ಪೇಜಾವರ ಶ್ರೀ ಮೂಲಕ ವಿಧಿ ಕೊಟ್ಟ ಕರೆ
ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ ಜ. 9ರಂದು ವಿವಿಧೆಡೆಗಳಲ್ಲಿ ನಡೆಯುತ್ತಿದೆ.
Team Udayavani, Jan 8, 2020, 6:00 AM IST
ಡಿ. 29ರಂದು ಇಹಲೋಕದ ಯಾತ್ರೆ ಮುಗಿಸುವ ಮುನ್ನ, ಅಂದರೆ ಡಿ. 19ರಂದು ಪೇಜಾವರ ಶ್ರೀಗಳು ಒಂದೇ ದಿನ ತೀವ್ರ ಜ್ವರದಲ್ಲಿ ಸುಮಾರು 150 ಕಿ.ಮೀ. ಪ್ರಯಾಣ, ಮೂರು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೊನೆಯ ಕಾರ್ಯಕ್ರಮ ನಡೆದದ್ದು ಅವರೇ ನಿರ್ಮಿಸಿದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ. ಅಲ್ಲಿ ಶ್ರೀಗಳ ಉಪನ್ಯಾಸ, ಅವರು ಕತೆ ಹೇಳಿದ ರೀತಿ ಮತ್ತು ಅಂಗಾಭಿನಯ ನೋಡಿದರೆ ಯಾವುದೋ ಒಂದು ಶಕ್ತಿ ಆವೇಶ ಬಂದು ಹೇಳಿದಂತಿತ್ತು.
ಇಂದ್ರದ್ಯುಮ್ನನ ಸ್ವರ್ಗದ ಕಥೆ
ಕಥಾ ಸಾರಾಂಶ ಹೀಗಿದೆ: ಇಂದ್ರದ್ಯುಮ್ನ ಎಂಬ ರಾಜ ಬಹುಕಾಲ ಸ್ವರ್ಗದಲ್ಲಿ ಸುಖವಾಗಿದ್ದ. ಒಂದು ದಿನ ದೇವತೆಗಳು ಬಂದು “ನಿನ್ನ ಪುಣ್ಯ ಖರ್ಚಾಯಿತು. ಇನ್ನು ನೀನು ಇಲ್ಲಿರುವಂತಿಲ್ಲ. ಭೂಮಿಗೆ ಹೋಗಿ ಹುಟ್ಟು’ ಎಂದರು. ಇಂದ್ರದ್ಯುಮ್ನ ಭೂಮಿಗೆ ಬಂದು ಒಂದು ಮುದಿ ಗೂಬೆ ಬಳಿ “ನಾನು ಇಂದ್ರದ್ಯುಮ್ನ ರಾಜ. ಇಲ್ಲಿ ಬಹುಕಾಲ ಆಳಿದ್ದೇನೆ. ನನ್ನ ಪರಿಚಯ ಇದೆಯೇ?’ ಎಂದು ಕೇಳಿದ.
“”ನನಗೆ ಗೊತ್ತಿಲ್ಲ. ಅಲ್ಲೊಂದು ಹಳೆಯ ಬಕಪಕ್ಷಿ ಇದೆ. ಅದರ ಬಳಿ ಕೇಳು” ಎಂದಿತು. ಅದೂ ಕೂಡ ನನಗೆ ಪರಿಚಯವಿಲ್ಲವೆಂದಿತು. “”ಸರೋವರದಲ್ಲಿ ಒಂದು ಆಮೆ ಇದೆ. ಅದು ಹಳೆಯ ಆಮೆ. ಅಲ್ಲಿ ಕೇಳು” ಎಂದಿತು. ಆಮೆ ಬಳಿ ಹೋಗಿ ಕೇಳಿದ. ಆಗ ಸರೋವರದ ನೀರಿನಿಂದ ಹೊರಗೆ ಬಂದ ಆಮೆ “”ಅಯ್ಯೋ, ನಿನ್ನ ಪರಿಚಯವಿಲ್ಲದೆ ಇರಲು ಸಾಧ್ಯವೆ? ನೀನೇ ಈ ಸರೋವರವನ್ನು ನಿರ್ಮಿಸಿ ನಮ್ಮಂತಹ ಆಮೆ, ಮೀನುಗಳಿಗೆ ಬದುಕಲು ಅವಕಾಶ ಮಾಡಿಕೊಟ್ಟೆ. ರೈತರಿಗೂ ಅನುಕೂಲ ಮಾಡಿದೆ. ನಿನ್ನ ಉಪಕಾರವನ್ನು ಮರೆಯಲು ಸಾಧ್ಯವೆ?’ ‘ ಎಂದು ಕಣ್ಣೀರಿಟ್ಟು ಹೇಳಿತು.
ಪರೋಪಕಾರದ ಮಹತ್ವ
ಕೂಡಲೇ ದೇವತೆಗಳು ವಿಮಾನದಲ್ಲಿ ಬಂದರು. “”ನಮ್ಮ ಲೆಕ್ಕಾಚಾರ ತಪ್ಪಾಯಿತು. ಯಾವಾಗ ಆಮೆ ನಿನ್ನನ್ನು ಸ್ಮರಿಸಿತೋ ಆಗ ನಿನ್ನ ಪುಣ್ಯ ಇನ್ನೂ ಇದೆ ಎಂದಾಯಿತು. ಭೂಮಿಯಲ್ಲಿ ನೀನು ಮಾಡಿದ ಉಪಕಾರವನ್ನು ಸ್ಮರಿಸುವವರೆಗೆ ಸ್ವರ್ಗದಲ್ಲಿ ಸ್ಥಾನವಿರುತ್ತದೆ. ಬಾ” ಎಂದು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಮುಂದಿನ ಪೀಳಿಗೆಯವರು ಸ್ಮರಿಸುವಂತಹ ಕೆಲಸ ಮಾಡಿದರೆ ಸ್ವರ್ಗದಲ್ಲಿ ಸ್ಥಾನವಿರುತ್ತದೆ. ಹೀಗೆ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮಹಾಭಾರತದ ಅನೇಕ ಉಪಾಖ್ಯಾನಗಳು ಸಾರುತ್ತಿವೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಎಲ್ಲ ವಾದಿಗಳಿಗೂ ಒಂದೇ ತಂತ್ರ
ಇಲ್ಲಿ ಸ್ವಾಮಿಗಳ ಬಾಯಲ್ಲಿ ಕೊನೆಯ ಹೊತ್ತಿಗೆ ನುಡಿಸಿದ ಶಕ್ತಿಯನ್ನು ವಿಧಿಯೋ, ದೇವರೋ ಏನು ಬೇಕಾದರೂ ಕರೆದುಕೊಳ್ಳಬಹುದು. ಅದು ಅಷ್ಟು ಪಕ್ಕಾ ಆಗಿ ನುಡಿಸಿದ್ದು ಮಾತ್ರ ಅತ್ಯಾಶ್ಚರ್ಯ ಉಂಟುಮಾಡದೆ ಇರದು. ಈ ಶಕ್ತಿ ಅವರವರ ಸಾಧನೆಗೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ಕೆಲವನ್ನು ನುಡಿಸಿಯೋ, ಮಾಡಿಯೋ ತೋರಿಸುತ್ತದೆ ಎಂದು ಅರ್ಥೈಸಬಹುದು. ಇನ್ನೊಂದು ವಿಶೇಷವೆಂದರೆ ಜೀವಾತ್ಮ ಪರಮಾತ್ಮ ಬೇರೆ ಎನ್ನುವವರಿಗೆ, ಒಂದೇ ಎನ್ನುವವರಿಗೆ, ಇಲ್ಲಿ ಬೇರೆ ಅಲ್ಲಿ ಒಂದೇ ಎನ್ನುವವರಿಗೆ, ಭಗವಂತ ಸೃಷ್ಟಿಕರ್ತ, ಇಡೀ ಜಗತ್ತನ್ನು ಸೃಷ್ಟಿಸಿದವ, ಇದರಲ್ಲಿ ಮಾನವರು ಬುದ್ಧಿವಂತರು, ಮಾನವರು ದೇವರೆಂಬ ತಂದೆಯ ಮಕ್ಕಳು, ಆತ್ಮವೇ ಇಲ್ಲ ಎನ್ನುವವರು ಹೀಗೆ ಜಗತ್ತಿನ ನಾನಾ ವಾದಿಗಳಿಗೆ ಆಯಾ ಕಾಲಘಟ್ಟಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆ ಶಕ್ತಿ ಕೊಡುವುದು ಏಕಮೂಲಿಕಾ ಪ್ರಯೋಗದಂತೆ ಕಂಡುಬರುತ್ತದೆ.
ವಿಧಿಯ ಗುಟ್ಟು-ಭವಿಷ್ಯದಲ್ಲಿ ರಟ್ಟು!
“ವಿಮಾನ ಬಂತು’ ಎಂಬ ಶಬ್ದಕ್ಕಿಂತ ಹೇಳಿದ ಆಂಗಿಕ ಭಂಗಿ ವಿಶಿಷ್ಟವಾಗಿತ್ತು. ಜೀವಮಾನದುದ್ದಕ್ಕೂ ಅವರು ಯಾವ ಕೆಲಸವನ್ನು ಮಾಡಿದ್ದರೋ ಅದುವೇ ಸ್ವರ್ಗದಲ್ಲಿ ಸ್ಥಾನ ಪ್ರಾಪ್ತವಾಗುವುದಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಅವರು ಹೇಳಿದ್ದಲ್ಲ, ವಿಧಿ ಅವರ ಬಾಯಿಯಿಂದ ಜನತೆಗೆ ತಿಳಿಯುವಂತೆ ಮಾಡಿತು. ಕೊನೆಗೂ ಅವರಿಗಾಗಿ ಹೆಲಿಕಾಪ್ಟರ್ ಬಂದು ಅದರಲ್ಲಿಯೇ ಅವರು ಹೋಗುವಂತಾಯಿತು. ಅವರು ಏನನ್ನು ಹೇಳಿದರೋ ಆ ಸಂದೇಶದ ಹಿಂದಿನ ಮರ್ಮ ಅವರಿಗೂ ತಿಳಿಯದಂತೆ ಮಾಡುವುದು ವಿಧಿಯ ಕೈಚಳಕ. ಈ ವಿಷಯದಲ್ಲಿ ಅದು ಎಂದಿಗೂ ಯಾರ ಎದುರೂ ಸೋಲುವುದಿಲ್ಲ. ಒಬ್ಬರಿಗೆ ಹೀಗಾಯಿತೆಂದು ಇನ್ನೊಬ್ಬರಿಗೆ ನಾವು ಊಹಿಸಿದರೆ ಅದರಲ್ಲೂ ಅದು ದಾರಿ ತಪ್ಪಿಸುತ್ತದೆ. ಘಟನೆ ಆದ ಬಳಿಕ “ಓಹೋ’ ಎಂದು ಆಶ್ಚರ್ಯಪಡುವಂತೆ ಮಾಡುವುದು ವೈಶಿಷ್ಟ್ಯ. ಕನಿಷ್ಠ ಜನತೆಗೆ ಏನು ತಿಳಿಸಬೇಕೋ ಅದನ್ನು ತಿಳಿಸುವಂತೆ ಮಾಡುವಲ್ಲಿ ವಿಧಿ ಮರೆಯಲಿಲ್ಲ. ಹಾಗಂತ ಅದು ಎಲ್ಲರನ್ನೂ ಮಾಧ್ಯಮವಾಗಿ ಬಳಸುವುದೂ ಇಲ್ಲ.
ಅಧಿಕಾರಸ್ಥರಿಗೂ ಸಂದೇಶ
ಈ ಸಂದೇಶಕ್ಕೆ ಮುನ್ನ ರಾಜಕಾರಣಿಗಳು, ಅಧಿಕಾರಸ್ಥರು ಸರಕಾರದ ಹಣವನ್ನು ಹೇಗೆ ಬಳಸಬೇಕು, ವೈಯಕ್ತಿಕ ಬೇಡಿಕೆಗಳಿಗೆ ವೈಯಕ್ತಿಕ ಹಣವನ್ನೇ ಬಳಸಬೇಕೆ ವಿನಾ ಸರಕಾರದ ಹಣವನ್ನು ಬಳಸಬಾರದು ಎಂಬ ದೃಷ್ಟಾಂತಕ್ಕೆ ಧರ್ಮರಾಜ- ಭೀಮನ ಉಪಾಖ್ಯಾನ, ಅಗಸ್ಥ್ಯ- ಲೋಪಾಮುದ್ರೆಯ ಕಥೆಯ ಉಪಾಖ್ಯಾನವನ್ನು ಬಳಸಿಕೊಂಡರು.
ವಿದ್ಯೆ-ದೇಶ-ದೇವ-ಮಹಾದೇವ…
ಹುಟ್ಟೂರು ರಾಮಕುಂಜದ ಶಾಲೆಯಲ್ಲಿ ಅವರು ಶಿಕ್ಷಣದಲ್ಲಿ ಆಸಕ್ತಿ, ದೇಶ ಮತ್ತು ದೇವರಲ್ಲಿ ಭಕ್ತಿ ಬೇಕು ಎಂದು ಪ್ರತಿಪಾದಿಸಿದರು. ತನಗೆ ಹುಷಾರಿಲ್ಲ, ಎರಡೇ ನಿಮಿಷ ಮಾತನಾಡುತ್ತೇನೆ ಎಂದು ಹೇಳಿದರು. ಉಪನ್ಯಾಸ ಆರಂಭಿಸುವ ಮೊದಲು ಸಹಜವಾಗಿ ಹೇಳುವ ಶ್ಲೋಕಗಳನ್ನು ಹೇಳದೆ ಗ್ರಾಮದೇವತೆಯಾದ ರಾಮ, ಮಹಾದೇವನಿಗೆ (ರಾಮಕುಂಜೇಶ್ವರನಿಗೆ) ನಮಿಸುವುದಾಗಿ ಹೇಳಿದರು. ಈ ಮೂಲಕ ಹುಟ್ಟಿದ ಮನೆಯಲ್ಲಿ ರಾಮ- ವಿಟ್ಟಲನಿಗೆ ಪೂಜೆ, ಸಂಜೆ ಮಹಾದೇವನನ್ನು ಸ್ಮರಣೆ ಮಾಡುವ ಮೂಲಕ ಸೃಷ್ಟಿ-ಸ್ಥಿತಿ- ಲಯ ಕರ್ತರಾದ ಬ್ರಹ್ಮ-ವಿಷ್ಣು-ಶಿವನನ್ನು ಒಂದೇ ದಿನದಲ್ಲಿ ಸ್ಮರಿಸಿದರು. ರಾಮಕುಂಜದ ಕಾರ್ಯಕ್ರಮ ಬಳಿಕ ರಾಜಾಂಗಣದಲ್ಲಿ ಮೂರು ಉಪಾಖ್ಯಾನಗಳನ್ನು ಹೇಳಲು ಅರ್ಧ ಗಂಟೆ ತೆಗೆದುಕೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿಯವರು “ನೀವು ಅನಾರೋಗ್ಯದಲ್ಲಿರುವಾಗ ಉಪನ್ಯಾಸ ನೀಡುವುದು ಬೇಡ’ ಎಂದರೂ ಅರ್ಧ ಗಂಟೆ ಪ್ರವಚನ ನೀಡಿದರೆಂಬುದನ್ನು ಘಟನೆಯ ಸಾಕ್ಷಿಯು ಶ್ರೀಧರ್ ಹೇಳುತ್ತಾರೆ. ರಾಮಕುಂಜದ ವೀಡಿಯೋ ಗಮನಿಸಿದರೆ ಅಲ್ಲಿ ಅನಾರೋಗ್ಯ ತೀವ್ರ ಬಾಧೆ ಮತ್ತು ಕೊನೆಯ ಉಪನ್ಯಾಸದಲ್ಲಿ ಜ್ವರಪೀಡನೆ ಇದ್ದರೂ ಆವೇಶ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಯಕ್ಷಪ್ರಶ್ನೆ ಸಾರ್ವಕಾಲಿಕ
ನಾವು ವಿಧಿಯ ಕರೆಯನ್ನು ಓದುವ, ನೋಡುವ ಕಲೆ ಕಲಿತುಕೊಳ್ಳಬೇಕಾಗಿದೆ. ವಿಧಿಯ ಕರೆಯನ್ನು ಓದುವ ಬದಲು ಕೇವಲ ಪುಸ್ತಕಗಳನ್ನು ಓದಿದರೆ ಏನೂ ಅರ್ಥವಾಗದು. ಆಕಸ್ಮಿಕವಾಗಿ ವಿಧಿ ತೋರಿಸುವ ಹೆಜ್ಜೆ, ಕರೆಗಳನ್ನು ಇಂತಹ ಉದಾಹರಣೆಗಳ ಹಿಂದೆ ನಿಧಾನವಾಗಿ ಹೋಗಿ ಅರಿಯುವ, ಸಂಶೋಧಿಸುವ ಪ್ರವೃತ್ತಿ ಬೆಳೆಯದಿದ್ದರೆ ಮಹಾಭಾರತದ ವನಪರ್ವದಲ್ಲಿ ಬರುವ ಯಕ್ಷಪ್ರಶ್ನೆಯ ಕತೆಯನ್ನು ಮನನ ಮಾಡುತ್ತಲೇ ಇರಬೇಕು. “ನಿತ್ಯ ಸಾವಿರಾರು ಜೀವಿಗಳು ಸಾಯುವುದನ್ನು ನೋಡುತ್ತಿದ್ದರೂ ನಾವು ಮಾತ್ರ ಚಿರಂಜೀವಿಗಳಂತೆ ವರ್ತಿಸುತ್ತೇವೆ’ ಎಂಬ ಧರ್ಮರಾಜನ ಉತ್ತರ ನಿನ್ನೆ ಮತ್ತು ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ಯ ಎಂಬ ಅರಿವು ಬರುತ್ತದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.