2.40 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ಗೆ ಅಸ್ತು
ಧನ ವಿನಿಯೋಗ ಮಸೂದೆಗಳಿಗೆ ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ
Team Udayavani, Oct 13, 2019, 5:54 AM IST
ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ 2.40 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಶನಿವಾರ ಉಭಯ ಸದನಗಳಲ್ಲಿ ಅನುಮೋದನೆ ಲಭಿಸಿದ ಬಳಿಕ ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಎರಡನೇ ಕಂತಿನಲ್ಲಿ 7,927 ಕೋ.ರೂ. ಪೂರಕ ಅಂದಾಜು ಒಳಗೊಂಡಂತೆ 2019-2020ನೇ ಸಾಲಿನಲ್ಲಿ 2,40,74,585 ರೂ. ವೆಚ್ಚದ ಎರಡು ಧನ ವಿನಿಯೋಗ ಮಸೂದೆಗಳನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಿಗೆ 80,168 ಕೋ.ರೂ. ಲೇಖಾನುದಾನ ಪಡೆಯಲಾಗಿತ್ತು. ಅನಂತರದ 3 ತಿಂಗಳುಗಳಿಗೆ 2ನೇ ಬಾರಿ 62,751 ಕೋ. ರೂ. ಲೇಖಾನುದಾನ ಪಡೆಯಲಾಗಿತ್ತು. ಈಗ ಬಜೆಟ್‌ಗೆ ಅನುಮೋದನೆ ಪಡೆಯಲಾಗಿದೆ. ರಾಜಸ್ವ ವೆಚ್ಚಕ್ಕೆ 1,84,649 ಕೋ. ರೂ. ಮತ್ತು ಬಂಡವಾಳ ವೆಚ್ಚಗಳಿಗೆ 56,096 ಕೋ. ರೂ. ವಿನಿಯೋಗಿಸುವುದಾಗಿ ಯಡಿಯೂರಪ್ಪ ಸದನಕ್ಕೆ ತಿಳಿಸಿದರು. ಇದರಲ್ಲಿ 9,964 ಕೋ. ರೂ. ಸಾರ್ವಜನಿಕ ಸಾಲವಿರುವುದಾಗಿಯೂ ಹೇಳಿದರು.
ಶನಿವಾರ ಬೆಳಗ್ಗೆ ಕಲಾಪ ಆರಂಭವಾದ ತತ್‌ಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧನವಿನಿಯೋಗ ಮಸೂದೆಗಳನ್ನು ಮಂಡಿಸಿದರು.
2018-19ನೇ ವರ್ಷಾಂತ್ಯಕ್ಕೆ 2,85,238 ಕೋ.ರೂ. ಸಾಲವಿದ್ದು, ಜಿಎಸ್‌ಡಿಪಿಯ ಶೇ.20.26 ರಷ್ಟಿದೆ. 2019-2020ರ ವರ್ಷಾಂತ್ಯಕ್ಕೆ ಒಟ್ಟು ಸಾಲ ಮೊತ್ತವು 3,27,209 ಕೋ. ರೂ.ಗಳಷ್ಟಾಗುವ ಅಂದಾಜು ಇದೆ. ಇದು ಸಹ ಶೇ.19.26ರಷ್ಟು ಎಂದು ಅಂದಾಜಿಸಲಾಗಿದೆ. ಇದು ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಶೇ.25ರ ಮಿತಿಯೊಳಗಿರುತ್ತದೆ ಎಂದು ತಿಳಿಸಿದರು.
ಹಿಂದಿನ ಸಮ್ಮಿಶ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅತಿವೃಷ್ಟಿ ಹಿನ್ನೆಲೆಯಲ್ಲಿ ಪೂರಕ ಅಂದಾಜುಗಳನ್ನು ಇತಿಮಿತಿಗಳಲ್ಲೇ ತೆರಿಗೆ ಸಂಗ್ರಹಿಸುವ ಗುರಿ ಇದೆ ಎಂದು ಹೇಳಿದರು.
ಎರಡೆರಡು ಬಾರಿ ಲೇಖಾನುದಾನ ಬೇಡ
ಧನಿವಿನಿಯೋಗ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಸಕ್ತ ಹಣಕಾಸು ವರ್ಷದ ಏಳು ತಿಂಗಳುಗಳು ಪೂರ್ಣಗೊಂಡಿದ್ದು, ಬಾಕಿ ಇರುವ ಐದು ತಿಂಗಳುಗಳಿಗೆ ಬಜೆಟ್ ಅನುಮೋದನೆ ಪಡೆಯಬೇಕಿದೆ. ಈಗಾಗಲೇ ಏಳು ತಿಂಗಳುಗಳಿಗೆ ಲೇಖಾನುದಾನ ಬಳಕೆಗೆ ಅನುಮೋದನೆ ಪಡೆಯಲಾಗಿದೆ. ಕಳೆದ ಜು.29ರಂದೇ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯುವಂತೆ ಹೇಳಿದ್ದೆ. ಆದರೂ ಸರಕಾರ ಲೇಖಾನುದಾನ ಪಡೆಯಿತು. ಹಾಗಾಗಿ ಹೊಸ ಬಜೆಟ್ ಮಂಡಿಸುವ ನಿರೀಕ್ಷೆ ಇತ್ತು. ಆದರೆ ಹಳೆಯ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತಿದೆ. ಮುಂದಾದರೂ ಎರಡೆರಡು ಬಾರಿ ಲೇಖಾನುದಾನ ಪಡೆಯುವುದನ್ನು ಕೊನೆಗಾಣಿಸಬೇಕು ಎಂದು ಹೇಳಿದರು.
ಸಂಪನ್ಮೂಲ ಬಳಕೆಗೆ ಸಲಹೆ
ಜೆಡಿಎಸ್ ಶಾಸಕಾಂಗ ನಾಯಕ ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, ಭೀಕರ ನೆರೆಯಿಂದಾಗಿ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇದ್ದು, ಸಂಪನ್ಮೂಲದ ಸದ್ಬಳಕೆಗೆ ಗಮನ ನೀಡಬೇಕು. 2017-18ನೇ ಸಾಲಿನಲ್ಲಿ 17,000 ಕೋ. ರೂ. ಖರ್ಚಾಗದೆ ಉಳಿದಿದೆ ಎಂದು ಮಹಾಲೇಖಪಾಲರ ವರದಿಯಲ್ಲಿದೆ. ಪೂರಕ ಅಂದಾಜಿನಲ್ಲೂ 2,500 ಕೋ. ರೂ. ಖರ್ಚಾಗದೆ ಉಳಿದಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಎರಡೂ ಸದನಗಳ ಒಪ್ಪಿಗೆ
ವಿಪಕ್ಷಗಳ ಸಲಹೆ, ಸೂಚನೆಯನ್ನು ಆಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರಾಜ್ಯದ ಹಣಕಾಸು ಸ್ಥಿತಿಗೆ ಅನುಗುಣವಾಗಿ ಎಲ್ಲರ ನಿರೀಕ್ಷೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ವಿಧಾನಸಭೆಯಲ್ಲಿ ಧನವಿನಿಯೋಗ ಮಸೂದೆಗೆ ಒಪ್ಪಿಗೆ ಪಡೆದ ಬಳಿಕ ವಿಧಾನ ಪರಿಷತ್‌ನಲ್ಲೂ ಸಿಎಂ ಯಡಿಯೂರಪ್ಪ ಮಸೂದೆಗಳನ್ನು ಮಂಡಿಸಿ ಸದನದ ಅನುಮೋದನೆ ಪಡೆದುಕೊಂಡರು.
ತೆರಿಗೆ ಸಂಗ್ರಹ ಗುರಿ ತಲುಪುವ ನಿರೀಕ್ಷೆ
ರಾಜ್ಯದ ತೆರಿಗೆ ಮೂಲದ ಆದಾಯ ಉತ್ತಮವಾಗಿದೆ. ರಾಜ್ಯದ ಸ್ವಂತ ತೆರಿಗೆ ಸಂಗ್ರಹವು ಹಿಂದಿನ ವರ್ಷದ 1,06,621 ಕೋ. ರೂ.ಗೆ ಹೋಲಿಸಿದರೆ ಶೇ.11.6ರಷ್ಟು ಬೆಳವಣಿಗೆಯಾಗುವ ಅಂದಾಜಿದೆ. ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ತೆರಿಗೆಯು ಬಜೆಟ್ ಅಂದಾಜಿನಂತೆ ಸಂಗ್ರಹವಾಗುತ್ತಿದೆ. ಮೋಟಾರು ವಾಹನಗಳ ಮಾರಾಟ ದೇಶಾದ್ಯಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ಮೊದಲಾರ್ಧದ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ಮುಂದಿನ ಆರು ತಿಂಗಳುಗಳಲ್ಲಿ ಬೇಡಿಕೆ ಹೆಚ್ಚಾಗಿ ಪೂರ್ಣ ತೆರಿಗೆ ಸಂಗ್ರಹ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಯಡಿಯೂರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.