈಫ್ ನಲ್ಲೇ ಹೆಚ್ಚು ಸುದ್ದಿಯಾಗಿದ್ದರು. ಇಲ್ಲಿದೆ 2024ರಲ್ಲಿ ಅತೀ ಹೆಚ್ಚು ವಿವಾದಕ್ಕೀಡಾದ ಸೌತ್ ರಂಗೀನ್ ಲೋಕದ ಟಾಪ್ ವಿಚಾರಗಳ ಸುತ್ತ ಒಂದು ನೋಟ..
ಪ್ರಭಾಸ್ ʼಕಲ್ಕಿʼ ನೋಡಿ ಪ್ರಭಾಸ್‌ಗೆ ಜೋಕರ್ ಎಂದ ಬಾಲಿವುಡ್ ನಟ:
ನಾಗ್ ಅಶ್ವಿನ್ ಅವರ ʼಕಲ್ಕಿ 2898 ಎಡಿʼ ಸಿನಿಮಾ ಈ ವರ್ಷ ದೊಡ್ಡ ಹಿಟ್ ಸಿನಿಮಾಗಳಲ್ಲೊಂದು. ಪ್ರಭಾಸ್, ಅಮಿತಾಭ್. ದೀಪಿಕಾ, ಕಮಲ್ ಹಾಸನ್ ಹೀಗೆ ಮಲ್ಟಿಸ್ಟಾರ್ಸ್‌ಗಳಿದ್ದ ʼಕಲ್ಕಿʼ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.
ಸಿನಿಮಾ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ ನಟ ಅರ್ಷದ್ ವಾರ್ಸಿ(Arshad Warsi) ಅವರು ಪ್ರಭಾಸ್ ಅವರ ಬಗ್ಗೆ ಹೇಳಿದ ಒಂದು ಮಾತು ಸೌತ್ ಸಿನಿರಂಗಕ್ಕೆ ವಿವಾದಕ್ಕೀಡಾಗಿತ್ತು. “ನಾನು ʼಕಲ್ಕಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟವಾಗಿಲ್ಲ. ಪ್ರಭಾಸ್ ನಾನು ತುಂಬಾ ಬೇಜಾರ್ ಅಲ್ಲಿದ್ದೇನೆ. ನೀವು ಜೋಕರ್ ರೀತಿ ಕಾಣುತ್ತಿದ್ದೀರಿ. ನಾನು ಮ್ಯಾಡ್ ಮ್ಯಾನ್ ನೋಡಲು ಇಷ್ಟಪಡುತ್ತೇನೆ. ಆದರೆ ನೀವು ಅವರನ್ನು ಏನು ಮಾಡಿದ್ದೀರಿ. ನೀವ್ಯಾಕೆ ಈ ರೀತಿ ಮಾಡುತ್ತೀರಿ ಅನ್ನೋದೇ ನನಗೆ ಅರ್ಥ ಆಗಲ್ಲ” ಎಂದು ಹೇಳಿದ್ದರು.
ಪ್ರಭಾಸ್ ನನ್ನು ಜೋಕರ್ ಎಂದ ಅರ್ಷದ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಭವಿಷ್ಯದಲ್ಲಿ ಚಲನಚಿತ್ರಗಳು ಅಥವಾ ನಟರನ್ನು ಟೀಕಿಸುವುದನ್ನು ನಿಲ್ಲಿಸುವುದಾಗಿ ವಾರ್ಸಿ ಹೇಳಿದ್ದರು. ಇನ್ನು ಮುಂದೆ ನೋಡುವ ಪ್ರತಿಯೊಂದು ಚಿತ್ರವನ್ನು ನಾನು ಇಷ್ಟಪಡುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ್ದರು.
ಜಯಂ ರವಿ – ಆರತಿ ವಿಚ್ಛೇದನ ವಿವಾದ:
ಚಿತ್ರರಂಗದಲ್ಲಿ ಈ ವರ್ಷ ಹಲವು ವಿಚ್ಚೇದನ ಪ್ರಕರಣಗಳು ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳ ಸಂಬಂಧದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ದಾಂಪತ್ಯ ಜೀವನ ವಿಚ್ಚೇದನದ ಹಂತಕ್ಕೆ ಬಂದು ಮುಕ್ತಾಯ ಕಂಡಿದೆ.
ಈ ಪೈಕಿ ಕಾಲಿವುಡ್ (Kollywood) ನಟ ಜಯಂ ರವಿ (Actor Jayam Ravi) ಹಾಗೂ ಆರತಿ (Aarti ) ಅವರ ವಿಚ್ಚೇದನ ವಿಚಾರ ವಿವಾದದಿಂದ ಸುದ್ದಿಯಾಗಿತ್ತು.
ಈ ವರ್ಷದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ತಮ್ಮ 15 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಚೇದನ ನೀಡುವುದಾಗಿ ಜಯಂ ರವಿ ಘೋಷಿಸಿದ್ದರು. ಆದರೆ ಜಯಂ ರವಿ ತಮ್ಮ ಗಮನಕ್ಕೆ ತರದೆ ವಿಚ್ಚೇದನವನ್ನು ಘೋಷಿಸಿದ್ದಾರೆ ಎಂದು ಆರತಿ ಹೇಳಿದ್ದರು. ನಾನು ಲೀಗಲ್ ನೋಟಿಸ್ ಕಳುಹಿಸಿ ಕುಟುಂಬದ ಜತೆ ಚರ್ಚಿಸಿಯೇ ಈ ನಿರ್ಧಾರವನ್ನು ಮಾಡಿದ್ದೇನೆ ಎಂದು ಪ್ರತ್ಯುತ್ತರ ನೀಡಿದ್ದರು.
ಗಾಯಕಿಯೊಬ್ಬರ ಜತೆ ಜಯಂ ರವಿ ಆತ್ಮೀಯವಾಗಿದ್ದು, ಅವರಿಂದಲೇ ಈ ವಿಚ್ಚೇದನ ನಡೆದಿದೆ ಎನ್ನುವ ಮಾತು ಕೂಡ ಹರಿದಾಡಿತ್ತು.
ಆರತಿ ಮನೆಯಲ್ಲಿ ಜಯಂ ರವಿ ಅವರ ಚಿನ್ನಾಭರಣ, ಪಾಸ್‌ಪೋರ್ಟ್, ಕಾರ್ ಕೀ ಸೇರಿದಂತೆ ಇತರೆ ವಸ್ತುಗಳಿವೆ ಅದನ್ನು ವಾಪಸ್ ಕೊಡಿಸುವಂತೆ ಅಡ್ಯಾರ್ ಪೊಲೀಸರ ಬಳಿ ದೂರು ನೀಡಿದ್ದರು.
ಮಕ್ಕಳಾದ ಆರವ್ ಮತ್ತು ಅಯಾನ್ ಬೇಕು. ಇದಕ್ಕಾಗಿ ನಾನು ಎಷ್ಟು ವರ್ಷ ಬೇಕಾದರೂ ಕಾನೂನು ಹೋರಾಟ ಮಾಡುತ್ತೇನೆ ಎಂದು ಜಯಂ ರವಿ ಮಾಧ್ಯಮವೊಂದಕ್ಕೆ ಹೇಳಿದ್ದರು.
ವಿಚ್ಚೇದನ ವಿಚಾರ ಇಬ್ಬರ ನಡುವಿನ ಕಿತ್ತಾಟ ಕಾಲಿವುಡ್ ವಲಯದಲ್ಲಿ ಸದ್ದು ಮಾಡಿತ್ತು.
ಎ.ಆರ್.ರೆಹಮಾನ್ ವಿಚ್ಚೇದನ ಮತ್ತು ವಿವಾದ:
ಈ ವರ್ಷದ ನವೆಂಬರ್ ನಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R.Rahman) ಅವರ ಪತ್ನಿ ಸಾಯಿರಾ ಪತಿಯಿಂದ ದೂರ ಇರುವ ಬಗ್ಗೆ ಘೋಷಣೆ ಮಾಡಿದ್ದರು. ಆ ಮೂಲಕ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು.
ಪತಿ ಹಾಗೂ ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ನಡುವೆ ಸುಧಾರಿಸಲಾಗದಷ್ಟು ಬಿರುಕು ಮೂಡಿದೆ. ಹೀಗಾಗಿ, ಪತಿ ರೆಹಮಾನ್‌ರಿಂದ ದೂರ ಇರಲು ಕಕ್ಷಿದಾರರರಾಗಿರುವ ಸಾಯಿರಾ ಬಯಸಿದ್ದಾರೆ ಎಂದು ಹೇಳಿದ್ದರು.
ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ಎ.ಆರ್.ರೆಹಮಾನ್ ತಂಡದಲ್ಲಿ ಸದಸ್ಯೆ ಆಗಿರುವ ಗಿಟಾರ್ ವಾದಕಿ (Bass Guitar Player) ಮೋಹಿನಿ ಡೇ (Mohini Dey) ಅವರು ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ನಿಂದ (Mark Hartsuch) ದೂರವಾಗಿರುವುದಾಗಿ ಘೋಷಣೆ ಮಾಡಿದ್ದರು.
ರೆಹಮಾನ್ ವಿಚ್ಛೇದನಕ್ಕೆ ಮೋಹಿನಿ ಕಾರಣವೆನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಸ್ಪಷ್ಟನೆ ಕೊಟ್ಟ ಮೋಹಿನಿ, ಸಾಯಿರಾ;
ಈ ಸಂಬಂದ ವಿವಾದ ಏಳುತ್ತಿದ್ದಂತೆ ಸಾಯಿರಾ ಆಡಿಯೋವೊಂದನ್ನು ರಿಲೀಸ್ ಮಾಡಿ ವಿಚ್ಛೇದನಕ್ಕೆ ಸ್ಪಷ್ಟನೆ ನೀಡಿದ್ದರು.
ಅವರೊಬ್ಬ ಅದ್ಭುತ ಮನುಷ್ಯ. ಅವರು ಹೇಗಿದ್ದಾರೋ ಹಾಗೆಯೇ ಇರಲು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಅವರನ್ನು ನಂಬುತ್ತೇನೆ. ನಾನು ತುಂಬಾ ಪ್ರೀತಿಸುತ್ತೇನೆ. ನಾವು ಪರಸ್ಪರ ಒಪ್ಪಿಕೊಂಡೇ ನಿರ್ಧಾರವನ್ನು ಮಾಡಿದ್ದೇವೆ. ಈ ಬಗ್ಗೆ ಹುಟ್ಟಿರುವ ಎಲ್ಲಾ ಊಹಾಪೋಹಗಳನ್ನು ನಿಲ್ಲಿಸಬೇಕೆಂದು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ ಎಂದಿದ್ದರು.
ದೈಹಿಕವಾಗಿ ನಾನು ತುಂಬಾ ಸುಸ್ತುಗೊಂಡಿದ್ದೇನೆ. ನನ್ನ ಆರೋಗ್ಯ ಕೂಡ ಸರಿಯಾಗಿಲ್ಲ. ಇದೇ ಕಾರಣದಿಂದ ನಾನು ರೆಹಮಾನ್ ಅವರಿಂದ ದೂರವಾಗಲು ಬಯಸಿದ್ದು ಎಂದಿದ್ದರು.
ನನ್ನ ಜೀವನದಲ್ಲಿ ಹಲವು ಮಂದಿ ತಂದೆ ಸಮಾನರು ಇದ್ದಾರೆ. ಇವರೆಲ್ಲ ನನಗೆ ಮಾರ್ಗದರ್ಶಿಗಳು. ನನ್ನ ವೃತ್ತಿ ಬದುಕಿನ ಬೆಳವಣಿಗೆಗೆ ಇವರೆಲ್ಲ ತುಂಬಾ ಸಹಾಯ ಮಾಡಿದ್ದಾರೆ. ಅಂತಹವರಲ್ಲಿ ಎಆರ್ ರೆಹಮಾನ್ ಕೂಡ ಒಬ್ಬರು. ನಾನು ಅವರನ್ನು ತುಂಬಾನೇ ಗೌರವಿಸುತ್ತೇನೆ. ಅವರು ನನ್ನ ತಂದೆಯ ಹಾಗೆ. ನನ್ನ ತಂದೆಗಿಂತ ಸ್ವಲ್ಪ ಚಿಕ್ಕವರು. ಆದರೆ ಅವರ ಮಗಳು ನನ್ನ ವಯಸ್ಸಿನವಳೇ. ನಾವು ಇಬ್ಬರು ಒಬ್ಬರನ್ನು ಒಬ್ಬರು ಗೌರವದಿಂದ ನೋಡುತ್ತೇವೆ. ನಾನು ಅವರ ಬ್ಯಾಂಡ್ ತಂಡದಲ್ಲಿ ಬೆಸಿಸ್ಟ್ ಆಗಿ 8.5 ವರ್ಷ ಕೆಲಸ ಮಾಡಿದ್ದೇನೆ. ಆ ನಂತರ ಯುಎಸ್‌ಗೆ ಶಿಫ್ಟ್ ಆದೆ. ನಮ್ಮ ಖಾಸಗಿ ವಿಚಾರಕ್ಕೆ ಗೌರವ ಕೊಡಿ. ಇದು ವೈಯಕ್ತಿಕ ವಿಚಾರ ಹಾಗೂ ನೋವಿನ ಪ್ರಕ್ರಿಯೆ” ಎಂದು ಮೋಹಿನಿ ಹೇಳಿದ್ದರು.
1995 ಮಾ.12ರಂದು ಇಬ್ಬರ ವಿವಾಹವಾಗಿತ್ತು. ಅವರಿಗೆ ಖತೀಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ನಾಗ ಚೈತನ್ಯ – ಸಮಂತಾ ವಿಚ್ಚೇದನದ ಕುರಿತು ವಿವಾದಾತ್ಮಕ ಹೇಳಿಕೆ: ಅಕ್ಕಿನೇನಿ ಫ್ಯಾಮಿಲಿ ಗರಂ:
ಟಾಲಿವುಡ್ ನಟ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ (Samantha Ruth Prabhu) ವಿಚ್ಛೇದನದ ಕುರಿತು ಸಚಿವೆ ಕೊಂಡ ಸುರೇಖಾ ಕೊಟ್ಟ ಹೇಳಿಕೆಯೊಂದು ಇಡೀ ಟಾಲಿವುಡ್ ರೊಚ್ಚಿಗೇಳುವಂತೆ ಮಾಡಿತ್ತು.
ಈ ಸ್ಟಾರ್ ಜೋಡಿಯ ವಿಚ್ಛೇದನಕ್ಕೆ ಬಿಆರ್ಎಸ್ನ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ (KTR) ಕಾರಣ ಎಂದು ಸಚಿವೆ ಕೊಂಡ ಸುರೇಖಾ (Konda Surekha) ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ನಾಗ ಚೈತನ್ಯ ಹಾಗೂ ಸಮಂತಾ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ವಿಚ್ಛೇದನ ಕೊಡಲು ಕೆಟಿಆರ್ ಕಾರಣ ಎಂದು ಸಚಿವೆ ಗಂಭೀರ ಆರೋಪ ಮಾಡಿದ್ದಾರೆ ಅಲ್ಲದೆ ಸಮಂತಾ ಸೇರಿದಂತೆ ಚಿತ್ರರಂಗದ ಇತರ ನಟ ನಟಿಯರ ಜೀವನವನ್ನು ಹಾಳು ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಕೆಟಿಆರ್ ಅವರು ಸಚಿವರಾಗಿದ್ದಾಗ ಹಲವು ಸಿನಿಮಾ ನಾಯಕಿಯರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ಅವರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ಹಾಳು ಮಾಡಿದ್ದಾರೆ, ಆದರೆ ಈ ವಿಚಾರ ನನಗೆ ಮಾತ್ರವಲ್ಲದೆ ಚಿತ್ರರಂಗದ ಎಲ್ಲರಿಗೂ ಗೊತ್ತಿದೆ ಅದರೂ ಯಾರೂ ಹೇಳುತ್ತಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ನಾಗಾರ್ಜುನ್ ಕುಟುಂಬದ ಪರ ಇಡೀ ಟಾಲಿವುಡ್ ನಿಂತಿತ್ತು. ಸುರೇಖಾ ಹೇಳಿಕೆಗೆ ಅಕ್ಕಿನೇನಿ ನಾಗಾರ್ಜುನ್ ನಾಮಪಳ್ಳಿ ಕೋರ್ಟ್‌ನಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಿದ್ದರು.
ವಿವಾದ ಭುಗಿಲೆದ್ದ ಬಳಿಕ ಸುರೇಖಾ ಕ್ಷಮೆ ಕೇಳಿದ್ದರು. ನಟರ ವೈಯಕ್ತಿಕ ಜೀವನದ ಬಗ್ಗೆ ಬಾಯಿ ತಪ್ಪಿ ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆ ಗಳಿಂದ ಅವರ ಕುಟುಂಬಕ್ಕೆ ನೋವುಂಟಾಗಿದೆ. ಅದರಿಂದ ನನಗೂ ಬೇಸರವಾಗಿದ್ದು, ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ ಎಂದು ಸಚಿವೆ ಹೇಳಿದ್ದರು.
ರೇಣುಕಾಸ್ವಾಮಿ ಕೊಲೆ ನಟ ದರ್ಶನ್ ಬಂಧನ: ಚಂದನವನದ ಖ್ಯಾತ ನಟ ದರ್ಶನ್ (Actor Darshan) ಕೊಲೆ ಪ್ರಕರಣದಲ್ಲಿ ಬಂಧನವಾದ ಘಟನೆ ಈ ವರ್ಷ ಅತೀ ದೊಡ್ಡದಾಗಿ ಸದ್ದು ಮಾಡಿದ ವಿಚಾರ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ (Renukaswamy Case) ಎಂಬಾತನನ್ನು ಅಪಹರಣ ಮಾಡಿ ಬೆಂಗಳೂರಿನ ಶೆಡ್ ವೊಂದಕ್ಕೆ ಕರೆದು ಹಲ್ಲೆ ಮಾಡಿ ಆ ಬಳಿಕ ಹತ್ಯೆ ಮಾಡಲಾಗಿತ್ತು. ಕೃತ್ಯದ ಬಳಿಕ ಮೋರಿಯೊಂದರಲ್ಲಿ ಮೃತದೇಹವನ್ನು ಎಸೆಯಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೊದಲು ಮೈಸೂರಿನಲ್ಲಿ ದರ್ಶನ್ ಅವರನ್ನು ಬಂಧಿಸಿದ್ದರು. ದರ್ಶನ್ ಸೇರಿದಂತೆ ಮೊದಲಿಗೆ 10 ಜನರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು.
ಸುದೀರ್ಘವಾಗಿ ತನಿಖೆ ನಡೆಸಿದ ಪೊಲೀಸರು ದರ್ಶನ್ ವಿರುದ್ಧ 1,300 ಪುಟಗಳ ಪೂರಕ ಆರೋಪಪಟ್ಟಿ ಸಲ್ಲಿಸಿದ್ದರು. ದರ್ಶನ್ , ಪವಿತ್ರಾ ಗೌಡ ಸೇರಿದಂತೆ 18 ಮಂದಿಯ ವಿಚಾರಣೆ ಪೊಲೀಸರು ಮುಂದುವರೆಯುತ್ತಿದ್ದಂತೆ ಬಂಧಿಸಿದ್ದರು.
ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್‌ಗೆ ರಾಜ ಮರ್ಯಾದೆ ನೀಡಿದ ಫೋಟೋ ವಿಡಿಯೋಗಳು ವೈರಲ್ ಆಗಿತ್ತು. ಆ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಸದ್ಯ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಸ್ಟಾರ್ ನಟನೊಬ್ಬ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ವಿಚಾರ ರಾಷ್ಟ್ರವ್ಯಾಪಿ ಸುದ್ದಿ ವಾಹಿನಿಗಳಲ್ಲಿ ಹಾಟ್ ಟಾಪಿಕ್ ಆಗಿತ್ತು.
ಧನುಷ್ – ನಯನತಾರಾ ನಡುವೆ ಕೋಲ್ಡ್ ವಾರ್..
ಸಿನಿಮಾದ ದೃಶ್ಯವೊಂದನ್ನು ಬಳಸಲು ಅನುಮತಿ ಕೋರುವ ವಿಚಾರದಲ್ಲಿ ಕಾಲಿವುಡ್ ಸ್ಟಾರ್ ಕಲಾವಿದರಾದ ಧನುಷ್ (Dhanush) – ನಯನತಾರಾ (Nayanthara) ನಡುವೆ ಹುಟ್ಟಿದ ವಿವಾದ ಭುಗಿಲೆದ್ದಿದೆ.
ನೆಟ್ ಫ್ಲಿಕ್ಸ್‌ನಲ್ಲಿ ನಯನತಾರ ಜೀವನದ ಬಗ್ಗೆ ʼನಯನತಾರ:ಬಿಯಾಂಡ್ ದಿ ಫೇರೈಟೇಲ್ʼ (‘Nayanthara: Beyond the Fairytale’) ಡಾಕ್ಯುಮೆಂಟರಿ ಸ್ಟ್ರೀಮ್ ಆಗುತ್ತಿದೆ. ಇದರಲ್ಲಿ ಧನುಷ್ ನಿರ್ಮಾಣದ ‘ನಾನುಂ ರೌಡಿ ಧನ್’ ಸಿನಿಮಾದ ದೃಶ್ಯವನ್ನು ಬಳಸಲು ನಯನತಾರ ಅನುಮತಿಯನ್ನು ಕೇಳಿದ್ದರು. ಆದರೆ ಧನುಷ್ ಅನುಮತಿಯನ್ನು ನೀಡಿರಲಿಲ್ಲ. ಈ ಕಾರಣದಿಂದ ನಯನತಾರ ಸಾಕ್ಷ್ಯ ಚಿತ್ರದ ತಂಡದವರು ‘ನಾನುಂ ರೌಡಿ ಧನ್’ ಚಿತ್ರದ ತೆರೆಮರೆಯ ದೃಶ್ಯಗಳನ್ನು ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ಬಳಸಿಕೊಂಡಿದ್ದರು. ಈ ವಿಚಾರ ಅರಿತ ಧನುಷ್ ತಮ್ಮ ಅನುಮತಿಯಿಲ್ಲದೆ ದೃಶ್ಯವನ್ನು ಬಳಸಲಾಗಿದೆ ಎಂದು ಕಾಪಿ ರೈಟ್ಸ್ ನೋಟಿಸ್ ಕಳುಹಿಸಿ 10 ಕೋಟಿ ರೂ. ಬೇಡಿಕೆಯನ್ನಿಟ್ಟಿದ್ದರು.
ಈ ವಿಚಾರವಾಗಿ ನಯನತಾರಾ ಬಹಿರಂಗ ಪತ್ರವೊಂದನ್ನು ಬರೆದು ಧನುಷ್ ಮೇಲಿನ ಅಸಮಾಧಾನವನ್ನು ಹೊರಹಾಕಿದ್ದರು.
ಈ ಸಾಕ್ಷ್ಯ ಚಿತ್ರದಲ್ಲಿ ನನ್ನ ಜೀವನದ ಸುಂದರ ಕ್ಷಣಗಳನ್ನು ಸೇರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಆದರೆ ನಿಮ್ಮ ಈ ವರ್ತನೆ ನಮಗೆ ನೋವು ತಂದಿದೆ. ನನ್ನ ಈ ಸಾಕ್ಷ್ಯಚಿತ್ರಕ್ಕೆ ನಿಮ್ಮ ಚಿತ್ರದ ಕೆಲವು ಕ್ಲಿಪ್ಸ್ ಬಳಸಿಕೊಳ್ಳುತ್ತೇವೆ ಎಂದು 2 ವರ್ಷಗಳ ಹಿಂದೆಯೇ NOC (ನಿರಪೇಕ್ಷಣಾ ಪತ್ರ) ಕೂಡ ಕೇಳಿದ್ದೇವು. NOC ಕೊಡದ ನೀವು ಇದೀಗ ಟ್ರೈಲರ್ ರಿಲೀಸ್ ಆದ್ಮೇಲೆ ಲೀಗಲ್ ನೋಟಿಸ್ ಕಳಿಸೋದು ಎಷ್ಟು ಸರಿ ಹೇಳಿ? ಇದೊಂದು ರೀತಿ ವೈಯಕ್ತಿಕ ದ್ವೇಷದಂತೆ ಇದೆ. ಒಬ್ಬ ನಿರ್ಮಾಪಕನಾಗಿ ನೀವು ಕಲಾವಿದನೊಬ್ಬ ವೈಯಕ್ತಿಕ ಜೀವನ ಹಾಗೂ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದೇ. ಈ ಸಂಬಂಧ ಯಾವುದೇ ರೀತಿಯ ಕ್ರಮವನ್ನು ಎದುರಿಸಲು ನಾವು ಸಿದ್ದರಿದ್ದೇವೆ. 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದಕ್ಕೆ ನೀವು ಕಾಪಿ ರೈಟ್ಸ್ ನೋಟಿಸ್ ಕಳುಹಿಸಿದ್ದೀರಿ. ಇದು ನಿಮ್ಮ ವ್ಯಕ್ತಿತ್ವ ಏನು ಎನ್ನುವುದನ್ನು ತೋರಿಸುತ್ತದೆ ಎಂದು ಧನುಷ್‌ಗೆ ನಯನತಾರ ಪತ್ರದ ಮೂಲಕ ಹೇಳಿದ್ದರು.
ಇದಕ್ಕೆ ಉತ್ತರವಾಗಿ ಧನುಷ್ ನಟ ನಯನತಾರಾ, ಪತಿ ವಿಘ್ನೇಶ್ ಶಿವನ್ ಮತ್ತು ದಂಪತಿಯ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ , ಇತರ ಇಬ್ಬರ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು.
ತಿರುಪತಿ ಲಡ್ಡು ವಿವಾದ: ಕಾರ್ತಿ ಮೇಲೆ ರೇಗಾಡಿದ ಪವನ್ ಕಲ್ಯಾಣ್:
ತಿರುಪತಿ ದೇವಸ್ಥಾನದ ಪ್ರಸಾದ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಗುಣಮಟ್ಟವಿಲ್ಲದ ತುಪ್ಪವನ್ನು ಬಳಸಿತ್ತು ಎಂಬ ಎನ್ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರ್ಕಾರದ ಆರೋಪ ಮಾಡಿತ್ತು. ಇದು ಆಂಧ್ರದಲ್ಲಿ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು.
ಈ ಸಂಬಂಧ ನಟ ಕಾರ್ತಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಿರೂಪಕಿ ಲಡ್ಡು ಕುರಿತು ಕೇಳಿದ ಪ್ರಶ್ನೆಗೆ ” ಲಡ್ಡು ಬಗ್ಗೆ ಈಗ ಮಾತಾಡುವುದು ಬೇಡ. ಇದೊಂದು ಸೂಕ್ಷ್ಮ ವಿಷಯ.” ಎಂದು ಹೇಳಿದ್ದರು.
ಇದು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಆಕ್ರೋಶದ ನುಡಿಗೆ ಕಾರಣವಾಗಿತ್ತು.
“ಸಿನಿಮಾ ಸಮಾರಂಭದಲ್ಲಿ ಲಡ್ಡು ಸೂಕ್ಷ್ಮ ವಿಷಯವೆಂದು ತಮಾಷೆ ಮಾಡಿದ್ದಾರೆ. ಮತ್ತೆ ಹೀಗೆ ಹೇಳಬಾರದು. ಒಬ್ಬ ಸಿನಿಮಾ ಪ್ರೇಕ್ಷಕನಾಗಿ ಕಲಾವಿದರ ಬಗ್ಗೆ ಗೌರವವಿದೆ. ಸಂಪ್ರದಾಯವನನ್ನು ಗೌರವಿಸಬೇಕು. ಏನಾದರೂ ಹೇಳುವುದಕ್ಕೂ ಮುನ್ನ ನೂರು ಬಾರಿ ಯೋಚಿಸಿ ಆಮೇಲೆ ಮಾತಾಡಬೇಕು” ಎಂದಿದ್ದರು.
ಇದಾದ ಬಳಿಕ ಪವನ್ ಕಲ್ಯಾಣ್ ಬಳಿ ಕಾರ್ತಿ ಕ್ಷಮೆಯಾಚಿಸಿದ್ದರು.
ಖ್ಯಾತನಾಮರ ಮುಖವಾಡ ಬಯಲು ಮಾಡಿದ ಹೇಮಾ ಸಮತಿ ವರದಿ:
ಮಲಯಾಳಂ ಚಿತ್ರೋದ್ಯಮದಲ್ಲಿ ಈ ವರ್ಷ ಹೇಮಾ ಸಮತಿ ವರದಿ (Hema Committee Report) ವಿಚಾರ ಅತೀ ದೊಡ್ಡದಾಗಿ ಚರ್ಚೆ ಆಗಿತ್ತು. ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಅನೇಕ ನಟಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.
ನಿರ್ದೇಶಕ ರಂಜಿತ್, ನಟ ಸಿದ್ದಿಕ್, ನಟ ಜಯಸೂರ್ಯ ಮತ್ತು ನಟ- ರಾಜಕಾರಣಿ ಮುಖೇಶ್ ಸೇರಿದಂತೆ ಚಿತ್ರರಂಗದ ಹಲವಾರು ಖ್ಯಾತರ ವಿರುದ್ಧ ದೂರು ದಾಖಲಾಗಿತ್ತು.
ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಮಾಲಿವುಡ್ ಸಿನಿರಂಗದ ಹಿರಿಯ ನಟರಾದ ಮೋಹನ್ ಲಾಲ್(Mohanlal) ಹಾಗೂ ಮಮ್ಮುಟ್ಟಿ(Mammootty) “ಹೇಮಾ ಸಮಿತಿಯ ವರದಿಯಲ್ಲಿ ಹೇಳಲಾದ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ” ಎಂದು ಹೇಳುವ ಮೂಲಕ ಮೌನ ಮುರಿದಿದ್ದರು.
ಇದೇ ಸಂದರ್ಭದಲ್ಲಿ ನಟ ಮೋಹನ್ ಲಾಲ್ ಅವರು ʼಅಮ್ಮಾʼ ಕಮಿಟಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಒಟ್ಟಿನಲ್ಲಿ ಹೇಮಾ ಸಮಿತಿ ವರದಿ ದೊಡ್ಡ ಸಂಚಲನ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ. ಹೇಮಾ ಸಮಿತಿಯಂತೆ ನಮ್ಮಲ್ಲೂ ಇಂತಹ ಸಮಿತಿ ರಚನೆ ಆಗಬೇಕೆಂದು ಕಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಕೂಗು ಕೇಳಿ ಬಂದಿತ್ತು.
ನಟಿ ಹಿಂಭಾಗ ಮುಟ್ಟಿದ ಹಿರಿಯ ನಟ ಬಾಲಯ್ಯ: ಭುಗಿಲೆದ್ದ ಆಕ್ರೋಶ:
ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುವ ತೆಲುಗು ನಟ ಬಾಲಕೃಷ್ಣ (Nandamuri Balakrishna) ಈ ವರ್ಷ ಸಿನಿಮಾದ ಪ್ರಚಾರ ಕಾರ್ಯಕ್ರವೊಂದಲ್ಲಿ ನಟಿಯೊಬ್ಬರ ಹಿಂಭಾಗ ಮುಟ್ಟಿ ವಿವಾದಕ್ಕೀಡಾಗಿದ್ದು ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಅದೇ ಕಾರ್ಯಕ್ರಮದಲ್ಲಿ ಬಾಲಯ್ಯ ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಆಗಮಿಸಿದ ವೇಳೆ ಅಂಜಲಿ ಅವರನ್ನು ಒಮ್ಮೆಗೆ ದೂಡಿದ್ದರು. ಇದರಿಂದ ಒಂದು ಕ್ಷಣಕ್ಕೆ ಒಳಗಾದ ನಟಿ ಅದನ್ನು ತೋರಿಸದೆ ನಕ್ಕು ಸುಮ್ಮನಾಗಿದ್ದರು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇಂಟರ್ ನೆಟ್ ಬಾಲಯ್ಯ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟಿಯೇ ಈ ಬಗ್ಗೆ “ನಾವು ಬಹಳ ಸಮಯದಿಂದ ಪರಸ್ಪರ ಉತ್ತಮ ಸ್ನೇಹದ ಜೊತೆ ಗೌರವವನ್ನು ಹೊಂದಿದ್ದೇವೆ” ಎಂದು ಹೈ-ಫೈವ್ ಮಾಡುವ ವಿಡಿಯೋವನ್ನು ಹಂಚಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದರು.
ಲೈಂಗಿಕ ಕಿರುಕುಳ ಜಾನಿ ಮಾಸ್ಟರ್ ಬಂಧನ:
ತನ್ನ ಜತೆ ಕೆಲಸ ಮಾಡುತ್ತಿದ್ದ 21 ವರ್ಷದ ನೃತ್ಯ ಸಂಯೋಜಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೆಪ್ಡೆಂಬರ್ ತಿಂಗಳಿನಲ್ಲಿ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ (Jani Master) ಅವರನ್ನು ಬಂಧಿಸಲಾಗಿತ್ತು.
ಜಾನಿ ಮಾಸ್ಟರ್ ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಳು.
ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನಾರ್ಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಳು.
ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಬಂಧಿಸಿದ್ದರು.ಇದೇ ಸಮಯದಲ್ಲಿ ಜಾನಿ ಮಾಸ್ಟರ್ಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಅಮಾನತಿನಲ್ಲಿ ಇಟ್ಟಿತ್ತು.
ಅಕ್ಟೋಬರ್‌ನಲ್ಲಿ ಜಾನಿ ಮಾಸ್ಟರ್ ಅವರಿಗೆ ಜಾಮೀನು ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.