ಬೇಸರಾಗಿದೆ ಮಾತು ಭಾರವಾಗಿದೆ ಮೌನ ; ಕಾವ್ಯಗಳ ಮೂಲಕ, ಅವರು ಸದಾ ನಮ್ಮ ಜತೆಗೇ ಇರುತ್ತಾರೆ…


Team Udayavani, May 4, 2020, 5:26 AM IST

ಬೇಸರಾಗಿದೆ ಮಾತು ಭಾರವಾಗಿದೆ ಮೌನ ; ಕಾವ್ಯಗಳ ಮೂಲಕ, ಅವರು ಸದಾ ನಮ್ಮ ಜತೆಗೇ ಇರುತ್ತಾರೆ…

ನಿತ್ಯೋತ್ಸವದ ಕವಿ ಎಂದೇ ಹೆಸರಾಗಿದ್ದವರು ಕೆ. ಎಸ್‌. ನಿಸಾರ್‌ ಅಹಮದ್‌. ಹೊಸಬಗೆಯ ಪದ ಮತ್ತು ಪದ್ಯಗಳ ಮೂಲಕ ಕಾವ್ಯಲೋಕಕ್ಕೆ ಹೊಸದೊಂದು ಬೆರಗನ್ನು, ಕೋಮಲತೆಯನ್ನು, ಕಾಂತಿಯನ್ನು ತಂದದ್ದು ಅವರ ಹೆಚ್ಚುಗಾರಿಕೆ. ಯಾವುದೇ ಕಾರ್ಯಕ್ರಮದಲ್ಲಿ ನಿಸಾರ್‌ ಅವರು ಇದ್ದರೆಂದರೆ, ಅದಕ್ಕೊಂದುಗಾಂಭೀರ್ಯ ಇರುತ್ತಿತ್ತು.ಶ್ರೇಷ್ಠ ಕವಿ, ಶ್ರೇಷ್ಠಅಧ್ಯಾಪಕ, ಶ್ರೇಷ್ಠ ವಾಗ್ಮಿ ಮತ್ತು ಶ್ರೇಷ್ಠ ಮನುಷ್ಯ- ಇದೆಲ್ಲವೂ ಆಗಿದ್ದ ಅವರು,ತಮ್ಮ ಬದುಕಿನ ಕುರಿತು ಹೇಳಿಕೊಂಡಿದ್ದ ಕೆಲವು ಪ್ರಸಂಗಗಳ ವಿವರ ಇಲ್ಲಿದೆ…

– ಬಿ.ಆರ್‌. ಲಕ್ಷ್ಮಣರಾವ್‌

ಒಮ್ಮೆ ನಾನು ಗುರುಗಳನ್ನು (ಕೆ.ಎಸ್‌. ನಿಸಾರ್‌ ಅಹಮದ್‌) ಸಂದರ್ಶನ ಮಾಡಿದಾಗ- ‘ ನೀವೀಗ ಇಳಿ ವಯಸ್ಸಿನಲ್ಲಿ ಇದ್ದೀರಿ. ಹೇಗನ್ನಿಸ್ತಾ ಇದೆ?’ ಅಂತೇನೋ ಕೇಳಿದ್ದೆ. ಆಗ ಅವರು, ‘ನಿಂಗೆ ಯಾರಯ್ಯ ಹೇಳಿದ್ದು, ನಂಗೆ ವಯಸ್ಸಾಯ್ತು ಅಂತ? ಐ ಆಮ್‌ ಆಲ್ವೇಸ್‌ ಯಂಗ್’ ಅಂತ ಹೇಳಿದ್ದರು. ಹೀಗೆ, ಸದಾಕಾಲ ಲವಲವಿಕೆಯಿಂದ ಇದ್ದವರು ಅವರು.

ನನ್ನ ಪಾಲಿಗೆ ನಿಸಾರ್‌ ಅಹಮದ್‌, ಮೆಚ್ಚಿನ ಕವಿ ಮಾತ್ರವಲ್ಲ, ಕಾವ್ಯ ರಚನೆಯ ಆದ್ಯ ಗುರುಗಳು. ಯಾಕಂದ್ರೆ, ಬಹಳ ಸಣ್ಣ ವಯಸ್ಸಿನಲ್ಲಿ ಅವರ ಪದ್ಯಗಳನ್ನು ಓದಿ ಪ್ರಭಾವಿತನಾದವನಲ್ಲಿ ನಾನೂ ಒಬ್ಬ. ದಾವಣಗೆರೆಯಲ್ಲಿ ಬಿ. ಎಸ್ಸಿ ಓದುವಾಗ, ಗ್ರಂಥಾಲಯದಲ್ಲಿ ಅವರ ‘ಮದುವೆ’ ಪದ್ಯ ಓದಿ, ಬಹಳ ಇಷ್ಟಪಟ್ಟಿದ್ದೆ.

ಡಿಗ್ರಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ. ಎ ಪದವಿಗೆ ಸೇರಿದಾಗ, ಅವರು ಭೂವಿಜ್ಞಾನ ವಿಭಾಗದಲ್ಲಿ ಬೋಧಕರಾಗಿದ್ದರು. ಬಿ. ಎ ತರಗತಿಗಳಿಗೆ ‘ಜನರಲ್‌ ಸೈನ್ಸ್’ ಪಾಠ ಮಾಡಲು ಬರುತ್ತಿದ್ದರು. ಆಗ ನಾನು ಅವರನ್ನು ಮುಖತಃ ಭೇಟಿ ಮಾಡಿದ್ದು.

‘ಸಾರ್‌, ನಿಮ್ಮ ಕವಿತೆಗಳೆಂದರೆ ನಂಗೆ ಬಹಳ ಇಷ್ಟ. ನಾನೂ ಕೆಲವು ಕವನಗಳನ್ನು ಬರೆದಿದ್ದೇನೆ. ಓದಿ, ನೋಡ್ತೀರ?’ ಅಂತ ಕೇಳಿಕೊಂಡಾಗ ಅವರು ‘ಖಂಡಿತಾ ನೋಡ್ತೀನಿ ಕೊಡಯ್ಯಾ…’ ಅಂತ ಖುಷಿಯಿಂದ ಒಪ್ಪಿಕೊಂಡರು. ನಾನು ಎರಡ್ಮೂರು ಪದ್ಯಗಳನ್ನು ಅವರಿಗೆ ಕೊಟ್ಟಿದ್ದೆ. ಅವರು, ‘ಓದಿರ್ತೇನೆ, ಎರಡು ದಿನ ಬಿಟ್ಟು ಬಾ’ ಅಂತ ಹೇಳಿದರು.

ಆಮೇಲೆ ಹೋದಾಗ ನನ್ನ ಬೆನ್ನು ತಟ್ಟಿ, ‘ಚೆನ್ನಾಗಿ ಬರಿತೀಯ ಕಣಯ್ಯಾ. ಹೀಗೇ ಮುಂದುವರಿಸು. ಈಗ ನೀನು ಇಂಗ್ಲಿಷ್‌ ಮೇಜರ್ ನಲ್ಲಿ ಇದ್ದೀಯ ತಾನೇ? ಹಾಗಾದ್ರೆ, ಲಂಕೇಶ್‌ ಅವರ ಪರಿಚಯ ಮಾಡಿಕೋ…’ ಅಂತೆಲ್ಲ ಪ್ರೋತ್ಸಾಹ ನೀಡಿದ್ದರು. ಹೀಗೆ, ನನ್ನನ್ನು ‘ಕವಿ’ ಅಂತ ಮೊದಲು ಗುರುತಿಸಿದ್ದು ಅವರೇ.

ಈ ಪರಿಚಯ ಮುಂದೆ ಆತ್ಮೀಯತೆಯಾಗಿ ಬೆಳೆಯಿತು. ನನ್ನ ಇಡೀ ಕುಟುಂಬಕ್ಕೆ ಅವರು ಆತ್ಮೀಯರು. ಚಿಂತಾಮಣಿಯಲ್ಲಿ ನಮ್ಮ ಮನೆಗೂ ಬಂದಿದ್ದರು. ಇನ್ನು, ನಿತ್ಯೋತ್ಸವ ಕ್ಯಾಸೆಟ್‌ ಬಂದಾಗ, ನಾವು ಮನೆ ಮಂದಿಯೆಲ್ಲ ಕುಳಿತು ಆ ಹಾಡುಗಳನ್ನು ಪದೇ ಪದೆ ಕೇಳಿ, ಆನಂದಿಸಿದ್ದೆವು. ನನ್ನ ಭಾವಗೀತೆಗಳಿಗೆ ಒಂದರ್ಥದಲ್ಲಿ ಅವರೇ ಪ್ರಭಾವ, ಪ್ರೇರಣೆ ಅಂದರೂ ತಪ್ಪಿಲ್ಲ.

ನಾನು ಬೆಂಗಳೂರಿಗೆ ಬಂದು ನೆಲೆಸಿದ್ದು ಕೂಡಾ, ಅವರ ಮನೆ ಇರುವ ಏರಿಯಾದಲ್ಲಿಯೇ. ಹಾಗಾಗಿ, ಆಗಾಗ ಭೇಟಿಯಾಗುತ್ತಿದ್ದೆವು. ಅವರು ತಮ್ಮ ಶಿಷ್ಯರ ಬಗ್ಗೆ ಮಾತನಾಡುವಾಗ ನನ್ನನ್ನು ಮತ್ತು ಎಚ್ಚೆಸ್ವಿಯನ್ನು ನೆನಪಿಸಿಕೊಳ್ಳದೇ ಇರುತ್ತಿರಲಿಲ್ಲ. ಅವರು ಅಮೆರಿಕಕ್ಕೆ ಹೋಗುವ ಮುಂಚೆ, ಹೋಗಿ ಬಂದ ಮೇಲೆ, ಅವರನ್ನು ಭೇಟಿ ಮಾಡಿದ್ದೆ. ಪತ್ನಿ ಮತ್ತು ಮಗ ತೀರಿಕೊಂಡ ಬಳಿಕ ಬಹಳ ಕುಗ್ಗಿದ್ದರು.

ಇನ್ನು ನಿಸಾರ್‌ ಅಹಮದ್‌ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ಹೇಗೆ ಕಟ್ಟಿ ಕೊಡುವುದು? ‘ನಿತ್ಯೋತ್ಸವ’ ಧ್ವನಿ ಸುರುಳಿಯ ಮೂಲಕ ಕನ್ನಡದಲ್ಲಿ ಭಾವಗೀತೆಗಳ ಹೊಸ ಟ್ರೆಂಡ್‌ ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ‘ಕುರಿಗಳು ಸಾರ್‌ ಕುರಿಗಳು’ ಕವಿತೆ ನನ್ನ ಮೆಚ್ಚಿನದ್ದು. ಅವರ ಕವಿತೆಗಳಲ್ಲಿ ನಾನು ಗಮನಿಸಿದ್ದೇನೆಂದರೆ, ಜನಸಾಮಾನ್ಯರು ಆಡುವ ಭಾಷೆಯನ್ನೇ ಬಳಸಿ, ನವಿರು ಹಾಸ್ಯದ ಮೂಲಕ ಗಹನವಾದುದನ್ನು ಅವರು ಹೇಳಬಲ್ಲವರಾಗಿದ್ದರು.

ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಚಿಂತಾಮಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಪ್ರಸ್ತುತ ಸಾಹಿತ್ಯ’ ಎಂಬ ವಿಷಯದ ಕುರಿತು ಒಂದು ದಿನದ ಸಾಹಿತ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅದೊಂದು ಅಪರೂಪದ ಕಾರ್ಯಕ್ರಮ. ರಾಜ್ಯದ ಪ್ರಸಿದ್ಧ ಸಾಹಿತಿಗಳನ್ನೆಲ್ಲ ಬೆಂಗಳೂರಿನಿಂದ ಕರೆಸಿ, ಹಿರಿ-ಕಿರಿಯ ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ತಂದ ಕಾರ್ಯಕ್ರಮ ಅದು.

ಇಂಥ ಅದ್ಭುತ ಚೇತನ ನಮ್ಮನ್ನು ಆಗಲಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ, ಅವರ ಅಭಿಮಾನಿಗಳಿಗೆ ಅಂತಿಮ ದರ್ಶನವೂ ಅಲಭ್ಯವಾಗಿರುವುದು ಬೇಸರದ ಸಂಗತಿ. ವೈಯಕ್ತಿಕವಾಗಿ ನನಗೆ ತೀರ್ಥರೂಪ ಸಮಾನರಾಗಿದ್ದ ಅವರು, ನವಿರು ಭಾವಗೀತೆಗಳ, ಗಂಭೀರ ಕಾವ್ಯಗಳ ಮೂಲಕ ಎಂದೆಂದಿಗೂ ಜೊತೆಗೇ ಇರುತ್ತಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾರೈಸುತ್ತೇನೆ.

ಕಾರ್‌ ಇದ್ರೆ ತಾನೇ ರಗಳೆ?
ಸಾರ್‌, ನಿಮ್ಮ ವಾರಿಗೆಯ ಎಲ್ಲರ ಬಳಿಯೂ ಕಾರ್‌ ಇದೆ. ನೀವು ಯಾಕೆ ಸಾರ್‌ ಕಾರ್‌ ತಗೊಳ್ಳಲಿಲ್ಲ – ಅದೊಮ್ಮೆ ಈ ಪ್ರಶ್ನೆಯನ್ನೂ ನಿಸಾರ್‌ ಅವರಿಗೆ ಕೇಳಿದ್ದೆ. ಹೋ, ಅದೊಂದು ದೊಡ್ಡ ಕಥೆ ಕಣಯ್ಯಾ, ತುಂಬಾ ಹಿಂದೆ ಕೆನರಾ ಬ್ಯಾಂಕ್‌ನವರು ಸಾಹಿತಿಗಳಿಗೆ ಕಾರ್‌ ಲೋನ್‌ ಕೊಡ್ತಾ ಇದ್ರು. ಆ ಸ್ಕೀಮ್‌ನಲ್ಲಿ ನಾನೂ ಒಂದು ಕಾರ್‌ ತಗೊಂಡಿದ್ದೆ.

ಒಬ್ಬ ಡ್ರೈವರ್‌ ನನ್ನೂ ಇಟ್ಕೊಂಡಿದ್ದೆ. ಒಂದುಸರ್ತಿ ನಮ್ಮ ಕಾರ್‌ ಪಾದಚಾರಿ ಒಬ್ಬರಿಗೆ ಗುದ್ದಿ ಬಿಡ್ತು. ಅವರಿಗೆ ಎಲ್ಲಾ ಚಿಕಿತ್ಸೆ ಕೊಡಿಸಿ, ಪರಿಹಾರ ಕೊಡುತ್ತೇವೆ ಅಂತ ಒಪ್ಪಿದ ನಂತರವೂ ಮತ್ತಷ್ಟು ದುಡ್ಡು ಕೀಳಲು ಆ ಜನ ನಾನಾ ಬಗೆಯ ಕಿರಿಕಿರಿ ಮಾಡಿದ್ರು. ಅದರಿಂದ ಬಹಳ ಬೇಸರ ಆಯ್ತು. ಕಾರ್‌ ಇದ್ರೆ ತಾನೇ ಇದೆಲ್ಲಾ ರಗಳೆ ಅನ್ನಿಸಿ ಅದನ್ನು ಮಾರಿಬಿಟ್ಟೆ.

ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ ಕಣ್ರೀ…

ಸ್ಪುರದ್ರೂಪಿ ಎಂದು ಕಣ್ಮುಚ್ಚಿಕೊಂಡು ಹೇಳಬಲ್ಲಂಥ ರೂಪವಂತರು ನಿಸಾರ್‌ ಅಹಮದ್‌. ಅವರ ಚಿತ್ರಗಳ ಪೈಕಿ ತುಂಬಾ ಹೆಚ್ಚಾಗಿ ಬಳಕೆಯಾಗಿರುವ ಫೋಟೋ ಒಂದಿದೆ; ಅದು ಖ್ಯಾತ ಫೋಟೋಗ್ರಾಫ‌ರ್‌ ಬಿ. ಆರ್‌. ಶಂಕರ್‌ ಅವರು ತೆಗೆದ ಚಿತ್ರ. ನೇರಳೆ ಬಣ್ಣದ ಸೂಟ್‌ನ ಗಲ್ಲಕ್ಕೆ ಕೈ ಹಿಡಿಡು ಕುಳಿತಿರುವ ಚಿತ್ರ ಅದು. ಅದರ ಕುರಿತು ನಿಸಾರ್‌ ಅವರಿಗೆ ಬಹಳ ಹೆಮ್ಮೆ, ಅಭಿಮಾನ.

ಆ ಶಂಕರ್‌ ಇದ್ದಾನಲ್ರೀ, ನಮ್ಮ ಬಿ. ಆರ್‌. ಲಕ್ಷ್ಮಣ ರಾವ್‌ ಅವರ ತಮ್ಮ, ಅವನೊಮ್ಮೆ ಬಂದು-“ಸಾರ್‌, ನಾವು ಒಂದು ಆರ್ಟ್‌ ಗ್ಯಾಲರಿ ಮಾಡ್ತಾ ಇದ್ದೇವೆ. ನಿಮ್ಮದೊಂದು ಫೋಟೋ ಬೇಕು’ ಅಂದ. ಆಯ್ತು ತೆಗೆಯಪ್ಪ ಅಂತ ರೆಡಿಯಾದೆ. ಎಂಥಾ ಸೋಜಿಗ ಅಂತೀರಿ? ರೆಡಿ,ಸ್ಟಾರ್ಟ್‌ , ಏನೂ ಹೇಳದೆ, ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ. ಆಮೇಲೆ ನೋಡಿದರೆ ಇಷ್ಟು ಚೆನ್ನಾಗಿ ಬಂದಿದೆ… ಇಷ್ಟು ಚೆನ್ನಾಗಿ ಬರಬಹುದು ಎಂಬ ಅಂದಾಜು ನನಗಂತೂ ಇರಲಿಲ್ಲ. ಹಾಗಾಗಿ ಈ ಫೋಟೋ ನನ್ನ ಮೆಚ್ಚಿನದ್ದು… .


ತುಷಾರಕ್ಕಾಗಿಯೇ ಬರೆದದ್ದು ನವೋಲ್ಲಾಸ!

ಉದಯವಾಣಿ ಪತ್ರಿಕಾ ಬಳಗಕ್ಕೂ, ನಿಸಾರ್‌ ಅಹಮದ್‌ ಅವರಿಗೂ ಬಿಡದ ನಂಟು. ಉದಯವಾಣಿ ಪತ್ರಿಕಾ ಬಳಗದ ಎಷ್ಟೋ ಕಾರ್ಯಕ್ರಮಗಳಿಗೆ ಅವರದ್ದೇ ಅಧ್ಯಕ್ಷತೆ. ಉದಯವಾಣಿ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯವನ್ನು, ಉದಯವಾಣಿ, ತರಂಗ, ತುಷಾರದ ಅತ್ಯುತ್ತಮ ಮುದ್ರಣವನ್ನು, ಸಂದರ್ಭ ಸಿಕ್ಕಾಗಲೆಲ್ಲಾ ನಿಸಾರ್‌ ಪ್ರಶಂಸಿಸುತ್ತಿದ್ದರು.

ನಿಸಾರ್‌ ಅವರ, ‘ಅಚ್ಚುಮೆಚ್ಚು’ ಲೇಖನ ಮಾಲೆ ಸರಣಿಯ ರೂಪದಲ್ಲಿ ಪ್ರಕಟವಾಗಿದ್ದು ತುಷಾರದಲ್ಲಿಯೇ. ತಮ್ಮ ಗದ್ಯ ಬರಹಕ್ಕೆ ಓದುಗರು ನೀಡಿದ ಪ್ರತಿಕ್ರಿಯೆಯಿಂದ ಖುಷಿಯಾದ ನಿಸಾರ್‌, ತುಷಾರ ಓದುಗರಿಗೆಂದೇ ‘ನವೋಲ್ಲಾಸ’ ಹೆಸರಿನ ಭಾವಗೀತೆಗಳ ಸಂಕಲನ ರಚಿಸಿದರು. ಇದರ ಮೊದಲ ಮುದ್ರಣವನ್ನು ಉದಯವಾಣಿ ಪತ್ರಿಕಾ ಸಮೂಹವೇ ಪ್ರಕಟಿಸಿತು.

ಜೋಗದ ಸಿರಿ ಬೆಳಕಿನಲ್ಲಿ
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆ ಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯ ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.