ಪಣಜಿಯಲ್ಲಿ 53ನೇ ಇಫಿ ಚಿತ್ರೋತ್ಸವಕ್ಕೆ ಚಾಲನೆ: ಸಿನೆಮಾ ಬೆಳೆಯಲಿ, ಬೆಳಗಲಿ ನಾಳೆಗೂ ಉಳಿಯಲಿ
Team Udayavani, Nov 21, 2022, 12:29 AM IST
ಪಣಜಿ: ಸಿನೆಮಾ ಉಳಿಯಲಿ, ಬೆಳೆಯಲಿ-ಬೆಳೆಯಲಿ, ನಾಳೆಗೂ ಉಳಿಯಲಿ. ಭಾರತ ಸಿನೆಮಾ ವಿಶ್ವದ ಕೇಂದ್ರವಾಗಲಿ. ಇಂಥದೊಂದು ಸಮಗ್ರ ಭಾವ ಮೂಡಿದ್ದು ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ 53ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ.
ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರತೀ ಅತಿಥಿಗಳು, ಕಲಾವಿದರ ಸಮೂಹ ಏಕತೆಯಿಂದ ಜೈ ಎಂದಿದ್ದು ಸಿನೆಮಾ ಸಂಸ್ಕೃತಿಗೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎನ್‌ಎಫ್‌ಡಿಸಿ ಯ ಮುಂದಾಳತ್ವದಲ್ಲಿ ನಡೆದ ಪ್ರಥಮ ಇಫಿ ಉತ್ಸವವಿದು. ಉತ್ಸವವು ಕಳೆದ ವರ್ಷದಿಂದಲೇ ಪ್ರಾಯೋಜಕರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಾರಂಭಿಸಿದೆ. ಅದು ಈ ವರ್ಷದ ಇನ್ನಷ್ಟು ಮುಂದುವರಿ ದಿದೆ. ಅತಿಥಿಗಳು ದೀಪ ಬೆಳಗುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಘೋಷಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಈ ಬಾರಿ ಮೊದಲ ಬಾರಿಗೆ ಉದ್ಘಾಟನ ಸಮಾರಂಭಕ್ಕಿಂತ ಮೊದಲೇ ಉದ್ಘಾಟನ ಚಿತ್ರ ಡಯಟರ್ ಬರ್ನರ್ ಅವರ ಆಲ್ಮ ಆ್ಯಂಡ್ ಆಸ್ಕರ್ ಅನ್ನು 4 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು.
ಸ್ಪ್ಯಾನಿಷ್ ಸಿನೆಮಾ ನಿರ್ದೇಶಕ ಕಾರ್ಲೊಸ್ ಸೌರಾ ಅವರಿಗೆ ಸತ್ಯಜಿತ್ ರೇ ಜೀವಿತಾವಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪುತ್ರಿ ಆನಾ ಸೌರಾ ಗೌರವ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಈ ವರ್ಷದ ಭಾರತೀಯ ಸಿನೆಮಾ ಸಾಧಕ ಪ್ರಶಸ್ತಿಯನ್ನು ತೆಲುಗಿನ ಹಿರಿಯ ನಟ ಚಿರಂಜೀವಿಯವರಿಗೆ ಘೋಷಿಸಲಾಯಿತು. ಉತ್ಸವದ ಸಮಾರೋಪ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, “ಭಾವನೆ, ಕನಸು, ಭರವಸೆಗಳನ್ನು ಹೇಳು ವಂಥದ್ದು ಸಿನೆಮಾ. ನಮ್ಮ ದೇಶದಲ್ಲಿ ಕಥೆಗಳಿವೆ, ಕಥೆಗಾರರಿದ್ದಾರೆ, ತಾಂತ್ರಿಕ ವರ್ಗವೂ ಇದೆ- ನಾವು ಸಾಧಿಸುತ್ತೇವೆಂಬ ಅಗಾಧವಾದ ನಂಬಿಕೆ ನಮ್ಮೊಳಗಿರ ಬೇಕು. ಅದೂ ಸಾಧ್ಯವಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಸಿನೆಮಾ ಕ್ಷೇತ್ರದಲ್ಲೂ ಭಾರತವೇ ವಿಶ್ವಗುರುವಾಗಲಿದೆ’ ಎಂದು ಭವಿಷ್ಯ ನುಡಿದರು.
ಕಾನ್ ಮಾದರಿಯ ರೂಪ: ಈ ಬಾರಿ ಫಿಲ್ಮ್ ಬಜಾರ್ ಅನ್ನು ಹೊಸ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಕಾನ್ ಮತ್ತಿತರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಮಾದರಿಯಲ್ಲೇ ರೂಪಿಸಲಾಗಿದ್ದು, ವಿವಿಧ ದೇಶಗಳ ಪೆವಿಲಿಯನ್ಗಳನ್ನೂ ನಿರ್ಮಿಸಲಾಗಿದೆ. ವಿವಿಧ ದೇಶಗಳ ಸಿನೆಮಾಕರ್ತರೂ ಭಾಗವಹಿಸಿದ್ದಾರೆ. ಟೆಕ್ನಾಲಜಿಯ ತಾಣವೂ ಆಗಿದೆ ಎಂದರು.
ಐವತ್ತಾಲ್ಕನೇ ಚಿತ್ರೊತ್ಸವಕ್ಕೆ ಏನೇನು ಸೇರಿಸಬೇಕು? ಏನೇನು ಇರಬೇಕು? ಎಂಬುದಕ್ಕೆ ಸಾರ್ವಜನಿಕರೂ ಸಲಹೆ ನೀಡಬಹುದು ಎಂದು ಸಚಿವರು ತಿಳಿಸಿದರು.
ನಮ್ಮ ಸಂಸ್ಕತಿಯ ಸಿರಿವಂತಿಕೆಯಿಂದಲೇ ಎಳೆಗಳನ್ನು ಪಡೆದು ಸಿನೆಮಾಗಳನ್ನು ಮಾಡಲಾಯಿತು ಎಂದು ಹೇಳಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಮುರುಗನ್, ಕೇಂದ್ರ ಸರಕಾರವೂ ಸಿನೆಮಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. “ಗೋವಾವನ್ನು ಒಂದು ಸೂಕ್ತ ಹಾಗೂ ಸಮರ್ಥ ಸಿನೆಮಾ ಉದ್ಯಮದ ತಾಣವನ್ನಾಗಿ ರೂಪಿ ಸುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಪೂರಕವಾದ ಸಮಗ್ರ ನೀತಿಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು. ಸಿನೆಮಾ ಉದ್ಯಮಕ್ಕೆ ಪೂರಕವಾದ ಹೂಡಿಕೆಗೆ ಹಾಗೂ ಹೂಡಿಕೆದಾರರನ್ನು ಗೋವಾ ಸ್ವಾಗತಿಸುತ್ತದೆ’ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.
ಇಫಿ ಉತ್ಸವವನ್ನು ತನ್ನದೇ ಆದ ಬೃಹತ್ ಕ್ಯಾಂಪಸ್‌ನಲ್ಲಿ ನಡೆಸಬೇಕೆಂಬ ಕನಸು ನಿಜವಾಗುವ ಕಾಲ ಬಂದಿದೆ. ಯೋಜನೆಯು ಅನುಷ್ಠಾನ ಹಂತದಲ್ಲಿದ್ದು, ಶೀಘ್ರವೇ ಕಾರ್ಯಾರಂಭವಾಗಲಿದೆ. 2025ಕ್ಕೆ ಇಫಿ ಉತ್ಸವ 25 ಎಕ್ರೆಯ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.
ಗೌರವ ಸಮರ್ಪಣೆ: “ಇಂದು ಸಿನೆಮಾ ಕ್ಷೇತ್ರ ಸಂಪೂರ್ಣ ಪ್ರಜಾಸತ್ತಾತ್ಮಕವಾಗಿದೆ. ಎಲ್ಲಿಂದಲಾದರೂ ಪ್ರತಿಭೆ ಯೊಂದು ಅದ್ಭುತವಾಗಿ ಬೆಳಗಬಹುದು, ಎಲ್ಲರೂ ತಮ್ಮ ತಮ್ಮ ಕಥೆಯನ್ನು ಹೇಳಬಹುದು. ಇದೊಂದು ಆರೋಗ್ಯಕರ ಬೆಳವಣಿಗೆ’ ಎಂದವರು ಸಮ್ಮಾನಿತರಾದ ನಟ ಮನೋಜ್ ಬಾಜಪೇಯಿ.
ನಟ ಸುನಿಲ್ ಶೆಟ್ಟಿ ಮಾತನಾಡಿ, “ಸಂತೋಷವೇ ಬದುಕಿನ ಗುಟ್ಟು. ಸಿನೆಮಾ ಉದ್ಯಮ ಬೆಳೆಯಲಿ’ ಎಂದರು. ಮತ್ತೂಬ್ಬ ನಟ ಅಜಯ್ ದೇವಗನ್ ಸಹ, “ಸಿನೆಮಾ ನನಗೆ ಇಷ್ಟ. ಅದು ಬೆಳೆಯಬೇಕು’ ಎಂದಷ್ಟೇ ಹೇಳಿದರು. ಹಿರಿಯ ನಟ ಪರೇಶ್ ರಾವಲ್ ಸಹ, ಒಳ್ಳೆಯ ಕಥೆಗಾರರು, ಒಳ್ಳೆಯ ನಿರ್ದೇಶಕರು ಸಿಕ್ಕಿದ್ದರಿಂದ ಒಳ್ಳೆಯ ಪಾತ್ರಗಳನ್ನು ಮಾಡಲು ಸಾಧ್ಯವಾಯಿತು ಎಂದು ಹೇಳಲು ಮರೆ ಯಲಿಲ್ಲ. ನಟರಾದ ಪರೇಶ್ ರಾವಲ್, ಅಜಯ್ ದೇವಗನ್, ಸುನಿಲ್ ಶೆಟ್ಟಿ, ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್ ಅವರನ್ನೂ ಗೌರವಿಸಲಾಯಿತು.
ಇದೇ ಸಂದರ್ಭ “ಆಜಾದಿ ಕೀ ಅಮೃತ್ ಕಹಾನಿಯಾ’ ಮಾಲಿಕೆಯಲ್ಲಿ ಸ್ವಾತಂತ್ರ್ಯ ವೀರರಾದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮತ್ತು ವೀರ್ ಕುನ್ವರ್ ಸಿಂಹ ಅವರ ಕುರಿತ ಅನಿಮೇಶನ್ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯಪಾಲ ಶ್ರೀಧರನ್ ಮಾತನಾಡಿದರು. ಕೇಂದ್ರ ಸಚಿವ ಶ್ರೀಪಾದ ನಾಯಕ್, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ರವಿ ಕೊಟ್ಟಾರಕರ ಮತ್ತಿತರರು ಭಾಗವಹಿಸಿದ್ದರು.
ನೀರಸವೆನಿಸಿದ ಉದ್ಘಾಟನ ಸಮಾರಂಭ
ಉದ್ಘಾಟನ ಸಮಾರಂಭ ಸಪ್ಪೆ ಎನಿಸಿದ್ದು ನಿಜ. ನಿರೂ ಪಣೆಯೂ ನೀರಸವೆನಿಸಿತ್ತು. ಉದ್ದುದ್ದ ಭಾಷಣವೂ ಕೊಂಚ ಬೇಸರ ಹುಟ್ಟಿಸಿ, ಸಭಿಕರು ಚಪ್ಪಾಳೆ ತಟ್ಟಿ ಭಾಷಣ ಮುಗಿಸು ವಂತೆ ಸಂದೇಶ ರವಾನಿಸುವಂತೆ ಮಾಡಿತು. ಜತೆಗೆ ಸಾಮಾನ್ಯವಾಗಿ ಇದುವರೆಗೆ ಉದ್ಘಾಟನ ಸಮಾರಂಭದ ಬಳಿಕ ಉದ್ಘಾಟನ ಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಇದರಿಂದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ ಹಲವರು ಉದ್ಘಾಟನ ಚಿತ್ರ ವೀಕ್ಷಿಸಲು ಆಗಮಿಸುತ್ತಿದ್ದರು. ಆದರೆ ಈ ಬಾರಿ ಉದ್ಘಾಟನ ಸಿನೆಮಾ ಪ್ರದರ್ಶನ ಹಾಗೂ ಉದ್ಘಾಟನ ಕಾರ್ಯಕ್ರಮ ಬಹುತೇಕ ಒಂದೇ ಸಮಯದಲ್ಲಿ ಇಟ್ಟುಕೊಂಡ ಕಾರಣ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಉದ್ಘಾಟನ ಚಿತ್ರದ ಮರು ಪ್ರದರ್ಶನ ಖಚಿತವಿಲ್ಲದ ಕಾರಣ ಬಹುತೇಕರು ಸಿನೆಮಾ ವೀಕ್ಷಣೆಯನ್ನೇ ಆಯ್ಕೆ ಮಾಡಿ ಕೊಂಡರು. ಹಾಗಾಗಿ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್ ಪ್ರಿಯರ ಹಾಗೂ ಮನೋರಂಜನೆ ಪ್ರಿಯರೇ ಹೆಚ್ಚಾಗಿ ಕಂಡು ಬಂದರು. ಹಾಗಾಗಿ ಉತ್ಸವ ಉದ್ಘಾಟನೆ ಸಮಾರಂಭಕ್ಕೂ ಸಿನೆಮೋಹಿಗಳಿಗೂ ಸಂಬಂಧವಿಲ್ಲ ಎಂಬಂತೆ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.