@2019: ಅಚ್ಚರಿ ಬೆಳವಣಿಗೆಗೆ ಕಾರಣವಾದ ರಾಷ್ಟ್ರ ರಾಜಕಾರಣದ ಪ್ರಮುಖ ಘಟನೆಗಳು
ಲೋಕಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
Team Udayavani, Dec 31, 2019, 4:24 PM IST
ಪ್ರತಿವರ್ಷವೂ ಕಾಲಚಕ್ರ ಉರುಳುತ್ತಾ ಸಾಗುತ್ತದೆ. ಹಳೆ ಕ್ಯಾಲಂಡರಿನ ಜಾಗದಲ್ಲಿ ಹೊಸ ಕ್ಯಾಲೆಂಡರ್ ಸ್ಥಾನ ಪಡೆಯಲಿದೆ. ಇದೀಗ 2019ಕ್ಕೆ ವಿದಾಯ ಹೇಳಿ ಹೊಸ ವರುಷಕ್ಕೆ(2020) ಕಾಲಿಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ ಇಲ್ಲಿದೆ.
ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿದ್ದ ನರೇಂದ್ರ ಮೋದಿ:
2019ರ ಏಪ್ರಿಲ್ ನಿಂದ ಮೇ ವರೆಗೆ ದೇಶದಲ್ಲಿ ನಡೆದ ಹೈವೋಲ್ಟೇಜ್ ನ 17ನೇ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 303 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಚಂಡ ಬಹುಮತ ಪಡೆದು 2ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿತ್ತು. ಅಷ್ಟೇ ಅಲ್ಲ ಬಿಜೆಪಿ ಮೈತ್ರಿಕೂಟ 353 ಸ್ಥಾನ ಗಳಿಸಿತ್ತು. ಪ್ರತಿಪಕ್ಷ ಕಾಂಗ್ರೆಸ್ 52 ಸ್ಥಾನ ಪಡೆದು ಹೀನಾಯವಾಗಿ ಮುಖಭಂಗ ಅನುಭವಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ 91 ಸ್ಥಾನ, ಇತರ ಮೈತ್ರಿಕೂಟ 98 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಪಕ್ಷದ ಅಧ್ಯಕ್ಷಗಾದಿ ತೊರೆದ ರಾಹುಲ್ ಗಾಂಧಿ:
ನೋಟು ಅಮಾನ್ಯೀಕರಣ, ಜಿಎಸ್ ಟಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಪಡೆಯಲಿದೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಲೋಕಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಿರಿಯ, ಕಿರಿಯ ಮುಖಂಡರು ರಾಹುಲ್ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ನಡೆಸಿದರೂ ರಾಹುಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಜಮ್ಮು-ಕಾಶ್ಮೀರ ವಿಶೇಷ 370ನೇ ವಿಧಿ ರದ್ದು
ಭಾರತದ ಮುಕುಟ ಮಣಿಯಂತಿದ್ದ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಈ ನಿರ್ಧಾರದಿಂದ ವಿಪಕ್ಷಗಳು ಪ್ರತಿಭಟಿಸಿದ್ದವು. ಆದರೆ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಶಾಲಾ, ಕಾಲೇಜಿಗೆ ರಜೆ ಘೋಷಿಸಿ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿ, ಸಾವಿರಾರು ಯೋಧರನ್ನು ಕಣಿವೆ ರಾಜ್ಯದಲ್ಲಿ ನಿಯೋಜಿಸಿತ್ತು. 370ನೇ ವಿಧಿ ರದ್ದತಿ ಬಗ್ಗೆ ಪಾಕಿಸ್ತಾನ ಸಾಕಷ್ಟು ಕ್ಯಾತೆ ತೆಗೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರವನ್ನು ಪ್ರಸ್ತಾಪಿಸಿ ಕೊನೆಗೆ ಮುಖಭಂಗ ಅನುಭವಿಸಿತ್ತು.
ಐಎನ್ ಎಕ್ಸ್ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಬಂಧನ
ರಾಷ್ಟ್ರ ರಾಜಕಾರಣದ ಸುಮಾರು 27 ಗಂಟೆಗಳ ಹೈಡ್ರಾಮಾದ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ಐಎನ್ ಎಕ್ಸ್ ಮೀಡಿಯಾ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಈ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತ್ತು. ಸುಪ್ರೀಂಕೋರ್ಟ್ ಪ್ರಕರಣದಲ್ಲಿ ಮೂರು ತಿಂಗಳ ಬಳಿಕ ಚಿದಂಬರಂಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ತ್ರಿವಳಿ ತಲಾಖ್ ರದ್ದು:
ಲೋಕಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿಯೇ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಪಕ್ಷಗಳ ಹಾಗೂ ಮುಸ್ಲಿಂ ಸಮುದಾಯದ ವಿರೋಧವನ್ನು ಲೆಕ್ಕಿಸದೆ ಮಹತ್ವದ ತ್ರಿವಳಿ ತಲಾಖ್ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ತ್ರಿವಳಿ ತಲಾಖ್ ಅಸಾಂವಿಧಾನಿಕ ಕ್ರಮ ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿತ್ತು. ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಯಾಗಿದ್ದು, ಏಕಕಾಲಕ್ಕೆ ತಲಾಖ್ ನೀಡಿದರೆ ಕಾನೂನು ಪ್ರಕಾರ ಪತಿ ಶಿಕ್ಷೆಗೆ ಗುರಿಯಾಗಲಿದ್ದಾನೆ.
ರಾಷ್ಟ್ರೀಯ ಪೌರತ್ವ ನೋಂದಣಿ/ಪೌರತ್ವ ತಿದ್ದುಪಡಿ ಕಾಯ್ದೆ (ಎನ್ ಆರ್ ಸಿ/ಸಿಎಎ):
ಅಸ್ಸಾಂನಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಎನ್ ಆರ್ ಸಿಯನ್ನು ಜಾರಿಗೊಳಿಸಿತ್ತು. ನಂತರ ಕೇಂದ್ರ ಸರ್ಕಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಇದು ನೆರೆಯ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಕಾಯಂ ಪೌರತ್ವ ನೀಡುವ ಕಾಯ್ದೆಯಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿ ಎಂದು ವಿಪಕ್ಷಗಳು ಆರೋಪಿಸಿದ್ದು, ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆಯಿತು.
ಪಂಚರಾಜ್ಯಗಳಲ್ಲಿ ಸೋಲು:
ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಸಾಧಿಸಿದ್ದ ಭಾರತೀಯ ಜನತಾ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢ, ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೇ ಸೋಲನ್ನನುಭವಿಸಿದೆ. ಈ ವರ್ಷದ ನಡೆದ ಚುನಾವಣೆಯಲ್ಲಿ ಬಿಜೆಪಿ ಐದು ರಾಜ್ಯಗಳನ್ನು ಕಳೆದುಕೊಂಡಿದೆ.
ಸಿಕ್ಕಿಂ, ಅರುಣಾಚಲದಲ್ಲಿ ಕೈ ಸುಟ್ಟುಕೊಂಡ ಕಾಂಗ್ರೆಸ್:
ಸಿಕ್ಕಿಂ, ಅರುಣಾಚಲಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿತ್ತು. ಸಿಕ್ಕಿಂ ಕ್ರಾಂತಿ ಮೋರ್ಚಾ ಹದಿನೇಳು ಸ್ಥಾನಗಳನ್ನು ಪಡೆದು ಬಹುಮತ ಪಡೆದಿತ್ತು. ಮತ್ತೊಂದು ಪ್ರಾದೇಶಿಕ ಪಕ್ಷ ಎಸ್ ಡಿಎಫ್ 15 ಸ್ಥಾನ ಗಳಿಸಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್, ಬಿಜೆಪಿ ಶೂನ್ಯ ಸಂಪಾದನೆ ಗಳಿಸಿ ಮುಖಭಂಗ ಅನುಭವಿಸಿತ್ತು. ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 41 ಸ್ಥಾನ ಪಡೆದು ಗದ್ದುಗೆ ಏರಿದ್ದರೆ, ಕಾಂಗ್ರೆಸ್ ಪಕ್ಷ ಕೇವಲ ನಾಲ್ಕು ಸ್ಥಾನ ಗಳಿಸಿ ತೀವ್ರ ಮುಖಭಂಗ ಅನುಭವಿಸಿತ್ತು.
ಟಾಪ್ ನ್ಯೂಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ