ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ
Team Udayavani, May 15, 2021, 6:40 AM IST
ಉಡುಪಿ : ಒಟ್ಟು ಸೋಂಕಿತರಲ್ಲಿ ಶೇ. 95 ಜನರಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಇವರು ಮನೆಯಲ್ಲಿ ಪ್ರತ್ಯೇಕವಾಗಿರಬಹುದು (ಐಸೋಲೇಶನ್). ಶೇ. 5 ಜನರಿಗೆ ಆಸ್ಪತ್ರೆ ಚಿಕಿತ್ಸೆ, ಒಟ್ಟು ಶೇ. 1ರಿಂದ 1.5 ಜನರಿಗೆ ಆಕ್ಸಿಜನ್, ಐಸಿಯು ಸೌಲಭ್ಯ ಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಮತ್ತು ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್ ಹೇಳಿದ್ದಾರೆ.
“ಉದಯವಾಣಿ’ಯಿಂದ ಶುಕ್ರವಾರ ಕೊರೊನಾ ನಿರ್ವಹಣೆ ವಿಷಯ ಕುರಿತು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಮೊದಲ ಐದು ದಿನ ಸಾಮಾನ್ಯವಾಗಿ ಎಲ್ಲರಿಗೂ ಹೋಂ ಐಸೊಲೇಶನ್ ಸಾಕು. ಈ ಐದು ದಿನಗಳೊಳಗೆ ಉಸಿರಾಟದ ಸಮಸ್ಯೆ, 104-105 ಡಿಗ್ರಿ ಜ್ವರ, ಕ್ಯಾನ್ಸರ್ ರೋಗಿಗಳು, ಇನ್ನೆರಡು ವಾರಗಳಲ್ಲಿ ಹೆರಿಗೆಯಾಗುವ ಗರ್ಭಿಣಿಯರಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ವೈದ್ಯರ ಪರೀಕ್ಷೆಗೆ ಒಳಗಾಗ ಬೇಕಾಗುತ್ತದೆ. ಮಧು ಮೇಹವಿ ದ್ದರೂ ತೀವ್ರವಾಗಿಲ್ಲವಾ ದರೆ ಹೊಂ ಐಸೊಲೇಶನ್ ಸಾಕು ಎಂದರು.
ಮನೆಯಲ್ಲಿರುವಾಗ . ಪ್ರತ್ಯೇಕ ಕೋಣೆ- ಅದಕ್ಕೆ ಒಂದು ಶೌಚಾಲಯ ಬೇಕು, ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್‌ನಲ್ಲಿ ಆಕ್ಸಿಜನ್ ಮತ್ತು ಉಷ್ಣಾಂಶ ಪರೀಕ್ಷಿಸುವಂತಿರಬೇಕು. ಅವರನ್ನು ನೋಡಲು ಒಬ್ಬರು ಸಹಾಯಕರು ಬೇಕು. ಇಂತಹ ವ್ಯವಸ್ಥೆಗಳು ಮನೆಗಳಲ್ಲಿ ಇಲ್ಲವಾದರೆ ಕೊರೊನಾ ಸಹಾಯ ವಾಣಿ ಮೂಲಕ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗಬೇಕು. ಐದು ದಿನಗಳ ಬಳಿಕ ಜ್ವರ, ಕೆಮ್ಮು, ಮೈಕೈ ನೋವು ತೀವ್ರವಾದಾಗ ಆಸ್ಪತ್ರೆಗೆ ದಾಖಲಾಗಬೇಕು. ಆಸ್ಪತ್ರೆಗಳಲ್ಲಿಯೂ ಜನರಲ್ ವಾರ್ಡ್, ಆಕ್ಸಿಜನ್, ಐಸಿಯು, ವೆಂಟಿಲೇಟರ್ ಇತ್ಯಾದಿ ಸೌಲಭ್ಯವನ್ನು ರೋಗದ ತೀವ್ರತೆ ಮೇಲೆ ಕೊಡಲಾಗುತ್ತದೆ ಎಂದರು.
ಮನೋಹರ ಕುಮಾರ್ ಮಂಗಳೂರು, ರಶೀದ್ ಕುಮಾರ್ ವಂಡ್ಸೆ, ಗಣಪತಿ ತಂತ್ರಿ ಉಡುಪಿ, ಬಿ.ಎಂ. ಹೆಗ್ಡೆ ಬಿಲ್ಲಾಡಿ, ನೀಲ ಅಂಬಲಪಾಡಿ, ಶ್ರೀಧರ ಅಂಚನ್ ಎರ್ಮಾಳು, ರಾಜು ಪೂಜಾರಿ ತಾರಾಪುರ ಕುಂದಾಪುರ, :
- ವ್ಯಾಕ್ಸಿನ್ ಪೂರೈಕೆಯಾಗುತ್ತಿಲ್ಲ.
-ಲಸಿಕೆ ಪೂರೈಕೆಯಾಗುವಾಗ ಪಡೆಯಲು ಹಿಂಜರಿಕೆ ಇತ್ತು. ಬಳಿಕ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿ ಅಮೆರಿಕದಿಂದ ಬರುವುದು ತಡವಾಯಿತು. ಈಗ ಉತ್ಪಾದನೆ ವೇಗವಾಗಿ ನಡೆಯುತ್ತಿದೆ. ಲಭ್ಯವಾದಾಗ ಅಗತ್ಯವಾಗಿ ಲಸಿಕೆಯನ್ನು ಪಡೆಯಿರಿ. ಯಾವುದಕ್ಕೂ ಮುನ್ನೆಚ್ಚರಿಕೆ ಅಗತ್ಯ. ವ್ಯಾಕ್ಸಿನ್ ತಡವಾದರೆ ತೊಂದರೆ ಇಲ್ಲ. ಮೊದಲನೆಯ ಡೋಸ್ ಪಡೆದವರಿಗೆ ಆದ್ಯತೆಯಲ್ಲಿ ಕೊಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿ ನೀಡಲಾಗುತ್ತದೆ. 18+ನವರಿಗೆ ಸದ್ಯಕ್ಕೆ ಲಸಿಕೆ ಇಲ್ಲ. ಒಂದೆರಡು ವಾರಗಳಲ್ಲಿ ಪೂರೈಕೆಯಾಗುವ ಸಾಧ್ಯತೆ ಇದೆ. ಗಾಬರಿಯಾಗಬೇಡಿ.
ಹಮೀದ್ ವಿಟ್ಲ
- ನನ್ನ ತಂದೆಗೆ 80 ವರ್ಷ. 20 ದಿನಗಳಿಂದ ತಲೆ ನೋವು ಇದೆ. ನಡೆದಾಡುವುದು ಕಷ್ಟ. ಪರೀಕ್ಷೆ ಮಾಡಿಸಬೇಕೆ?
ಮನೆ ಸಮೀಪದ ಪ್ರಾ. ಆ. ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿ. ಬಹುತೇಕ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಪರೀಕ್ಷೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಕಾಶ ಪಡಿಯಾರ್ ಮರವಂತೆ
- ಸರಕಾರಿ ವ್ಯವಸ್ಥೆಗಿಂತ ಖಾಸಗಿಯವರಿಗೆ ಜವಾಬ್ದಾರಿ ವಹಿಸಿದರೆ ಉತ್ತಮ.
ಉಡುಪಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಇದೆ. ಮಣಿಪಾಲ ಮಾಹೆ ಸಹಕಾರದಲ್ಲಿ ಮತ್ತು ಸರಕಾರಿ ವ್ಯವಸ್ಥೆಯಲ್ಲೂ ಅಗತ್ಯದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
ಇಸ್ಮಾಯಿಲ್ ವಿಟ್ಲ, ಹಮೀದ್ ಮುಕ್ಕ
- ಮಾಸ್ಕ್ ಕಡ್ಡಾಯವೇ?
ಅನ್ಯರ ಸಂಪರ್ಕದಲ್ಲಿರುವಾಗ ಅವರಿಗೆ ಸೋಂಕು ಇದ್ದರೆ ಅವರ ಸೂಕ್ಷ್ಮ ಹನಿಗಳು ಇತರರಿಗೆ ಸೇರಬಹುದು. ಉಸಿರಿನಲ್ಲಿಯೂ ಬರಬಹುದು. ಮಾಸ್ಕ್ ಹಾಕಿ ಕೊಂಡರೆ ಇದನ್ನು ತಡೆಯಬಹುದು. ಕೋಣೆಯಲ್ಲಿ ಇತರರ ಜತೆ ಇರುವಾಗ ಮಾಸ್ಕ್ ಅತ್ಯಗತ್ಯ. ಕೊರೊನಾ ಮುಕ್ತ ವಾಗುವವರೆಗೆ ಇದು ಕಡ್ಡಾಯ. ಜನರೂ ಈಗ ಎಚ್ಚೆತ್ತು ಕೊಂಡಿದ್ದು ವ್ಯಾಕ್ಸಿನ್ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಟ್ರಿಪಲ್ ಲೇಯರ್ ಮಾಸ್ಕ್ ಒಳಗೆ, ಬಟ್ಟೆ ಮಾಸ್ಕ್ ಹೊರಗೆ ಹಾಕಿದರೆ ಅದರ ಪರಿಣಾಮ ಹೆಚ್ಚಿರುತ್ತದೆ.
ಪ್ರದೀಪ್ ಉಡುಪಿ
- ಪಾಸಿಟಿವ್ ಬಂದವರು ಯಾವಾಗ ಲಸಿಕೆ ಪಡೆಯ ಬೇಕು? ಯಾವಾಗ ಸಕ್ರಿಯರಾಗಬಹುದು?
ಮೊದಲು ಒಂದರಿಂದ ಮೂರು ತಿಂಗಳೊಳಗೆ ಲಸಿಕೆ ಪಡೆಯಬೇಕೆಂದಿತ್ತು. ಈಗ ಸೋಂಕು ಬಂದು ಆರು ತಿಂಗಳ ಅನಂತರ ಪಡೆಯಬೇಕೆಂದು ಸೂಚನೆ ಇದೆ. 11 ದಿನಗಳ ಐಸೊಲೇಶನ್ ಬಳಿಕ ಸಕ್ರಿಯರಾಗಬಹುದು.
ತಿಲೋತ್ತಮ ನಾಯಕ್ , ಬ್ರಹ್ಮಾವರ
– ಮಕ್ಕಳ ರಕ್ಷಣೆಗೆ ಏನು ಕ್ರಮ ವಹಿಸಲಾಗುತ್ತಿದೆ?
ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಅಧ್ಯಯನ ನಡೆ ಯುತ್ತಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸ್ ಮಾಡುತ್ತಿರುವುದರ ಜತೆ ಹಿರಿಯರು ವ್ಯಾಕ್ಸಿನ್ ಪಡೆದುಕೊಂಡು ಮಕ್ಕಳನ್ನು ರಕ್ಷಿಸಬೇಕು. ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಗ್ರಾ.ಪಂ. ಮಟ್ಟದಲ್ಲಿಯೂ ಈ ಕುರಿತು ಕೆಲಸ ನಡೆಯುತ್ತಿದೆ.
ಚಂದ್ರ ವಂಡ್ಸೆ
– ಹೃದ್ರೋಗವಿದ್ದರೆ ಲಸಿಕೆ ಪಡೆಯಬಹುದೆ?
ಈಗಿರುವ ಎಲ್ಲ ಔಷಧಗಳನ್ನೂ ಮುಂದುವರಿಸುವು ದರ ಜತೆ ಹೃದ್ರೋಗವಿದ್ದರೂ ಲಸಿಕೆ ಪಡೆಯಬಹುದು.
ಪ್ರವೀಣಾನಂದ ಮೂಲ್ಕಿ
– ಆಕ್ಸಿಜನ್ ಸಮಸ್ಯೆ ಇರುವವರು ಗುಣಮುಖರಾಗುವ ಲಕ್ಷಣಗಳೇನು?
ಆಕ್ಸಿಜನ್ ಚಿಕಿತ್ಸೆ ಪಡೆಯುತ್ತಿರುವವರು ಸಣ್ಣ ಸಣ್ಣ ಸಂದರ್ಭಗಳಲ್ಲಿ ಸಹಜ ಉಸಿರಾಟದಲ್ಲಿ ತೊಡಗುತ್ತಾರೆ. ಅದು ಗುಣ ಮುಖವಾಗುತ್ತಿರುವ ಲಕ್ಷಣ.
ಸುನಿಲ್ ಉಡುಪಿ, ಗುರುರಾಜ ಭಟ್ ಅಂಬಾಗಿಲು
– ಪೆನ್ಸಿಲಿನ್ ಎಲರ್ಜಿ ಇರುವವರು ಎರಡನೆಯ ಡೋಸ್ ತೆಗೆದುಕೊಳ್ಳ ಬಹುದೆ?
ಮೊದಲ ಡೋಸ್ ತೆಗೆದುಕೊಂಡಾಗ ತೊಂದರೆ ಆಗದಿದ್ದರೆ ಎರಡನೆಯ ಡೋಸ್ ಪಡೆಯಬಹುದು. ತೀವ್ರ ಎಲರ್ಜಿ ಇದ್ದರೆ ಮಾತ್ರ ಸದ್ಯ ಬೇಡ.
ಸದಾಶಿವ ಶೆಟ್ಟಿ ಬ್ರಹ್ಮಾವರ
– ಹೆಲ್ಪ್ ಲೈನ್ ಮೂಲಕ ಬಂದರೆ ಸಿಗುವ ಸೌಲಭ್ಯಗಳೇನು?
ಕೊರೊನಾ ಪ್ರಕರಣಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಸೌಲಭ್ಯ ಬೇಕಾದರೆ ಹೆಲ್ಪ್ಲೈನ್ ಮೂಲಕ ಬರಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗು ತ್ತದೆ.
ಕೇಶವ ಆಚಾರ್ಯ ಕೂರಾಡಿ
- ವ್ಯಾಕ್ಸಿನ್ ಪಡೆದವರಿಗೂ ಸೋಂಕು ಬರುತ್ತದೆಯೆ? ಆಹಾರ ಕ್ರಮದ ಸಲಹೆ ಏನು?
ವ್ಯಾಕ್ಸಿನ್ ಪಡೆದವರಿಗೆ ಸೋಂಕು ಬರುವುದಿಲ್ಲ ಎಂದು ಹೇಳಲಾಗದು. ಸೋಂಕು ಬಂದು ಆರು ತಿಂಗಳವರೆಗೆ ಬರುವುದಿಲ್ಲ ಎಂದು ಅಧ್ಯಯನ ತಿಳಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಆರು ತಿಂಗಳ ಬಳಿಕ ಎರಡನೆಯ ಡೋಸ್ ತೆಗೆದುಕೊಳ್ಳಬೇಕು. ಒಂದು ವರ್ಷದ ಅನಂತರ ಮತ್ತೆ ಲಸಿಕೆ ಬೇಕಾಗಬಹುದು. ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಬಂದರೂ ಸೌಮ್ಯ ವಾಗಿರುತ್ತದೆ, ಮರಣ ಸಾಧ್ಯತೆ ಕಡಿಮೆ ಇರುತ್ತದೆ. ಧಾನ್ಯ, ತರಕಾರಿ, ಹಣ್ಣುಗಳುಳ್ಳ ಸಮತೋಲಿತ ಆಹಾರ ಉತ್ತಮ.
ವಿದ್ಯಾಧರ ಆದಿಉಡುಪಿ
- ಮುಂಬಯಿಗೆ ಹೋಗುವವರಿಗೆ ನೆಗೆಟಿವ್ ಪತ್ರ ಬೇಕಂತೆ. ನಾನು ವ್ಯಾಕ್ಸಿನ್ ಪಡೆದಾಗಿದೆ.
ವ್ಯಾಕ್ಸಿನ್‌ಗೂ ಪರೀಕ್ಷಾ ವರದಿಗೂ ಸಂಬಂಧವಿಲ್ಲ. ಆದ್ದರಿಂದ ವ್ಯಾಕ್ಸಿನ್ ಪಡೆದುಕೊಂಡರೂ ಅಗತ್ಯವಿರುವಾಗ ಪರೀಕ್ಷೆ ನಡೆಸಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಟಿಕೆಟ್ ರದ್ದು ಮಾಡಬೇಕಾಗುತ್ತದೆ.
ವರುಣ ಆತ್ರಾಡಿ
- ನಮ್ಮ ಸಂಬಂಧಿ ಸ್ಟಾಫ್ ನರ್ಸ್ ಇದ್ದು ಅವರು ಲಸಿಕೆ ತೆಗೆದುಕೊಂಡಿರಲಿಲ್ಲ. ಈಗ ಕೊರೊನಾ ಸೋಂಕಿತರ ಕರ್ತವ್ಯಕ್ಕೆ ಹಾಕಿದ್ದಾರೆ. ಏನು ಮಾಡಬಹುದು?
ಆರೋಗ್ಯ ಕಾರ್ಯಕರ್ತೆಯರಿಗೆ ಪ್ರಥಮ ಆದ್ಯತೆ ಇದೆ. ಪ್ರಾ.ಆ. ಕೇಂದ್ರಗಳಲ್ಲಿ ವಿಚಾರಿಸಿ ಲಸಿಕೆ ಪಡೆಯಿರಿ.
ಸಹನಶೀಲ ಪೈ ಉಡುಪಿ, ಅಬೂಬಕ್ಕರ್ ಅನಿಲಕಟ್ಟೆ ವಿಟ್ಲ
– ನಮ್ಮ ಮುಂಜಾಗ್ರತೆ ಏನಿರಬೇಕು?
ನಮ್ಮ ನಡವಳಿಕೆಯಲ್ಲಿ ಜಾಗ್ರತೆ ಜತೆ ಜನಸಂದಣಿ ಯಿಂದ ಸದಾ ದೂರ ಇರಬೇಕು.
ಪುರುಷೋತ್ತಮ ಶೆಟ್ಟಿ ಮಂಗಳೂರು, ಅಹಮದಾಬಾದ್
- ಕೊರೊನಾ ಸೋಂಕು ಬಂದಿದೆ. ಮಧುಮೇಹ ಬಂದಿದ್ದು ಇದು ಜೀವನಪರ್ಯಂತ ಇರಲಿದೆಯೆ?
ಸ್ಟಿರಾಯ್ಡ, ಕೊರೊನಾ ಸೋಂಕು ಇಲ್ಲದಿದ್ದರೂ ಮುಂದೆ ಮಧುಮೇಹ ಬರಬಾರದೆಂದಿಲ್ಲ. ಈಗ ಬಂದಿದೆ, ಇದು ಜೀವನ ಪರ್ಯಾಂತ ಇರಲೂಬಹುದು. ಮುಖ್ಯವಾಗಿ ಜೀವನಶೈಲಿಯನ್ನು ರೂಪಿಸಿಕೊಳ್ಳಿ.
ನಿಯಂತ್ರಣದ ಆಶಯ
ಎರಡು ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 65 ಮರಣ ಪ್ರಕರಣ ದಾಖಲಾಗಿದೆ. ಇತರ ಜಿಲ್ಲೆಗಳಲ್ಲಿಯೂ ಮರಣ ಪ್ರಮಾಣ ಇದೇ ತೆರನಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಕಡಿಮೆಯಾಗಿ ಜೂನ್‌ನಲ್ಲಿ ನಿಯಂತ್ರಣಕ್ಕೆ ಬರಬಹುದು. ಕಳೆದ ಎರಡು ದಿನಗಳಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಎಂದರು.
ಪ್ರಮುಖಾಂಶಗಳು
1. ಒಮ್ಮೆ ಕೊರೊನಾ ಸೋಂಕು ಬಂದು ಆರು ತಿಂಗಳಲ್ಲಿ ಮತ್ತೆ ಕೊರೊನಾ ಬರುವ ಸಾಧ್ಯತೆ ಕಡಿಮೆ.
2. ಕೊವಿಶೀಲ್ಡ್ ಎರಡನೆಯ ಲಸಿಕೆಯನ್ನು 6ರಿಂದ 8 ವಾರದ ಅವಧಿಯಲ್ಲಿ ತೆಗೆದುಕೊಳ್ಳಬೇಕೆಂದಿತ್ತು. ಈಗ ಅದನ್ನು 12ರಿಂದ 16 ವಾರಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಇದು ಉತ್ತಮ ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ.
3. ಮಾ. 25ರ ಒಳಗೆ ಮೊದಲ ಕೊವ್ಯಾಕ್ಸಿನ್ ಡೋಸ್ ಪಡೆದವರಿಗೆ ಮತ್ತು ಮಾ. 16ರ ಒಳಗೆ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಶನಿವಾರ ಎರಡನೆಯ ಡೋಸ್ ಕೊಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗೆ ಲಸಿಕೆ ಪೂರೈಕೆ ಕುರಿತು ಪತ್ರ ವ್ಯವಹಾರ ನಡೆಯುತ್ತಿದ್ದು ಸದ್ಯದಲ್ಲಿಯೇ ಪೂರೈಕೆಯಾಗಲಿದೆ. ಮೊದಲ ಡೋಸ್ ತೆಗೆದುಕೊಂಡು ತಡವಾದರೆ ತೊಂದರೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.